ಯುವ ಜನರ ಮನಸ್ಥಿತಿಯೇ ಇಂದಿನ ಅತಿದೊಡ್ಡ ಸವಾಲು: ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗೆ ಶ್ರೀ ಶ್ರೀ ರವಿಶಂಕರ್ ಕರೆ

Published : Nov 29, 2026, 11:03 PM IST
Sri Sri Ravi Shankar

ಸಾರಾಂಶ

ಇಂದಿನ ಯುವಜನರಲ್ಲಿ ಹೆಚ್ಚುತ್ತಿರುವ ಖಿನ್ನತೆ ಮತ್ತು ಒತ್ತಡವನ್ನು ಹೋಗಲಾಡಿಸಲು ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ ಎಂದು ಶ್ರೀ ಶ್ರೀ ರವಿಶಂಕರ್ ತಿಳಿಸಿದ್ದಾರೆ. ಅಂಕಗಳಿಗಿಂತ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಬೇಕೆಂಬುದನ್ನು ಅವರು ಒತ್ತಿಹೇಳಿದರು.

ಬೆಂಗಳೂರು: ಇಂದಿನ ಯುವಜನರಲ್ಲಿ ಹೆಚ್ಚುತ್ತಿರುವ ಖಿನ್ನತೆ, ಕೋಪ ಹಾಗೂ ಭಾವನಾತ್ಮಕ ಒತ್ತಡವನ್ನು ಹೋಗಲಾಡಿಸಲು ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಯ ಅಗತ್ಯವಿದೆ ಎಂದು ಆಧ್ಯಾತ್ಮಿಕ ಗುರು ಹಾಗೂ 'ದಿ ಆರ್ಟ್ ಆಫ್ ಲಿವಿಂಗ್' ಸಂಸ್ಥಾಪಕ ಗುರುದೇವ ಶ್ರೀ ಶ್ರೀ ರವಿಶಂಕರ್ ಹೇಳಿದ್ದಾರೆ.

ದಿ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ Shaping the Future – Higher Education Leadership Meet ಆಯೋಜಿಸಲಾಗಿತ್ತು. ದೇಶದ ವಿವಿಧ ಭಾಗಗಳ ಹಾಗೂ ಕರ್ನಾಟಕದ ಸುಮಾರು 300 ಕುಲಪತಿಗಳು, ನಿರ್ದೇಶಕರು, ಡೀನ್‌ಗಳು ಮತ್ತು ಹಿರಿಯ ಶಿಕ್ಷಣ ತಜ್ಞರನ್ನು ಉದ್ದೇಶಿಸಿ ಗುರುದೇವ ಮಾತನಾಡಿದರು.

ಅಂಕಗಳಿಗಿಂತ ಮಾನಸಿಕ ಆರೋಗ್ಯ ಮುಖ್ಯ

ಇಂದಿನ ಯುವಜನರ ಮನಸ್ಥಿತಿಯೇ ನಮ್ಮ ಮುಂದಿರುವ ಅತಿದೊಡ್ಡ ಸವಾಲು ಎಂದ ಗುರುದೇವರು, ಯುವಕರಲ್ಲಿ ತಾಳ್ಮೆಯ ಕೊರತೆ, ಆಕ್ರಮಣಶೀಲತೆ, ಖಿನ್ನತೆ ಹಾಗೂ ದಿಕ್ಕು ತೋಚದಂತಹ ಪರಿಸ್ಥಿತಿ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯ ಮತ್ತು ಅಂಕಗಳಿಗೆ ಸೀಮಿತವಾಗಬಾರದು. ವಿದ್ಯಾರ್ಥಿಗಳ ಭಾವನಾತ್ಮಕ ಆರೋಗ್ಯ, ಮಾನವೀಯ ಮೌಲ್ಯಗಳು ಹಾಗೂ ಪ್ರಜ್ಞೆಯ ವಿಕಾಸಕ್ಕೆ ಶಿಕ್ಷಣದಲ್ಲಿ ಮೊದಲ ಆದ್ಯತೆ ನೀಡಬೇಕು. ಸಂಬಂಧಗಳನ್ನು ನಿಭಾಯಿಸುವುದು ಮತ್ತು ಭಿನ್ನಾಭಿಪ್ರಾಯಗಳನ್ನು ಸ್ವೀಕರಿಸುವ ಗುಣವನ್ನು ಯುವಜನರಲ್ಲಿ ಬೆಳೆಸಬೇಕು ಎಂದರು.

ವಿಜ್ಞಾನ ಮತ್ತು ಆಧ್ಯಾತ್ಮಿಕತೆಯ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವ ಅಗತ್ಯವಿದೆ ಎಂದ ಅವರು, ತಾರ್ಕಿಕ ಜ್ಞಾನ ಮತ್ತು ಅಂತಃಪ್ರಜ್ಞೆಯ ಜ್ಞಾನ ಒಂದಕ್ಕೊಂದು ವಿರುದ್ಧವಾದುದಲ್ಲ. ಅವು ಒಂದರ ಮುಂದುವರಿದ ಭಾಗವಾಗಿವೆ ಎಂದು ತಿಳಿಸಿದರು. ಯುವಜನರಲ್ಲಿ ಕುತೂಹಲವನ್ನು ಬೆಳೆಸಲು ಮತ್ತು ಮಾನಸಿಕ ನೆಮ್ಮದಿ ಕಂಡುಕೊಳ್ಳಲು ಧ್ಯಾನ ಮತ್ತು ಪ್ರಾಣಾಯಾಮ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.

AI ಯುಗದಲ್ಲಿ ಶಿಕ್ಷಣದ ಉದ್ದೇಶವೇನು?

ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ಸಂದರ್ಶಕ ಫೆಲೋ ಡಾ.ಸಿಂಧೂರ ಗಣಪತಿ, ಕೃತಕ ಬುದ್ಧಿಮತ್ತೆ (AI) ಶಿಕ್ಷಣ ಕ್ಷೇತ್ರವನ್ನು ಹೇಗೆ ಬದಲಾಯಿಸುತ್ತಿದೆ ಎಂಬುದನ್ನು ತಿಳಿಸಿಕೊಟ್ಟರು. ಮಾಹಿತಿ ಸಂಗ್ರಹಣೆ, ಅಂಕಿ-ಅಂಶಗಳು ಮತ್ತು ಕಂಠಪಾಠ ಮಾಡುವ ಕೆಲಸವನ್ನು ಇಂದು ತಂತ್ರಜ್ಞಾನವೇ ಮಾಡುತ್ತಿದೆ. ಆದರೆ ಕಲಿಕೆಯ ಆನಂದ ಮತ್ತು ವ್ಯಕ್ತಿತ್ವ ವಿಕಸನದಂತಹ ಮಾನವೀಯ ಅಂಶಗಳು ಮಾತ್ರ ಎಂದಿಗೂ ಬದಲಾಗುವುದಿಲ್ಲ, ಅವುಗಳಿಗೆ ಸದಾ ಮಹತ್ವವಿರುತ್ತದೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಸುಧಾರಿಸುವಲ್ಲಿ 'ಆರ್ಟ್ ಆಫ್ ಲಿವಿಂಗ್'ನ ಸುದರ್ಶನ ಕ್ರಿಯಾ ಯೋಗ (SKY) ಹೇಗೆ ಸಹಕಾರಿಯಾಗಿದೆ ಎಂಬುದರ ವೈಜ್ಞಾನಿಕ ಅಧ್ಯಯನದ ವಿವರಗಳನ್ನು ಸಮಾವೇಶದಲ್ಲಿ ಹಂಚಿಕೊಳ್ಳಲಾಯಿತು. 275 ಹದಿಹರೆಯದವರ ಮೇಲೆ ನಡೆಸಿದ ಅಧ್ಯಯನದಲ್ಲಿ, 4 ದಿನಗಳ ಕಾರ್ಯಕ್ರಮದ ನಂತರ ಶೇ. 86ರಷ್ಟು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. 131 ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ನಡೆಸಿದ ಮತ್ತೊಂದು ಪರೀಕ್ಷೆಯಲ್ಲಿ, ಯೋಗಾಭ್ಯಾಸದಿಂದ ಒತ್ತಡ ಮತ್ತು ಖಿನ್ನತೆ ಗಣನೀಯವಾಗಿ ಕಡಿಮೆಯಾಗಿರುವುದು ವರದಿಯಾಗಿದೆ.

ಐಐಟಿ ತಿರುಪತಿ, ಬೆಂಗಳೂರಿನ ರೇವಾ ವಿಶ್ವವಿದ್ಯಾಲಯ, ಸಂಭ್ರಮ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹಿಲ್‌ಸೈಡ್ ಆಯುರ್ವೇದ ಕಾಲೇಜು, ಅಮೃತಾ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್, ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು, ಜೆಎಸ್ಎಸ್ ವೈದ್ಯಕೀಯ ಕಾಲೇಜು, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಎಟಿಎಂಇ ಎಂಜಿನಿಯರಿಂಗ್ ಕಾಲೇಜು, ಮೈರಾ ಸ್ಕೂಲ್ ಆಫ್ ಬಿಸಿನೆಸ್ ಹಾಗೂ ಬಾಗಲಕೋಟೆಯ ಕಾಳಿದಾಸ ಎಜುಕೇಷನಲ್ ಸೊಸೈಟಿ ಸೇರಿದಂತೆ ಹಲವು ಪ್ರಮುಖ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

PREV
Read more Articles on
click me!

Recommended Stories

ಬೆಂಗಳೂರಿನ 17,771 ಕುಟುಂಬಗಳಿಗೆ ₹352.81 ಕೋಟಿ ಯೋಜನೆ; ಜಿಬಿಎ ಜನಕಲ್ಯಾಣಕ್ಕೆ ನಾಳೆ ಸಿಎಂ ಚಾಲನೆ!
ಲಾಲ್‌ಬಾಗ್‌ನಲ್ಲಿ ಜುಟ್ಟು ಹಿಡಿದು ಹೊಡೆದಾಡಿಕೊಂಡ ಹುಡುಗಿಯರು: ಜಗಳ ಬಿಡಿಸಿದ್ದಕ್ಕಿಂತ ವಿಡಿಯೋ ಮಾಡಿದವರೇ ಹೆಚ್ಚು!