ಬೆಂಗಳೂರಿಗೆ ಶೀಘ್ರ ಪ್ರತ್ಯೇಕ ಉಗ್ರ ನಿಗ್ರಹ ಪಡೆ ಸ್ಥಾಪನೆ

By Kannadaprabha NewsFirst Published Oct 16, 2019, 7:18 AM IST
Highlights

ಜೆಎಂಬಿ ಭಯೋತ್ಪಾದಕ ಸಂಘಟನೆಯ ಸದಸ್ಯರಿಗೆ ಬೆಂಗಳೂರು ಆಶ್ರಯ ತಾಣವಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯ ಗೃಹ ಸಚಿವರು, ರಾಜಧಾನಿಗೆ ಪ್ರತ್ಯೇಕವಾಗಿ ಭಯೋತ್ಪಾದನೆ ನಿಗ್ರಹ ಪಡೆ (ಎಟಿಎಸ್‌) ರಚನೆಗೆ ಸೂಚಿಸಿದ್ದಾರೆ.
 

ಬೆಂಗಳೂರು [ಅ.16]:  ಬಾಂಗ್ಲಾದೇಶದ ಜೆಎಂಬಿ ಭಯೋತ್ಪಾದಕ ಸಂಘಟನೆಯ ಸದಸ್ಯರಿಗೆ ಬೆಂಗಳೂರು ಆಶ್ರಯ ತಾಣವಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯ ಗೃಹ ಸಚಿವರು, ರಾಜಧಾನಿಗೆ ಪ್ರತ್ಯೇಕವಾಗಿ ಭಯೋತ್ಪಾದನೆ ನಿಗ್ರಹ ಪಡೆ (ಎಟಿಎಸ್‌) ರಚನೆಗೆ ಸೂಚಿಸಿದ್ದಾರೆ.

ನಗರದ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಸೋಮವಾರ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಸವರಾಜ್‌ ಬೊಮ್ಮಾಯಿ, ನಗರದಲ್ಲಿ ಆತಂಕವಾದಿಗಳ ಮೂಲೋತ್ಪಾಟನೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ದೇಶದ ಬೃಹತ್‌ ನಗರಗಳಾದ ದೆಹಲಿ, ಚೆನ್ನೈ, ಹೈದರಾಬಾದ್‌ ಹಾಗೂ ಮುಂಬೈನಲ್ಲಿ ಪ್ರತ್ಯೇಕವಾಗಿ ಉಗ್ರ ನಿಗ್ರಹ ಪಡೆಗಳಿವೆ. ಇದೇ ಮಾದರಿಯಲ್ಲಿ ಬೆಂಗಳೂರಿಗೆ ಸಹ ಪ್ರತ್ಯೇಕ ಎಟಿಎಸ್‌ ಘಟಕ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಶೀಘ್ರವೇ ರೂಪರೇಷೆ ಸಿದ್ಧವಾಗಲಿದೆ ಎಂದು ಸಚಿವರು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೆಂಗಳೂರಿನಲ್ಲಿ ಜೆಎಂಬಿ ಉಗ್ರರ ಆಶ್ರಯ ಕುರಿತು ಎನ್‌ಐಎ ಪ್ರಸ್ತಾಪಿಸಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ನಗರದ ಸೂಕ್ಷ್ಮ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಕರಾವಳಿ ಪ್ರದೇಶದಲ್ಲಿ ಸಹ ಎಚ್ಚರಿಕೆ ವಹಿಸುವಂತೆ ಹೇಳಲಾಗಿದೆ ಎಂದು ಸಚಿವರು ನುಡಿದರು.

ಭಯೋತ್ಪಾದಕ ಸಂಘಟನೆಗಳನ್ನು ಮಟ್ಟಹಾಕಲು ಕೇಂದ್ರ ಮತ್ತು ರಾಜ್ಯ ತನಿಖಾ ಸಂಸ್ಥೆಗಳು ಪರಸ್ಪರ ಸಹಕಾರ ಮನೋಭಾವ ಹೊಂದಿರಬೇಕು. ಕೇಂದ್ರ ತನಿಖಾ ಸಂಸ್ಥೆಗಳೊಂದಿಗೆ ಸಂವಹನ ಸಾಧಿಸಿ ಪೊಲೀಸರು ಆತಂಕವಾದಿಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಶಂಕಾಸ್ಪದ ವ್ಯಕ್ತಿಗಳು ಕಂಡ ತಕ್ಷಣವೇ ವಶಕ್ಕೆ ಪಡೆದು ಪೂರ್ವಾಪರ ವಿವರ ಸಂಗ್ರಹಿಸಬೇಕು. ಹಾಗೆಯೇ ಐತಿಹಾಸಿಕ ಸ್ಥಳಗಳು, ರೈಲು, ಬಸ್‌, ವಿಮಾನ, ಮೆಟ್ರೋ ನಿಲ್ದಾಣಗಳು, ಪ್ರಮುಖ ಕಟ್ಟಡಗಳು, ಶಾಪಿಂಗ್‌ ಮಾಲ್‌, ಗಣ್ಯ ವ್ಯಕ್ತಿಗಳ ನಿವಾಸಿಗಳು, ದೇವಸ್ಥಾನ, ಪ್ರಾರ್ಥನೆ ಮಂದಿರ ಹಾಗೂ ಧಾರ್ಮಿಕ ಕೇಂದ್ರಗಳಿಗೆ ಸದಾಕಾಲ ಭದ್ರತೆ ನೀಡಿ ನಿಗಾವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಿರುವುದಾಗಿ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ತಿಳಿಸಿದರು.

ಪೊಲೀಸರ ವೇತನದ ಬಗ್ಗೆ ಸಿಎಂ ಜತೆ ಸಭೆ:  ಪೊಲೀಸರ ವೇತನ ಪರಿಷ್ಕರಣೆ ಸಂಬಂಧ ಉದ್ಭವಿಸಿರುವ ಗೊಂದಲ ನಿವಾರಣೆಗೆ ಮುಖ್ಯಮಂತ್ರಿಗಳ ಜತೆ ಶೀಘ್ರವೇ ಚರ್ಚಿಸಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು. ಹಿರಿಯ ಐಪಿಎಸ್‌ ಅಧಿಕಾರಿ ರಾಘವೇಂದ್ರ ಎಚ್‌.ಔರಾದ್ಕರ್‌ ವರದಿಯನ್ವಯ ಪೊಲೀಸರ ವೇತನ ಶ್ರೇಣಿ ಪರಿಷ್ಕರಣೆಗೆ ಸರ್ಕಾರ ಬದ್ಧವಾಗಿದೆ. ಈ ವರದಿಯಲ್ಲಿ ಕೈಬಿಡಲಾಗಿದ್ದ ಕಾರಾಗೃಹ ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ಸೇರಿಸಲಾಗಿದೆ. ಅಲ್ಲದೆ, ಅಪಾಯ ಭತ್ಯೆ(ರಿಸ್ಕ್‌) ಹೆಚ್ಚಿಸಲು ಸಹ ನಿರ್ಧರಿಸಲಾಗಿದೆ. ಈ ಸಂಬಂಧ ಹಣಕಾಸು ಮತ್ತು ಪೊಲೀಸ್‌ ಇಲಾಖೆಗಳ ನಡುವೆ ಗೊಂದಲ ಉಂಟಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌, ಹೆಚ್ಚುವರಿ ಆಯುಕ್ತರಾದ ಉಮೇಶ್‌ ಕುಮಾರ್‌, ಮುರುಗನ್‌ ಹಾಗೂ ಜಂಟಿ ಆಯುಕ್ತರಾದ ಸಂದೀಪ್‌ ಪಾಟೀಲ್‌ ಮತ್ತು ರವಿಕಾಂತೇಗೌಡ ಸೇರಿದಂತೆ ಮತ್ತಿತರರು ಇದ್ದರು.

click me!