
ಬೆಂಗಳೂರು: ಏಕ ಬಳಕೆಯ ಬಳಸಿದ ಪ್ಲಾಸ್ಟಿಕ್ ಕಪ್‌ನಲ್ಲಿ ಗ್ರಾಹಕರಿಗೆ ತಂಪು ಪಾನೀಯ ಪೆಪ್ಸಿ ಮಾರಾಟ ಮಾಡಿದ ಆರೋಪ ನಗರದ ಕನಕಪುರ ರಸ್ತೆಯಲ್ಲಿರುವ ಫೋರಂ ಸೌತ್ ಬೆಂಗಳೂರು ಮಾಲ್‌ನಲ್ಲಿರುವ ಪಿವಿಆರ್ ವಿರುದ್ಧ ಕೇಳಿ ಬಂದಿದೆ.
ಈ ಸಂಬಂಧ ಗ್ರಾಹಕರೊಬ್ಬರು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ. ಈ ಕುರಿತು ವ್ಯಾಪಕ ಚರ್ಚೆಗಳು ನಡೆದಿದ್ದು ಪ್ರತಿಷ್ಠಿತ ವ್ಯಾಪಾರ ಸ್ಥಳಗಳಲ್ಲೇ ಗ್ರಾಹಕರನ್ನು ಈ ರೀತಿ ವಂಚಿಸಿದರೆ ಯಾರನ್ನು ನಂಬಬೇಕು? ಎಂದು ಅನೇಕರು ಪ್ರಶ್ನಿಸಿದ್ದಾರೆ. ಮಿಥಿಲ್ ಕುಮಾರ್ ಎಂಬುವರು ವಿಡಿಯೋ ಪೋಸ್ಟ್ ಮಾಡಿದ್ದು, ಈ ಬಗ್ಗೆ ಜನರು ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದಾರೆ.
ಕ್ಷಮೆ ಕೇಳಿರ ಫೋರಂ: ನಿಮಗೆ ಆಗಿರುವ ತೊಂದರೆಗೆ ನಾವು ಕ್ಷಮೆಯಾಚಿಸುತ್ತೇವೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈ ಕುರಿತು ಪಿವಿಆರ್ ತಂಡ ವಿಚಾರಣೆ ನಡೆಸುತ್ತಿದೆ. ಮುಂದೆ ಈ ರೀತಿ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಫೋರಂ ಸೌತ್ ಬೆಂಗಳೂರು ಹೇಳಿದೆ.
ಕಳೆದ ಸೆಪ್ಟೆಂಬರ್ ನಲ್ಲಿ ಹೊಸೂರು ಮುಖ್ಯ ರಸ್ತೆಯ ಪ್ರತಿಷ್ಠಿತ ‘ಪಿವಿಆರ್ ಸಿನಿಮಾಸ್’ ವಾಣಿಜ್ಯ ಸಂಸ್ಥೆಯಲ್ಲಿ ಅಸಮರ್ಪಕ ತ್ಯಾಜ್ಯ ನಿರ್ವಹಣೆ ಮಾಡಿ ನಿಯಮ ಉಲ್ಲಂಘಿಸಿದ ಪಿವಿಆರ್ ಸಿನಿಮಾಸ್‌ಗೆ ಪಾಲಿಕೆ ಅಧಿಕಾರಿಗಳು 75,000 ರು.ದಂಡ ವಿಧಿಸಿದ್ದರು.
ಕಸವನ್ನು ಮೂಲದಲ್ಲೇ ಸಮರ್ಪಕವಾಗಿ ವಿಂಗಡಿಸದೆ ಮಿಶ್ರಣ ಮಾಡಿದ್ದಕ್ಕಾಗಿ 50 ಸಾವಿರ ಹಾಗೂ ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ಬಳಕೆಗೆ 25 ಸಾವಿರ ರೂ. ದಂಡ ವಿಧಿಸಿದ್ದರು.
ಉತ್ತರಹಳ್ಳಿ ಕನಕಪುರ ಮುಖ್ಯ ರಸ್ತೆ ಜಯನಗರ ಹೌಸಿಂಗ್ ಸೊಸೈಟಿ ಬಡಾವಣೆ ಶಾಪ್ ವೆಲ್ ಸೂಪರ್ ಮಾರ್ಕೆಟ್ ಹತ್ತಿರ ಒಳಚರಂಡಿ ಸಂಸ್ಕರಣ ತ್ಯಾಜ್ಯ ಸುರಿದಿರುವುದು ಕಂಡು ಬಂತು. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಹಾಗೂ ಈ ತ್ಯಾಜ್ಯವು ಪೋರಂ ಮಾಲ್‌ಗೆ ಸೇರಿದ್ದಾಗಿದೆ ಎಂದು ಮಾಲ್ ನ ಸಿಬ್ಬಂದಿ ಒಪ್ಪಿದ ಮೇರೆಗೆ 50,839 ರು. ಗಳ ದಂಡ ವಿಧಿಸಿ ವಸೂಲಿ ಮಾಡಲಾಗಿತ್ತು.
ದಂಡ ವಸೂಲಿ ಮಾಡಿದ ಅಧಿಕಾರಿಗಳು, ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂದು ಚಿತ್ರಮಂದಿರದ ಆಡಳಿತ ಮಂಡಳಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು.