
ಬೆಂಗಳೂರು (ಜೂ.5): ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನ ಹೊರಗೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಅಮಾಯಕ ಆರ್‌ಸಿಬಿ ಅಭಿಮಾನಿಗಳು ದಾರುಣವಾಗಿ ಸಾವು ಕಂಡ ಘಟನೆಗೆ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದೆ. ಬೆಂಗಳೂರು ಪೊಲೀಸ್ ಕಮೀಷನರ್ ಬಿ.ದಯಾನಂದ್ ಅವರನ್ನು ಹುದ್ದೆಯಿಂದ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲಿಯೇ ಬೆಂಗಳೂರಿನ ನೂತನ ಕಮೀಷನರ್ ಆಗಿ ಸೀಮಂತ್ ಕುಮಾರ್ ಸಿಂಗ್ ಅವರನ್ನು ಸರ್ಕಾರ ನೇಮಕ ಮಾಡಿದೆ.
ಬೆಂಗಳೂರು ಮಹಾನಗರ ಕಾರ್ಯಪಡೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ 1996ರ ಕರ್ನಾಟಕ ಕೆಡರ್‌ನ ಐಪಿಎಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಮುಂದಿನ ಆದೇಶದವರೆಗೆ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಆಯುಕ್ತರಾಗಿ ನೇಮಿಸಲಾಗಿದೆ. ಇವರು ಬೆಂಗಳೂರಿನ 39ನೇ ಪೊಲೀಸ್ ಕಮೀಷನರ್ ಆಗಲಿದ್ದಾರೆ.