
ಕನ್ನಡಪ್ರಭ ವಾರ್ತೆ ಬೆಂಗಳೂರು (ಸೆ.19): ಮರೆತು ಹೋಗುತ್ತಿರುವ ದೇಸಿ ಸೊಪ್ಪಿನ ವೈವಿಧ್ಯ, ರುಚಿ ಮತ್ತು ಜ್ಞಾನವನ್ನು ಪರಿಚಯಿಸುವ ಉದ್ದೇಶದಿಂದ ರಾಗಿ ಕಣ ಸಂತೆಯ ಭಾಗವಾಗಿ ಇದೇ ಭಾನುವಾರ ‘ಸೊಪ್ಪು ಮೇಳ’ ಆಯೋಜಿಸಲಾಗಿದೆ.
ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ಸಮೀಪದ ಶ್ರೀ ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರದ ಆವರಣದಲ್ಲಿ ರಾಗಿ ಕಣ ಸಂತೆ ನಡೆಯಲಿದ್ದು, ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿರಲಿದೆ. ಸೊಪ್ಪು ಮೇಳದಲ್ಲಿ 150ಕ್ಕೂ ಹೆಚ್ಚು ಬಗೆಯ ಸೊಪ್ಪುಗಳು ಒಂದೇ ಕಡೆ ಕಾಣಸಿಗಲಿವೆ. ಹೆಗ್ಗಡದೇವನಕೋಟೆಯ ಕಾಡುಹಳ್ಳಿಯ ರೈತರು 25ಕ್ಕೂ ಹೆಚ್ಚು ಬಗೆಯ ಸೊಪ್ಪುಗಳನ್ನು ತಂದು ಪ್ರದರ್ಶಿಸಲಿದ್ದಾರೆ.
ಉತ್ತರ ಕರ್ನಾಟಕದ ರೈತ ಮಹಿಳೆಯರು ತರುವ ಕಿರಕಸಾಲಿ, ಹಕ್ಕರಿಕೆ ಸೇರಿದಂತೆ 50ಕ್ಕೂ ಹೆಚ್ಚು ಬಗೆಯ ಜವಾರಿ ಸೊಪ್ಪುಗಳು ಮೇಳದ ಪ್ರಮುಖ ಆಕರ್ಷಣೆ. ಕುಂದಗೋಳ, ಶಿಗ್ಗಾಂವ ಮತ್ತು ಕಲಘಟಗಿ ಭಾಗಗಳಿಂದ ಸಂಗ್ರಹಿಸಲಾದ ವಿವಿಧ ಬಗೆಯ ಸೊಪ್ಪುಗಳೂ ಮಾರಾಟಕ್ಕೆ ಲಭ್ಯವಿರಲಿವೆ. ಹೆಚ್ಚಿನ ಮಾಹಿತಿಗೆ ಮೊಬೈಲ್: 9972676426 ಸಂಪರ್ಕಿಸಬಹುದು.