ರೇಣುಕಾಸ್ವಾಮಿ ಪ್ರಕರಣ: ಜೈಲಲ್ಲಿರುವ A1 ಆರೋಪಿ ಪವಿತ್ರಾ ಗೌಡ ಹೊಸ ಬೇಡಿಕೆಗೆ ಅಸ್ತು ಎಂದ ಕೋರ್ಟ್

Published : Sep 07, 2026, 04:58 PM IST
Pavithra Gowda

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ತಮ್ಮನ್ನು ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸುವಂತೆ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಭಾಗಶಃ ಪುರಸ್ಕರಿಸಿದೆ. ಮತ್ತೊಂದೆಡೆ, ವಿಚಾರಣೆಗೆ ಖುದ್ದು ಹಾಜರಾಗಲು ಅನುಮತಿ ಕೋರಿ ನಟ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ A1 ಆರೋಪಿಯಾಗಿರುವ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಪ್ರಮುಖ ಆದೇಶ ನೀಡಿದೆ. ತಮ್ಮನ್ನು ಪರಪ್ಪನ ಅಗ್ರಹಾರ ಜೈಲಿನ ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸುವಂತೆ ಕೋರಿ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಭಾಗಶಃ ಪುರಸ್ಕರಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಆರೋಪಿಯ ಆರೋಗ್ಯದ ಹಿತದೃಷ್ಟಿಯಿಂದ ಅಗತ್ಯವಿದ್ದಲ್ಲಿ ಬೇರೆ ಬ್ಯಾರಕ್‌ಗೆ ಶಿಫ್ಟ್ ಮಾಡುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಆದರೆ, ಈ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಜೈಲು ಮ್ಯಾನುವಲ್ ನಿಯಮಾವಳಿಗಳಿಗೆ ಅನುಗುಣವಾಗಿಯೇ ಕೈಗೊಳ್ಳಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಬ್ಯಾರಕ್ ಬದಲಾವಣೆ ಸಂಬಂಧ ಜೈಲು ನಿಯಮಗಳ ಪ್ರಕಾರ ಪರಿಶೀಲಿಸಿ, ಮುಂದಿನ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಬಂಧಿಖಾನೆ ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಮತ್ತೊಮ್ಮೆ ಹೈಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ, ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಮ್ಮನ್ನು ಖುದ್ದಾಗಿ ಹಾಜರುಪಡಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ (CCH) ನ್ಯಾಯಾಲಯವು ದರ್ಶನ್ ಅವರನ್ನು ಖುದ್ದಾಗಿ ಹಾಜರುಪಡಿಸಲು ನಿರಾಕರಿಸಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಅವರು ಈಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಅರ್ಜಿಯಲ್ಲಿ ದರ್ಶನ್ ಉಲ್ಲೇಖಿಸಿರುವ ಪ್ರಮುಖ ಅಂಶಗಳು:

ಸಾಕ್ಷ್ಯ ವಿಚಾರಣೆಯ ಪ್ರಕ್ರಿಯೆಯನ್ನು ನೇರವಾಗಿ ಆಲಿಸುವುದು ಮತ್ತು ವೀಕ್ಷಿಸುವುದು ಆರೋಪಿಯ ಮೂಲಭೂತ ಹಕ್ಕಾಗಿದೆ. ಸಾಕ್ಷಿಯು ಆರೋಪಿಯ ಸಮಕ್ಷಮದಲ್ಲೇ ತನ್ನ ಹೇಳಿಕೆಯನ್ನು ದಾಖಲಿಸಬೇಕು.

ಸದ್ಯ ಪರಪ್ಪನ ಅಗ್ರಹಾರ ಜೈಲು ಹಾಗೂ ನ್ಯಾಯಾಲಯದಲ್ಲಿ ಸೂಕ್ತ ತಾಂತ್ರಿಕ ಉಪಕರಣಗಳ ಕೊರತೆಯಿದೆ. ಈ ಉಪಕರಣಗಳನ್ನು ಇನ್ನೂ ಉನ್ನತೀಕರಿಸದೇ ಇರುವುದರಿಂದ ವಿಡಿಯೋ ಕಾನ್ಫರೆನ್ಸಿಂಗ್ (VC) ಸಮಯದಲ್ಲಿ ನಿರಂತರ ತಾಂತ್ರಿಕ ಅಡಚಣೆಗಳು ಎದುರಾಗುತ್ತಿವೆ.

ತಾಂತ್ರಿಕ ತೊಡಕುಗಳಿಂದಾಗಿ ವಿಚಾರಣೆ ಸಂದರ್ಭದಲ್ಲಿ ಕಾಲಕಾಲಕ್ಕೆ ತಮ್ಮ ವಕೀಲರೊಂದಿಗೆ ನೇರ ಸಂವಹನ ನಡೆಸಲು ಮತ್ತು ಸೂಕ್ತ ಸಲಹೆ-ಸೂಚನೆಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ.

ಈ ಎಲ್ಲಾ ಕಾರಣಗಳನ್ನು ಉಲ್ಲೇಖಿಸಿರುವ ನಟ ದರ್ಶನ್, ಪ್ರಕರಣದ ಸಾಕ್ಷ್ಯ ವಿಚಾರಣೆ ವೇಳೆ ತಮ್ಮನ್ನು ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರುಪಡಿಸುವಂತೆ ಜೈಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಉಚ್ಚ ನ್ಯಾಯಾಲಯವನ್ನು ಕೋರಿದ್ದಾರೆ.

PREV
Read more Articles on
click me!

Recommended Stories

ದರ್ಶನ್ ಕೇಸ್‌ಗೆ ಬಿಗ್ ಟ್ವಿಸ್ಟ್ : ಮಹತ್ವದ ಮನವಿಯೊಂದಿಗೆ ಮತ್ತೊಮ್ಮೆ ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್ ಪರ ವಕೀಲ
ಬೆಂಗಳೂರು ನೈಸ್ ರೋಡ್ ಟೋಲ್ ಕಟ್ಟದೆ, ಪ್ರಶ್ನೆ ಮಾಡಿ ಯುವತಿ; ತರಾಟೆ ತೆಗೆದುಕೊಂಡ ನಂತರ ಏನಾಯ್ತು ನೋಡಿ!