Milk Price: ಹಾಲಿನ ದರ ಲೀಟರ್‌ಗೆ 8 ರುಪಾಯಿ ಹೆಚ್ಚಿಸಿ, ಇಲ್ಲದಿದ್ರೆ ವಿಧಾನಸೌಧ ಚಲೋ, ಒಕ್ಕೂಟಗಳ ಎಚ್ಚರಿಕೆ!

Published : Sep 19, 2026, 10:22 AM IST
Nandini Milk Price Hike

ಸಾರಾಂಶ

ರಾಜ್ಯದಲ್ಲಿ ತೀವ್ರ ಬರಗಾಲ ಮತ್ತು ಮೇವಿನ ಕೊರತೆಯಿಂದಾಗಿ ಹಾಲಿನ ಉತ್ಪಾದನೆ ಕುಸಿಯುತ್ತಿದ್ದು, ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಹಾಲಿನ ದರ ಮತ್ತು ಪ್ರೋತ್ಸಾಹ ಧನವನ್ನು ತಲಾ ₹8 ರಷ್ಟು ಹೆಚ್ಚಿಸುವಂತೆ ಹಾಲು ಒಕ್ಕೂಟಗಳು ಆಗ್ರಹಿಸಿವೆ. ಮೂರು ದಿನಗಳಲ್ಲಿ ಬೇಡಿಕೆ ಈಡೇರದಿದ್ದರೆ 'ವಿಧಾನಸೌಧ ಚಲೋ' ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿವೆ.

ಬೆಂಗಳೂರು ಸೆ.19: ರಾಜ್ಯದಲ್ಲಿ ತೀವ್ರ ಬರಗಾಲದಿಂದ ಪಶು ಆಹಾರ, ಸಾಗಣೆ ವೆಚ್ಚ ಹಾಗೂ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಆದ್ದರಿಂದ ರೈತರನ್ನು ಹಾಗೂ ಹಾಲಿನ ಒಕ್ಕೂಟಗಳನ್ನು ಉಳಿಸಲು ಹಾಲಿನ ಮಾರಾಟ ಬೆಲೆಯನ್ನು ಪ್ರತಿ ಲೀಟರ್‌ಗೆ ₹8 ಮತ್ತು ಸರ್ಕಾರ ನೀಡುವ ಪ್ರೋತ್ಸಾಹ ಧನವನ್ನು ಪ್ರತಿ ಲೀಟರ್‌ಗೆ ₹8 ರಂತೆ ಏರಿಸಬೇಕು ಎಂದು ರಾಜ್ಯದ ವಿವಿಧ ಹಾಲು ಒಕ್ಕೂಟಗಳು ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಹಾಲಿನ ದರ ಏರಿಕೆಗೆ ಗಡುವು

ಶುಕ್ರವಾರ ಈ ಕುರಿತು ಬಮೂಲ್‌ ಮಾಜಿ ಅಧ್ಯಕ್ಷ ಪಿ.ನಾಗರಾಜ್‌, ಮಂಡ್ಯ ಹಾಲು ಒಕ್ಕೂಟದ ಅಧ್ಯಕ್ಷ ಬೋರೇಗೌಡ, ಶಿವಮೊಗ್ಗ ಒಕ್ಕೂಟದ ನಿರ್ದೇಶಕ ಸಿ.ವೀರಭದ್ರಬಾಬು, ಚಾಮರಾಜನಗರ ಹಾಲು ಒಕ್ಕೂಟದ ಎಂ.ನಂಜುಂಡಸ್ವಾಮಿ ಸೇರಿ ಇತರರು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.

ಕಳೆದ ಎಂಟು ತಿಂಗಳಿನಿಂದ ರೈತರು ಸೇರಿ ಹಾಲು ಒಕ್ಕೂಟಗಳ ನಿರ್ದೇಶಕರು ಹಾಲಿನ ದರ ಮತ್ತು ಪ್ರೋತ್ಸಾಹಧನ ಏರಿಕೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸುವ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಆದರೆ ಈವರೆಗೂ ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ಇನ್ನು ಮೂರು ದಿನಗಳಲ್ಲಿ ದರ ಏರಿಕೆ ಮಾಡದಿದ್ದರೆ ‘ವಿಧಾನಸೌಧ ಚಲೋ’ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ಬರದಿಂದಾಗಿ ಮೇವಿನ ಕೊರತೆ

ಬಮೂಲ್‌ ಮಾಜಿ ಅಧ್ಯಕ್ಷ ಮತ್ತು ನಿರ್ದೇಶಕ ಪಿ.ನಾಗರಾಜ್‌ ಮಾತನಾಡಿ, ಈ ಬಾರಿ ಮುಂಗಾರು ಮಳೆ ಅಭಾವ ಮತ್ತು ತೀವ್ರ ಬರಗಾಲದಿಂದಾಗಿ ಮೇವಿನ ಕೊರತೆ ಎದುರಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಮತ್ತು ಸಂಗ್ರಹಣೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಈ ಹಿಂದೆ ದಿನಕ್ಕೆ 1.11 ಕೋಟಿ ಲೀಟರ್‌ ಇದ್ದ ಹಾಲಿನ ಸಂಗ್ರಹಣೆಯು ಈಗ 1.05 ಕೋಟಿ ಲೀಟರ್‌ಗೆ ಇಳಿಕೆಯಾಗಿದೆ. ಅಂದರೆ, ಪ್ರತಿ ದಿನ 6ರಿಂದ 7 ಲಕ್ಷ ಲೀಟರ್‌ ಹಾಲಿನ ಕೊರತೆ ಉಂಟಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರ ಸ್ಪಂದಿಸದಿದ್ದರೆ ಮುಂದೇನು?

ಮಂಡ್ಯ ಹಾಲು ಒಕ್ಕೂಟದ ಅಧ್ಯಕ್ಷ ಬೋರೇಗೌಡ, ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಡೀಸೆಲ್‌, ಪೆಟ್ರೋಲ್‌, ಗ್ಯಾಸ್‌, ಎಲ್‌ಪಿಜಿ ಹಾಗೂ ಪಶು ಆಹಾರಗಳ ಬೆಲೆ ಶೇ.30ರಿಂದ 40ರಷ್ಟು ಏರಿಕೆಯಾಗಿದೆ. ಖಾಸಗಿ ಡೈರಿಗಳು ಹಾಗೂ ನೀರಿನ ಬಾಟಲಿಗಳಿಗೆ ಹೋಲಿಸಿದರೆ ನಂದಿನ ಹಾಲಿನ ಬೆಲೆ ದೇಶದಲ್ಲೇ ಅತ್ಯಂತ ಕಡಿಮೆ. ರೈತರಿಗೆ ಒಂದು ಲೀಟರ್‌ ಹಾಲು ಉತ್ಪಾದಿಸಲು ತಗಲುವ ವೆಚ್ಚಕ್ಕೆ ತಕ್ಕಂತೆ ಸೂಕ್ತ ಪ್ರತಿಫಲ ಸಿಗದೆ ಅವರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ ಎಂದರು.

ಸರ್ಕಾರ ತಕ್ಷಣವೇ ಸಂಪುಟ ಸಭೆ ಕರೆದು ಹಾಲಿನ ಬೆಲೆ ಏರಿಕೆ ಹಾಗೂ ಪ್ರೋತ್ಸಾಹಧನ ಹೆಚ್ಚಳದ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಮುಂಬರುವ ಮೂರು ದಿನಗಳಲ್ಲಿ ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದರೆ, ರಾಜ್ಯದ ಎಲ್ಲಾ 16 ಒಕ್ಕೂಟಗಳ ಪದಾಧಿಕಾರಿಗಳು ಹಾಗೂ ರೈತರು ಒಂದಾಗಿ ವಿಧಾನಸೌಧ ಚಲೋ ಬೃಹತ್‌ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

PREV
Read more Articles on
click me!

Recommended Stories

ರಾಜ್ಯದ ಜಲಾಶಯಗಳಲ್ಲಿ ತೀವ್ರ ನೀರಿನ ಕೊರತೆ: ಜಲಸಂಪನ್ಮೂಲ ಇಲಾಖೆಯಿಂದಲೇ ಶಾಕಿಂಗ್ ಮಾಹಿತಿ!
Bengaluru Shock: ಗಣೇಶ ವಿಸರ್ಜನೆಗೆ ಪಟಾಕಿ ತರುವ ನೆಪದಲ್ಲಿ ಬಿಜೆಪಿ ಮುಖಂಡನ ಪುತ್ರನ ಕಗ್ಗೊಲೆ!