ಕಾರಂತ ಬಡಾವಣೆ ಸೈಟ್ ಅರ್ಜಿ ಸಲ್ಲಿಕೆಯಲ್ಲಿ ಮಹತ್ವದ ಬದಲಾವಣೆ? ಠೇವಣಿ ಮೊತ್ತ ದುಬಾರಿ!

Published : Oct 13, 2026, 08:19 AM IST
BDA

ಸಾರಾಂಶ

ಬಿಡಿಎ ನಿರ್ಮಿಸುತ್ತಿರುವ ಡಾ.ಕೆ.ಶಿವರಾಮ ಕಾರಂತ ಬಡಾವಣೆಯ ನಿವೇಶನಗಳ ಅರ್ಜಿ ಸಲ್ಲಿಕೆ ಅವಧಿಯನ್ನು 15 ದಿನಗಳ ಕಾಲ ವಿಸ್ತರಿಸಲು ಚಿಂತನೆ ನಡೆಸಲಾಗಿದೆ. ನಿವಾಸಿ ದೃಢೀಕರಣ ಪತ್ರದ ಗೊಂದಲ ಹಾಗೂ ದುಬಾರಿ ಠೇವಣಿ ಮೊತ್ತದಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗದ ಕಾರಣ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ.

ಬೆಂಗಳೂರು: ಡಾ.ಕೆ.ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ಖರೀದಿಸಬೇಕೆಂಬ ಅಭಿಲಾಶೆಯುಳ್ಳ ಗ್ರಾಹಕರಿಗೆ ಸಿಹಿ ಸುದ್ದಿ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿವೇಶನಗಳ ಹಂಚಿಕೆಗಾಗಿ ಸಾರ್ವಜನಿಕರಿಂದ ಆಹ್ವಾನಿಸಲಾಗಿದ್ದ ಆನ್‌ಲೈನ್‌ ಅರ್ಜಿ ಸಲ್ಲಿಕೆ ಅವಧಿಯನ್ನು ಇನ್ನು 15 ದಿನಗಳ ಕಾಲ ವಿಸ್ತರಿಸಲು ಮುಂದಾಗಿದೆ.

2700ಕ್ಕೂ ಹೆಚ್ಚು ಅರ್ಜಿಗಳು ಡೌನ್‌ಲೋಡ್‌

ಕಾರಂತ ಬಡಾವಣೆಯಲ್ಲಿ ವಿವಿಧ ಅಳತೆಯ ಒಟ್ಟು 2,815 ನಿವೇಶನಗಳ (ಸೈಟ್‌ಗಳ) ಹಂಚಿಕೆಗಾಗಿ ಆಗಸ್ಟ್‌ 31ರಂದು ಸಾರ್ವಜನಿಕರಿಂದ ಅನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆ ಹೊರಡಿಸಿತ್ತು. ಅಕ್ಟೋಬರ್‌ 15 ಅರ್ಜಿ ಸಲ್ಲಿಸಲು ಕೊನೆಯ ದಿನವೆಂದು ನಿಗದಿಪಡಿಸಲಾಗಿತ್ತು. ಈವರೆಗೆ ಬಿಡಿಎ ವೆಬ್‌ಸೈಟ್‌ನಲ್ಲಿ 2700ಕ್ಕೂ ಹೆಚ್ಚು ಅರ್ಜಿಗಳು ಡೌನ್‌ಲೋಡ್‌ ಆಗಿವೆ. ಆದರೆ, ನೋಂದಣಿ ಮತ್ತು ಠೇವಣಿ ಹಣವನ್ನು ಪಾವತಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ ಕೇವಲ 1100 ಮಾತ್ರ. ಉಳಿದಂತೆ 1600ಕ್ಕೂ ಹೆಚ್ಚು ಅರ್ಜಿಗಳು ವಾಪಸ್‌ ಬರಬೇಕಿದೆ. ಈ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆ ಅವಧಿಯನ್ನು ಇನ್ನು 15 ದಿನ ವಿಸ್ತರಿಸುವ ಕುರಿತು ಮಂಗಳವಾರ ನಡೆಯಲಿರುವ ಸಭೆಯಲ್ಲಿ ತೀರ್ಮಾನಕೈಗೊಳ್ಳಲಿದೆ ಎಂದು ಬಿಡಿಎ ಹಿರಿಯ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಸ್ಥಳೀಯ ನಿವಾಸಿ ದೃಢೀಕರಣ ಪತ್ರ ಗೊಂದಲ

ಸ್ಥಳೀಯ ನಿವಾಸಿ ದೃಢೀಕರಣ ಪತ್ರವನ್ನು (ಡೊಮಿಸೈಲ್ ಸರ್ಟಿಫಿಕೇಟ್‌) ಕಂದಾಯ ಇಲಾಖೆ ನೀಡುತ್ತದೆ. ಈ ಪ್ರಮಾಣಪತ್ರ ಪಡೆಯಲು ಅರ್ಜಿದಾರರು ಕರ್ನಾಟಕದಲ್ಲಿ ಜನಿಸಿರಬೇಕು ಇಲ್ಲವೇ ಕನಿಷ್ಠ 10 ವರ್ಷಗಳ ಕಾಲ ರಾಜ್ಯದಲ್ಲಿ ವಾಸವಿರಬೇಕು ಎಂಬ ನಿಯಮವಿದೆ. ಆದರೆ, ಬಿಡಿಎ ಶಿವರಾಮ ಕಾರಂತ ಬಡಾವಣೆಗೆ ನಿವೇಶನ ಹಂಚಿಕೆಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಕನಿಷ್ಠ 15 ವರ್ಷಗಳಿಗೆ ಕಡಿಮೆಯಿಲ್ಲದ ಅವಧಿಯವರೆಗೆ ಕರ್ನಾಟಕದ ನಿವಾಸಿಯಾಗಿರಬೇಕೆಂಬ ನಿಯಮವನ್ನು ರೂಪಿಸಿದೆ. ಹೀಗಾಗಿ ಗೊಂದಲ ಉಂಟಾಗಿತ್ತು. ಇದಕ್ಕಾಗಿಯೇ ಬಿಡಿಎ ಕಂದಾಯ ಇಲಾಖೆಗೆ ಪತ್ರ ಬರೆದು, ನಿವೇಶನ ಅರ್ಜಿದಾರರಿಗೆ 15 ವರ್ಷಕ್ಕೆ ನಿವಾಸಿ ದೃಢೀಕರಣ ಪತ್ರ ನೀಡುವಂತೆ ಕೋರಿದೆ. ಇದರ ನಡುವೆಯೂ ಕಂದಾಯ ಇಲಾಖೆಯಲ್ಲಿನ ಗೊಂದಲದಿಂದಾಗಿ ಸುಗಮವಾಗಿ ದೃಢೀಕರಣ ಪತ್ರ ಸಿಗುತ್ತಿಲ್ಲ. ಹೀಗಾಗಿ ಹೆಚ್ಚು ಅರ್ಜಿಗಳು ಬಂದಿಲ್ಲ ಎಂಬುದು ಬಿಡಿಎ ಅಧಿಕಾರಿಗಳ ವಾದ.

ಠೇವಣಿ ಮೊತ್ತ ದುಬಾರಿ!

ಅರ್ಜಿಯ ಜೊತೆಗೆ ಠೇವಣಿ ಮೊತ್ತ 9*12 ಚದರ ಮೀಟರ್‌ಗೆ ಸಾಮಾನ್ಯ ವರ್ಗಕ್ಕೆ 8.71 ಲಕ್ಷ ರು., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1ರ ಅರ್ಜಿದಾರರಿಗೆ 3.48 ಲಕ್ಷ ರು. ನಿಗದಿ ಮಾಡಲಾಗಿದೆ. ಇದು 12*18 ಚದರ ಮೀಟರ್‌ಗೆ 17.43 ಲಕ್ಷರು.ವರೆಗೆ ಮತ್ತು 15*24 ಚದರ ಮೀಟರ್‌ಗೆ 29.06 ಲಕ್ಷ ರು.ವರೆಗೆ ಠೇವಣಿ ಇಡುವಂತೆ ಸೂಚಿಸಲಾಗಿದೆ. ಈ ಭಾರೀ ಮೊತ್ತದ ಠೇವಣಿಯಿಂದ ಬಹುತೇಕ ಆಸಕ್ತರು ಅರ್ಜಿ ಸಲ್ಲಿಕೆಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

PREV
Read more Articles on
click me!

Recommended Stories

ವಿವಿಧ ಕಾಮಗಾರಿಗಳ 80 ಫೈಲ್ಸ್ 2 ತಿಂಗಳಿನಿಂದ ಸಚಿವರ ಬಳಿಯಲ್ಲಿರೋದು ಯಾಕೆ? NR ರಮೇಶ್
ಬೆಂಗಳೂರಿನ ಸಮಸ್ಯೆಗಳಿಗೆ ಮುಕ್ತಿ ನೀಡಲು ಹೊಸ ತಂತ್ರಜ್ಞಾನ: Digital Twin Technology