ದೆಹಲಿ ಚಲೋ ವೇಳೆ ಸಿಎಂ ಡಿಕೆ ಶಿವಕುಮಾರ್‌ ಕಾಲರ್‌ ಹಿಡಿದು ಜಗ್ಗಿದ್ರಾ ರಾಹುಲ್‌ ಗಾಂಧಿ? ವಿಡಿಯೋ ವೈರಲ್‌

Published : Oct 13, 2026, 10:21 AM ISTUpdated : Oct 13, 2026, 11:17 AM IST
DK Shivakumar (2)

ಸಾರಾಂಶ

ದೆಹಲಿಯಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ರಾಹುಲ್ ಗಾಂಧಿ ಅವರು ಡಿಕೆ ಶಿವಕುಮಾರ್ ಅವರ ಕುರ್ತಾ ಹಿಡಿದು ತಳ್ಳಿರುವ ವಿಡಿಯೋ ವೈರಲ್ ಆಗಿದೆ. ಇದು ಕರ್ನಾಟಕದ ಸ್ವಾಭಿಮಾನಕ್ಕೆ ಆದ ಅಪಮಾನ ಎಂದು ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಅ.13): ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯ ವೇಳೆಯಲ್ಲಿ ಕಾಂಗ್ರೆಸ್ ಲೀಡರ್‌ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (D.K. Shivakumar) ಅವರ ಕುರ್ತಾದ ಕಾಲರ್ ಹಿಡಿದು ಪಕ್ಕಕ್ಕೆ ಜಗ್ಗಿ, ತಳ್ಳಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ಪಾದಯಾತ್ರೆಯ ವೇಳೆ ತಮ್ಮ ಪಕ್ಕದಲ್ಲಿ ಇರುವುದು ದಕ್ಷಿಣದ ಪ್ರಮುಖ ರಾಜ್ಯವೊಂದರ ಸಿಎಂ ಎನ್ನುವ ಅರಿವಿದ್ದರೂ ರಾಹುಲ್‌ ಗಾಂಧಿ ಮಾಡಿರುವ ಈ ಕೃತ್ಯ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಇದು ಕರ್ನಾಟಕದ ಸ್ವಾಭಿಮಾನಕ್ಕೆ ಆಗಿರುವ ಧಕ್ಕೆ ಎನ್ನುವಂತೆ ಬಿಂಬಿಸಲಾಗಿದೆ.

ದೆಹಲಿಯಲ್ಲಿ ಸುಪ್ರೀಂ ಕೋರ್ಟ್ ಚಲೋ ಮತ್ತು ಪ್ರತಿಭಟನಾ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ, ನಾಯಕರ ಸಾಲಿನಲ್ಲಿ ಮುಂಚೂಣಿಯಲ್ಲಿ ಸಾಗುತ್ತಿದ್ದ ರಾಹುಲ್ ಗಾಂಧಿ ಅವರು ಕ್ಯಾಮೆರಾಗಳ ಹಾಗೂ ಮಾಧ್ಯಮಗಳ ಗಮನ ತಮ್ಮತ್ತ ಸೆಳೆಯುವ ಭರದಲ್ಲಿ ತಮ್ಮ ಪಕ್ಕದಲ್ಲೇ ಸಾಗುತ್ತಿದ್ದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕಾಲರ್ ಹಾಗೂ ಕುರ್ತಾ ಭಾಗವನ್ನು ಗಟ್ಟಿಯಾಗಿ ಹಿಡಿದು ಪಕ್ಕಕ್ಕೆ ತಳ್ಳಿದ್ದಾರೆ. ಈ ಘಟನೆಯ ಬಳಿಕ ಭದ್ರತಾ ಸಿಬ್ಬಂದಿಯ ನೂಕಾಟದಲ್ಲೂ ಸಿಲುಕಿದ ಡಿಕೆ ಶಿವಕುಮಾರ್ ಅವರು ಜನಸಂದಣಿಯ ಹಿಂಭಾಗಕ್ಕೆ ಸರಿಯುವ ದೃಶ್ಯಗಳು ವೀಡಿಯೋದಲ್ಲಿ ಕಂಡುಬಂದಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ.

ರಾಹುಲ್‌ ಗಾಂಧಿ ವಿರುದ್ಧ ಸಿಡಿದೆದ್ದ ಕನ್ನಡಿಗರು

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕನ್ನಡಿಗರು ರಾಹುಲ್ ಗಾಂಧಿ ಅವರ ನಡೆಗೆ ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯತಿ ಅಧ್ಯಕ್ಷರಾಗಲೂ ಅರ್ಹರಿಲ್ಲದ ವ್ಯಕ್ತಿಯೊಬ್ಬರು ಕರ್ನಾಟಕದ ಮುಖ್ಯಮಂತ್ರಿಗಳನ್ನು ಈ ರೀತಿ ಸಾರ್ವಜನಿಕವಾಗಿ ನೂಕಿ ತಳ್ಳುವುದು ಕನ್ನಡಿಗರಿಗೆ ಮತ್ತು ಕರ್ನಾಟಕ ರಾಜ್ಯದ ಸ್ವಾಭಿಮಾನಕ್ಕೆ ಮಾಡಿದ ಬೃಹತ್ ಅಪಮಾನ ಎಂದು ಹೇಳಿದ್ದಾರೆ.

ರಾಜ್ಯದ ಸ್ವಾಭಿಮಾನಕ್ಕೆ ಧಕ್ಕೆ: "ನಾನು ಡಿ.ಕೆ. ಶಿವಕುಮಾರ್ ಬೆಂಬಲಿತನಲ್ಲದಿರಬಹುದು, ಆದರೆ ನನ್ನ ತವರು ರಾಜ್ಯದ ಮುಖ್ಯಮಂತ್ರಿಯನ್ನು ಸಾರ್ವಜನಿಕವಾಗಿ ಈ ರೀತಿ ನಡೆಸಿಕೊಳ್ಳುವುದನ್ನು ನೋಡಿ ಮನಸ್ಸಿಗೆ ತೀವ್ರ ನೋವಾಗಿದೆ. ಸಾಂವಿಧಾನಿಕ ಹುದ್ದೆಗಳಿಗೆ ಗೌರವ ನೀಡದ ಈ ನಾಯಕನಿಗಿಂತ ಡಿಕೆ ಶಿವಕುಮಾರ್ ಜಾಗತಿಕವಾಗಿ ಹಾಗೂ ರಾಜಕೀಯವಾಗಿ ಸಾಧಿಸಿದ್ದು ಅಪಾರ" ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

1990 ರ ವೀರೇಂದ್ರ ಪಾಟೀಲ್ ಘಟನೆ ಮರುಕಳಿಸಿತೇ?: ಕನ್ನಡಿಗರು ಮತ್ತು ರಾಜಕೀಯ ವಿಶ್ಲೇಷಕರು ಈ ಘಟನೆಯನ್ನು 1990 ರಲ್ಲಿ ರಾಜೀವ್ ಗಾಂಧಿ ಅವರು ಆಗಿನ ಕರ್ನಾಟಕದ ಸಿಎಂ ವೀರೇಂದ್ರ ಪಾಟೀಲರಿಗೆ ವಿಮಾನ ನಿಲ್ದಾಣದಲ್ಲಿ ಅಪಮಾನ ಮಾಡಿ ವಜಾಗೊಳಿಸಿದ್ದ ಐತಿಹಾಸಿಕ ಘಟನೆಗೆ ಹೋಲಿಸಿದ್ದಾರೆ. "ಅಂದು ತಂದೆ ರಾಜೀವ್ ಗಾಂಧಿ ವೀರೇಂದ್ರ ಪಾಟೀಲರಿಗೆ ಅಪಮಾನ ಮಾಡಿದ್ದರು, ಇಂದು ಮಗ ರಾಹುಲ್ ಗಾಂಧಿ ಡಿಕೆ ಶಿವಕುಮಾರ್ ಅವರಿಗೆ ಅದೇ ರೀತಿ ನಡೆಸಿಕೊಂಡಿದ್ದಾರೆ. ಕನ್ನಡಿಗರು ಕಾಂಗ್ರೆಸ್‌ನ ಈ ಅಹಂಕಾರವನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಬರೆದಿದ್ದಾರೆ.

ಬೆನ್ನೆಲುಬಿಲ್ಲದ ನಾಯಕತ್ವವೇ?: "ಇಷ್ಟೆಲ್ಲಾ ಸಾರ್ವಜನಿಕ ಅಪಮಾನ ಮತ್ತು ತೇಜೋವಧೆಯ ನಂತರವೂ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್‌ನಲ್ಲೇ ಮುಂದುವರಿದರೆ, ಅವರು ಇಂತಹ ನಡವಳಿಕೆಗೆ ಅರ್ಹರು ಎಂದೇ ಅರ್ಥ" ಎಂದು ಕೆಲ ಬಳಕೆದಾರರು ತೀಕ್ಷ್ಣವಾಗಿ ಚಾಟಿ ಬೀಸಿದ್ದಾರೆ.

ಬಿಜೆಪಿ ಪ್ರತಿಭಟನೆಗೆ ಆಗ್ರಹ: ಕರ್ನಾಟಕ ಕಾಂಗ್ರೆಸ್ ತನ್ನ ನಾಯಕನಿಗೆ ಆದ ಅಪಮಾನದ ವಿರುದ್ಧ ಮಾತನಾಡಲು ಬೆನ್ನೆಲುಬಿಲ್ಲದೆ ಸುಮ್ಮನಿದ್ದರೂ, ಕನ್ನಡಿಗರ ಪರವಾಗಿ ಬಿಜೆಪಿ ಹಾಗೂ ಇತರ ಸಂಘಟನೆಗಳು ದೆಹಲಿ ಗಾಂಧಿ ಕುಟುಂಬದ ಅಹಂಕಾರದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ರಾಜಕೀಯ ವಲಯದಲ್ಲಿ ಸಂಚಲನ

ಪ್ರತಿಭಟನಾ ಮೆರವಣಿಗೆಯಲ್ಲಿ ರಾಹುಲ್ ಗಾಂಧಿ ತಮ್ಮದೇ ಪಕ್ಷದ ಹಿರಿಯ ನಾಯಕ ಹಾಗೂ ಪ್ರಭಾವಿ ಮುಖ್ಯಮಂತ್ರಿಯನ್ನು ಈ ರೀತಿ ನೂಕಿದ ವೀಡಿಯೋ ಬಹಿರಂಗಗೊಳ್ಳುತ್ತಿದ್ದಂತೆಯೇ, ಗಾಂಧಿ ಕುಟುಂಬದ ನಾಯಕರ ವಿರುದ್ಧ ಆಡಳಿತ ಮತ್ತು ವಿಪಕ್ಷಗಳ ನಡುವೆ ಭಾರಿ ರಾಜಕೀಯ ಸರಣಿ ವಾಗ್ದಾಳಿಗಳು ಆರಂಭವಾಗಿವೆ. ಕರ್ನಾಟಕದ ದೈತ್ಯ ನಾಯಕನಿಗೆ ದೆಹಲಿಯಲ್ಲಿ ಆದ ಈ ಅಪಮಾನವು ಮುಂಬರುವ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸುವ ಮುನ್ಸೂಚನೆ ನೀಡಿದೆ.

PREV
Read more Articles on
click me!

Recommended Stories

KPTCL ವಿದ್ಯುತ್ ಯೋಜನೆಗೆ ಬೆಂಗಳೂರಿನಲ್ಲಿ 321 ಬೃಹತ್‌ ಮರಗಳನ್ನು ಕಡಿಯಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಅನುಮತಿ
ಕಾರಂತ ಬಡಾವಣೆ ಸೈಟ್ ಅರ್ಜಿ ಸಲ್ಲಿಕೆಯಲ್ಲಿ ಮಹತ್ವದ ಬದಲಾವಣೆ? ಠೇವಣಿ ಮೊತ್ತ ದುಬಾರಿ!