ನನ್ನ ಕೆಟ್ಟದಾಗಿ ನಿಂದಿಸಿದರೂ ನಾನು ಮೌನವಾಗಿದ್ದೆ: ಕರವೇ ಸಂಘಟನೆ, ಕನ್ನಡಿಗರಿಗೆ ಗಾಯಕ ಸೋನು ನಿಗಮ್ ಬಹಿರಂಗ ಪತ್ರ

Published : Oct 16, 2026, 10:53 AM IST
Sonu Nigam Letter To KaRaVe

ಸಾರಾಂಶ

ಕರವೇ ವಿರೋಧದ ಹಿನ್ನೆಲೆಯಲ್ಲಿ ಗಾಯಕ ಸೋನು ನಿಗಮ್ ಕನ್ನಡಿಗರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಇದರಲ್ಲಿ ಅವರು ವೇದಿಕೆಯಲ್ಲಿ ತಮಗಾದ ನಿಂದನೆ, ಪಹಲ್ಗಾಮ್ ಘಟನೆಯ ಉಲ್ಲೇಖದ ಹಿಂದಿನ ಕಾರಣ ಮತ್ತು ಕನ್ನಡದ ಮೇಲಿನ ತಮ್ಮ ಗೌರವವನ್ನು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (ಅ.16): ಪ್ರಖ್ಯಾತ ಗಾಯಕ ಸೋನು ನಿಗಮ್ ಅವರು ಸಂಗೀತ ಕಾರ್ಯಕ್ರಮಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ವಿರೋಧ ವ್ಯಕ್ತಪಡಿಸಿರುವ ನಡುವೆ, ಸೋನು ನಿಗಮ್‌ ಸೋಶೀಯಲ್‌ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಇಡೀ ವಿಚಾರದಲ್ಲಿ ಕನ್ನಡಿಗರಲ್ಲಿದ್ದ ಗೊಂದಲಗಳಿಗೆ ತೆರೆ ಎಳೆಯಲು ಬಹಿರಂಗ ಪತ್ರ ಬರೆದಿದ್ದು, ಸಂದೇಶದಲ್ಲಿ, ಕಾನ್ಸರ್ಟ್‌ನಲ್ಲಿ ತಮಗೆ ಎದುರಾದ ನಿಂದನೆಗಳು, ಪಹಲ್ಗಾಮ್ ದಾಳಿಯ ಉಲ್ಲೇಖದ ಹಿಂದಿದ್ದ ಉದ್ದೇಶ ಹಾಗೂ ಕನ್ನಡ ನಾಡು-ನುಡಿಯ ಮೇಲಿರುವ ತಮ್ಮ ಅಪಾರ ಗೌರವವನ್ನು ಹಂಚಿಕೊಂಡಿದ್ದಾರೆ.

"ಕನ್ನಡಿಗರ ಮನಸ್ಸಿನಲ್ಲಿ ನನ್ನ ಬಗ್ಗೆ ಮುಜುಗರವಿರುವುದು ನನಗಿಷ್ಟವಿಲ್ಲ"

"ನನ್ನ ಪ್ರೀತಿಯ ಕನ್ನಡಿಗರೇ, ಮೊದಲನೆಯದಾಗಿ ನನ್ನ ಸಂಗೀತ ಕಾರ್ಯಕ್ರಮದ (Concert) ಎಲ್ಲಾ ಟಿಕೆಟ್‌ಗಳನ್ನು ಸಂಪೂರ್ಣವಾಗಿ ಖರೀದಿಸಿ 'ಹೌಸ್‌ಫುಲ್' ಮಾಡಿದ್ದಕ್ಕಾಗಿ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನನ್ನ ಸ್ವಂತ ಕುಟುಂಬದವರಂತೆ ನಾನು ಪ್ರೀತಿಸಿದ ಜನರ ಮನಸ್ಸಿನಲ್ಲಿ ನನ್ನ ಬಗ್ಗೆ ಯಾವುದೇ ರೀತಿಯ ಮುಜುಗರ ಅಥವಾ ಅಸಮಾಧಾನ ಇರಬಾರದು ಎಂಬುದು ನನ್ನ ಆಸೆಯಾಗಿತ್ತು. ಈ ಯಶಸ್ಸು ನನಗೆ ದೊಡ್ಡ ಸಮಾಧಾನ ತಂದಿದೆ" ಎಂದು ಗಾಯಕ ಸೋನು ನಿಗಮ್ ಪತ್ರ ಆರಂಭಿಸಿದ್ದಾರೆ.

ಪಹಲ್ಗಾಮ್ ಘಟನೆ ಉಲ್ಲೇಖಿಸಿದ್ದು ಏಕೆ? - ಸೋನು ನಿಗಮ್ ನೀಡಿದ ಸ್ಪಷ್ಟನೆ

ಕಳೆದ ವರ್ಷ ನಡೆದ ಸಂಗೀತ ಕಾರ್ಯಕ್ರಮದ ವೇಳೆ ಪಹಲ್ಗಾಮ್ ಘಟನೆಯನ್ನು ಉಲ್ಲೇಖಿಸಿದ ಕುರಿತು ವಿವರಿಸಿದ ಅವರು, 'ನಾನು ಹಂಚಿಕೊಂಡಿರುವ ವಿಡಿಯೋದಲ್ಲಿರುವ ವ್ಯಕ್ತಿಯೇ ಈ ಎಲ್ಲ ಬೆಳವಣಿಗೆಗಳ ಮೂಲ ಕಾರಣ. ಪ್ರತಿಯೊಬ್ಬ ಭಾರತೀಯನಂತೆ, ಆ ವೀಡಿಯೋ ನೋಡಿ ನಾನೂ ಕಣ್ಣೀರಿಟ್ಟಿದ್ದೆ. ಆ ವೀಡಿಯೋದಲ್ಲಿ ಆ ವ್ಯಕ್ತಿ ಮತ್ತು ಆತನ ಪತ್ನಿ ತಾವು 'ಕರ್ನಾಟಕದವರು' ಎಂದು ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾ, ಕಾಶ್ಮೀರದ ತಮ್ಮ ಸುಂದರ ಅನುಭವಗಳನ್ನು ಹೊಗಳುತ್ತಿದ್ದರು. ಆದರೆ, ಕೆಲವೇ ನಿಮಿಷಗಳಲ್ಲಿ ಆತ ಕೇವಲ 'ಹಿಂದೂ' ಎಂಬ ಒಂದೇ ಕಾರಣಕ್ಕೆ ಭೀಕರವಾಗಿ ಗುಂಡಿಕ್ಕಿ ಕೊಲ್ಲಲ್ಪಡುತ್ತಾನೆ ಎಂಬ ಸಣ್ಣ ಸುಳಿವು ಕೂಡ ಆ ದಂಪತಿಗೆ ಇರಲಿಲ್ಲ! ಆತ ಕನ್ನಡಿಗ ಎಂಬ ಸತ್ಯವೂ ಆತನ ರಕ್ಷಣೆಗೆ ಬರಲಿಲ್ಲ" ಎಂದು ಭಾವುಕರಾಗಿ ನೆನಪಿಸಿಕೊಂಡಿದ್ದಾರೆ.

ವೇದಿಕೆಯಲ್ಲಿ ಕೆಟ್ಟದಾಗಿ ನಿಂದಿಸಿದರು - ನಾನೇಕೆ ಸುಮ್ಮನಿರಬೇಕು?

ಕಾನ್ಸರ್ಟ್‌ನಲ್ಲಿ ತಮಗಾದ ಕಹಿ ಅನುಭವವನ್ನು ಬಿಚ್ಚಿಟ್ಟ ಗಾಯಕ, "ನಿಜ ಜೀವನದಲ್ಲಿ ಯಾರಾದರೂ 'ನಿನ್ನ ಅಮ್ಮ...', 'ನಿನ್ನ ಅಕ್ಕ...' ಎಂದು ಬಾಯಿಗೆ ಬಂದಂತೆ ಕೆಟ್ಟ ಶಬ್ದಗಳಿಂದ ನಿಂದಿಸಿದರೆ ನಿಮ್ಮಲ್ಲಿ ಯಾರಾದರೂ ಸಹಿಸಿಕೊಳ್ಳುತ್ತೀರಾ? ಆ ದಿನ ನಾನು ಮೊದಲ ಹಾಡು ಹಾಡಲು ಪ್ರಾರಂಭಿಸಿದ ತಕ್ಷಣವೇ ವೇದಿಕೆಯ ಮುಂಭಾಗದಲ್ಲಿದ್ದ ಕೆಲವರಿಂದ ಅಂತಹ ನಿಂದನೆಗಳು ಆರಂಭವಾದವು. ನೆನಪಿರಲಿ, ಅದು ಹಣ ಕೊಟ್ಟು ಟಿಕೆಟ್ ಖರೀದಿಸಿ ಬಂದ ಕಾರ್ಯಕ್ರಮವಾಗಿರಲಿಲ್ಲ, ಅದೊಂದು ಕಾಲೇಜು ಶೋ ಆಗಿತ್ತು. ಸಾಮಾನ್ಯವಾಗಿ ಬಜೆಟ್ ಕಡಿಮೆಯಿರುವುದರಿಂದ ನಾನು ಕಾಲೇಜು ಶೋಗಳನ್ನು ತಪ್ಪಿಸುತ್ತೇನೆ. ಆದರೆ ಕರ್ನಾಟಕದ ವಿಷಯ ಬಂದಾಗ ನಾನು ಎಂದಿಗೂ 'ಬೇಡ' ಎಂದು ಹೇಳಿಲ್ಲ" ಎಂದಿದ್ದಾರೆ.

ಕರ್ನಾಟಕದಲ್ಲಿ ಶೋ ಇದ್ದಾಗ ನಾನು ಒಂದೂವರೆ ಗಂಟೆಗಳ ಕಾಲ ಸುದೀರ್ಘವಾಗಿ ಕನ್ನಡ ಹಾಡುಗಳನ್ನು ಹಾಡಲು ಸಿದ್ಧವಾಗಿಯೇ ಬಂದಿರುತ್ತೇನೆ. ನನ್ನ ಪರ್ಫಾರ್ಮೆನ್ಸ್ ಅತ್ಯಂತ ಉತ್ತುಂಗದಲ್ಲಿರುವಾಗ ಆ ಹಾಡುಗಳನ್ನು ಪ್ರಸ್ತುತಪಡಿಸಲು ಯೋಜನೆ ರೂಪಿಸಿರುತ್ತೇನೆ. ಹಾಗಿರುವಾಗ ಅಂತಹ ಕೆಟ್ಟ ನಿಂದನೆಗಳನ್ನು ಅನುಭವಿಸಲು ನಾನೇನು ತಪ್ಪು ಮಾಡಿದ್ದೆ? ಅವರಿಗೆ ತಿರುಗಿ ಶಾಪ ಹಾಕಿ ನಿಂದಿಸುವ ಬದಲು, ಎರಡು ವಾರಗಳ ಹಿಂದಷ್ಟೇ ನಡೆದಿದ್ದ ಪಹಲ್ಗಾಮ್ ದಾಳಿಯ ಉಲ್ಲೇಖವನ್ನು ಅವರಿಗೆ ನೆನಪಿಸಿದೆ. ಒಬ್ಬ ಭಾರತೀಯನಾಗಿ, ಒಬ್ಬ ಹುಟ್ಟು ಹಿಂದೂವಾಗಿ ನನ್ನ ಪ್ರತಿಕ್ರಿಯೆ ಸಂಪೂರ್ಣ ಸಮರ್ಥನೀಯವಾಗಿದೆ. ಕೇವಲ 2 ವಾರಗಳ ಹಿಂದೆ ಒಬ್ಬ ಕನ್ನಡಿಗನನ್ನು ಆತ 'ಹಿಂದೂ' ಮತ್ತು 'ಭಾರತೀಯ' ಎಂಬ ಕಾರಣಕ್ಕೆ ಪಾಯಿಂಟ್ ಬ್ಲಾಂಕ್‌ನಲ್ಲಿ ಸುಟ್ಟು ಹಾಕಿದ್ದನ್ನು ಇಂತಹ ದ್ವೇಷಪೂರಿತ, ಪ್ರತ್ಯೇಕತಾವಾದಿ ಮನಸ್ಥಿತಿಯ ಜನರಿಗೆ ನೆನಪಿಸಿದ್ದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ.

ಕರವೇ (KRV) ಸಂಘಟನೆಗೆ ಗೌರವ ಹಾಗೂ ಸತ್ಯದ ದರ್ಶನ

ಕರ್ನಾಟಕ ರಕ್ಷಣಾ ವೇದಿಕೆ ಕುರಿತು ಪ್ರಸ್ತಾಪಿಸಿರುವ ಸೋನು ನಿಗಮ್, ಆತ್ಮೀಯ ಕರವೇ (KRV) ನಾಯಕರೇ, ಕನ್ನಡ ಹಾಗೂ ಕನ್ನಡಿಗರ ಮೇಲಿರುವ ನಿಮ್ಮ ಅಪಾರ ಪ್ರೀತಿ ಮತ್ತು ಕಾಳಜಿಯನ್ನು ನಾನು ನನ್ನ ಹೃದಯದ ಆಳದಿಂದ ಅತ್ಯಂತ ಗೌರವಿಸುತ್ತೇನೆ. ಆ ದಿನ ವೇದಿಕೆಯಲ್ಲಿ ನಿಜವಾಗಿ ಏನು ನಡೆಯಿತು ಎಂಬುದನ್ನು ನೀವು ಸ್ವತಃ ಕಣ್ಣಾರೆ ನೋಡಿರಲಿಲ್ಲ, ಹೀಗಾಗಿ ನಿಮ್ಮ ಕೋಪ ಸಂಪೂರ್ಣವಾಗಿ ನ್ಯಾಯಯುತವಾಗಿದೆ. ಹಾಗಾಗಿಯೇ ಆ ದಿನ ನಡೆದ ನೈಜ ಸತ್ಯವನ್ನು ನಿಮಗೂ ಹಾಗೂ ಕನ್ನಡಿಗರಿಗೆ ವಿವರಿಸುವುದು ನನ್ನ ಕರ್ತವ್ಯ ಎಂದು ಭಾವಿಸಿದೆ. ದಯವಿಟ್ಟು ಅಂದು ಕಾರ್ಯಕ್ರಮಕ್ಕೆ ಬಂದಿದ್ದ ಪ್ರೇಕ್ಷಕರನ್ನು ಕೇಳಿ ನೋಡಿ, ನನ್ನ ಮೇಲೆ ನಿಂದನೆಗಳು ತೂರಿಬಂದಾಗ ಆ ಪ್ರೇಕ್ಷಕರು ಎಷ್ಟು ಮುಜುಗರಕ್ಕೊಳಗಾಗಿದ್ದರು ಎಂಬುದು ನಿಮಗೇ ತಿಳಿಯುತ್ತದೆ ಎಂದಿದ್ದಾರೆ.

30 ವರ್ಷಗಳ ಕನ್ನಡ ಸಂಗೀತ ಸೇವೆ ಮತ್ತು ನಿವೃತ್ತಿಯ ಮಾತು

ತಮ್ಮ ಕನ್ನಡ ಭಾಷಾ ಸೇವೆಯನ್ನು ಸ್ಮರಿಸಿದ ಸೋನು ನಿಗಮ್, "ಕಳೆದ 30 ವರ್ಷಗಳಿಂದ ಕನ್ನಡ ಸಂಗೀತ ಮತ್ತು ಸಂಸ್ಕೃತಿಗೆ ಅಪಾರವಾಗಿ ಕೊಡುಗೆ ನೀಡಿದ ಒಬ್ಬ ಕಲಾಕಾರನ ಕಡೆಗೆ ಬೆರಳು ಮಾಡಿ ತೋರಿಸುವುದು ಅತ್ಯಂತ ಅಪಕ್ವತನದ್ದು. 30,000 ಕನ್ನಡಿಗರಲ್ಲದ (Non-Kannadiga) ಪ್ರೇಕ್ಷಕರಿದ್ದ ಬೃಹತ್ ಕಾನ್ಸರ್ಟ್‌ನಲ್ಲಿ, ಕೇವಲ ಒಬ್ಬ ಕನ್ನಡಿಗ ಬಂದು 'ಕನ್ನಡ ಹಾಡು ಹಾಡಿ' ಎಂದು ವಿನಂತಿಸಿದಾಗಲೂ ಆತನ ಆಸೆಗೆ ಗೌರವ ನೀಡಿ ಕನ್ನಡ ಹಾಡು ಹಾಡಿದವನು ನಾನು.

ಇನ್ನು ಮುಂದೆ ನನಗೆ ಕೆಲಸ ಮಾಡುವ, ಹಾಡುವ ಅಥವಾ ವೇದಿಕೆ ಏರಿ ಪರ್ಫಾರ್ಮ್ ಮಾಡುವ ಯಾವುದೇ ಅನಿವಾರ್ಯತೆ ಇಲ್ಲ. ನನ್ನ ಕಳೆದ 49 ವರ್ಷಗಳ ಸಂಗೀತ ವೃತ್ತಿಜೀವನದಲ್ಲಿ ನನ್ನ ಜೀವನಕ್ಕೆ ಬೇಕಾಗುವಷ್ಟು ಹಣವನ್ನು ನಾನು ಈಗಾಗಲೇ ದುಡಿದುಕೊಂಡಿದ್ದೇನೆ" ಎಂದು ಬರೆಯುವ ಮೂಲಕ ಪತ್ರವನ್ನು ಮುಗಿಸಿದ್ದಾರೆ.

PREV
Read more Articles on
click me!

Recommended Stories

First Dosa: ಬೆಂಗಳೂರಿನ ದೋಸೆ ರುಚಿಗೆ ಮನಸೋತ ಕೊರಿಯನ್ ಕುಟುಂಬ! CTR, ರಾಮೇಶ್ವರಂ ಕೆಫೆಯಲ್ಲಿ ಯಾವ ದೋಸೆ ಫೇವರೆಟ್ ಆಯ್ತು?
ರಾಜ್ಯಕ್ಕೆ ಹಿಂಗಾರು ಪ್ರವೇಶ: ಕರಾವಳಿಯಲ್ಲಿ ಮೋಡ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅ.21ರ ವರೆಗೆ ಮಳೆ ಮುನ್ಸೂಚನೆ,