ಬೆಂಗಳೂರಿಗೆ ನಿತ್ಯ 10 ಸಾವಿರ ವಲಸಿಗರ ಲಗ್ಗೆ: ಕನ್ನಡಿಗರೇ ಅಲ್ಪಸಂಖ್ಯಾತರಾಗಿ ಹಿಂದಿ ಮಾತನಾಡಬೇಕಿದೆ!

Published : Nov 02, 2026, 06:46 AM IST
Bengaluru Railway Station

ಸಾರಾಂಶ

ಹೊರ ರಾಜ್ಯಗಳಿಂದ ಪ್ರತಿದಿನ 10 ಸಾವಿರಕ್ಕೂ ಹೆಚ್ಚು ವಲಸಿಗರು ಬೆಂಗಳೂರಿಗೆ ಬರುತ್ತಿದ್ದು, ಮೂಲಸೌಕರ್ಯ ಒದಗಿಸುವುದೇ ದೊಡ್ಡ ಸವಾಲಾಗಿದೆ. ಇದರಿಂದಾಗಿ ನಗರದಲ್ಲಿ ಹಿಂದಿ ಭಾಷಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಕನ್ನಡಿಗರಿಗೆ ಬಾಡಿಗೆ ಮನೆ ಸಿಗುವುದು ಕಷ್ಟವಾಗುತ್ತಿದೆ. ವಲಸಿಗರಿಗೆ ಕನ್ನಡ ಕಲಿಯುವುದನ್ನು ಕಡ್ಡಾಯಗೊಳಿಸಬೇಕು ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಆಗ್ರಹಿಸಿದ್ದಾರೆ.

ಉಮಾಶಂಕರ ಕಾರ್ಯ

ಬೆಂಗಳೂರು (ನ.02): ಹೊರ ರಾಜ್ಯದಿಂದ ಬೆಂಗಳೂರಿಗೆ ಪ್ರತಿದಿನ 10 ಸಾವಿರ ಜನ ಬಂದಿಳಿಯುತ್ತಿದ್ದು, ಇವರಿಗೆಲ್ಲ ನೀರು, ವಸತಿ ಸೇರಿ ಮೂಲ ಸೌಕರ್ಯ ಒದಗಿಸುವುದೇ ಸವಾಲಾಗಿದ್ದು, ಕನ್ನಡ ಕಲಿಸುವುದಂತೂ ದೂರದ ಮಾತಾಗಿದೆ.

ನಗರದ ಮೆಜೆಸ್ಟಿಕ್‌ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಯಶವಂತಪುರ ರೈಲ್ವೆ ನಿಲ್ದಾಣ, ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೈಯಪ್ಪನಹಳ್ಳಿ, ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ, ಕೃಷ್ಣರಾಜಪುರಂ ರೈಲ್ವೆ ನಿಲ್ದಾಣಗಳಿಗೆ ಉತ್ತರ ಭಾರತದಿಂದ ಸುಮಾರು 22 ರೈಲುಗಳು ಪ್ರಯಾಣಿಕರನ್ನು ಹೊತ್ತು ತರುತ್ತವೆ.

ಅತ್ಯಂತ ಪ್ರಮುಖವಾದ ರೈಲು ಗಾಡಿಯಾಗಿರುವ ಕರ್ನಾಟಕ ಎಕ್ಸ್‌ಪ್ರೆಸ್‌ ರೈಲು ದೆಹಲಿ, ಮಥುರಾ ಜಂಕ್ಷನ್, ಆಗ್ರಾ, ಗ್ವಾಲಿಯರ್, ಬೀನಾ, ಭೋಪಾಲ್ ಜಂಕ್ಷನ್, ಖಾಂಡ್ವಾ, ಬುಹ್ರಾನ್ ಪುರ, ಜಳಗಾಂವ್, ಕೊಪರ್‌ಗಾಂವ್, ಬೇಲಾಪುರ, ಅಹಮದ್‌ನಗರ, ದೌಂಡ್ ಜಂಕ್ಷನ್, ಕುರ್ಡುವಾಡಿ, ಮಹಾರಾಷ್ಟ್ರದ ಸೊಲ್ಲಾಪುರ, ಆಂಧ್ರ ಪ್ರವೇಶಿಸಿ ಅನಂತಪುರ, ಮಂತ್ರಾಲಯಂ ಮೂಲಕ ಕಲಬುರ್ಗಿಗೆ ಪ್ರವೇಶಿಸಿ ಸುಮಾರು 2,395 ಕಿಲೋಮೀಟರ್ ಗಳಿಂದ ಪ್ರತಿದಿನ ಪ್ರಯಾಣಿಕರನ್ನು ಹೊತ್ತು ತರುತ್ತದೆ.

ಕರ್ನಾಟಕ ಎಕ್ಸ್‌ಪ್ರೆಸ್, ರಾಜಧಾನಿ ಎಕ್ಸ್‌ಪ್ರೆಸ್, ನಿಜಾಮುದ್ದೀನ್, ಸಂಪರ್ಕ ಕ್ರಾಂತಿ, ಯಶವಂತಪುರ ಎಕ್ಸ್‌ಪ್ರೆಸ್ ಲಕ್ನೋ, ಬಿಕಾನೇರ್, ಯಶವಂತಪುರ ಎಕ್ಸ್‌ಪ್ರೆಸ್, ಬಿಕಾನೇರ್ (ರಾಜಸ್ಥಾನ) ಎಕ್ಸ್‌ಪ್ರೆಸ್, ಪಾಟ್ನಾ-ಬೆಂಗಳೂರು ಹಿಮಸಾಗರ್ ಎಕ್ಸ್‌ಪ್ರೆಸ್, ಕನ್ಯಾಕುಮಾರಿ-ಬೆಂಗಳೂರು ಜಮ್ಮು ತಾವಿ ಮಾರ್ಗವಾಗಿ ಸಂಚರಿಸುವ ಈ ರೈಲುಗಳ ಒಟ್ಟು ಸಂಖ್ಯೆಯೇ ಸುಮಾರು 22ರಿಂದ 25 ರೈಲುಗಳು ಬೆಂಗಳೂರು ತಲುಪುತ್ತವೆ.

ಈ ರೈಲುಗಳಿಂದ ಸುಮಾರು 6 ರಿಂದ 8 ಸಾವಿರ ಮಂದಿ ಪ್ರತಿದಿನ ರಾಜ್ಯದ ರಾಜಧಾನಿ ಬೆಂಗಳೂರಿಗೆ ಬಂದು ತಲುಪುತ್ತಾರೆ. ಇವರೆಲ್ಲರೂ ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಬಂದು ಸೇರುತ್ತಾರೆ. ನಗರದ ಪೂರ್ವ ವಿಭಾಗದ ವೈಟ್ ಫೀಲ್ಡ್, ಕಾಡುಗೋಡಿ, ಕೆ.ಆರ್.ಪುರಂ, ರಾಮಮೂರ್ತಿ ನಗರ, ಬೈಯಪ್ಪನಹಳ್ಳಿ ಪ್ರದೇಶಗಳಲ್ಲಿ ಸ್ನೇಹಿತರ ಮನೆಗಳು, ಹೋಟೆಲ್, ವಸತಿ ಗೃಹಗಳಲ್ಲಿ ಕೆಲಸ ಮಾಡುತ್ತಾ ದಿನಕ್ಕೆ ತಿಂಗಳಿಗೆ 15 ರಿಂದ 20 ಸಾವಿರಕ್ಕೆ ದುಡಿಯುತ್ತಾರೆ.

ಇದರಿಂದಾಗಿ ಬೆಂಗಳೂರು ಪೂರ್ವ ವಿಭಾಗದ ವೈಟ್ ಫೀಲ್ಡ್, ಕಾಡುಗೋಡಿ ಪ್ರದೇಶಗಳಿಗೆ ಹೋಗಿ ನೋಡಿದಾಗ ಹಿಂದಿ ಭಾಷೆ ಮಾತನಾಡುವವರೇ ಹೆಚ್ಚು ವಾಸವಿದ್ದು, ಬಾಡಿಗೆಯನ್ನೂ ಹೆಚ್ಚು ನೀಡುತ್ತಾರೆ. ಇದರಿಂದಾಗಿ ಕನ್ನಡಿಗರಿಗೆ ಈ ಪ್ರದೇಶಗಳಲ್ಲಿ ಬಾಡಿಗೆ ಪಡೆಯಲು ಬಲು ತ್ರಾಸವಾಗುತ್ತದೆ ಎಂದು ಸುರೇಶ್ ತಮ್ಮ ಅನುಭವ ಹಂಚಿಕೊಂಡರು.

ಕನ್ನಡ ಕಲಿಯಲೇ ಬೇಕೆನ್ನುವ ಅನಿವಾರ್ಯತೆ ಸೃಷ್ಟಿ ಮಾಡಲಿ

ಆಂಧ್ರ, ತಮಿಳುನಾಡು, ಕೇರಳದಿಂದ ಬರುವ ವಲಸಿಗರು ಹೆಚ್ಚಾಗಿ ಸಾಫ್ಟ್‌ವೇರ್‌ ಉದ್ಯೋಗ, ಹೋಟೆಲ್ ಉದ್ಯಮ, ಬೇಕರಿ ಉದ್ಯಮಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇವರೆಲ್ಲರಿಗೂ ಕನ್ನಡ ಕಲಿಸುವವರು ಯಾರೂ ಇಲ್ಲ. ಕನ್ನಡಿಗರೇ ಹೆಚ್ಚಾಗಿ ಹಿಂದಿ ಭಾಷೆ ಮಾತನಾಡಿ ಅವರ ಜೊತೆ ಸಂಪರ್ಕದಲ್ಲಿರುತ್ತಾರೆ. ಕನ್ನಡ ಮಾತನಾಡಲೇ ಬೇಕು ಎಂಬ ಸಂದರ್ಭ ಸೃಷ್ಟಿ ಮಾಡುವುದೇ ಇಲ್ಲ. ಇದು ಅನ್ಯ ಭಾಷಿಕರು ಕನ್ನಡ ಕಲಿಯದಿರಲು ಬಹುಮುಖ್ಯ ಕಾರಣ ಎಂದು ಕೆ.ಆರ್.ಪುರಂನ ಆಶಾ ಅಭಿಪ್ರಾಯಪಟ್ಟರು.

ಉತ್ತರ ಭಾರತದಿಂದ ಬರುವವರು ಹೆಚ್ಚಾಗಿ ಹಿಂದಿ ಭಾಷೆಯನ್ನು ಸಂಪರ್ಕ ಭಾಷೆಯಾಗಿ ಬಳಸುತ್ತಾರೆ. ಆದರೆ, ತಮಿಳುನಾಡು, ಕೇರಳ, ಆಂಧ್ರದವರು ತಮಿಳು, ಮಲಯಾಳಂ, ತೆಲುಗು ಭಾಷೆ ಮಾತನಾಡಿದರೂ ಅಲ್ಪಸ್ವಲ್ಪ ಕನ್ನಡ ಭಾಷೆಯನ್ನೂ ಬಳಸುತ್ತಾರೆ. ಆದರೆ, ಉತ್ತರ ಭಾರತದಿಂದ ಬರುವವರಿಗೆ ಸಂಪೂರ್ಣವಾಗಿ ಕನ್ನಡಭಾಷೆಯೇ ತಿಳಿದಿರುವುದಿಲ್ಲ. ಹೀಗಾದರೆ ನಮ್ಮ ಭಾಷೆಯ ಗತಿ ಏನಾಗಬೇಕು ಎಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರ ವಲಸೆ ತಡೆಯಲಿ: ನಾರಾಯಣಗೌಡ

ಸರ್ಕಾರ ಪ್ರಥಮವಾಗಿ ಹೊರ ರಾಜ್ಯದಿಂದ ಬರುವವರು ಕನ್ನಡ ಕಲಿಯಲೇ ಬೇಕು ಎಂಬ ಅನಿವಾರ್ಯತೆ ಸೃಷ್ಟಿ ಮಾಡಬೇಕು. 30 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವ ಒಂದಷ್ಟು ಪ್ರದೇಶಗಳು ಇದ್ದವು. ಇಲ್ಲಿ ಕನ್ನಡಿಗರು ಮಾತ್ರ ಇದ್ದರು. ಈಗ ಅವುಗಳು ಮಾಯವಾಗಿ ಎಲ್ಲಾ ಕಡೆ ಹಿಂದಿ, ತಮಿಳು, ತೆಲುಗು, ಮಲಯಾಳಿ ಭಾಷಿಕರು ತುಂಬಿಕೊಂಡಿದ್ದಾರೆ. ಇವರೆಲ್ಲರಿಗೂ ಕನ್ನಡ ಮಾತನಾಡದೇ ಇದ್ದರೆ ನಿಮಗೆ ನೀರು, ವಸತಿ ಪಡೆದುಕೊಳ್ಳುವುದು ಸಾಧ್ಯವಿಲ್ಲ ಎಂಬ ಅನಿವಾರ್ಯತೆಯನ್ನು ಸರ್ಕಾರ ಸೃಷ್ಟಿ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ನೆಲೆಸಿರುವ ಪರಭಾಷಿಕರು 20 ವರ್ಷವಾದರೂ ಕನ್ನಡ ಕಲಿಯುತ್ತಿಲ್ಲ. ಇಂಥವರಿಗೆ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅವರಿಗೆ ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಆಧಾರ್ ಕಾರ್ಡ್ ಎಲ್ಲವನ್ನೂ ಕೊಡುತ್ತಾರೆ, ಇದು ನಿಲ್ಲಬೇಕು. ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು. ಸರ್ಕಾರ ಮಾಡದಿದ್ದರೆ ನಮ್ಮ ಸಂಘಟನೆಗಳಿಗೆ ನೀಡಿದರೆ ನಾವೇ ಆ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ತಮಿಳುನಾಡಿಗೆ ಬೇರೆ ರಾಜ್ಯದಿಂದ ಯಾರಾದರೂ ಹೋದರೆ ಅಲ್ಲಿ ಯಾರೂ ಆಟೋ ಹತ್ತಿಸುವುದಿಲ್ಲ. ಆದರೆ, ನಮ್ಮಲ್ಲಿ ಮೆಜೆಸ್ಟಿಕ್ ನಲ್ಲಿ ಅನ್ಯಭಾಷಿಕ ಏನಾದರೂ ಬಂದರೆ ಆತನನ್ನು ಆತನ ಭಾಷೆಯಲ್ಲೇ ಮಾತನಾಡಿಸಿ ಅವನ ಮನೆವರೆಗೂ ಬಿಟ್ಟುಬರುವ ಆಟೋಚಾಲಕರಿದ್ದಾರೆ. ಇದು ನಮ್ಮ ಕನ್ನಡದ ಸ್ಥಿತಿ ಎಂದು ವಿಷಾದ ವ್ಯಕ್ತಪಡಿಸಿದರು.

ಎಲ್ಲಿಂದ ಬೆಂಗಳೂರಿಗೆ ಬರುತ್ತಾರೆ? ರೈಲಿನ ವಿವರ

ಕರ್ನಾಟಕ ಎಕ್ಸ್‌ಪ್ರೆಸ್‌ ನವದೆಹಲಿ ಬೆಂಗಳೂರು ಬೆಳಗ್ಗೆ 7.50

ರಾಜಧಾನಿ ಎಕ್ಸ್‌ಪ್ರೆಸ್‌ ನಿಜಾಮುದ್ದೀನ್‌ ಬೆಂಗಳೂರು ಬೆಳಗ್ಗೆ 6.30

ಸಂಪರ್ಕ ಕ್ರಾಂತಿ ನಿಜಾಮುದ್ದೀನ್‌ ಯಶವಂತಪುರ ಬೆಳಗ್ಗೆ 4.15 (ಸೋಮ, ಮಂಗಳ, ಗುರು, ಶನಿ, ಭಾನು)

ಸಂಪರ್ಕ ಕ್ರಾಂತಿ ಚಂಡೀಗಢ ಯಶವಂತಪುರ ಬೆಳಗ್ಗೆ 5.25 (ಮಂಗಳ, ಶನಿ)

ಲಕ್ನೋ ಎಕ್ಸ್‌ಪ್ರೆಸ್‌ ಲಕ್ನೋ ಯಶವಂತಪುರ ಮಧ್ಯಾಹ್ನ 1.30 (ಗುರುವಾರ)

ಬಿಕಾನೇರ್ ಎಕ್ಸ್‌ಪ್ರೆಸ್‌ ಬೀಕಾನೇರ್ (ರಾಜಸ್ಥಾನ) ಯಶವಂತಪುರ ಬೆಳಗ್ಗೆ 6ಕ್ಕೆ (ವಾರಕ್ಕೆ 1ದಿನ)

ಸಂಘಮಿತ್ರ ಎಕ್ಸ್‌ಪ್ರೆಸ್‌ ಪಾಟ್ನಾ ಬೆಂಗಳೂರು ಬೆಳಗ್ಗೆ 7.40 (ಪ್ರತಿದಿನ)

PREV
Read more Articles on
click me!

Recommended Stories

ಗೋಕರ್ಣ ಸಮುದ್ರದಲ್ಲಿ ಮುಳುಗಿ ಬೆಳ್ಳಂದೂರಿನ ಅಲೋರಿಯಾ ಇಕೋಸ್ಪೇಸ್‌ನ ಮೂವರು ಟೆಕ್ಕಿಗಳು ಸಾವು
'ಕಳೆದ 11 ವರ್ಷಗಳಿಂದ ಬಸ್‌ ಟಿಕೆಟ್‌ ದರ ಏರಿಸಿಲ್ಲ' ರಾಜಾರೋಷವಾಗಿ ಸುಳ್ಳು ಹೇಳಿದ ಸಚಿವ ಬೈರತಿ ಸುರೇಶ್‌, 2025ರ ಶೇ.15ರಷ್ಟು ಏರಿಕೆ ಮರೆತುಹೋಯ್ತಾ?