ಲಾಲ್‌ಬಾಗ್‌ ದ್ವಾರದಲ್ಲಿರುವ ನಂದಿನಿ ಮಳಿಗೆ ಹಿಂದಿನ ಅಸಲಿಯತ್ತೇನು? ಎನ್.ಆರ್.ರಮೇಶ್ ಹೇಳಿದ್ದೇನು?

Sathish Kumar KH   | Kannada Prabha
Published : Sep 25, 2026, 08:48 AM IST
KMF Nandini Outlet in Lalbagh Heritage Site

ಸಾರಾಂಶ

ಲಾಲ್‌ಬಾಗ್‌ ಪಶ್ಚಿಮ ದ್ವಾರದ ಮುಂಭಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕೆಎಂಎಫ್‌ ನಂದಿನಿ ಮಳಿಗೆಯನ್ನು ತೆರವುಗೊಳಿಸುವಂತೆ ಮಾಜಿ ಕಾರ್ಪೊರೇಟರ್ ಎನ್‌.ಆರ್‌.ರಮೇಶ್‌ ಆಗ್ರಹಿಸಿದ್ದಾರೆ. ತೋಟಗಾರಿಕೆ ಇಲಾಖೆಯ ವಿರೋಧದ ನಡುವೆಯೂ ರಾಜಕೀಯ ಪ್ರಭಾವದಿಂದ ಈ ಮಳಿಗೆ ಸ್ಥಾಪನೆಯಾಗಿದ್ದು, ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಬೆಂಗಳೂರು (ಸೆ.25): ಬೆಂಗಳೂರಿನ ಪಾರಂಪರಿಕ ತಾಣ ಲಾಲ್‌ಬಾಗ್‌ ಮುಂಭಾಗದಲ್ಲಿ ಕೆಎಂಎಫ್‌ ನಂದಿನಿ ಹಾಲು ಉತ್ಪನ್ನಗಳ ಮಾರಾಟ ಮಳಿಗೆ ಸ್ಥಾಪನೆಗೆ ನೀಡಿರುವ ಕಾನೂನು ಬಾಹಿರ ಅನುಮತಿ ಹಿಂಪಡೆದು ಆ ಮಳಿಗೆಯನ್ನು ಕೂಡಲೇ ತೆರವುಗೊಳಿಸುವಂತೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್‌.ಆರ್‌.ರಮೇಶ್‌ ಆಗ್ರಹಿಸಿದ್ದಾರೆ.

ಈ ಸಂಬಂಧ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ(ಜಿಬಿಎ) ಮುಖ್ಯ ಆಯುಕ್ತ ಮತ್ತು ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿಗೆ ದಾಖಲೆ ಸಹಿತ ಪತ್ರ ಬರೆದಿದ್ದಾರೆ. ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಈ ಕಾನೂನು ಬಾಹಿರ ಕಾರ್ಯದ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಾಲಯ (ಎನ್‌ಜಿಟಿ), ನಗರದ ಎಸಿಎಂಎಂ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

100 ಅಡಿ ಜಾಗದಲ್ಲಿ ಅಕ್ರಮ ಕೆಎಂಎಫ್ ಮಳಿಗೆ

ಐತಿಹಾಸಿಕ ಲಾಲ್‌ ಬಾಗ್‌ ಸಸ್ಯ ತೋಟವು 240 ಎಕರೆಗೂ ಹೆಚ್ಚಿನ ವಿಸ್ತೀರ್ಣ ಹೊಂದಿದ್ದು, ಸಾವಿರಕ್ಕೂ ಅಧಿಕ ವಿಧದ ಸಾವಿರಾರು ಗಿಡ-ಮರಗಳನ್ನು ಒಳಗೊಂಡಿದೆ. ಇಂತಹ ಐತಿಹಾಸಿಕ ಪಾರಂಪರಿಕ ತಾಣವಾದ ಲಾಲ್ ಬಾಗ್ ಸಸ್ಯ ತೋಟದ ಪಶ್ಚಿಮ ದ್ವಾರದ ಮುಂಭಾಗದಲ್ಲಿ ಕೆಎಂಎಫ್‌ ವತಿಯಿಂದ 100 ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ನಂದಿನಿ ಹಾಲು ಉತ್ಪನ್ನಗಳ ಮಾರಾಟ ಮಳಿಗೆ ಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ತೋಟಗಾರಿಕೆ ಇಲಾಖೆ ಈ ಪ್ರಸ್ತಾಪನೆ ತಿರಸ್ಕರಿಸಿತ್ತು. ಆದರೆ, ಬೆಂಗಳೂರು ಕೇಂದ್ರ ನಗರ ಪಾಲಿಕೆಯು ರಾಜಕೀಯ ಪ್ರಭಾವಗಳಿಗೆ ಒಳಗಾಗಿ ಈ ಮಳಿಗೆ ಸ್ಥಾಪಿಸಲು ಅನುಮೋದನೆ ನೀಡಿ ಕಾನೂನು ಬಾಹಿರ ನಿರ್ಣಯ ಮಾಡಿದೆ. ಕಳೆದ ಜೂ.10ರಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಕರಾರು ಪತ್ರ ಮಾಡಿಕೊಂಡು 100 ಚದರ ಅಡಿ ವಿಸ್ತೀರ್ಣದ ಜಾಗವನ್ನು ಕೆಎಂಎಫ್‌ಗೆ ಹಸ್ತಾಂತರಿಸಿದ್ದರು. ಬಳಿಕ ಆ ಜಾಗದಲ್ಲಿ ನಂದಿನಿ ಹಾಲು ಉತ್ಪನ್ನಗಳ ಮಾರಾಟ ಮಳಿಗೆ ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಅಕ್ರಮ ಮಳಿಗೆ ತೆರವುಗೊಳಿಸುವಂತೆ ಆ.10ರಂದು ತೋಟಗಾರಿಕೆ ಇಲಾಖೆ ನಿರ್ದೇಶಕರು ಆದೇಶಿಸಿದ್ದಾರೆ. ಲಾಲ್‌ ಬಾಗ್‌ ನಡಿಗೆದಾರರ ಒಕ್ಕೂಟವು ಜಿಬಿಎ ಮುಖ್ಯ ಆಯುಕ್ತ ಮತ್ತು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿವೆ. ಆದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಮೇಶ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

ಪತಿಯ ಪ್ರೇಯಸಿ ಕುಟುಂಬದ ಸದಸ್ಯೆ ಅಥವಾ ಸಂಬಂಧಿ ಆಗುತ್ತಾಳೆಯೇ? ಹೈಕೋರ್ಟ್ ಹೇಳಿದ್ದೇನು?
ಭಾನುವಾರವೂ ಬ್ಯಾಂಕ್ ಓಪನ್, ಕೆನರಾ ಬ್ಯಾಂಕ್‌ನಿಂದ ಗ್ರಾಹಕರಿಗೆ ಬಿಗ್ ಮೆಸೇಜ್