ಬೆಂಗಳೂರಿನಲ್ಲಿ 'ಪಾರ್ಕಿಂಗ್' ಗಲಾಟೆ: ಕಾರಿನ ಬಾನೆಟ್ ಮೇಲೆ ಕಲ್ಲಿನಿಂದ 'ನೋ ಪಾರ್ಕಿಂಗ್' ಎಂದು ಕೆತ್ತಿ ವಿಕೃತ ಮೆರೆದ ದಂಪತಿ!

Published : Aug 17, 2026, 04:49 PM IST
Bengaluru Car PArking

ಸಾರಾಂಶ

ಬೆಂಗಳೂರಿನ BTM ಲೇಔಟ್‌ನಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಮೇಲೆ ಕಲ್ಲು ಹಾಗೂ ಚೂಪಾದ ವಸ್ತುವಿನಿಂದ ಗೀಚಿ, ಬಾನೆಟ್ ಮೇಲೆ 'ನೋ ಪಾರ್ಕಿಂಗ್' ಎಂದು ಕೆತ್ತಿ ವಿಕೃತಿ ಮೆರೆದ ಆಘಾತಕಾರಿ ಘಟನೆ ನಡೆದಿದೆ. ಈ ಅಮಾನವೀಯ ಕೃತ್ಯದ ವಿರುದ್ಧ ವಾಹನ ಮಾಲೀಕರು ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರು (ಆ.17): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ನಡುವೆ ಆಗಾಗ ಸಣ್ಣಪುಟ್ಟ ಜಗಳಗಳು ನಡೆಯುವುದು ಸಾಮಾನ್ಯ. ಆದರೆ, ಬಿಟಿಎಂ ಲೇಔಟ್ ವ್ಯಾಪ್ತಿಯಲ್ಲಿ ನಡೆದ ಘಟನೆಯೊಂದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದ್ದ ಕಾರಿನ ಮೇಲೆ ಕಲ್ಲು ಹಾಗೂ ಚೂಪಾದ ವಸ್ತುವಿನಿಂದ ಗೆರೆ ಎಳೆದು, ಬಾನೆಟ್ ಮೇಲೆ 'ನೋ ಪಾರ್ಕಿಂಗ್' (NO PARKING) ಎಂದು ಕೆತ್ತಿ ವಿಕೃತ ಮೆರೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಘಟನೆಯ ಹಿನ್ನೆಲೆ ಏನು?

ಸಂತ್ರಸ್ತ ವಾಹನ ಮಾಲೀಕರಾಗಿರುವ ಜೋಶ್ವಾ ಜಯ್‌ಕುಮಾರ್‌ ಎನ್ನುವವರು ತಮ್ಮ ಸ್ನೇಹಿತನನ್ನು ಭೇಟಿಯಾಗಲು ಕೆಲ ದಿನಗಳ ಹಿಂದೆ ರಾತ್ರಿ 11.30ರ ಸುಮಾರಿಗೆ ಬಿಟಿಎಂ ಲೇಔಟ್‌ಗೆ ಬಂದಿದ್ದರು. ರಸ್ತೆಯಲ್ಲಿ ಯಾವುದೇ 'ನೋ ಪಾರ್ಕಿಂಗ್' ಬೋರ್ಡ್‌ಗಳಿಲ್ಲದಿದ್ದನ್ನು ಖಚಿತಪಡಿಸಿಕೊಂಡು, ಯಾವುದೇ ಮನೆ ಅಥವಾ ಗೇಟ್‌ಗೆ ಅಡ್ಡಿಯಾಗದಂತೆ ಸ್ವಲ್ಪ ದೂರದಲ್ಲಿ ಇತರ ವಾಹನಗಳ ಸಾಲಿನಲ್ಲಿ ತಮ್ಮ ಬಲೀನೋ ಕಾರನ್ನು ಪಾರ್ಕ್ ಮಾಡಿದ್ದರು. ಆದರೆ, ಮರುದಿನ (ಗುರುವಾರ) ಬೆಳಿಗ್ಗೆ 9 ಗಂಟೆಯ ಸುಮಾರಿಗೆ ವಾಪಸ್ ಬಂದು ನೋಡಿದಾಗ ಕಾರಿನ ಸ್ಥಿತಿ ಕಂಡು ಮಾಲೀಕರು ಆಘಾತಕ್ಕೊಳಗಾಗಿದ್ದಾರೆ. ಸಮೀಪದ ಕಟ್ಟಡದ ಮಾಲೀಕರಾಗಿರುವ ದಂಪತಿ ಕಲ್ಲು ಮತ್ತು ಚೂಪಾದ ವಸ್ತುಗಳಿಂದ ಕಾರಿನಾದ್ಯಂತ ಗೀಚಿ, ಬಾನೆಟ್ ಮೇಲೆ 'ನೋ ಪಾರ್ಕಿಂಗ್' ಎಂದು ಕೆತ್ತಿ ಬಣ್ಣ ಹಾಗೂ ಕಾರಿನ ಬಾಡಿಗೆ ಅಪಾರ ಹಾನಿ ಎಸಗಿದ್ದರು.

ನಾನು ಸಾಕಷ್ಟು ಊರುಗಳಲ್ಲಿ ಬದುಕಿದ್ದೇನೆ ಹಾಗೂ ಪ್ರಯಾಣ ಮಾಡಿದ್ದೇನೆ. ಬೆಂಗಳೂರಿನಲ್ಲೂ, ಬೆಂಗಳೂರಿನ ಹೊರಗೂ ಉಳಿದಿದ್ದೇನೆ. ಆದರೆ, ಈ ರೀತಿಯ ಅನುಭವ ನನಗೆ ಹಿಂದೆಂದೂ ಆಗಿರಲಿಲ್ಲ. ಬ್ಯೂಟಿಫುಲ್‌ ನಗರದಲ್ಲಿ ಇಂಥ ವರ್ತನೆಯನ್ನು ನೋಡುವುದು ಬಹಳ ಬೇಸರ ತರಿಸಿದೆ ಎಂದು ಜೋಶ್ವಾ ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ, ಮಡಿವಾಳ ಠಾಣೆಯಲ್ಲಿ ದೂರು

ತಮಗೆ ಎದುರಾದ ಈ ಕಹಿ ಅನುಭವವನ್ನು ಸಂತ್ರಸ್ತ ವ್ಯಕ್ತಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಅಮಾನವೀಯ ಕೃತ್ಯದ ಕುರಿತು ಜೋಶ್ವಾ ಅವರು ಮಡಿವಾಳ ಪೊಲೀಸ್ ಠಾಣೆಗೆ (Madiwala Police Station) ತೆರಳಿ ಅಧಿಕೃತ ದೂರು ನೀಡಿದ್ದಾರೆ.

ಪಾರ್ಕಿಂಗ್ ವಿಚಾರದಲ್ಲಿ ಏನಾದರೂ ಸಮಸ್ಯೆಯಿದ್ದರೆ ಬಿಬಿಎಂಪಿ (BBMP), ಸಂಚಾರ ಪೊಲೀಸ್ ಅಥವಾ ಸ್ಥಳೀಯ ಅಧಿಕಾರಿಗಳಿಗೆ ದೂರು ನೀಡಲು ಅವಕಾಶವಿತ್ತು. ಅದನ್ನು ಬಿಟ್ಟು ಹೀಗೆ ಬೇರೆಯವರ ಆಸ್ತಿಯನ್ನು ಧ್ವಂಸಗೊಳಿಸುವುದು ಎಷ್ಟರ ಮಟ್ಟಿಗೆ ಸರಿ? ಎಂದು ವಾಹನ ಮಾಲೀಕ ಜೋಶ್ವಾ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರ ಸೇಡಿನ ಸಲಹೆ!

ಈ ಪೋಸ್ಟ್ ಸೋಶೀಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಭಿನ್ನ ಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲ ನೆಟ್ಟಿಗರು ತಮಗೂ ಹಿಂದೆ ಹೀಗೆಯೇ ಅನುಭವವಾಗಿದ್ದನ್ನು ನೆನಪಿಸಿಕೊಂಡು, "ನಾವು ಬಿಲ್ಡಿಂಗ್ ಮಾಲೀಕರ ಕಾರಿನ ಟೈರ್ ಹಾಗೂ ಗ್ಲಾಸ್‌ಗಳನ್ನು ಹಾನಿಗೊಳಿಸಿ ಸೇಡು ತೀರಿಸಿಕೊಂಡಿದ್ದೆವು" ಎಂದು ಸೇಡಿನ ಸಲಹೆಗಳನ್ನು ಕಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳದೆ ಪೊಲೀಸ್ ಇಲಾಖೆಯ ಮೂಲಕವೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಕೆಲವರು ಮನವಿ ಮಾಡಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರು: ಮನೆಯಿಂದ ಓಡಿಹೋಗಿ, ವಾಪಸ್ ಬಂದಿದ್ದ ಹೆಂಡತಿ; ಈಗ ಗಂಡ, 5 ವರ್ಷದ ಮಗು ಅನುಮಾನಾಸ್ಪದ ಸಾವು!
ಬೆಂಗಳೂರಿನ ಫ್ರೀಡಂ ಹಬ್ಬಕ್ಕೆ ₹6 ಕೋಟಿ ಖರ್ಚು: ಸರ್ಕಾರದ ನಿಯಮ ಉಲ್ಲಂಘಿಸಿ ಅಕ್ರಮ ಟೆಂಡರ್!