
ಬೆಂಗಳೂರು (ಅ.5): ರಾಜಧಾನಿ ಬೆಂಗಳೂರಿನ ತೀವ್ರ ಟ್ರಾಫಿಕ್ ದಟ್ಟಣೆಗೆ ಶಮನ ನೀಡಲು ಹಾಗೂ ನಗರದ ಸುತ್ತಮುತ್ತಲಿನ ಪ್ರದೇಶಗಳನ್ನು ಶರವೇಗದಲ್ಲಿ ಅಭಿವೃದ್ಧಿಪಡಿಸಲು ಕರ್ನಾಟಕ ಸರ್ಕಾರ ಬೃಹತ್ ಯೋಜನೆಯೊಂದನ್ನು ರೂಪಿಸಿದೆ. ಬೆಂಗಳೂರಿನಿಂದ ತುಮಕೂರು, ಮೈಸೂರು ಹಾಗೂ ಕೋಲಾರ ಚಿನ್ನದ ಗಣಿ (KGF) ನಗರಗಳನ್ನು ಸಂಪರ್ಕಿಸುವ 3 ಪ್ರಮುಖ ಕಾರಿಡಾರ್‌ಗಳಲ್ಲಿ ಒಟ್ಟು 270 ಕಿಲೋಮೀಟರ್ ಉದ್ದದ 'ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ' (RRTS - Regional Rapid Transit System) ಜಾಲವನ್ನು ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಜೊತೆಗೆ ಮುಂಬೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಕಾರಿಡಾರ್ ನಿರ್ಮಾಣದ ಕುರಿತೂ ಗಂಭೀರ ಚರ್ಚೆ ನಡೆದಿದೆ.
ಅಕ್ಟೋಬರ್ 5 ರಂದು ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (BMRDA) ವ್ಯಾಪ್ತಿಯ ಪ್ರದೇಶಗಳ ಮುಂದಿನ 10 ರಿಂದ 15 ವರ್ಷಗಳ ಸಮಗ್ರ ಅಭಿವೃದ್ಧಿ ಯೋಜನೆ (Comprehensive Master Plan) ತಯಾರಿಸುವ ಸಂಬಂಧ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ (DK Shivakumar) ಅವರ ಅಧ್ಯಕ್ಷತೆಯಲ್ಲಿ ನಡೆದ 'ಬೆಂಗಳೂರು ಮಹಾನಗರ ಪ್ರದೇಶದ ಆರ್ಥಿಕ ಅಭಿವೃದ್ಧಿ ಸಲಹಾ ಸಮಿತಿ'ಯ ಸಭೆಯಲ್ಲಿ ಈ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.
"ಬಿಎಂಡಿಎ (BMRDA) ವ್ಯಾಪ್ತಿಗೆ ಒಳಪಡುವ ಪ್ರದೇಶಗಳ ಮುಂದಿನ 10-15 ವರ್ಷಗಳ ಆರ್ಥಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಗ್ರ ಯೋಜನಾ ನೀಲನಕ್ಷೆಯನ್ನು ಸಿದ್ಧಪಡಿಸಲಾಗುತ್ತಿದೆ" ಎಂದು ಸಭೆಯ ನಂತರ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
ನಗರದ ಸಂಚಾರ ದಟ್ಟಣೆ ಶಮನಕ್ಕಾಗಿ ಸಾರಿಗೆ ಜಾಲವನ್ನು ಭಾರಿ ಪ್ರಮಾಣದಲ್ಲಿ ವಿಸ್ತರಿಸಲು ಸರ್ಕಾರ ಯೋಜನೆ ರೂಪಿಸಿದೆ.
ಮೆಟ್ರೋ ಮಾರ್ಗ ವಿಸ್ತರಣೆ: ಪ್ರಸ್ತುತ ಚಾಲ್ತಿಯಲ್ಲಿರುವ 96 ಕಿ.ಮೀ ಮೆಟ್ರೋ ಮಾರ್ಗವನ್ನು 2037 ರ ವೇಳೆಗೆ 312 ಕಿ.ಮೀ ಗೆ ವಿಸ್ತರಿಸಲಾಗುವುದು.
ಉಪನಗರ ರೈಲು (Suburban Rail): ಬೆಂಗಳೂರು ಉಪನಗರ ರೈಲು ಜಾಲಕ್ಕೆ ಹೆಚ್ಚುವರಿಯಾಗಿ 72 ಕಿ.ಮೀ ಮಾರ್ಗವನ್ನು ಸೇರ್ಪಡೆಗೊಳಿಸಲಾಗುವುದು.
ರಿಂಗ್ ರೋಡ್ ಹಾಗೂ ಪಿಆರ್‌ಆರ್ 2: ನಗರದ ಹೊರಭಾಗದಲ್ಲಿ 10 ಹೆಚ್ಚುವರಿ ಹಬ್‌ಗಳನ್ನು ಸಂಪರ್ಕಿಸುವ ರಿಂಗ್ ರೋಡ್ ನಿರ್ಮಾಣ ಹಾಗೂ ಪೆರಿಫೆರಲ್ ರಿಂಗ್ ರೋಡ್ (PRR) ಹಂತ-2 ಅನ್ನು ನೈಸ್ (NICE) ರಸ್ತೆಯೊಂದಿಗೆ ಸಂಯೋಜಿಸುವ ಪ್ರಸ್ತಾವನೆ ಕುರಿತು ಚರ್ಚಿಸಲಾಗಿದೆ.
ರಾಜ್ಯದಲ್ಲಿ ಆಧುನಿಕ ತಂತ್ರಜ್ಞಾನಕ್ಕೆ ಉತ್ತೇಜನ ನೀಡಲು ಕೃತಕ ಬುದ್ಧಿಮತ್ತೆ ಆಧಾರಿತ 'ಎಐ ಸಿಟಿ' (AI City) ನಿರ್ಮಿಸುವುದಾಗಿ ಸರ್ಕಾರ ಈಗಾಗಲೇ ಘೋಷಿಸಿದೆ. ಸಭೆಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, "ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಎಐ ಸಿಟಿಯನ್ನು ಸಿಂಗಾಪುರದ 'ಪುಂಗೋಲ್' (Punggol) ಮಾದರಿಯಲ್ಲಿ ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಬೇಕು. ಇದರ ಜೊತೆಗೆ ದೇಶದಲ್ಲೇ ಮಾದರಿಯಾಗುವ 'ಎಐ ವಿಶ್ವವಿದ್ಯಾಲಯ' (AI University) ಸ್ಥಾಪನೆಗೂ ಜಾಗ ಗುರುತಿಸುವ ಕಾರ್ಯವನ್ನು ತಕ್ಷಣವೇ ಆರಂಭಿಸಬೇಕು" ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ನಾಟಕದ ಆರ್ಥಿಕತೆಯು 2047 ರ ವೇಳೆಗೆ 1 ಟ್ರಿಲಿಯನ್ ಡಾಲರ್ (1 Trillion Dollar Economy) ತಲುಪುವ ನಿರೀಕ್ಷೆಯಿದ್ದು, 2037 ರ ವೇಳೆಗೆ $400 ರಿಂದ $420 ಬಿಲಿಯನ್ ಆರ್ಥಿಕತೆ ಸಾಧಿಸುವ ಗುರಿ ಹೊಂದಲಾಗಿದೆ.
ಇಡೀ ಬೆಂಗಳೂರು ನಗರ ಜಿಲ್ಲೆಯ ಅಭಿವೃದ್ಧಿಗಾಗಿ ಪ್ರತ್ಯೇಕ ಮಾಸ್ಟರ್ ಪ್ಲಾನ್ ರೂಪಿಸಲು ನಿರ್ಧರಿಸಲಾಗಿದೆ.
ಕುಡಿಯುವ ನೀರು ಮತ್ತು ಒಳಚರಂಡಿ: ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಮಾತನಾಡಿ, "ಕುಡಿಯುವ ನೀರಿನ ಪೂರೈಕೆ ಹಾಗೂ ಒಳಚರಂಡಿ ಮೂಲಸೌಕರ್ಯವನ್ನು ಬಲಪಡಿಸಲು ಇಡೀ ಬೆಂಗಳೂರು ನಗರ ಜಿಲ್ಲೆಯನ್ನು ಹಂತ-ಹಂತವಾಗಿ 'ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ' (BWSSB) ವ್ಯಾಪ್ತಿಗೆ ತರಲಾಗುವುದು. ಅಲ್ಲದೆ, ಜಿಲ್ಲೆಯ ಸಂಪೂರ್ಣ ರಸ್ತೆ ಜಾಲವನ್ನು ಗುರುತಿಸಿ ಅಭಿವೃದ್ಧಿ ಯೋಜನೆ ರೂಪಿಸಲಾಗುವುದು" ಎಂದರು.
ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ: ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಪ್ರದೇಶಗಳನ್ನು ಯಾವುದಾದರೂ ಒಂದು ನಗರ ಸ್ಥಳೀಯ ಸಂಸ್ಥೆಯ (Urban Local Body) ವ್ಯಾಪ್ತಿಗೆ ತರಲಾಗುವುದು ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ನೀರಿನ ಅವಶ್ಯಕತೆ: 2037 ರ ವೇಳೆಗೆ ಬಿಎಂಡಿಎ ವ್ಯಾಪ್ತಿಗೆ ದಿನಕ್ಕೆ ಸುಮಾರು 3,600 ಮಿಲಿಯನ್ ಲೀಟರ್ (MLD) ನೀರು ಅಗತ್ಯವಿರುತ್ತದೆ. ಆದ್ದರಿಂದ ಶುದ್ಧೀಕರಿಸಿದ ತ್ಯಾಜ್ಯನೀರನ್ನು ಮರುಬಳಕೆ ಮಾಡುವುದು ಹಾಗೂ ಕೆರೆಗಳನ್ನು ತುಂಬಿಸುವ ಯೋಜನೆಗಳಿಗೆ ಆದ್ಯತೆ ನೀಡಲು ಸೂಚಿಸಲಾಗಿದೆ.
ಸಾಮಾನ್ಯ ನಾಗರಿಕರಿಗೆ ಕೈಗೆಟುಕುವ ದರದಲ್ಲಿ ವಸತಿ ಸೌಲಭ್ಯ ಕಲ್ಪಿಸಲು ನಗರದಲ್ಲಿ 6 ರಿಂದ 6.5 ಲಕ್ಷ ಮನೆಗಳನ್ನು ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿದೆ. ಈ ಪೈಕಿ ವಿವಿಧ ಕೈಗಾರಿಕೆಗಳಲ್ಲಿ ಉದ್ಯೋಗದಲ್ಲಿರುವ ಸುಮಾರು 40,000 ದಿಂದ 50,000 ಕಾರ್ಮಿಕರಿಗೆ ವಿಶೇಷ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಒಟ್ಟಾರೆಯಾಗಿ ಮುಂದಿನ 10-15 ವರ್ಷಗಳಲ್ಲಿ ಬೆಂಗಳೂರು ಮಹಾನಗರ ಪ್ರದೇಶದ ಸಾರಿಗೆ ಸಂಪರ್ಕ, ಕೈಗಾರಿಕೆ, ಕುಡಿಯುವ ನೀರು ಹಾಗೂ ವಸತಿ ಕ್ಷೇತ್ರಗಳಲ್ಲಿ ಆಮೂಲಾಗ್ರ ಬದಲಾವಣೆ ತರಲು ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್ ಮೂಲಕ ಹೆಜ್ಜೆ ಇಟ್ಟಿದೆ.