
ಬೆಂಗಳೂರು: ಬ್ಯಾಂಕ್ ಒಕ್ಕೂಟ ಸೆಪ್ಟೆಂಬರ್ 28 ರಿಂದ 30 ರವರೆಗೆ ಮೂರು ದಿನಗಳ ಮುಷ್ಕರಕ್ಕೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಸತತ 3 ದಿನಗಳ ಕಾಲ ಬ್ಯಾಂಕ್‌ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಮುಷ್ಕರದಿಂದ ಗ್ರಾಹಕರಿಗೆ ಉಂಟಾಗಬಹುದಾದ ಅನಾನುಕೂಲತೆ ತಪ್ಪಿಸಲು ಕೆನರಾ ಬ್ಯಾಂಕ್ ಸೇರಿದಂತೆ ಸಾರ್ವಜನಿಕ ಬ್ಯಾಂಕ್‌ಗಳು ಮುನ್ನೆಚ್ಚರಿಕೆ ಕ್ರಮಕೈಗೊಂಡಿದೆ. ಸೆಪ್ಟೆಂಬರ್ 27 ಅಂದ್ರೆ ಭಾನುವಾರ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸಲಿವೆ. ಸಾಮಾನ್ಯವಾಗಿ ಭಾನುವಾರ ರಜಾ ದಿನವಾಗಿದ್ದರೂ, ಮುಷ್ಕರದ ಹಿನ್ನೆಲೆಯಲ್ಲಿ ಶಾಖೆಗಳನ್ನು ತೆರೆಯಲು ನಿರ್ಧಾರ ಮಾಡಿದೆ. ಗ್ರಾಹಕರು ತಮ್ಮ ಬ್ಯಾಂಕಿಂಗ್ ಕೆಲಸಗಳನ್ನು ಮುಂಚಿತವಾಗಿ ಪೂರ್ಣಗೊಳಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಮುಷ್ಕರದ ಅವಧಿಯಲ್ಲಿ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ ಗ್ರಾಹಕರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಸಂದೇಶ ರವಾನಿಸಿದೆ.
ಬ್ಯಾಂಕ್‌ಗಳ ಮುಷ್ಕರಕ್ಕೆ ಕರೆ ನೀಡಿರೋದು United Forum of Bank Unions. ಕಾರಣ ವಾರಕ್ಕೆ 5 ದಿನಗಳ ಕೆಲಸದ ದಿನ (5-day work week) ಹಾಗೂ ಬ್ಯಾಂಕಿಂಗ್ ವಲಯದಲ್ಲಿ ಏಕರೂಪದ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗಿದೆ.
ಬ್ಯಾಂಕ್ ಮುಷ್ಕರ ಹಿನ್ನೆಲೆಯಲ್ಲಿ ನೌಕರರಿಗೆ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಹಣಕಾಸು ಸಚಿವಾಲಯವು ಮಹತ್ವದ ನಿರ್ಧಾರ ಕೈಗೊಂಡಿದೆ. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸೆಪ್ಟೆಂಬರ್ ತಿಂಗಳ ವೇತನ ಹಾಗೂ ಪಿಂಚಣಿಯನ್ನು ಮುಂಚಿತವಾಗಿಯೇ ಸಿಗಲಿದೆ. ಸೆಪ್ಟೆಂಬರ್ 25 ರಂದೇ (ಶುಕ್ರವಾರ) ಪಾವತಿಸಲು ನಿರ್ಧರಿಸಿದೆ.
ಮೂರು ದಿನಗಳ ಕಾಲ ಬ್ಯಾಂಕ್ ಮುಷ್ಕರ ಹಿನ್ನೆಲೆಯಲ್ಲಿ ನೀವು ಅಗತ್ಯ ಕೆಲಸಗಳನ್ನು ಆದಷ್ಟು ಬೇಗ ಮುಗಿಸಿಕೊಳ್ಳಿ. ಬ್ಯಾಂಕ್ ಶಾಖೆಗೆ ತೆರಳಿ ಮಾಡಬೇಕಾದ ಪ್ರಮುಖ ವಹಿವಾಟುಗಳು, ಡಿಡಿ ಅಥವಾ ಚೆಕ್ ಕ್ಲಿಯರೆನ್ಸ್‌ನಂತಹ ಕೆಲಸಗಳಿದ್ದರೆ ಸೆಪ್ಟೆಂಬರ್ 27 ರೊಳಗಾಗಿ ಮಾಡಿಕೊಳ್ಳಿ. ಮುಷ್ಕರದ ದಿನಗಳಲ್ಲಿ ಯುಪಿಐ (UPI), ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಮುಂತಾದ ಆನ್‌ಲೈನ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆನ್‌ಲೈನ್ ಪೇಮೆಂಟ್ ಬಗ್ಗೆ ಯಾವುದೇ ತಲೆಬಿಸಿ ಬೇಡ. ಆದಷ್ಟು ಡಿಜಿಟಲ್ ಪಾವತಿಗಳನ್ನು ಬಳಸಿ. ಇನ್ನೂ ಎಟಿಎಂಗಳಲ್ಲೂ ಹಣ ಲಭ್ಯವಾಗಲಿದೆ.
ಇನ್ನೊಂದು ವಿಚಾರ ಏನೆಂದರೆ.. ಸೆಪ್ಟೆಂಬರ್ 26 (ನಾಲ್ಕನೇ ಶನಿವಾರ) ಮತ್ತು ಸೆಪ್ಟೆಂಬರ್ 27 (ಭಾನುವಾರ) ಬ್ಯಾಂಕ್‌ಗಳಿಗೆ ರಜೆ ಇರಬೇಕಿತ್ತು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸೆಪ್ಟೆಂಬರ್ 27ರ ಭಾನುವಾರದಂದು ಎಲ್ಲಾ ಸಾರ್ವಜನಿಕ ಬ್ಯಾಂಕ್‌ಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಶಾಖೆಗಳನ್ನು ತೆರೆದಿಡಲು ಆದೇಶಿಸಲಾಗಿದೆ. ಇದಕ್ಕೆ RBI ಕೂಡ ಅನುಮೋದನೆ ನೀಡಿದೆ.
ವಾರಾಂತ್ಯದ ರಜೆಗಳು, ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯ, ಮತ್ತು ಸತತ ಮುಷ್ಕರ ಒಟ್ಟಿಗೆ ಇರೋದ್ರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ನಿಮ್ಮದು ಬ್ಯಾಂಕ್ ವ್ಯವಹಾರಗಳಿದ್ದರೆ ಭಾನುವಾರದೊಳಗೆ ಮುಗಿಸಿಕೊಳ್ಳಿ.