
ಬೆಂಗಳೂರು: ಜಯನಗರ ಸಾರ್ವಜನಿಕ ಆಸ್ಪತ್ರೆ ಆವರಣದ ಇಂದಿರಾ ಕ್ಯಾಂಟೀನ್‌ಗೆ ದಿಢೀರ್ ಭೇಟಿ ನೀಡಿದ ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್.ರಮೇಶ್, ಮೆನು ಉಲ್ಲಂಘನೆಗೆ ಮಾಡಿರುವುದಕ್ಕೆ ಗುತ್ತಿಗೆದಾರನಿಗೆ ನೋಟಿಸ್ ನೀಡಿ ದಂಡ ವಿಧಿಸಲು ಸೂಚಿಸಿದ್ದಾರೆ.
ಶನಿವಾರದ ನಿಗದಿತ ಮೆನುವಿನಂತೆ ಅನ್ನ, ಸಾಂಬಾರ್, ಪಲ್ಯ ಮತ್ತು ಖೀರು (ಪಾಯಸ) ಇಂದಿರಾ ಕ್ಯಾಂಟಿನ್ ಗೆ ಪೂರೈಸಬೇಕಾಗಿದ್ದು, ಗುತ್ತಿಗೆ ಸಂಸ್ಥೆಯಿಂದ ಕೇವಲ ಬಿಸಿಬೇಳೆ ಬಾತ್ ಮಾತ್ರ ಪೂರೈಕೆಯಾಗಿತ್ತು. ಕಳೆದ ನಾಲ್ಕೈದು ದಿನಗಳಿಂದಲೂ ಇದೇ ರೀತಿ ಮೆನು ಉಲ್ಲಂಘನೆಯಾಗಿರುವುದನ್ನು ಗಮನಿಸಿದ ಆಯುಕ್ತರು ಗುತ್ತಿಗೆ ಸಂಸ್ಥೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕ್ಯಾಂಟೀನ್‌ಗೆ ಆಹಾರ ಸರಬರಾಜು ಮಾಡುತ್ತಿರುವ ‘ರಿವಾರ್ಡ್ಸ್’ ಸಂಸ್ಥೆ ನಿಗದಿತ ಮೆನು ಪ್ರಕಾರ ಆಹಾರ ಪೂರೈಸದೆ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ನಿಯಮ ಉಲ್ಲಂಘಿಸಿರುವ ಕಾರಣ ನೋಟಿಸ್ ಜಾರಿಗೊಳಿಸಿ ಗರಿಷ್ಠ ದಂಡ ವಿಧಿಸುವಂತೆ ಸೂಚಿಸಿದ್ದಾರೆ. ಕೊರತೆಯಾಗಿರುವ ಆಹಾರದ ಪ್ರಮಾಣಕ್ಕೆ ತಕ್ಕಂತೆ ಬಿಲ್‌ನಲ್ಲಿ ಮೊತ್ತ ಕಡಿತಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕ್ಯಾಂಟೀನ್ ಮೇಲ್ವಿಚಾರಕರ ಬೇಜವಾಬ್ದಾರಿ
ಕ್ಯಾಂಟೀನ್‌ಗೆ ಊಟಕ್ಕೆ ಬರುವ ಸಾರ್ವಜನಿಕರು ಆಹಾರದ ಗುಣಮಟ್ಟ, ಶುಚಿತ್ವದ ಕೊರತೆ ಕುರಿತು ದೂರುಗಳನ್ನು ಪುಸ್ತಕದಲ್ಲಿ ದಾಖಲಿಸಿರುವುದನ್ನು ಪರಿಶೀಲಿಸಿದರು. ಗುಣಮಟ್ಟ ಕುರಿತು ದೂರುಗಳಿದ್ದರೂ ಮೇಲಧಿಕಾರಿಗಳಿಗೆ ಲಿಖಿತವಾಗಿ ವರದಿ ನೀಡಿ ಕ್ರಮ ಕೈಗೊಳ್ಳದೆ, ಕೇವಲ ಮೊಬೈಲ್ ಸಂದೇಶ ಕಳುಹಿಸಿದ್ದ ಕ್ಯಾಂಟೀನ್ ಮೇಲ್ವಿಚಾರಕರ ಬೇಜವಾಬ್ದಾರಿಗೆ ಆಯುಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಅಲ್ಲದೆ, ಸಾರ್ವಜನಿಕರ ದೂರುಗಳ ಸಂಬಂಧ ಪಾಲಿಕೆಯ ಆರೋಗ್ಯಾಧಿಕಾರಿಗಳಿಗೆ ಸ್ಥಳದಲ್ಲೇ ದೂರವಾಣಿ ಕರೆ ಮಾಡಿ, ಸಂಬಂಧಪಟ್ಟವರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದರು.