Bengaluru: ಬೆಂಗಳೂರಲ್ಲಿ ಬಿಡಾಡಿ ದನಗಳ 'ಟೋಯಿಂಗ್‌ಗೆ' ವಿಶೇಷ ವಾಹನ! ರಸ್ತೆಗೆ ದನ ಬಿಡುವವರಿಗೆ ಬಿಸಿ

Published : Oct 06, 2026, 10:01 AM IST
GBA Cow Catching Vehicle

ಸಾರಾಂಶ

ಮೊದಲೇ ಸಂಚಾರ ದಟ್ಟಣೆಯಿಂದ ಬಳಲುತ್ತಿರುವ ಬೆಂಗಳೂರಿನಲ್ಲಿ ಬಿಡಾಡಿ ದನಗಳಿಂದಲೂ ಸಮಸ್ಯೆ. ಅವುಗಳನ್ನು ಹಿಡಿದು ವಶಕ್ಕೆ ಪಡೆಯಲು ಪೂರ್ವ ಪಾಲಿಕೆಯಿಂದ ಹೊಸ ವಾಹನ ಸೇವೆಗೆ ನಿಯೋಜನೆ. ವಾಹನ ಬಳಸಿ ದನ, ಕುರಿ, ಕುದುರೆ, ಹಂದಿ ಸೇರಿ ವಿವಿಧ ಪ್ರಾಣಿಗಳನ್ನು ಹಿಡಿದು ಆಶ್ರಯ ಸ್ಥಳಕ್ಕೆ ಶಿಫ್ಟ್‌. 3 ದಿನದೊಳಗೆ ಬಿಡಿಸಿಕೊಂಡರೆ ಮಾಲೀಕರಿಗೆ 600 ರು. ದಂಡ. ತಡ ಮಾಡಿದರೆ ದಿನಕ್ಕೆ 300 ರು.

ಲಕ್ಷ್ಮೀಕಾಂತ

ಬೆಂಗಳೂರು ಅ.06: ಸಾರ್ವಜನಿಕ ರಸ್ತೆಗಳಲ್ಲಿ ಓಡಾಡುವ ಬಿಡಾಡಿ ದನ ಹಾಗೂ ಇತರೆ ಜಾನುವಾರುಗಳನ್ನು ಸುರಕ್ಷಿತವಾಗಿ ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಲು ಹೈಡ್ರಾಲಿಕ್ ಲಿಫ್ಟ್ ವ್ಯವಸ್ಥೆ ಹೊಂದಿರುವ ಟ್ರಕ್‌ಗೆ ಸೋಮವಾರ ಪೂರ್ವ ನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್ ಚಾಲನೆ ನೀಡಿದರು.

₹600 ದಂಡ ಕಟ್ಟಿದರಷ್ಟೇ ದನ ಬಿಡುಗಡೆ

ಸಾರ್ವಜನಿಕ ರಸ್ತೆಗಳಲ್ಲಿ ಅಡ್ಡಾದಿಡ್ಡಿ ಓಡಾಡುವ ದನಗಳನ್ನು ಈ ವಾಹನ ಬಳಸಿಕೊಂಡು ವಶಕ್ಕೆ ಪಡೆಯುವ ಪಾಲಿಕೆ ಸಿಬ್ಬಂದಿ ಸುರಕ್ಷಿತ ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸುತ್ತಾರೆ. ಹೀಗೆ ಸ್ಥಳಾಂತರಿಸಿದ ದನವನ್ನು 3 ದಿನಗಳ ಒಳಗೆ ಮಾಲೀಕರು ಬಿಡಿಸಿಕೊಂಡು ಹೋದರೆ 600 ರು.ದಂಡ ವಿಧಿಸಲಾಗುತ್ತದೆ. ನಂತರದ ಪ್ರತಿ ದಿನಕ್ಕೆ 300 ರು.ಹೆಚ್ಚುವರಿ ದಂಡ ವಿಧಿಸಲಾಗುತ್ತದೆ. ಕರುವಿಗೆ 3 ದಿನಕ್ಕೆ 300 ರು. ಮತ್ತು ನಂತರದ ಪ್ರತಿ ದಿನಕ್ಕೆ 200 ರು.ದಂಡ ವಿಧಿಸಲಾಗುತ್ತದೆ ಎಂದು ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ದನದ ದೊಡ್ಡಿ ನಿರ್ಮಾಣವಾಗುವವರೆಗೆ ಈ ಜಾನುವಾರುಗಳನ್ನು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ನಗರ ದನದ ದೊಡ್ಡಿಗೆ ಸ್ಥಳಾಂತರಿಸಲಾಗುತ್ತದೆ. ಮಾಲೀಕರಿಲ್ಲದ ಜಾನುವಾರುಗಳನ್ನು ನಿಯಮಾನುಸಾರ ಗೋಶಾಲೆಗೆ ಹಸ್ತಾಂತರಿಸಲಾಗುತ್ತದೆ. ರಸ್ತೆ ಮಧ್ಯದಲ್ಲಿ ಜಾನುವಾರುಗಳು ನಿಂತಿರುವುದು ಅಥವಾ ಮಲಗಿರುವುದರಿಂದ, ರಸ್ತೆಗೆ ನುಗ್ಗುವುದು, ಅವುಗಳ ಗುದ್ದಾಟದಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ ಎಂದು ಹೆಚ್ಚುವರಿ ಆಯುಕ್ತ ಸುಧಾಕರ್ ಹೇಳಿದ್ದಾರೆ.

ದಂಡ ಶುಲ್ಕವೆಷ್ಟು?

ಹಸು, ದನ ಸ್ಥಳಾಂತರಿಸಿ 3 ದಿನ ಆಶ್ರಯ ನೀಡಲು 600 ರು.ಹಾಗೂ ಕರುವಿಗೆ 300 ರು.ನಂತೆ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ. ಕುದುರೆ ಮತ್ತು ಮರಿಗೆ ಕ್ರಮವಾಗಿ 100 ರು.ಮತ್ತು 50 ರು. ಕತ್ತೆ, ಹಂದಿಗಳು ಹಾಗೂ ಮರಿಗಳಿಗೆ 50 ರು. ಮತ್ತು 25 ರು., ಕುರಿ, ಮೇಕೆ ಹಾಗೂ ಅವುಗಳ ಮರಿಗಳಿಗೆ ಕ್ರಮವಾಗಿ 25 ರು.ನಂತೆ ದಂಡ ವಿಧಿಸಲಾಗುತ್ತದೆ. ಬಿಡಾಡಿ ಜಾನುವಾರುಗಳ ನಿಯಂತ್ರಣ ಕಾರ್ಯಾಚರಣೆಯನ್ನು ಸರ್ಕಾರಿ ರಜಾ ದಿನ ಹೊರತುಪಡಿಸಿ ಪ್ರತಿ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕೈಗೊಳ್ಳಲಾಗುವುದು ಎಂದು ಪೂರ್ವ ಪಾಲಿಕೆ ತಿಳಿಸಿದೆ.

PREV
Read more Articles on
click me!

Recommended Stories

ಲೋಕಾಯುಕ್ತ ಅಧಿಕಾರಿ ಸೋಗಿನಲ್ಲಿ ಸರ್ಕಾರಿ ನೌಕರರಿಗೆ ಬೆದರಿಕೆ: ಪೊಲೀಸರ ಬಲೆಗೆ ಬಿದ್ದ RTI ಕಾರ್ಯಕರ್ತ ಮುರಳಿ!
Cabinet Meeting Today: ಹಾಲಿನ ದರ ಮತ್ತೆ ಏರಿಕೆ ಆಗುತ್ತಾ? ಇಂದಿನ ಸಂಪುಟ ಸಭೆಯಲ್ಲಿ ಫೈನಲ್?