ಎಲ್ಲಾ ಖಾಸಗಿ ಆಸ್ಪತ್ರೆಗಳು ಡಿ-ಅಡಿಕ್ಷನ್ ಕೇಂದ್ರ ತೆರೆಯಲಿ: ಡಿಸಿಪಿ ಹರೀಶ್ ಪಾಂಡೆ

By Suvarna NewsFirst Published Oct 28, 2021, 7:31 PM IST
Highlights
  • ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಡಿ-ಅಡಿಕ್ಷನ್ ಕೇಂದ್ರ
  • ಡ್ರಗ್ಸ್‌ ಸೇವನೆ ವ್ಯಸನಿಗಳಾಗಿರುವ ಯುವಕರ ರಕ್ಷಣೆ ಪ್ರಯತ್ನ.

ಬೆಂಗಳೂರು(ಅ.28): ಡ್ರಗ್ಸ್‌ ಸೇವನೆ ವ್ಯಸನಿಗಳಾಗಿರುವ ಯುವಕರನ್ನು ಹೊರತರಲು ಎಲ್ಲಾ ಖಾಸಗಿ ಆಸ್ಪತ್ರೆಗಳು ಪ್ರತ್ಯೇಕ ಡಿ-ಅಡಿಕ್ಷನ್ ಕೇಂದ್ರವನ್ನು ತೆರೆಯಬೇಕು ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಹೇಳಿದರು.

ಫೋರ್ಟಿಸ್‌ ಆಸ್ಪತ್ರೆ ವತಿಯಿಂದ ಮೊದಲ "ವ್ಯಸನ ಮುಕ್ತ ಕೇಂದ್ರ" ತೆರೆಯಲಾಗಿದ್ದು, ಅದರ ಉದ್ಘಾಟನೆಯನ್ನು ಗುರುವಾರ ನೆರವೇರಿಸಿ ಅವರು ಮಾತನಾಡಿದ್ದಾರೆ.

 ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಮಾದಕ ವ್ಯಸನ ಮುಕ್ತ ಕಾರ್ಯಕ್ರಮಗಳನ್ನು ಎಲ್ಲೆಡೆ ಮಾಡುವುದರಿಂದ ಈಗಾಗಲೇ ಮಾದಕ ವಸ್ತುಗಳಿಗೆ ವ್ಯಸನಿಗಳಾಗಿರುವವರನ್ನು ಹೊರ ತರಬಹುದು. ವಿದೇಶಗಳಿಗೆ ಹೋಲಿಸಿದರೆ ನಮ್ಮ‌ ದೇಶದಲ್ಲಿ ಡಿ-ಅಡಿಕ್ಷನ್ ಕಾರ್ಯಕ್ರಮಗಳು ಅತ್ಯಂತ ಕಡಿಮೆ. ಹೀಗಾಗಿ ವ್ಯಸನಿಗಳು ಅದರಿಂದ ಹೊರಬರಲಾಗದೇ ಕಷ್ಟ ಪಡುತ್ತಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಡ್ರಗ್‌ ಮಾರಾಟದ ದೊಡ್ಡ ಜಾಲ ಸದ್ದಿಲ್ಲದೇ ಹರಡುತ್ತಿದ್ದು, ಅದರ ಬೇರನ್ನು ಬುಡ ಸಮೇತ ಕಿತ್ತು ಹಾಕುವ ಪ್ರಯತ್ನವನ್ನು ನಮ್ಮ ಇಲಾಖೆ ಮಾಡುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯಿಂದ ಪೆಡ್ಲರ್‌ಗಳು ವಿದ್ಯಾರ್ಥಿಗಳನ್ನು ಸುಲಭವಾಗಿ ತಲುಪುತ್ತಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದಲ್ಲಿಯೇ 450 ಕ್ಕೂ ಹೆಚ್ಚು ಡ್ರಗ್ ಸೇವಿಸುವವರನ್ನು ಪತ್ತೆ ಹಚ್ಚಿ, ದೂರು ದಾಖಲಿಸೊದ್ದೇವೆ. ಇವರನ್ನು ತಲುಪುವ ಪೆಡ್ಲರ್‌ಗಳ ಜಾಲವನ್ನು ಪತ್ತೆ ಹಚ್ಚಬೇಕು ಎಂದರು.

ಮೂತ್ರಪಿಂಡ ವೈಫಲ್ಯ: ಜೀವನಶೈಲಿಯಲ್ಲಿ ಚಿಕ್ಕಪುಟ್ಟ ಬದಲಾವಣೆ ಮಾಡ್ಕೊಳ್ಳಿ
 
 ಡ್ರಗ್ ಸರಬರಾಜು ಮಾಡಲು ಕಳ್ಳ ಮಾರ್ಗ ಹಿಡಿದ್ದಾರೆ. ಹೀಗಾಗಿ ಪ್ರತಿಯೊಬ್ಬ ಪೋಷಕರೇ ತಮ್ಮ‌ ಮಕ್ಕಳ ನಡವಳಿಕೆ ಮೇಲೆ ಗಮನ ಹರಿಸಬೇಕು. ಇಲ್ಲವಾದರೆ, ಡ್ರಗ್ ಜಾಲವನ್ನು ತಡೆಯಲು ಸಾಧ್ಯವಿಲ್ಲ. ವಿಪರ್ಯಾಸವೆಂದರೆ, ಪೋಷಕರಿಗೆ ತಮ್ಮ ಮಕ್ಕಳು ಡ್ರಗ್‌ ಸೇವನೆ ಮಾಡುತ್ತಿರುವ ಬಗ್ಗೆ ಮಾಹಿತಿಯೇ ಇಲ್ಲವಾಗಿದೆ ಎಂದರು. 

ವ್ಯಸನ ಮುಕ್ತ ಕೇಂದ್ರದಲ್ಲಿ ಯಾವ ಚಿಕಿತ್ಸೆ ಲಭ್ಯ:

ಫೋರ್ಟಿಸ್ ಆಸ್ಪತ್ರೆ ತೆರೆದಿರುವ ಈ ವ್ಯಸನ ಮುಕ್ತ ಕೇಂದ್ರದಲ್ಲಿ ಯಾವುದೇ ರೀತಿಯ ಡ್ರಗ್ ಸೇವನೆಗೆ ಒಳಗಾಗಿರುವವರಿಗೆ ಸಂಪೂರ್ಣ ಚಿಕಿತ್ಸೆ ನೀಡಲಾಗುತ್ತದೆ. ಕ್ಲೀನಿಕಲ್ ಸೈಕಾಲಜಿ ಸಮಾಲೋಚನೆಗಳು, ರೋಗವನ್ನು ಸಮಗ್ರವಾಗಿ ಪತ್ತೆ ಹಚ್ಚುವುದು, ಔಷಧಗಳ ಸಹಾಯದಿಂದ ವಿಷಕಾರಿ ಅಂಶವನ್ನು ದೇಹದಿಂದ ಹೊರ ತೆಗೆಯುವುದು, ಮಾನಸಿಕ ಚಿಕಿತ್ಸೆ, ಕುಟುಂಬ ಮತ್ತು ಸಮಾಲೋಚನ ಚಿಕಿತ್ಸೆ, ಮೆದುಳು, ಕಿಡ್ನಿ, ಕ್ಯಾನ್ಸರ್ ಅಥವಾ ಹೃದಯ ಸಮಸ್ಯೆಗೆ  ಒಳಗಾಗಿದ್ದರೆ ಅದಕ್ಕೂ ಚಿಕಿತ್ಸೆಯನ್ನು ನೀಡಲಾಗುವುದು. ಅಲ್ಲದೆ, ಧನಾತ್ಮಕತೆಯನ್ನು ಅವರಲ್ಲಿ ಹೆಚ್ಚಿಸಲು ಯೋಗ, ಧ್ಯಾನ ಹಾಗೂ ಉತ್ತಮ ಪರಿಸರವನ್ನು ಸಹ ಇಲ್ಲಿ ನಿರ್ಮಾಣ ಮಾಡಿಕೊಡಲಾಗುವುದು.

ರಾಷ್ಟ್ರೀಯ ವ್ಯಸನ ಮುಕ್ತ ಚಿಕಿತ್ಸಾ ಕೇಂದ್ರ (ಎಐಐಎಂಎಸ್) ಪ್ರಕಾರ 10 ರಿಂದ 75 ವಯಸ್ಸಿನ ಶೇ. 2.8ರಷ್ಟು ಅಂದರೆ, 3.1 ಕೋಟಿ ಜನರು ಗಾಂಜಾ ಸೇವನೆಯಲ್ಲಿ ತೊಡಗಿದ್ದಾರೆ. 72 ಲಕ್ಷ  ಜನರು ಇತರೆ ಡ್ರಗ್ ಸೇವಿಸುತ್ತಿದ್ದಾರೆ. ಇದರಲ್ಲಿ 25 ಲಕ್ಷ ಜನರು ಈಗಾಗಲೇ ಮಾದಕ ದ್ರವ್ಯಕ್ಕೆ ವ್ಯಸನಿಗಳಾಗಿದ್ದಾರೆ ಎಂದು ಅಧ್ಯಯನದಲ್ಲಿ ದೃಢಪಟ್ಟಿದೆ.

ರಾಜ್ಯದಲ್ಲಿ 50 ಕೋಟಿಗೂ ಹೆಚ್ಚು ಪ್ರಮಾಣದಲ್ಲಿ ಡ್ರಗ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, 5291 ಜನರನ್ನು ಬಂಧಿಸಲಾಗಿದೆ. ಅಧ್ಯಯನದ ಪ್ರಕಾರ, ಗಾಂಜಾ ಸೇವನೆ ಹೆಚ್ಚಾಗಿ ಚಂಢಿಗಡ್‌ನಲ್ಲಿ ಶೇ.29.33 ರಷ್ಟು ಇದ್ದು, ಪಂಜಾಬ್‌ನಲ್ಲಿ 12.39 ಹಾಗೂ ಕರ್ನಾಟಕದಲ್ಲಿ 2.90 ರಷ್ಟು ಬಳಕೆ ಮಾಡಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಫೋರ್ಟಿಸ್ ಹೆಲ್ತ್‌ಕೇರ್‌ ಸಿಒಒ ಆಶೀಶ್‌ ಭಟೀಯಾ,ನ್ಯಾಷನಲ್ ಮೆಂಟಲ್ ಹೆಲ್ತ್‌ ಕಾರ್ಯಕ್ರಮದ ನಿರ್ದೇಶಕ ಡಾ. ಸಮೀರ್‌ ಪರೀಕ್, ಫೋರ್ಟಿಸ್‌ ಆಸ್ಪತ್ರೆ ಉಪಾಧ್ಯಕ್ಷ ಡಾ. ಮನೀಶ್‌ ಮಟ್ಟು, ಮನೋತಜ್ಞ ಡಾ. ವೆಂಕಟೇಶ್ ಬಾಬು ಉಪಸ್ಥಿತರಿದ್ದರು.

click me!