
ಬೆಂಗಳೂರು: ಬೆಂಗಳೂರು ಪೊಲೀಸ್ ಕಮೀಷನರೇಟ್ ವಿಭಜನೆ ಸನಿಹವಾಗಿದ್ದು, ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಐದು ಮಹಾನಗರ ಪಾಲಿಕೆಗಳ ಮಾದರಿಯಲ್ಲೇ ಕಮೀಷನರೇಟ್ ಅನ್ನು ಐದು ಹೋಳು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಹೊಸದಾಗಿ ಐದು ಕಮೀಷನರೇಟ್‌ಗಳ ರಚನೆ ಸಂಬಂಧ ಸರ್ಕಾರಕ್ಕೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರಸ್ತಾಪನೆ ಸಲ್ಲಿಸಿದ್ದಾರೆ. ಈ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಹಿರಿಯ ಅಧಿಕಾರಿಗಳ ಜತೆ ಸಾಧಕ-ಬಾಧಕಗಳ ಸಮಾಲೋಚನೆ ಬಳಿಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಂತಿಮ ನಿರ್ಧಾರ ನಿರ್ಣಯಿಸಲಿದ್ದಾರೆ. ಜಿಬಿಎ ಅಸ್ತಿತ್ವಕ್ಕೆ ಬಂದ ಬಳಿಕ ಅದೇ ಮಾದರಿಯಲ್ಲಿ ಪೊಲೀಸ್ ಕಮೀಷನರೇಟ್ ಅನ್ನು ರಚಿಸಲು ಸರ್ಕಾರದಲ್ಲಿ ಚರ್ಚೆಗೆ ಬಂದಿತು. ಕಳೆದೊಂದು ವರ್ಷದಿಂದ ಮಾತುಕತೆ ಹಂತದಲ್ಲೇ ಇದ್ದ ವಿಭಜನೆ ಪ್ರಸ್ತಾಪವು ಈಗ ಲಿಖಿತ ರೂಪಕ್ಕೆ ಬಂದಿದೆ.
ಅಂತೆಯೇ ಹೊಸದಾಗಿ ಮುಖ್ಯ ಆಯುಕ್ತ ಹುದ್ದೆ ಸೃಜನೆಯಾಗಲಿದ್ದು, ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ಎಂಬ ಐದು ಕಮೀಷನರೇಟ್ ಘಟನೆಗಳು ಉದಯವಾಗಲಿವೆ. ಮುಖ್ಯ ಆಯುಕ್ತ ಹುದ್ದೆಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮಟ್ಟದ ಅಧಿಕಾರಿ ಇದ್ದರೆ, ಐದು ಕಮೀಷನರೇಟ್‌ಗಳಿಗೆ ಐಜಿಪಿ ಅಥವಾ ಡಿಐಜಿ ಮಟ್ಟದ ಅಧಿಕಾರಿಗಳು ಆಯುಕ್ತರಾಗಲಿದ್ದಾರೆ. ಅಲ್ಲದೆ ನಗರದ ನೆರೆಹೊರೆ ಜಿಲ್ಲೆಗಳಿಂದ ಠಾಣೆಗಳನ್ನು ಸೇರ್ಪಡೆಗೊಳ್ಳಲಿದ್ದು, ಹೊಸದಾಗಿ ಡಿಸಿಪಿ ವಿಭಾಗಗಳು ಸೇರಿ 6,633 ಹುದ್ದೆಗಳ ಸೃಜನೆಗೆ ಸೀಮಂತ್ ಕುಮಾರ್ ಸಿಂಗ್ ಮನವಿ ಮಾಡಿದ್ದಾರೆ.
ಮೂವರು ಕಾನೂನು ಸುವ್ಯವಸ್ಥೆ ವಿಭಾಗಗಳು, ಓರ್ವ ಸಂಚಾರ ಡಿಸಿಪಿ, ಕೇಂದ್ರ ಕಚೇರಿ ಡಿಸಿಪಿ, ಸಶಸ್ತ್ರ ಮೀಸಲು ಪಡೆ ಕೇಂದ್ರ ಸೇರಿ ಐವರು ಡಿಸಿಪಿಗಳಿರುತ್ತಾರೆ. ಪ್ರಸುತ್ತ ಕೇಂದ್ರ ವಿಭಾಗದ ಡಿಸಿಪಿ ಜತೆಗೆ, ಗಾಂಧೀನಗರ, ಇಂದಿರಾನಗರ ಹೆಸರಿನ ಹೊಸದಾಗಿ ಕಾನೂನು ಸುವ್ಯವಸ್ಥೆ ವಿಭಾಗ ರಚನೆಯಾಗಲಿದೆ. ಕೇಂದ್ರ ಸಂಚಾರ ವಿಭಾಗ ಅಸ್ತಿತ್ವಕ್ಕೆ ಬರಲಿದೆ. ಈ ಆಯುಕ್ತರ ವ್ಯಾಪ್ತಿಗೆ ವಿಧಾನಸೌಧ ಮತ್ತು ವಿಕಾಸಸೌಧ, ಲೋಕಭವನ, ಹೈಕೋರ್ಟ್, ನ್ಯಾಯಾಂಗ ಸಮುಚ್ಚಯಗಳು, ಚಿನ್ನಸ್ವಾಮಿ ಹಾಗೂ ಕಂಠೀರವ ಕ್ರೀಡಾಂಗಣಗಳು, ಫ್ರೀಡಂ ಪಾರ್ಕ್, ಮೆಟ್ರೋ ನಿಲ್ದಾಣಗಳು, ಬೈಯಪ್ಪನಹಳ್ಳಿ ಮೆಟ್ರೊ ಡಿಪೊ, ಕೆಎಸ್‌ಆರ್‌ಟಿಸಿ ರೈಲ್ವೆ ನಿಲ್ದಾಣ, ವಲಯ ಕಚೇರಿ ಮತ್ತು ಮೆಜೆಸ್ಟಿಕ್ ಬಸ್ ನಿಲ್ದಾಣ ಸೇರಿ ಇತರೆ ಸ್ಥಳಗಳು ಬರಲಿವೆ.
ಹಾಲಿ ಉತ್ತರ ವಿಭಾಗ, ಈಶಾನ್ಯ ವಿಭಾಗಗಳ ಜತೆ ಹೊಸದಾಗಿ ಯಶವಂತಪುರ ರಚನೆಯಾಗಲಿದೆ. ಇನ್ನು ಉತ್ತರ ವಿಭಾಗ (ಸಂಚಾರ) ಹಾಗೂ ಸಿಎಎಆರ್ ಉತ್ತರ ಡಿಸಿಪಿ ವಿಭಾಗಗಳು ಸೇರಲಿವೆ. ಅದೇ ರೀತಿ ಅಮೃತಹಳ್ಳಿ ಉಪ ವಿಭಾಗ ನೂತನವಾಗಿ ಸ್ಥಾಪನೆಯಾಗಲಿದೆ. ಯಲಹಂಕ ಹಾಗೂ ಕೆ.ಜಿ.ಹಳ್ಳಿ ಉಪ ವಿಭಾಗ ಸಹ ಉತ್ತರಕ್ಕೆ ಸೇರ್ಪಡೆಯಾಗಲಿವೆ.
ವೈಟ್‌ಫೀಲ್ಡ್ ಹಾಗೂ ಪೂರ್ವ (ಕಾನೂನು ಮತ್ತು ಸುವ್ಯವಸ್ಥೆ) ವಿಭಾಗಗಳು, ಒಂದು ಸಂಚಾರ ಡಿಸಿಪಿ ವಿಭಾಗ ಹಾಗೂ ಸಶಸ್ತ್ರ ಮೀಸಲು ಪಡೆಯ ವಿಭಾಗದ ಡಿಸಿಪಿಗಳು ಇರಲಿದ್ದಾರೆ. ಈ ವಿಭಾಗಕ್ಕೆ ಹೊಸದಾಗಿ ಪೊಲೀಸ್ ಠಾಣೆಗಳು ಸಹ ರಚನೆಯಾಗಲಿವೆ.
ದಕ್ಷಿಣ, ಆಗ್ನೇಯ, ಎಲೆಕ್ಟ್ರಾನಿಕ್ ಸಿಟಿ, ದಕ್ಷಿಣ ಸಂಚಾರ ಹಾಗೂ ಸಿಎಆರ್ ಡಿಸಿಪಿ ವಿಭಾಗಗಳು ಸೇರಲಿವೆ. ಹೊಸದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ಉಪವಿಭಾಗ, ಠಾಣೆಗಳಾದ ಸರ್ಜಾಪುರ, ಸೂರ್ಯನಗರ, ಅತ್ತಿಬೆಲೆ, ಬನ್ನೇರುಘಟ್ಟ, ಆನೇಕಲ್,ಜಿಗಣಿ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ಕಗ್ಗಲಿಪುರ ಠಾಣೆಗಳು ಸೇರ್ಪಡೆಯಾಗಲಿವೆ.
ಪಶ್ಚಿಮ ಕಮಿಷನರೇಟ್
ಡಿಸಿಪಿ ಪಶ್ಚಿಮ, ಕೆಂಗೇರಿ, ಪೀಣ್ಯಾ ಹಾಗೂ ಸಂಚಾರ, ಸಿಎಆರ್ ಡಿಸಿಪಿಗಳ ಹುದ್ದೆಗಳು ಒಳಪಡುತ್ತವೆ. ಈ ವಿಭಾಗಕ್ಕೆ ಹೊಸದಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯ ತಾವರೆಕೆರೆ, ನೂತನವಾಗಿ ಆಂಧ್ರಹಳ್ಳಿ, ಕಡಬಗೆರೆ ಠಾಣೆಗಳು ರಚನೆಯಾಗಲಿವೆ.
ಸಿಸಿಬಿ ವಿಘಟನೆ ಇಲ್ಲ
ಬೆಂಗಳೂರು ಕಮೀಷನರೇಟ್‌ನ ಬಹುಮುಖ್ಯ ಘಟಕವಾದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ವು ಯಾವುದೇ ವಿಘಟನೆ ಇಲ್ಲದೆ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ. ಮುಖ್ಯ ಆಯುಕ್ತರ ಅಧೀನದಲ್ಲೇ ಸಿಸಿಬಿ ಕಾರ್ಯನಿರ್ವಹಿಸಲಿದ್ದು, ಮುಖ್ಯ ಆಯುಕ್ತರಿಗೆ ಸಿಸಿಬಿ ಮುಖ್ಯಸ್ಥರು, ಸಿಸಿಬಿ ಇಬ್ಬರು ಡಿಸಿಪಿಗಳು ಹಾಗೂ ಐವರು ಎಸಿಪಿಗಳು ವರದಿ ಮಾಡಲಿದ್ದಾರೆ.
ಸಂಚಾರ ವಿಭಾಗದ ಗೊಂದಲ
ಸಂಚಾರ ವಿಭಾಗವು ಸಹ ಮುಖ್ಯ ಆಯುಕ್ತರ ಅಧೀನದಲ್ಲೇ ಕಾರ್ಯನಿರ್ವಹಿಸಲಿದೆ ಎಂದು ಪ್ರಸ್ತಾಪನೆಯಲ್ಲಿ ಉಲ್ಲೇಖವಾಗಿದೆ. ಆದರೆ ಪ್ರತಿ ಕಮೀಷನರೇಟ್ ಘಟಕದಲ್ಲೂ ಸಂಚಾರ ವಿಭಾಗದ ಡಿಸಿಪಿಗಳಿರುತ್ತಾರೆ. ಹೀಗಾಗಿ ಸಂಚಾರ ವಿಭಾಗದ ಮುಖ್ಯಸ್ಥರಾದ ಜಂಟಿ ಆಯುಕ್ತರ ಅಧಿಕಾರ ಮೊಟಕುಗೊಳ್ಳಲಿದೆಯೇ ಎಂಬ ಪ್ರಶ್ನೆಗಳು ಎದುರಾಗಿದೆ. ಇದಕ್ಕೆ ಇಂಬು ನೀಡುವಂತೆ ಸಂಚಾರ ವಿಭಾಗದ ಮುಖ್ಯಸ್ಥರಿಗೆ ಸಂಚಾರ ನಿರ್ವಹಣಾ ಕೇಂದ್ರ (ಟಿಎಂಸಿ), ಸಂಚಾರ ತರಬೇತಿ ಹಾಗೂ ರಸ್ತೆ, ಸುರಕ್ಷತೆ ಸಂಸ್ಥೆಯ ಉಸ್ತುವಾರಿ ಮಾತ್ರ ಹಂಚಿಕೆ ಮಾಡಲಾಗಿದೆ.
ವಿಭಜನೆಗೆ ಬೇಕು 7.5 ಸಾವಿರ ಕೋಟಿ ರು.
ಬೆಂಗಳೂರು ಪೊಲೀಸ್ ಕಮೀಷನರೇಟ್‌ಗೆ ವಿಭಜನೆಗೆ ಅಧಿಕಾರಿ-ಸಿಬ್ಬಂದಿ, ಕಟ್ಟಡ ಹಾಗೂ ಸಾರಿಗೆ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ಸುಮಾರು 7,648 ಕೋಟಿ ರು ಆರ್ಥಿಕ ನೆರವು ನೀಡುವಂತೆ ಸರ್ಕಾರಕ್ಕೆ ಆಯುಕ್ತರು ಕೋರಿದ್ದಾರೆ. ಐವರು ಆಯುಕ್ತರು, ಐದು ಡಿಸಿಪಿಗಳು ವಿಭಾಗಗಳು, ನಾಲ್ಕು ಎಸಿಪಿ ಉಪ ವಿಭಾಗಗಳು, ಪೊಲೀಸ್ ಠಾಣೆಗಳು ರಚನೆಯಾಗಲಿವೆ. ಅಲ್ಲದೆ ಆಡಳಿತ ವಿಭಾಗದ ಅಧಿಕಾರಿ-ಸಿಬ್ಬಂದಿ ಸೇರಿದಂತೆ ಒಟ್ಟು 6,633 ಹೊಸ ಹುದ್ದೆಗಳು ಸೃಜಿಸಬೇಕಿದೆ ಎಂದು ಆಯುಕ್ತರು ಹೇಳಿದ್ದಾರೆ.
ಐದು ಕಮೀಷನರೇಟ್‌ಗೆ ಖಾಕಿ ತೀವ್ರ ಆಕ್ಷೇಪ
ಐದು ಕಮೀಷನರೇಟ್ ರಚನೆಗೆ ಪೊಲೀಸ್ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಮಹಾನಗರ ಪಾಲಿಕೆಗಳು ಹಾಗೂ ಪೊಲೀಸ್ ಕಮೀಷನರೇಟ್ ಕಾರ್ಯನಿರ್ವಹಣೆಯಲ್ಲಿ ಭಾರಿ ವ್ಯತ್ಯಾಸವಿದೆ. ಪೊಲೀಸ್ ವಿಭಾಗಗಳನ್ನು ಹರಿದು ಹಂಚಿಕೆ ಮಾಡಿದರೆ ದೊಡ್ಡ ದೊಡ್ಡ ಕಾರ್ಯಕ್ರಮಗಳ ಬಂದೋಬಸ್ತ್ ನಿರ್ವಹಣೆಯಲ್ಲಿ ಸಮನ್ವಯತೆ ಸಾಧಿಸಲು ಕಷ್ಟವಾಗಲಿದೆ. ಅಲ್ಲದೆ ಪ್ರಧಾನ ಮಂತ್ರಿ, ವಿದೇಶದ ರಾಜತಾಂತ್ರಿಕ ಪ್ರತಿನಿಧಿಗಳು ಭೇಟಿ ವೇಳೆ ಭದ್ರತಾ ವ್ಯವಸ್ಥೆ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಜಿಬಿಎ ವ್ಯಾಪ್ತಿಗೆ ಗ್ರಾಮೀಣ ಪ್ರದೇಶಗಳು ಸೇರುತ್ತವೆ. ಹೀಗಾಗಿ ಜಿಬಿಎ ಜತೆ ಸಮನ್ವಯತೆಗೆ ಪೊಲೀಸ್ ಕಮೀಷನರೇಟ್ ರಚಿಸುವ ಬಗ್ಗೆ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಸೈನ್ಯದಂತೆ ಕೆಲಸ ಮಾಡುವ ಪೊಲೀಸರಿಗೂ ಆಡಳಿತ ನಿರ್ವಹಿಸುವ ಪಾಲಿಕೆ ಅಧಿಕಾರಿಗಳ ಕಾರ್ಯವೈಖರಿ ಭಿನ್ನವಾಗಿದೆ ಎಂದು ಕೆಲ ಹಿರಿಯ ಅಧಿಕಾರಿಗಳು ಅಸಮಾಧನ ತೋರಿದ್ದಾರೆ.
ಉಪ್ಪಾರಪೇಟೆ ಠಾಣೆಗೆ ಎಚ್‌ಎಸ್‌ಓ: ಎಸಿಪಿ
ಮುಂಬೈ ಮಾದರಿಯಲ್ಲೇ ಉಪ್ಪಾರಪೇಟೆ ಠಾಣೆಗೆ ಎಸಿಪಿ ದರ್ಜೆ ಅಧಿಕಾರಿಯನ್ನು ಠಾಣಾಧಿಕಾರಿಯಾಗಿ ನೇಮಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಇದುವರೆಗೆ ರಾಜ್ಯದಲ್ಲಿ ಠಾಣಾಧಿಕಾರಿಗಳು ಇನ್ಸ್‌ಪೆಕ್ಟರ್ ಅಥವಾ ಸಬ್ ಇನ್ಸ್‌ಪೆಕ್ಟರ್‌ಗಳಿದ್ದರು. ಇದೇ ಮೊದಲ ಬಾರಿಗೆ ಎಸಿಪಿಯನ್ನು ಠಾಣಾಧಿಕಾರಿ (ಎಚ್‌ಎಸ್‌ಓ) ಎಂದು ನೇಮಿಸಲಾಗುತ್ತದೆ. ರಾಜಧಾನಿಯ ಹೃದಯ ಭಾಗದಲ್ಲಿರುವ ಉಪ್ಪಾರಪೇಟೆ ಠಾಣೆಗೆ ಮೊದಲಿನಿಂದ ಭಾರಿ ‘ಬೇಡಿಕೆ’ ಇದೆ. ಈ ಠಾಣೆಗೆ ಗದ್ದುಗೆ ಪಡೆಯಲು ಬೆನ್ನಿಗೆ ಪ್ರಬಲ ರಾಜಕೀಯ ಶಕ್ತಿ ಇದ್ದರಷ್ಟೇ ದಕ್ಕುವುದು ಎಂಬ ಮಾತಿದೆ. ಈ ಠಾಣೆ ವ್ಯಾಪ್ತಿಗೆ ಬಣ್ಣದ ಲೋಕದ ಗಾಂಧಿನಗರ, ಮೆಜೆಸ್ಟಿಕ್ ಹಾಗೂ ಪ್ರತಿಭಟನೆಗಳ ಕೇಂದ್ರ ಭೂಮಿಕೆ ಫ್ರೀಡಂ ಪಾರ್ಕ್ ಸೇರುತ್ತದೆ.