
ಬೆಂಗಳೂರು (ಡಿ.31): ಬೆಂಗಳೂರಿನ ಮೂಲಭೂತ ಸೌಕರ್ಯ, ಇಲ್ಲಿನ ರಸ್ತೆ ಗುಂಡಿಗಳ ಬಗ್ಗೆ ಟೀಕೆ ಮಾಡಿ ಹೊಸ ವರ್ಷದ ಪೋಸ್ಟ್ ಹಾಕಿದ್ದ ಹೈದ್ರಾಬಾದ್ ಯುವತಿಯ ವಿರುದ್ಧ ಕನ್ನಡಿಗರು ಕಿಡಿಕಾರಿದ್ದಾರೆ. ಲಕ್ಷಾಂತರ ವಲಸಿಗರಿಗೆ ಆಶ್ರಯ ನೀಡುವ ನಗರಕ್ಕೆ ಇದು ಮಾಡು ಅಗೌರವ ಎಂದು ಅನೇಕ ಸ್ಥಳೀಯರು ಟೀಕೆ ಮಾಡಿದ್ದಾರೆ. ಹೌದು ಬೆಂಗಳೂರಿನಲ್ಲಿ ಸವಾಲುಗಳು ಇರಬಹುದು. ಆದರೆ, ಅನೇಕ ನಿವಾಸಿಗಳಿಗೆ ಅದರಲ್ಲೂ ದೇಶಾದ್ಯಂತ ಜನರಿಗೆ ಆಶ್ರಯ, ಜೀವನೋಪಾಯ ಮತ್ತು ಘನತೆಯನ್ನು ನೀಡಿದ ನಗರವಾಗಿ ಇಂದು ಉಳಿದುಕೊಂಡಿದೆ, ಮುಂದೆಯೂ ಇರಲಿದೆ ಎಂದು ಹೇಳಿದ್ದಾರೆ.
ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಹೈದ್ರಾಬಾದ್ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಮಾಡಿದ ಪೋಸ್ಟ್‌ಗೆ ಕನ್ನಡಿಗರ ಭಾರೀ ಪ್ರಮಾಣದಲ್ಲಿ ಕಾಮೆಂಟ್ ಬಂದಿದ್ದು, ಹಲವರು ಬೆಂಗಳೂರಿನ ಸಮಸ್ಯೆಗಳ ನಡುವೆಯೂ ಈ ಊರಿನ ವಿಶೇಷತೆಯನ್ನು ಬಣ್ಣಿಸಿದ್ದಾರೆ.
ಶ್ರೇಯಾ ಹೆಸರಿನ ಯುವತಿ ಸೋಶಿಯಲ್ ಮೀಡಿಯಾ ವೇದಿಕೆ ಎಕ್ಸ್‌ನಲ್ಲಿ ಬೆಂಗಳೂರನ್ನು ತೊರೆಯುವುದು ತನ್ನ ಹೊಸ ವರ್ಷದ ಸಂಕಲ್ಪಗಳಲ್ಲಿ ಒಂದು ಎಂದು ಹೇಳಿದಾಗ ವಿವಾದ ಆರಂಭವಾಯಿತು. ಅದನ್ನು ತಮ್ಮ ವರ್ಷದ ಅತ್ಯುತ್ತಮ ನಿರ್ಧಾರ ಎಂದು ಕರೆದ ಅವರು ನಗರವನ್ನು ಹೈದರಾಬಾದ್‌ಗೆ ಹೋಲಿಸಿ ಅಲ್ಲಿನ ಜೀವನವು ಹೆಚ್ಚು ಶಾಂತಿಯುತ ಹಾಗೂ ಆರಾಮದಾಯಕವಾಗಿದೆ ಎಂದು ಹೇಳಿದರು.
ಶ್ರೇಯಾ ತಮ್ಮ ಪೋಸ್ಟ್‌ನಲ್ಲಿ ಬೆಂಗಳೂರಿನಿಂದ ಹೊರಗೆ ಹೋಗಲು ಹಲವಾರು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಆಗಾಗ್ಗೆ ಗುಂಡಿಗಳಿಂದ ಕೂಡಿದ ಕಳಪೆ ರಸ್ತೆ ಪರಿಸ್ಥಿತಿಗಳು, ಕಡಿಮೆ ದೂರದ ಪ್ರಯಾಣಕ್ಕೂ ದೀರ್ಘ ಪ್ರಯಾಣದ ಸಮಯ, ಕ್ಯಾಬ್‌ಗಳನ್ನು ಬುಕ್ ಮಾಡುವಲ್ಲಿ ವಿಳಂಬ, ನೀರಿನ ಕೊರತೆ, ಕಳಪೆ ಗುಣಮಟ್ಟದ ಆಹಾರ ಮತ್ತು ಹೆಚ್ಚಿನ ಜೀವನ ವೆಚ್ಚವನ್ನು ಅವರು ಉಲ್ಲೇಖಿಸಿದ್ದಾರೆ. ಹೈದರಾಬಾದ್‌ನಲ್ಲಿ ತಮ್ಮ ಜೀವನವು ಹೆಚ್ಚು ನಿರಾಳವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ತಕ್ಷಣವೇ ವೈರಲ್ ಆಗಿದ್ದು, ಬೆಂಗಳೂರಿನ ಅನೇಕ ನಿವಾಸಿಗಳಿಂದ ತೀವ್ರ ಟೀಕೆಗೆ ಗುರಿಯಾಯಿತು. ಹಲವಾರು ಯೂಸರ್‌ಗಳು ಕೋಪ ವ್ಯಕ್ತಪಡಿಸಿ, ನಗರದಲ್ಲಿ ಸಮಸ್ಯೆಗಳಿದ್ದರೂ, ಅದರ ಅವಕಾಶಗಳನ್ನು ಬಳಸಿದ ನಂತರ ಅದನ್ನು ಬಹಿರಂಗವಾಗಿ ಅವಮಾನಿಸುವುದು ಅನ್ಯಾಯ ಎಂದು ಹೇಳಿದರು. ಕೆಲವು ಯೂಸರ್‌ಗಳು ಆಕೆಗೆ ಅತೃಪ್ತಿ ಅನಿಸಿದರೆ ಬೇರೆಡೆಗೆ ಹೋಗುವುದು ಉತ್ತಮ ಎಂದು ಹೇಳಿದರು, ಆದರೆ ಹಾಗೆ ಮಾಡುವಾಗ ಬೆಂಗಳೂರನ್ನು ಅವಮಾನಿಸದಂತೆ ಒತ್ತಾಯಿಸಿದರು.
ಇತರ ರಾಜ್ಯಗಳ ಜನರಿಗೆ ಉದ್ಯೋಗ, ಆಹಾರ ಮತ್ತು ವಸತಿ ಒದಗಿಸುತ್ತಿದ್ದರೂ, ಬೆಂಗಳೂರು ಇಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಆಯ್ಕೆ ಮಾಡಿಕೊಳ್ಳುವವರಿಂದ ಪದೇ ಪದೇ ಟೀಕೆಗಳನ್ನು ಎದುರಿಸುತ್ತಿದೆ ಎಂದು ಸ್ಥಳೀಯರು ಭಾವಿಸಿದ್ದಾರೆ. ಭಾರತದಾದ್ಯಂತದ ವಲಸಿಗರಿಗೆ ಬೆಂಬಲ ನೀಡುತ್ತಲೇ ನಗರವು ತನ್ನ ಸಮಸ್ಯೆಗಳನ್ನು ಮೌನವಾಗಿ ಸ್ವೀಕರಿಸಿದೆ ಎಂದು ಯೂಸರ್‌ಗಳು ಕಾಮೆಂಟ್ ಮಾಡಿದ್ದಾರೆ.