ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ರೈಲು ಘೋಷಿಸಿದ ರೈಲ್ವೆ ಸಚಿವ, ಬೆಂಗಳೂರು-ಹುಬ್ಬಳ್ಳಿ-ಮುಂಬೈ ನಡುವೆ ಓಡಾಟ

Published : Nov 02, 2026, 08:33 AM IST
Ashwini Vaishnaw

ಸಾರಾಂಶ

ಬೆಂಗಳೂರು ಮತ್ತು ಮುಂಬೈ ನಡುವಿನ ಮತ್ತು ರಾಜ್ಯದ ಮೊದಲ ವಂದೇ ಭಾರತ್ ಸ್ಲೀಪರ್‌ ರೈಲಿಗೆ ರೈಲ್ವೆ ಖಾತೆ ಸಚಿವ ಅಶ್ವಿನ್ ವೈಷ್ಣವ್‌ ಭಾನುವಾರ ಬೆಂಗಳೂರಿನಲ್ಲಿ ಚಾಲನೆ ನೀಡಿದರು. ಇದೇ ವೇಳೆ ಬೆಂಗಳೂರು-ಮಂಗಳೂರು ನಡುವೆ ಶೀಘ್ರ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸಂಚರಿಸಲಿದೆ ಎಂದು ತಿಳಿಸಿದರು.

ಬೆಂಗಳೂರು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಶಯದಂತೆ ಬೆಂಗಳೂರು ಹುಬ್ಬಳ್ಳಿ-ಮುಂಬೈ ನಡುವೆ ಮತ್ತೊಂದು ವಂದೇ ಭಾರತ್ ಸಂಚರಿಸಲಿದೆ. ಬೆಂಗಳೂರು-ಮಂಗಳೂರು ನಗರಗಳ ನಡುವೆ ಅತಿ ಶೀಘ್ರದಲ್ಲೇ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ ಎಂದು ಕೇಂದ್ರ ರೈಲು ಸಚಿವ ಅಶ್ವಿನ್ ವೈಷ್ಣವ್ ತಿಳಿಸಿದ್ದಾರೆ.

ನಗರದ ಬೈಯಪ್ಪನಹಳ್ಳಿಯ ಎಸ್.ಎಂ.ವಿಟಿ ನಿಲ್ದಾಣದಲ್ಲಿ ಬೆಂಗಳೂರು-ಮುಂಬೈ ನಡುವೆ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್‌ ಸ್ಲೀಪರ್ ರೈಲು ಸಂಚಾರ ಉದ್ಘಾಟನೆ ಸಮಾರಂಭದಲ್ಲಿ ಈ ವಿಷಯ ತಿಳಿಸಿದರು.

ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ನಿಲ್ದಾಣಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಪರೀಕ್ಷೆ ನಡೆಯುತ್ತಿದೆ. ಈ ಹಂತ ಮುಗಿದ ಕೂಡಲೇ ಎರಡು ನಗರಗಳ ನಡುವೆ ವಂದೇ ಭಾರತ್ ಸಂಚರಿಸಲಿದೆ ಎಂದರು.

ಇದಲ್ಲದೆ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಶಯದಂತೆ ಬೆಂಗಳೂರು ಹುಬ್ಬಳ್ಳಿ-ಮುಂಬೈ ನಡುವೆ ಮತ್ತೊಂದು ವಂದೇ ಭಾರತ್ ಸಂಚರಿಸಲಿದೆ. ಇದರಿಂದಾಗಿ ವಿಕಸಿತ ಭಾರತದ ಆಶಯದಂತೆ ರಾಷ್ಟ್ರದ ಎಲ್ಲಾ ಮಹಾನಗರಗಳ ನಡುವೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳ ಸಂಪರ್ಕ ಏರ್ಪಡುವುದರಿಂದ ರಾಷ್ಟ್ರದ ಆರ್ಥಿಕತೆಗೆ, ವಾಣಿಜ್ಯ ವಹಿವಾಟುಗಳಿಗೆ ಸಹಕಾರಿಯಾಗಲಿದೆ ಎಂದರು.

ಜೋಷಿ ಮಾತನಾಡಿ, 2007ರಿಂದ 2014ರವರೆಗೆ ಯುಪಿಎ ನೇತೃತ್ವದ ಸರ್ಕಾರ ರಾಜ್ಯಕ್ಕೆ ಕೇವಲ 200 ಕೋಟಿ ವಾರ್ಷಿಕ ಅನುದಾನ ನೀಡುತ್ತಿತ್ತು. ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ವಾರ್ಷಿಕ ಸರಾಸರಿ 7 ಸಾವಿರದಿಂದ 8 ಸಾವಿರ ಕೋಟಿ ಅನುದಾನ ನೀಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಎಚ್‌.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಸಂಸದರಾದ ಸಿ.ಮೋಹನ್, ತೇಜಸ್ವಿ ಸೂರ್ಯ, ಡಾ.ಸಿ.ಎನ್ ಮಂಜುನಾಥ್‌, ರಾಜ್ಯಸಭಾ ಸದಸ್ಯ ಜಗ್ಗೇಶ್ ಮತ್ತಿತರರು ಪಾಲ್ಗೊಂಡಿದ್ದರು.

ಬೆಂಗಳೂರು-ಮಂಗಳೂರು-ಗೋವಾ ವಂದೇ ಭಾರತ್‌ ವೇಳಾಪಟ್ಟಿ ಇಲ್ಲಿದೆ, ಕೊನೆಗೂ ಪುತ್ತೂರು ನಿಲುಗಡೆ ಸಿಕ್ತು

ಬೆಂಗಳೂರು-ಮಂಗಳೂರು-ಗೋವಾ ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಅಧಿಕೃತ ವೇಳಾಪಟ್ಟಿಯನ್ನು ರೈಲ್ವೆ ಇಲಾಖೆ ಕೊನೆಗೂ ಪ್ರಕಟಿಸಿದೆ. ಇದರೊಂದಿಗೆ ರಾಜಧಾನಿ ಬೆಂಗಳೂರು ಹಾಗೂ ಕರಾವಳಿ-ಗೋವಾ ನಡುವೆ ನೇರ ರೈಲು ಓಡಾಟಕ್ಕೆ ಕ್ಷಣಗಣನೆ ಆರಂಭವಾದಂತಾಗಿದೆ. ಇದೇ ವೇಳೆ ಹಾಲಿ ಸಂಚರಿಸುತ್ತಿರುವ ಮಂಗಳೂರು ಸೆಂಟ್ರಲ್-ಮಡಗಾಂವ್ ವಂದೇ ಭಾರತ್(20645/20646) ಸೇವೆ ಸ್ಥಗಿತಕ್ಕೆ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ.

ರೈಲ್ವೆ ಇಲಾಖೆಯ ಆದೇಶದ ಪ್ರಕಾರ ಹೊಸ ರೈಲು 26655/26656 ಸಂಖ್ಯೆಯಲ್ಲಿ ಸಂಚರಿಸಲಿದೆ. ವಾರದಲ್ಲಿ ಆರು ದಿನ ಸೇವೆ ಲಭ್ಯವಿದ್ದು, ಯಶವಂತಪುರದಿಂದ ಬುಧವಾರ ಹಾಗೂ ಮಡಗಾಂವ್‌ನಿಂದ ಗುರುವಾರ ರೈಲು ಸಂಚರಿಸುವುದಿಲ್ಲ.

ಸಮಯ ಮತ್ತು ನಿಲ್ದಾಣಗಳು: ಯಶವಂತಪುರದಿಂದ ಬೆಳಗ್ಗೆ 7.35ಕ್ಕೆ ಹೊರಡುವ ರೈಲು ರಾತ್ರಿ 8.55ಕ್ಕೆ ಮಡಗಾಂವ್ ತಲುಪಲಿದೆ. ಮರುದಿನ ಮಡಗಾಂವ್‌ನಿಂದ ಬೆಳಗ್ಗೆ 8.20ಕ್ಕೆ ಹೊರಡುವ ರೈಲು ರಾತ್ರಿ 9.15ಕ್ಕೆ ಯಶವಂತಪುರ ತಲುಪಲಿದೆ.

ಮಾರ್ಗಮಧ್ಯೆ ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು, ಮಂಗಳೂರು ಜಂಕ್ಷನ್, ತೋಕೂರು, ಉಡುಪಿ, ಕುಂದಾಪುರ, ಮೂಕಾಂಬಿಕಾ ರಸ್ತೆ ಬೈಂದೂರು, ಮುರ್ಡೇಶ್ವರ, ಗೋಕರ್ಣ ರಸ್ತೆ ಹಾಗೂ ಕಾರವಾರ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ. ತೋಕೂರು ನಿಲ್ದಾಣದಲ್ಲಿ ಮಾತ್ರ ವಾಣಿಜ್ಯ ನಿಲುಗಡೆ ಇರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮಂಗಳೂರಿಗೆ ಮಧ್ಯಾಹ್ನ ಆಗಮನ:

ಯಶವಂತಪುರದಿಂದ ಹೊರಡುವ ರೈಲು ಸಂಜೆ 3.05ಕ್ಕೆ ಮಂಗಳೂರು ಜಂಕ್ಷನ್ ತಲುಪಿ, 3.15ಕ್ಕೆ ಅಲ್ಲಿಂದ ಹೊರಡಲಿದೆ. ಮಡಗಾಂವ್‌ನಿಂದ ಬರುವ ರೈಲು ಮಧ್ಯಾಹ್ನ 1.50ಕ್ಕೆ ಮಂಗಳೂರು ಜಂಕ್ಷನ್ ತಲುಪಿ, 2 ಗಂಟೆಗೆ ನಿರ್ಗಮಿಸಲಿದೆ.

ಈ ಹೊಸ ಸೇವೆಗೆ ಎರಡು ವಂದೇ ಭಾರತ್ ರೈಲು ರೇಕ್‌ಗಳನ್ನು ಬಳಸಲು ನಿರ್ಧರಿಸಲಾಗಿದೆ. ಯಶವಂತಪುರದಲ್ಲಿ ಪ್ರಾಥಮಿಕ ನಿರ್ವಹಣೆ ಹಾಗೂ ಮಡಗಾಂವ್‌ನಲ್ಲಿ ಇತರ ನಿರ್ವಹಣೆ ಕೈಗೊಳ್ಳುವ ವ್ಯವಸ್ಥೆ ಮಾಡಲಾಗಿದೆ.

ಹೊಸ ರೈಲು ಸೇವೆಯನ್ನು ಅನುಕೂಲಕರವಾದ ಆರಂಭಿಕ ದಿನಾಂಕದಿಂದ ಅಥವಾ ಟಿಕೆಟ್ ಕಾಯ್ದಿರಿಸುವಿಕೆ ಆರಂಭವಾಗುವ ದಿನಾಂಕದಿಂದ ಜಾರಿಗೆ ತರಲು ರೈಲ್ವೆ ಸಚಿವಾಲಯ ಸೂಚಿಸಿದೆ. ಅಗತ್ಯವಿದ್ದಲ್ಲಿ ಉದ್ಘಾಟನಾ ರೈಲನ್ನು ವಿಶೇಷ ಸೇವೆಯಾಗಿ ಓಡಿಸಿ, ನಂತರ ನಿಗದಿತ ರೈಲು ವೇಳಾಪಟ್ಟಿಗೆ ಜೋಡಿಸಬಹುದು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

PREV
Read more Articles on
click me!

Recommended Stories

ಕಾಪಾಡಿ.., ಎಂದು ಅಂಗಡಿಯೊಳಗೆ ನುಗ್ಗಿ, ಚಿನ್ನದ ಸರ ಕಸಿದ ಪ್ರಭುರಾಜ್; ಕುತ್ತಿಗೆಗೆ ಚಾಕು ಹಿಡಿದು ಪರಾರಿಯಾಗಲು ಯತ್ನ!
ಬೆಸ್ಕಾಂ ವ್ಯಾಪ್ತಿಯ ಗೃಹಜ್ಯೋತಿ ಫಲಾನುಭವಿಗಳಿಗೆ ಶಾಕ್: ಬರೋಬ್ಬರಿ 1.42 ಲಕ್ಷ ಮಂದಿ ಯೋಜನೆಯಿಂದ ಔಟ್?!