ಬೆಂಗಳೂರಿನ ರಾಜಕಾಲುವೆಗಳ ಬ್ಲಾಕೇಜ್, ಪ್ರವಾಹ ಸಮಸ್ಯೆಗೆ ರೊಬೊಟಿಕ್ ಯಂತ್ರದ ಪರಿಹಾರ

Published : Nov 09, 2026, 06:07 AM IST
A robotic solution for blockages in Bengaluru's storm-water drains and the resulting flooding issues.

ಸಾರಾಂಶ

ಮಳೆಗಾಲದಲ್ಲಿ ಬೆಂಗಳೂರಿನ ರಾಜಕಾಲುವೆಗಳ ಬ್ಲಾಕೇಜ್ ಮತ್ತು ಪ್ರವಾಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜಿಬಿಎ ಮುಂದಾಗಿದೆ. ಎಚ್‌ಎಸ್‌ಆರ್‌ ಬಡಾವಣೆಯಲ್ಲಿ 'ಸೂಪರ್ ಸಕ್ಷನ್ ರೊಬೊಟಿಕ್ ಯಂತ್ರ'ದ ಮೂಲಕ ರಾಜಕಾಲುವೆ ಸ್ವಚ್ಛಗೊಳಿಸುವ ಪ್ರಾಯೋಗಿಕ ಕಾರ್ಯ ಯಶಸ್ವಿಯಾಗಿದೆ.

ಬೆಂಗಳೂರು: ಮಳೆಗಾಲದಲ್ಲಿ ಬಹುದೊಡ್ಡ ಸಮಸ್ಯೆ ಆಗಿರುವ ಮುಚ್ಚಿದ ರಾಜಕಾಲುವೆಗಳ (ಸ್ಟಾರ್ಮ್ ವಾಟರ್ ಡ್ರೈನ್) ಬ್ಲಾಕೇಜ್ ಮತ್ತು ಪ್ರವಾಹ ಪರಿಸ್ಥಿತಿಗೆ ಮುಕ್ತಿ ಹಾಡಲು ಜಿಬಿಎ ಮುಂದಾಗಿದೆ. ಇದರ ಭಾಗವಾಗಿ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಅತ್ಯಾಧುನಿಕ ‘ಸೂಪರ್‌ ಸಕ್ಷನ್ ರೊಬೊಟಿಕ್ ಯಂತ್ರ’ದ ಮೂಲಕ ರಾಜಕಾಲುವೆ ಸ್ವಚ್ಛಗೊಳಿಸುವ ಪ್ರಾಯೋಗಿಕ ಕಾರ್ಯಕ್ಕೆ ಶಾಸಕ ಎಂ. ಸತೀಶ್ ರೆಡ್ಡಿ ಹಾಗೂ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್ ಅವರ ನೇತೃತ್ವದಲ್ಲಿ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಲಾಯಿತು.

ಯಂತ್ರ ಯಶಸ್ವಿಯಾಗಿ ಕಾರ್ಯನಿರ್ವಹಿಸಿದಲ್ಲಿ, ಮುಂದೆ ರಾಜಕಾಲುವೆಗಳ ಸ್ವಚ್ಛತಾ ಕಾರ್ಯಕ್ಕೆ ಇದನ್ನು ಕಾಯಂ ಆಗಿ ಅಳವಡಿಸಿಕೊಳ್ಳಲಾಗುವುದು ಎಂದು ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಚ್‌ಎಸ್‌ಆರ್‌ ಲೇಔಟ್‌ನ 7ನೇ ಸೆಕ್ಟರ್‌, 17ನೇ ಕ್ರಾಸ್ ಮತ್ತು ಸುತ್ತಮುತ್ತಲಿನ ರಾಜಕಾಲುವೆಯಲ್ಲಿ ಕಾರ್ಯಾಚರಣೆ ನಡೆಯಿತು. ಸುಮಾರು 6 ಅಡಿ ಅಗಲ ಹಾಗೂ ೩೦ ಅಡಿ ಉದ್ಧದ ಪ್ರದೇಶದಲ್ಲಿ 2 ಅಡಿಗೂ ಹೆಚ್ಚು ಪ್ರಮಾಣದ ಹೂಳು ಮತ್ತು ಕೆಸರು ಸಂಗ್ರಹವಾಗಿತ್ತು. 6 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸಂಪೂರ್ಣ ಹೂಳು ಯಶಸ್ವಿಯಾಗಿ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

30 ಮೀಟರ್‌ವರೆಗೆ ಸ್ವಚ್ಛತೆ

ಆರ್ಯನ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಯಂತ್ರವು ಮುಚ್ಚಿದ ರಾಜಕಾಲುವೆಗಳ ಒಳಭಾಗದಲ್ಲಿ ಇಳಿದು ಸುಮಾರು 30 ಮೀ. ದೂರದವರೆಗೆ ತೆರಳಿ ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿದೆ. ಕಾಲುವೆಯೊಳಗೆ ‘ವೈರ್‌ಲೆಸ್ ರಿಮೋಟ್ ಕಂಟ್ರೋಲ್’ ಮೂಲಕ ಹೊರಗಿನಿಂದಲೇ ನಿಯಂತ್ರಿಸಲಾಗುತ್ತದೆ. ಇದು ಕಾಲುವೆಯೊಳಗಿರುವ ಗಟ್ಟಿ ಹೂಳನ್ನು ಸಡಿಲಗೊಳಿಸಿ, ವಾಕ್ಯೂಮ್ ಪೈಪ್ ಮೂಲಕ ಹೀರಿಕೊಳ್ಳುತ್ತದೆ.

8 ಸಾವಿರ ಲೀಟರ್‌ ಸಾಮರ್ಥ್ಯ

ಯಂತ್ರವು ಒಟ್ಟು 8000 ಲೀಟರ್‌ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ. ಕಾಲುವೆಯಿಂದ ಹೀರಿಕೊಳ್ಳುವ 6000 ಲೀಟರ್‌ ಹೂಳು/ಕೆಸರು ಹಾಗೂ 2000 ಲೀಟರ್‌ ನೀರನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ಅತ್ಯಾಧುನಿಕ ತಂತ್ರಜ್ಞಾನ ಇದರಲ್ಲಿದೆ.

ಮಳೆಗಾಲದಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಎಚ್‌ಎಸ್‌ಆರ್‌ ಲೇಔಟ್ ಮಾರ್ಗದಲ್ಲಿ ವಾಹನ ಸವಾರರನ್ನು ಕಾಡುವ ಜಲಾವೃತ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಆಯುಕ್ತರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಹೊಸದಾಗಿ ನಿರ್ಮಿಸುತ್ತಿರುವ ಮಳೆನೀರು ಚರಂಡಿ ಕಾಮಗಾರಿಯಲ್ಲಿ ‘ಬಾಕ್ಸ್ ಡ್ರೈನ್’ ನಿರ್ಮಿಸುವ ಬದಲು 3 ಮೀಟರ್‌ ವ್ಯಾಸದ ‘ಪೈಪ್‌ಲೈನ್’ ಅಳವಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ವೇಳೆ ಸ್ಥಳೀಯ ಶಾಸಕ ಸತೀಶ್ ರೆಡ್ಡಿ, ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್, ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ, ಮಾಲತಿ ಹಾಗೂ ಕಾರ್ಯಪಾಲಕ ಅಭಿಯಂತರರು ಸೇರಿ ಹಲವು ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

Tiger ಶ್ರಾಫ್ ಕೇಸ್ ಬೆನ್ನಲ್ಲೇ ಮತ್ತೊಬ್ಬ ನಟನಿಗೆ ಲಾರೆನ್ಸ್ ಬೆದರಿಕೆ, ಆಡಿಯೋ ಕ್ಲಿಪ್ ವೈರಲ್, ಬೆಂಗಳೂರಿನಲ್ಲಿ ಓರ್ವನ ಬಂಧನ
ಚೆನ್ನೈ ಏರ್ಪೋರ್ಟ್‌ಗೆ ಕಂಪೇರಿಂಗ್ ರಿಪೋರ್ಟ್ ಮಾಡಿದ ಬೆನ್ನಲ್ಲೇ ಕನ್ನಡಿಗರ ಉದ್ಯೋಗಕ್ಕೆ ಕಂಫರ್ಟ್ ಎಂದ ಬಿಐಎಎಲ್!