ತಿರುಮಲದಲ್ಲಿರುವ ಗೆಸ್ಟ್‌ ಹೌಸ್‌ ವಶಕ್ಕೆ ರಾಜ್ಯ ಸರ್ಕಾರ ತೀರ್ಮಾನ, ಇದು ಮೈಸೂರು ಮಹಾರಾಜರು ನೀಡಿದ್ದು ಎಂದ ಟಿಟಿಡಿ

Published : Oct 12, 2026, 10:15 AM IST
TTD and State Governament KSTDC

ಸಾರಾಂಶ

ತಿರುಮಲದಲ್ಲಿರುವ 'ಕರ್ನಾಟಕ ಪ್ರವಾಸಿ ಸೌಧ'ದ ನಿರ್ವಹಣೆಯನ್ನು ಕೆಎಸ್‌ಟಿಡಿಸಿಗೆ ಹಸ್ತಾಂತರಿಸುವ ರಾಜ್ಯ ಸರ್ಕಾರದ ನಿರ್ಧಾರ ಭಾರಿ ವಿವಾದ ಸೃಷ್ಟಿಸಿದೆ. ಧಾರ್ಮಿಕ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ಆರೋಪಿಸಿರುವ ಟಿಟಿಡಿ, ಗುತ್ತಿಗೆ ರದ್ದುಗೊಳಿಸುವ ಎಚ್ಚರಿಕೆ ನೀಡಿದೆ.

ತಿರುಪತಿ / ಬೆಂಗಳೂರು (ಅ.12): ತಿರುಮಲದಲ್ಲಿರುವ ಆಂಧ್ರ ಪ್ರದೇಶದ ಶ್ರೀ ವೆಂಕಟೇಶ್ವರ ಸ್ವಾಮಿ ಸನ್ನಿಧಿಯ 'ಕರ್ನಾಟಕ ಪ್ರವಾಸಿ ಸೌಧ'ದ (Karnataka Pravasi Soudha) ಕಾರ್ಯಾಚರಣೆ ಹಾಗೂ ನಿರ್ವಹಣೆಯನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ (KSTDC) ಹಸ್ತಾಂತರಿಸಲು ಕರ್ನಾಟಕ ಸರ್ಕಾರ ಕೈಗೊಂಡಿರುವ ನಿರ್ಧಾರ ಭಾರಿ ರಾಜಕೀಯ ವಿವಾದ ಹಾಗೂ ಧಾರ್ಮಿಕ ಸಂಘರ್ಷಕ್ಕೆ ಕಾರಣವಾಗಿದೆ.

ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳ ವಸತಿ ಮತ್ತು ಧಾರ್ಮಿಕ ಅನುಕೂಲಕ್ಕಾಗಿ ನಿರ್ಮಿಸಲಾದ ಈ ಸಂಕೀರ್ಣವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ಹೊರಟಿದೆ ಎಂದು ಆರೋಪಿಸಿರುವ ತಿರುಮಲ ತಿರುಪತಿ ದೇವಸ್ಥಾನಂ (TTD) ಆಡಳಿತ ಮಂಡಳಿ, ಆಂಧ್ರಪ್ರದೇಶದ ಬಿಜೆಪಿ (BJP) ಹಾಗೂ ಜನಸೇನಾ (Jana Sena) ಪಕ್ಷದ ನಾಯಕರು ಕರ್ನಾಟಕ ಸರ್ಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಏನಿದು 'ಕರ್ನಾಟಕ ಪ್ರವಾಸಿ ಸೌಧ' ಯೋಜನೆ ಮತ್ತು ಗುತ್ತಿಗೆ?

ಮೈಸೂರು ಮಹಾರಾಜರ ಕಾಲದಲ್ಲಿ ಮಂಜೂರಾಗಿದ್ದ 7.5 ಎಕರೆ (ಟಿಟಿಡಿ ಲೆಕ್ಕಾಚಾರದಂತೆ) ಪೈಕಿ, ಟಿಟಿಡಿಯು ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ ಲೀಸ್ ಆಧಾರದಲ್ಲಿ ನೀಡಿದ್ದ 6.47 ಎಕರೆ ಜಾಗದಲ್ಲಿ ಈ ಬೃಹತ್ ಪ್ರವಾಸಿ ಸೌಧವನ್ನು ನಿರ್ಮಿಸಲಾಗಿದೆ. ಕರ್ನಾಟಕ ಸರ್ಕಾರವು ಬರೋಬ್ಬರಿ ₹202 ಕೋಟಿ ವೆಚ್ಚದಲ್ಲಿ 2020 ರ ಅಕ್ಟೋಬರ್ ಹಾಗೂ 2022 ರ ಜುಲೈನಲ್ಲಿ ಎರಡು ಕಂತುಗಳಲ್ಲಿ ಹಣ ಪಾವತಿಸಿ ಇದನ್ನು ಅಭಿವೃದ್ಧಿಪಡಿಸಿತ್ತು.

ಹಂಪಿ, ಐಹೊಳೆ, ಶ್ರೀ ಕೃಷ್ಣದೇವರಾಯ ಹಾಗೂ ಹಳೇಬೀಡು ಎಂಬ ಹೆಸರುಗಳಿರುವ 4 ಬ್ಲಾಕ್‌ಗಳು ಮತ್ತು ಬೃಹತ್ ಕಲ್ಯಾಣ ಮಂಟಪವನ್ನು ಈ ಸಂಕೀರ್ಣ ಒಳಗೊಂಡಿದೆ. ಈ ಜಮೀನಿನ ಗುತ್ತಿಗೆ ಅವಧಿ 2020 ರ ಏಪ್ರಿಲ್ 1 ರಿಂದ 2050 ರ ಮಾರ್ಚ್ 31 ರವರೆಗೆ (30 ವರ್ಷಗಳು) ಚಾಲ್ತಿಯಲ್ಲಿದೆ. ಏಪ್ರಿಲ್ 2024 ರ ಟಿಟಿಡಿ ಆದೇಶದ ಪ್ರಕಾರ, ವಾರ್ಷಿಕ ಗುತ್ತಿಗೆ ಮೊತ್ತ ₹6.48 ಲಕ್ಷದಿಂದ ₹8.64 ಲಕ್ಷಕ್ಕೆ (ತೆರಿಗೆ ಹೊರತುಪಡಿಸಿ) ಪರಿಷ್ಕರಣೆಗೊಂಡಿದೆ.

ಹೊಸ ಒಪ್ಪಂದದಲ್ಲೇನಿದೆ?

ಕರ್ನಾಟಕ ಸರ್ಕಾರದ ಪ್ರಸ್ತಾವಿತ ಒಪ್ಪಂದದ ಪ್ರಕಾರ, ಪ್ರವಾಸಿ ಸೌಧದ ವಸತಿ ಕೊಠಡಿಗಳು ಹಾಗೂ ಹೋಟೆಲ್/ರೆಸ್ಟೋರೆಂಟ್‌ಗಳನ್ನು ಕೆಎಸ್‌ಟಿಡಿಸಿ (KSTDC) ನಿರ್ವಹಣೆ ಮಾಡಲಿದೆ. ಖರ್ಚು ವೆಚ್ಚಗಳನ್ನು ಕಳೆದು ಬಂದ ನಿವ್ವಳ ಆದಾಯವನ್ನು ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ಹಾಗೂ ಕೆಎಸ್‌ಟಿಡಿಸಿ ನಡುವೆ 50:50 ರ ಅನುಪಾತದಲ್ಲಿ ಹಂಚಿಕೊಳ್ಳಲು ತೀರ್ಮಾನಿಸಲಾಗಿತ್ತು. ಇತ್ತೀಚೆಗೆ ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಸಾದ್ ಅವರು ಪ್ರವಾಸಿ ಸೌಧವನ್ನು ವಶಕ್ಕೆ ಪಡೆಯುವುದಾಗಿ ಪ್ರಕಟಿಸಿದ್ದು, ಎರಡೂ ಇಲಾಖೆಗಳ ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದ್ದಾರೆನ್ನಲಾಗಿದೆ.

ವಾಣಿಜ್ಯೀಕರಣದ ಭಾರಿ ಆರೋಪ, ಡಿಕೆಶಿ ವಿರುದ್ಧ ವಾಗ್ದಾಳಿ:

ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿರುವ ಟಿಟಿಡಿ ಮಂಡಳಿ ಸದಸ್ಯ ಹಾಗೂ ಬಿಜೆಪಿ ನಾಯಕ ಜಿ. ಭಾನುಪ್ರಕಾಶ್ ರೆಡ್ಡಿ, ಭಕ್ತರ ಅನುಕೂಲಕ್ಕಾಗಿ ನೀಡಲಾದ ಧಾರ್ಮಿಕ ಜಾಗವನ್ನು ಪ್ರವಾಸೋದ್ಯಮ ನಿಗಮಕ್ಕೆ ನೀಡುವ ಔಚಿತ್ಯವೇನು? ಪ್ರವಾಸಿ ಸೌಧದ ಒಳಗಿರುವ ಹೋಟೆಲ್ ಹಾಗೂ ಅಂಗಡಿ ಮಳಿಗೆಗಳ ನಿಯಂತ್ರಣವನ್ನು ತಮ್ಮ ಕಂಟ್ರೋಲ್‌ಗೆ ತೆಗೆದುಕೊಳ್ಳಲು ಕೆಲವು ಪ್ರಭಾವಿ ವ್ಯಕ್ತಿಗಳು ಯತ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ತಿರುಪತಿಯ ಕಾಂಗ್ರೆಸ್ ನಾಯಕರೊಬ್ಬರು (ಮಾಜಿ ಕೇಂದ್ರ ಸಚಿವರು) ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರೊಂದಿಗೆ ಸೇರಿ ಈ ಪ್ರಕ್ರಿಯೆಯ ಹಿಂದೆ ಕೆಲಸ ಮಾಡುತ್ತಿದ್ದಾರೆ ಎಂದು ರೆಡ್ಡಿ ದೂರಿದ್ದಾರೆ. ಈ ರೀತಿ ಧಾರ್ಮಿಕ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ, ಕರ್ನಾಟಕಕ್ಕೆ ನೀಡಲಾದ ಲೀಸ್ ರದ್ದುಗೊಳಿಸಿ ಸಂಪೂರ್ಣ ಆಸ್ತಿಯನ್ನು ಟಿಟಿಡಿ ವಶಕ್ಕೆ ಪಡೆಯಲಿದೆ ಎಂದು ಎಚ್ಚರಿಸಿದ್ದಾರೆ. ಈ ಕುರಿತು ಅವರು ಕರ್ನಾಟಕ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಪ್ರಸ್ತಾವನೆ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.

ಜನಸೇನಾ ಆಕ್ರೋಶ, 400 ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಭೀತಿ

ಮತ್ತೊಂದೆಡೆ, ಜನಸೇನಾ ಮುಖಂಡ ಕಿರಣ್ ರಾಯಲ್ ಮಾತನಾಡಿ, ತಿರುಮಲದ ಪ್ರತಿಯೊಂದು ಇಂಚು ಜಾಗವೂ ಶ್ರೀ ವೆಂಕಟೇಶ್ವರ ಸ್ವಾಮಿಗೆ ಸೇರಿದ್ದು. ಪ್ರವಾಸೋದ್ಯಮ ಇಲಾಖೆಯನ್ನು ಇಲ್ಲಿಗೆ ಎಳೆದುತರುವುದು ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆ ಎಂದಿದ್ದಾರೆ. ಪ್ರಸ್ತುತ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 400 ಸ್ಥಳೀಯ ನೌಕರರನ್ನು ತೆಗೆದುಹಾಕಿ, ಕರ್ನಾಟಕದಿಂದ ಸಿಬ್ಬಂದಿಯನ್ನು ಕರೆತರಲು ಸಿದ್ಧತೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಟಿಟಿಡಿಯಿಂದ ನೋಟಿಸ್ ಜಾರಿಗೆ ಸಿದ್ಧತೆ

ಧಾರ್ಮಿಕ ದತ್ತಿ ಜಾಗವನ್ನು ಪ್ರವಾಸೋದ್ಯಮ ಇಲಾಖೆಗೆ ವರ್ಗಾಯಿಸುವ ಕರ್ನಾಟಕ ಸರ್ಕಾರದ ಏಕಪಕ್ಷೀಯ ನಿರ್ಧಾರಕ್ಕೆ ಟಿಟಿಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಶೀಘ್ರದಲ್ಲೇ ಕರ್ನಾಟಕ ಸರ್ಕಾರಕ್ಕೆ ಅಧಿಕೃತ ನೋಟಿಸ್ ಜಾರಿಗೊಳಿಸಲು ತೀರ್ಮಾನಿಸಿದೆ. ನಿಯಮ ಪಾಲನೆಯಾಗದಿದ್ದರೆ ಕಟ್ಟಡವನ್ನು ತಾನೇ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಟಿಟಿಡಿ ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೇ ತಿರುಮಲದಲ್ಲಿರುವ ಕರ್ನಾಟಕದ ಛತ್ರಗಳ ಮೂಲಕ ದೇವರಿಗೆ ಪ್ರತಿದಿನ ನಡೆಯುವ ಮಂಗಳಾರತಿ ಸೇವೆಯಲ್ಲಿ ಕರ್ನಾಟಕದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ನೀಡಿದ್ದ ಹೇಳಿಕೆ ಭಾರಿ ವಿವಾದ ಸೃಷ್ಟಿಸಿತ್ತು. ಅದರ ಬೆನ್ನಲ್ಲೇ ಇದೀಗ ಪ್ರವಾಸಿ ಸೌಧದ ಹಸ್ತಾಂತರ ವಿವಾದ ಕಾವು ಪಡೆದುಕೊಂಡಿದೆ.

PREV
Read more Articles on
click me!

Recommended Stories

ಭವಿಷ್ಯದಲ್ಲಿ ಬ್ಲಿಂಕಿಟ್ ರೀತಿ ಕೆಲವೇ ನಿಮಿಷದಲ್ಲಿ ಗುಂಡಿ ದುರಸ್ತಿ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್
ಬೆಂಗಳೂರು-ಹೊಸೂರು ಮೆಟ್ರೋ ಸಂಪರ್ಕ ಕಲ್ಪಿಸಿ: ಪ್ರಧಾನಿ ಮೋದಿಗೆ ಮನವಿ ಸಲ್ಲಿಸಿದ ತಮಿಳುನಾಡು ಸಿಎಂ ವಿಜಯ್!