
ಬೆಂಗಳೂರು: ರಾಜಧಾನಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಹೆಬ್ಬಾಳದ ಜಿಕೆವಿಕೆಯಲ್ಲಿ ನ.16 ರಿಂದ 3 ದಿನ 'ಕೃಷಿ ಮೇಳ'ವನ್ನು ಆಯೋಜಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ಪ್ರತಿ ವರ್ಷ 4 ದಿನ ಕೃಷಿ ಮೇಳವನ್ನು ಆಯೋಜಿಸಲಾಗುತ್ತಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ 'ಬರ' ಪರಿಸ್ಥಿತಿ ಇರುವುದರಿಂದ 1 ದಿನಕ್ಕೆ ಕೃಷಿ ಮೇಳವನ್ನು ಸೀಮಿತಗೊಳಿಸಿ ನ.13 ರಂದು ಆಯೋಜಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಆದರೆ, 1 ದಿನ ಮಾತ್ರ ಕೃಷಿ ಮೇಳ ಆಯೋಜಿಸುವುದಕ್ಕೆ ಕೃಷಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಬರವಿದ್ದರೂ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಆ.30 ರಿಂದ ನ.2 ರವರೆಗೂ ಕೃಷಿ ಮೇಳವನ್ನು ಆಯೋಜಿಸಿದೆ. ಆದರೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಏಕೆ 1 ದಿನಕ್ಕೆ ಮಾತ್ರ ಕೃಷಿ ಮೇಳವನ್ನು ಸೀಮಿತಗೊಳಿಸುತ್ತಿದೆ ಎಂಬ ಟೀಕೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿತ್ತು. ಇದರಿಂದ ಬೆಂಗಳೂರು ಕೃಷಿ ವಿವಿ ನ.16 ರಿಂದ 18ರವರೆಗೂ 3 ದಿನ ಕೃಷಿ ಮೇಳ ನಡೆಸುವ ಸಾಧ್ಯತೆ ಇದೆ. ದಿನಾಂಕ ಅಂತಿಮಗೊಂಡ ಬಳಿಕ ಸೋಮವಾರ ಇದನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
'ಪರಿಮಳ ಗೆಳೆಯರ ಬಳಗ'ದ 51ನೇ ವಾರ್ಷಿಕೋತ್ಸವದ ಅಂಗವಾಗಿ ನ.15ರಂದು ಸಂಜೆ 5.30ಕ್ಕೆ ಕೆ.ಆರ್. ರಸ್ತೆಯ ಗಾಯನ ಸಮಾಜದಲ್ಲಿ ಶ್ರೀ ಗುರುಗೋವಿಂದ ದರ್ಶನ ಪುಸ್ತಕ ಲೋಕಾರ್ಪಣೆ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ 'ಪರಿಮಳ ಪ್ರಶಸ್ತಿ' ಪ್ರದಾನ ಸಮಾರಂಭ ಆಯೋಜಿಸಲಾಗಿದೆ.
ಸುಪ್ರೀಂ ಕೋರ್ಟ್ ವಿಶ್ರಾಂತ ಮುಖ್ಯ ನ್ಯಾ. ಎಂ.ಎನ್. ವೆಂಕಟಾಚಲಯ್ಯ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಲೋಕಾಯುಕ್ತ ನ್ಯಾ. ಎನ್. ಸಂತೋಷ್ ಹೆಗ್ಡೆ ಉಪಸ್ಥಿತರಿರುವರು. ಸಮಾರಂಭದ ಸಾನಿಧ್ಯವನ್ನು ಉಡುಪಿ ಸೋದೆ ಶ್ರೀವಾದಿರಾಜ ಮಠಾಧೀಶ ವಿಶ್ವವಲ್ಲಭತೀರ್ಥ ಸ್ವಾಮೀಜಿ, ಮುಳಬಾಗಿಲು ಶ್ರೀಪಾದರಾಜ ಮಠಾಧೀಶ ಸುಜಯನಿಧಿತೀರ್ಥ ಸ್ವಾಮೀಜಿ, ತೀರ್ಥಹಳ್ಳಿಯ ಶ್ರೀಭೀಮನಕಟ್ಟೆ ಮಠಾಧೀಶ ರಘುವರೇಂದ್ರತೀರ್ಥ ಸ್ವಾಮೀಜಿ ಹಾಗೂ ಶಿವಮೊಗ್ಗದ ಬಾಳಾಗಾರು ಸಂಸ್ಥಾನದ ಅಕ್ಷೋಭ್ಯ ರಾಮಪ್ರಿಯತೀರ್ಥ ಸ್ವಾಮೀಜಿ ವಹಿಸಲಿದ್ದಾರೆ. ಇದೇ ವೇಳೆ ಹರಿದಾಸ ಸಾಹಿತ್ಯ ಸಂಶೋಧಕ ಹಾಗೂ ಲೇಖಕ ಡಾ. ಎಸ್. ಜಯಸಿಂಹ (ಶ್ರೀತಿರುಮಲೇಶ ಹರಿ ವಿಠಲದಾಸರು) ರಚಿಸಿರುವ 'ಶ್ರೀ ಗುರುಗೋವಿಂದ ದರ್ಶನ' ಗ್ರಂಥವನ್ನು ಲೋಕಾರ್ಪಣೆಗೊಳಿಸಲಾಗುವುದು. ಶ್ರೀಗುರುಗೋವಿಂದ ವಿಠಲದಾಸರ ಪುತ್ರ ಎಂ.ಜಿ. ಮಾಧವರಾವ್ (ಶ್ರೀಮುಕುಂದವಿಠಲದಾಸರು) ಪುಸ್ತಕದ ಪ್ರಥಮ ಪ್ರತಿಯನ್ನು ಸ್ವೀಕರಿಸಲಿದ್ದಾರೆ.
ಸಂಸ್ಥೆಯ ವಾರ್ಷಿಕೋತ್ಸವದ ಅಂಗವಾಗಿ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 16 ಮಂದಿ ಸಾಧಕರಿಗೆ ಪ್ರತಿಷ್ಠಿತ 'ಪರಿಮಳ ಪ್ರಶಸ್ತಿ' ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಸಂಗೀತ ವಿದ್ವಾಂಸ ರಾಯಚೂರು ಶೇಷಗಿರಿದಾಸ್ ಮತ್ತು ತಂಡದವರಿಂದ 'ಹರಿದಾಸ ವಾಣಿ' ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.