
ಕನ್ನಡಪ್ರಭ ವಾರ್ತೆ ಬೆಂಗಳೂರು (ಸೆ.19): ಡಿ.ಕೆ.ಶಿವಕುಮಾರ್ ಅವರೇ ವೇದಿಕೆಯಲ್ಲಿ ಸಂಸ್ಕೃತ ಶ್ಲೋಕಗಳನ್ನು ಹೇಳಿದ ತಕ್ಷಣ ರಾಜಕೀಯ ಪ್ರಬುದ್ಧತೆ ಅಥವಾ ಸಂಸ್ಕಾರ ಬರುವುದಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಸರ್ಕಾರದ ನೀತಿಗಳನ್ನು ಟೀಕಿಸಲು ನಮಗೆ ಪ್ರಜಾಪ್ರಭುತ್ವದಲ್ಲಿ ಹಕ್ಕಿದೆ. ಆದರೆ, ಒಬ್ಬ ಜನನಾಯಕನ ಹುಟ್ಟುಹಬ್ಬದ ಸಂದರ್ಭದಲ್ಲೂ ಈ ರೀತಿಯ ವೈಯಕ್ತಿಕ ದ್ವೇಷ ಹಾಗೂ ನಿಂದನೆಯ ರಾಜಕಾರಣ ಮಾಡುವುದು ಅತ್ಯಂತ ಖಂಡನೀಯ ಎಂದು ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ನಿಸ್ವಾರ್ಥ ಸಾರ್ವಜನಿಕ ಸೇವೆಯನ್ನು ಇಡೀ ದೇಶವೇ ‘ಆಶೀರ್ವಾದ್ ಕಾ ದಿಯಾ’ ಅಭಿಯಾನದ ಮೂಲಕ ಗೌರವಿಸಿ, ಸಂಭ್ರಮಿಸುತ್ತಿದೆ. ಆದರೆ, ಕರ್ನಾಟಕ ಕಾಂಗ್ರೆಸ್ ನಡೆಸಿರುವ ಅಸಭ್ಯ ಕಾರ್ಯಕ್ರಮವು ಅವರ ರಾಜಕೀಯ ಸಂಸ್ಕೃತಿಯ ಅಧಃಪತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಭಿನ್ನಾಭಿಪ್ರಾಯಗಳಿಗೆ ತನ್ನದೇ ಆದ ವೇದಿಕೆಗಳಿವೆ. ಕನಿಷ್ಠ ಹುಟ್ಟುಹಬ್ಬದಂತಹ ವೈಯಕ್ತಿಕ ಸಂದರ್ಭದಲ್ಲಾದರೂ ಇಂತಹ ಕೀಳುಮಟ್ಟದ ರಾಜಕೀಯ ಮಾಡುವುದನ್ನು ಬಿಟ್ಟು ಸೌಜನ್ಯ ಮೆರೆಯುವುದನ್ನು ಕಲಿಯಿರಿ. ಕರ್ನಾಟಕದ ಜನತೆ ನಿಮ್ಮಿಂದ ಮೌಲ್ಯಯುತ ರಾಜಕಾರಣವನ್ನು ನಿರೀಕ್ಷಿಸುತ್ತಾರೆಯೇ ಹೊರತು ಈ ರೀತಿಯ ಕಪಟತನವನ್ನಲ್ಲ ಎಂದಿದ್ದಾರೆ.
ಪ್ರಧಾನಿ ಮೋದಿ ಅವರ 25 ವರ್ಷದ ಸುದೀರ್ಘ ರಾಜಕೀಯ ಪಯಣವು ದೇಶದ ಯುವಕರಿಗೆ ಸ್ಫೂರ್ತಿಯಾಗಿದೆ. ಆದರೆ, ಕಾಂಗ್ರೆಸ್‌ನ ಈ ನಡೆ ಖಂಡನೀಯ ಎಂದು ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.