
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಪ್ರಜ್ವಲ್ ರೇವಣ್ಣ ಅವರ ಬ್ಯಾರೆಕ್‌ನಲ್ಲಿ ಮೊಬೈಲ್ ಪತ್ತೆಯಾದ ಪ್ರಕರಣ ಈಗ ಮೊಬೈಲ್ ನೆಟ್‌ವರ್ಕ್ ಕಂಪನಿಗಳ ಬುಡಕ್ಕೆ ಬಂದಿದೆ. ಈ ಅಕ್ರಮದಲ್ಲಿ ನೆಟ್‌ವರ್ಕ್ ಒದಗಿಸುತ್ತಿರುವ ಏರ್‌ಟೆಲ್ (Airtel) ಪಾತ್ರದ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್, ಕಂಪನಿಯನ್ನು ಈ ಪ್ರಕರಣದಲ್ಲಿ 'ಸಹ ಆರೋಪಿ' (Co-accused) ಮಾಡಲು ಸೂಚನೆ ನೀಡಿದ್ದಾರೆ.
ಜೈಲಿನಲ್ಲಿ ಮೊಬೈಲ್ ಬಳಕೆ ತಡೆಯಲು ಜಾಮರ್‌ಗಳನ್ನು ಅಳವಡಿಸಲಾಗಿದೆ. ಆದರೆ ಈ ಜಾಮರ್‌ಗಳ ನಡುವೆಯೂ ಏರ್‌ಟೆಲ್ ನೆಟ್‌ವರ್ಕ್ ಮಾತ್ರ ಲಭ್ಯವಾಗುತ್ತಿದೆ ಎನ್ನಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಡಿಜಿಪಿ ಅಲೋಕ್ ಕುಮಾರ್ .. ಪ್ರಜ್ವಲ್ ಬ್ಯಾರೆಕ್‌ನಲ್ಲಿ ಸಿಕ್ಕ ಮೊಬೈಲ್‌ನಲ್ಲಿ ಆಂಧ್ರಪ್ರದೇಶ ಮೂಲದ ಏರ್‌ಟೆಲ್ ಸಿಮ್ ಬಳಸಲಾಗಿದೆ. ಜೈಲಿನಲ್ಲಿ ಬೇರೆ ಯಾವುದೇ ನೆಟ್‌ವರ್ಕ್ ಸಿಗದಿದ್ದರೂ ಏರ್‌ಟೆಲ್ 5G ನೆಟ್‌ವರ್ಕ್ ಮಾತ್ರ ಲಭ್ಯವಾಗುತ್ತಿದೆ. ಎಷ್ಟೇ ಎಚ್ಚರಿಕೆ ನೀಡಿದರೂ ಏರ್‌ಟೆಲ್ ಸಂಸ್ಥೆಯವರು ಜೈಲಿನೊಳಗೆ ನೆಟ್‌ವರ್ಕ್ ಸಿಗದಂತೆ ಕ್ರಮ ವಹಿಸುತ್ತಿಲ್ಲ. ಪ್ರಜ್ವಲ್ ಬಳಸುತ್ತಿದ್ದ ಸಿಮ್ ಕಾರ್ಡ್ ಕಳೆದ ಮಾರ್ಚ್ ತಿಂಗಳಿನಿಂದಲೇ ಬಳಕೆಯಲ್ಲಿರುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.
ಜೈಲಿನ ಒಳಗೆ ವೈಫೈ (WiFi) ಆಫ್ ಮಾಡಿಸಿದ್ದರೂ ಏರ್‌ಟೆಲ್ 5G ನೆಟ್‌ವರ್ಕ್ ವೇಗವಾಗಿ ಸಿಗುತ್ತಿರುವ ಕಾರಣ ಪ್ರಜ್ವಲ್ ರೇವಣ್ಣ ಸೋಷಿಯಲ್ ಮೀಡಿಯಾ ಕೂಡ ಬಳಕೆ ಮಾಡುತ್ತಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ನೆಟ್‌ವರ್ಕ್ ಸಿಗುತ್ತಿರುವ ಕಾರಣ ಅವರು ಸಾಮಾಜಿಕ ಜಾಲತಾಣ ಬಳಸಿರಬಹುದು. ಹೀಗಾಗಿ ನಾವು ಏರ್‌ಟೆಲ್ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಜಿಪಿ ತಿಳಿಸಿದ್ದಾರೆ.
ಈ ಅಕ್ರಮದಲ್ಲಿ ಜೈಲಾಧಿಕಾರಿಗಳ ಶಾಮೀಲಾಗಿರುವ ಸಾಧ್ಯತೆಯೂ ದಟ್ಟವಾಗಿದೆ. ಭದ್ರತಾ ಲೋಪದ ಬಗ್ಗೆ ವಿವರಣೆ ನೀಡುವಂತೆ ಜೈಲು ಎಸ್ಪಿಗೆ ನೋಟಿಸ್ ನೀಡಲಾಗಿದೆ. ಮೊಬೈಲ್ ಪತ್ತೆಯಾದ ಬೆನ್ನಲ್ಲೇ ಸಂಬಂಧಪಟ್ಟ ಓರ್ವ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ವಿಶೇಷವೆಂದರೆ ಈ ಅಧಿಕಾರಿಯನ್ನು ನಿನ್ನೆ ಬೆಳಗ್ಗೆಯಷ್ಟೇ ವರ್ಗಾವಣೆ ಮಾಡಲಾಗಿತ್ತು ಸಂಜೆ ರೇಡ್ ನಡೆದಾಗ ಅಕ್ರಮ ಬಯಲಾಗಿದೆ ಎಂದರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಸಿಸಿಬಿ ಪೊಲೀಸರು ಈ ದಾಳಿ ನಡೆಸಿದ್ದರು. ನಮ್ಮ ವ್ಯವಸ್ಥೆ ಸರಿಯಾಗಬೇಕು ಎಂದರೆ ಇಂತಹ ಕಠಿಣ ಕ್ರಮಗಳು ಅನಿವಾರ್ಯ. ಯಾರೇ ಆಗಿರಲಿ ಕಾನೂನು ಕ್ರಮ ಎದುರಿಸಲೇಬೇಕು ಎಂದು ಅಲೋಕ್ ಕುಮಾರ್ ಹೇಳಿದ್ದಾರೆ. ಜೈಲಿನೊಳಗೆ ಆಂಧ್ರದ ಸಿಮ್‌ಗಳು ಹೇಗೆ ಬರುತ್ತವೆ? ಜಾಮರ್ ಇದ್ದರೂ ಏರ್‌ಟೆಲ್ ಸಿಗ್ನಲ್ ಹೇಗೆ ಲಭ್ಯವಾಗುತ್ತಿದೆ? ಎಂಬ ಬಗ್ಗೆ ಈಗ ಆಳವಾದ ತನಿಖೆ ಆರಂಭವಾಗಿದೆ.