
ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಂಧಿಯಾಗಿರುವ ಜೈಲಿನ ಕೊಠಡಿಯಲ್ಲಿ ಮೊಬೈಲ್ ಪತ್ತೆ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಸ್ವತಃ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿ, ಪ್ರಜ್ವಲ್ ರೇವಣ್ಣ ಜೈಲಿನ ಕಟ್ಟುನಿಟ್ಟಿನ ನಿಯಮಗಳನ್ನೇ ಗಾಳಿಗೆ ತೂರಿದ್ದಾರೆ. ಜೈಲಿನಲ್ಲಿರುವ ಕೈದಿಗಳು ಕಡ್ಡಾಯವಾಗಿ ಧರಿಸಬೇಕಾದ ಬಿಳಿ ಸಮವಸ್ತ್ರವನ್ನು ಧರಿಸಲು ಪ್ರಜ್ವಲ್ ನಿರಾಕರಿಸುತ್ತಿದ್ದಾರೆ ಎಂದಿದ್ದಾರೆ.
ಮಾಧ್ಯಮಗಳ ಜೊತೆ ಮಾತನ್ನಾಡಿರುವ ಅಲೋಕ್ ಕುಮಾರ್, ಜೈಲಿನ ನಿಯಮಾವಳಿ ಪ್ರಕಾರ ಪ್ರತಿಯೊಬ್ಬ ಕೈದಿಯೂ ಬಿಳಿ ಬಟ್ಟೆಯನ್ನು ಧರಿಸಬೇಕು. ಆದರೆ ಪ್ರಜ್ವಲ್ ರೇವಣ್ಣ ಬಿಳಿ ವಸ್ತ್ರ ಧರಿಸಿಲ್ಲ. ಈ ಬಗ್ಗೆ ನಾವು ಈಗಾಗಲೇ ವಾರ್ನ್ ಮಾಡಿದ್ದೆವು. ಆದರೂ ಆತ ಸಮವಸ್ತ್ರ ಧರಿಸದೆ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ಇತ್ತೀಚೆಗೆ ಗೃಹ ಸಚಿವರ ಸೂಚನೆಯಂತೆ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನ ಮೇಲೆ ಮಿಂಚಿನ ದಾಳಿ ನಡೆಸಿದ್ದರು. ಈ ವೇಳೆ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರೆಕ್‌ನಲ್ಲಿ ಮೊಬೈಲ್ ಪತ್ತೆಯಾಗಿರುವುದು ಸಂಚಲನ ಮೂಡಿಸಿದೆ. ಜೈಲಿನ ಅತ್ಯಂತ ಸುರಕ್ಷಿತ ವಲಯದಲ್ಲಿರುವ ಪ್ರಜ್ವಲ್ ಕೈಗೆ ಮೊಬೈಲ್ ಫೋನ್ ಸಿಕ್ಕಿದ್ದು ಹೇಗೆ? ಇದಕ್ಕೆ ಯಾರು ಸಹಕರಿಸಿದರು ಎಂಬ ಬಗ್ಗೆ ಈಗ ಸಿಸಿಬಿ ಮತ್ತು ಕಾರಾಗೃಹ ಇಲಾಖೆ ತೀವ್ರ ತನಿಖೆ ನಡೆಸುತ್ತಿದೆ.
ಈ ಗಂಭೀರ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಡಿಜಿಪಿ ಅಲೋಕ್ ಕುಮಾರ್ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಕಾರಾಗೃಹ ಎಸ್ಪಿ ಅನ್ಶುಕುಮಾರ್‌ಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಜೈಲಿನ ಉಸ್ತುವಾರಿ ವಹಿಸಿರುವ ಎಸ್ಪಿಗೆ ವಿವರಣೆ ಕೇಳಿ ನೋಟಿಸ್ ನೀಡಲಾಗಿದೆ. ಮೊಬೈಲ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಓರ್ವ ಅಧಿಕಾರಿಯನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
ನಮ್ಮ ಅಧಿಕಾರಿಗಳಿಗೆ ತೊಂದರೆ ಕೊಡುವುದು ನನ್ನ ಉದ್ದೇಶವಲ್ಲ. ಆದರೆ ವ್ಯವಸ್ಥೆ ಸರಿಯಾಗಬೇಕೆಂದರೆ ಕಠಿಣ ಕ್ರಮ ಅನಿವಾರ್ಯ. ಯಾರೇ ಆಗಿರಲಿ, ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಎದುರಿಸಲೇಬೇಕು ಎಂದು ಡಿಜಿಪಿ ತಿಳಿಸಿದ್ದಾರೆ. ಪ್ರಜ್ವಲ್ ಬ್ಯಾರೆಕ್‌ಗೆ ಮೊಬೈಲ್ ಸರಬರಾಜು ಮಾಡಿದವರು ಯಾರು? ಜೈಲಿನ ಸಿಬ್ಬಂದಿಯೇ ಇದಕ್ಕೆ ಸಾಥ್ ನೀಡಿದ್ದಾರೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಜೈಲಿನ ನಿಯಮಗಳನ್ನೇ ಲೆಕ್ಕಿಸದ ಪ್ರಜ್ವಲ್ ರೇವಣ್ಣ ಅವರ ನಡೆ ಈಗ ಜೈಲು ಆಡಳಿತ ಮಂಡಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.