
ಬೆಂಗಳೂರು: ಬೆಂಗಳೂರು:ಕಳೆದ ಕೆಲವು ದಿನಗಳಿಂದ ಭಾರೀ ಸುದ್ದಿಯಲ್ಲಿರುವ ರೇಣುಕಾಸ್ವಾಮಿ ಪ್ರಕರಣದ ಆರೋಪಿ ನಟ ದರ್ಶನ್ ತೂಗುದೀಪ ಅವರ ಕುಟುಂಬ ಹಾಗೂ ನಟ ಧನ್ವೀರ್ ನಡುವಿನ ಕಾನೂನು ಸಮರ ಇದೀಗ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ತಮ್ಮ ಕುಟುಂಬದ ವಿರುದ್ಧ ಸಾರ್ವಜನಿಕವಾಗಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ, ತಮ್ಮ ಕುಟುಂಬದ ಸಮಾಜಿಕ ಘನತೆ ಹಾಗೂ ವೈಯಕ್ತಿಕ ಗೌರವಕ್ಕೆ ಅಘಾತ ಉಂಟುಮಾಡಲಾಗಿದೆ ಎಂದು ಆರೋಪಿಸಿ, ನಟ ಧನ್ವೀರ್ ಗೌಡ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಲ್ಲಿ ಕ್ರಿಮಿನಲ್ ಮಾನಹಾನಿ ಮೊಕದ್ದಮೆ ದಾಖಲಿಸಿದ್ದಾರೆ. ಈ ಕುರಿತು ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯವು, ಪ್ರಕರಣದ ಮುಂದಿನ ವಿಚಾರಣೆಯನ್ನು ಈ ತಿಂಗಳ ನವೆಂಬರ್ 30ಕ್ಕೆ ನಿಗದಿಪಡಿಸಿದೆ. ಈ ಪ್ರಕರಣದ ಬೆಳವಣಿಗೆ ಹಿನ್ನೆಲೆಯಲ್ಲಿ ನಟ ಧನ್ವೀರ್ ಗೆ ದರ್ಶನ್ ಕುಟುಂಬದಿಂದ ಮತ್ತೊಂದು ಶಾಕ್ ಎದುರಾಗಿದೆ.
ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮೀ ಅವರ ಕುರಿತು ಯಾವುದೇ ಸುಳ್ಳು, ದುರುದ್ದೇಶಪೂರಿತ ಮತ್ತು ಅವಹೇಳನ-ಮಾನಹಾನಿಕರ ಹೇಳಿಕೆಗಳನ್ನು ನೀಡದಂತೆ ಧನ್ವೀರ್ ಅಥವಾ ಅವರ ಬೆಂಬಲಿಗರ ವಿರುದ್ಧ ನಗರದ 12ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಧ್ಯಂತರ ಪ್ರತಿಬಂಧಕ ಆದೇಶ ಹೊರಡಿಸಿತ್ತು.
ರೇಣುಕಾಸ್ವಾಮಿ ಕೊಲೆ ಪ್ರಕರಣ ಸೇರಿದಂತೆ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ವೈಯಕ್ತಿಕ, ಖಾಸಗಿ, ಹಣಕಾಸು ಮತ್ತು ನಿಭಾಯಿಸುತ್ತಿರುವ ಕಾನೂನು ಸಮಸ್ಯೆಗಳ ಬಗ್ಗೆ ಯಾವುದೇ ಸುಳ್ಳು ಹಾಗೂ ಮಾನಹಾನಿಕಾರ ಹೇಳಿಕೆಗಳನ್ನು ನೀಡದಂತೆ ನಟ ಧನ್ವೀರ್ ವಿರುದ್ಧ ಪ್ರತಿಬಂಧಕ ಆದೇಶ ಹೊರಡಿಸಬೇಕು ಎಂದು ಕೋರಿ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ಗೆ ಮೂಲದಾವೆ ದಾಖಲಿಸಿದ್ದರು.
ದಾವೆಯ ಕುರಿತು ದರ್ಶನ್ ಮತ್ತು ವಿಜಯಲಕ್ಷ್ಮೀ ಅವರ ವಕೀಲರ ವಾದ ಆಲಿಸಿದ ನ್ಯಾಯಾಲಯ, ಧನ್ವೀರ್ ಅಥವಾ ಅವರ ಬೆಂಬಲಿಗರು ದರ್ಶನ್ ಮತ್ತವರ ಪತ್ನಿ ವಿರುದ್ಧ ಯಾವುದೇ ಸುದ್ದಿ ವಾಹಿನಿಗಳು, ಸಾಮಾಜಿಕ ಜಾಲತಾಣಗಳು ಅಥವಾ ಮುದ್ರಣ ಮಾಧ್ಯಮಗಳಲ್ಲಿ ಮಾತನಾಡಬಾರದು ಎಂದು ಏಕಪಕ್ಷೀಯ ಮಧ್ಯಂತರ ಆದೇಶ ಮಾಡಿ ದಾವೆಯಲ್ಲಿ ಪ್ರತಿವಾದಿಯಾಗಿರುವ ಧನ್ವೀರ್‌ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಡಿ.7ಕ್ಕೆ ಮುಂದೂಡಿದೆ.