ಬೆಂಗಳೂರು ಪ್ರಯಾಣಿಕರಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟ ನಮ್ಮ ಮೆಟ್ರೋ, ಬಿಎಂಟಿಸಿ; ಏನದು?

Published : Oct 07, 2026, 07:44 PM IST
BMTC And Namma Metro Card

ಸಾರಾಂಶ

ಬೆಂಗಳೂರಿನಲ್ಲಿ ಮೆಟ್ರೋ ಮತ್ತು ಬಿಎಂಟಿಸಿ ಪ್ರಯಾಣಿಕರ ಸುಗಮ ಸಂಪರ್ಕಕ್ಕಾಗಿ ಹೊಸ ಉಪಕ್ರಮವನ್ನು ಕೈಗೊಳ್ಳಲಾಗಿದೆ. ಕಬ್ಬನ್ ಪಾರ್ಕ್ ಮತ್ತು ತಾವರೆಕೆರೆ ಮೆಟ್ರೋ ನಿಲ್ದಾಣಗಳ ಬಳಿ ಹೊಸ ಬಿಎಂಟಿಸಿ ಬಸ್ ನಿಲ್ದಾಣಗಳನ್ನು ಆರಂಭಿಸಲಾಗಿದೆ. ಅಕ್ಟೋಬರ್ 6ರಿಂದಲೇ ಈ ಹೊಸ ವ್ಯವಸ್ಥೆ ಜಾರಿಗೆ ಬಂದಿದ್ದು, ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.

ಬೆಂಗಳೂರು: ನಗರ ಸಂಚಾರದ ಜೀವನಾಡಿ ಅಂದರೆ ಅದು ಬಿಎಂಟಿಸಿ ಮತ್ತು ನಮ್ಮ ಮೆಟ್ರೋ. ಇದೀಗ ಬಿಎಂಆರ್‍‌ಸಿಎಲ್ ಹಾಗೂ ಬಿಎಂಟಿಸಿ ತನ್ನ ಪ್ರಯಾಣಿಕರಿಗೆ ಗುಡ್‌ನ್ಯೂಸ್ ನೀಡಿವೆ. ಮೆಟ್ರೋ ಪ್ರಯಾಣಿಕರಿಗೆ ಮತ್ತಷ್ಟು ಸುಗಮ ಸಂಪರ್ಕಕ್ಕೆ BMRCL–BMTC ಹೊಸ ಉಪಕ್ರಮಕ್ಕೆ ಮುಂದಾಗಿದೆ.

ಅಂದರೆ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕ ಸುಧಾರಣೆಗೆ ಹೊಸ ಬಸ್ ನಿಲ್ದಾಣಗಳ ವ್ಯವಸ್ಥೆ ಮಾಡಿವೆ. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಎರಡು ಹೊಸ BMTC ಬಸ್ ನಿಲ್ದಾಣ. ‘B’ ಮತ್ತು ‘C’ ಪ್ರವೇಶದ್ವಾರಗಳ ಸಮೀಪ ಹೊಸ ಬಸ್ ನಿಲ್ದಾಣದ ವ್ಯವಸ್ಥೆ ಆಗಿದೆ.

ಇಂಡಿಯನ್ ಎಕ್ಸ್‌ಪ್ರೆಸ್–ಅನಿಲ್ ಕುಂಬ್ಳೆ ವೃತ್ತ ಮಾರ್ಗದ ಬಸ್‌ಗಳಿಗೆ ‘B’ ಗೇಟ್ ಬಳಿ ನಿಲ್ದಾಣ ಹಾಗೂ ಅನಿಲ್ ಕುಂಬ್ಳೆ ವೃತ್ತ–ರಾಜಭವನ ಮಾರ್ಗದ ಬಸ್‌ಗಳಿಗೆ ‘C’ ಗೇಟ್ ಬಳಿ ನಿಲ್ದಾಣ. ಅದೇ ರೀತಿ ತಾವರೆಕೆರೆ ಮೆಟ್ರೋ ನಿಲ್ದಾಣದ ಬಳಿಯೂ ಹೊಸ BMTC ಬಸ್ ನಿಲ್ದಾಣದ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಡೈರಿ ಸರ್ಕಲ್–ಬನ್ನೇರುಘಟ್ಟ ಹಾಗೂ ಜಯದೇವ–ಡೈರಿ ಸರ್ಕಲ್ ಮಾರ್ಗದ ಬಸ್‌ಗಳಿಗೆ ಅನುಕೂಲ ಆಗಲಿದೆ. ಅಕ್ಟೋಬರ್ 6ರಿಂದಲೇ ಹೊಸ ಬಸ್ ನಿಲ್ದಾಣಗಳ ವ್ಯವಸ್ಥೆ ಜಾರಿಯಾಗಿದೆ. ಮೆಟ್ರೋ ಪ್ರಯಾಣಿಕರು ಹೊಸ ಸೌಲಭ್ಯ ಬಳಸಿಕೊಳ್ಳುವಂತೆ BMRCL ವಿಶೇಷ ಮನವಿ ಮಾಡಿಕೊಂಡಿದೆ.

ಮತ್ತೊಂದು ಕಡೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ತನ್ನ ಬಸ್‌ಗಳ ಕಾರ್ಯಾಚರಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಹೊಸ ತಂತ್ರಜ್ಞಾನ ವ್ಯವಸ್ಥೆಯನ್ನು ಪರಿಚಯಿಸಲು ಮುಂದಾಗಿದೆ. ಆಯ್ದ 30 ಬಸ್‌ಗಳಲ್ಲಿ ಸ್ವಯಂಚಾಲಿತ ಪ್ರಯಾಣಿಕರ ಎಣಿಕೆ (APC) ವ್ಯವಸ್ಥೆ ಅಳವಡಿಸಲು ಬಿಎಂಟಿಸಿ ಸಿದ್ಧತೆ ನಡೆಸಿದೆ. ಈ ವ್ಯವಸ್ಥೆಯ ಮೂಲಕ ಬಸ್‌ಗಳಲ್ಲಿ ಎಷ್ಟು ಮಂದಿ ಪ್ರಯಾಣಿಕರು ಹತ್ತಿದರು, ಎಷ್ಟು ಮಂದಿ ಇಳಿದರು, ಯಾವ ನಿಲ್ದಾಣದಲ್ಲಿ ಹೆಚ್ಚು ಪ್ರಯಾಣಿಕರ ಓಡಾಟವಿದೆ ಹಾಗೂ ಬಸ್‌ನಲ್ಲಿ ಯಾವ ಸಮಯದಲ್ಲಿ ಎಷ್ಟು ಜನರಿದ್ದರು ಎಂಬುದರ ಕುರಿತು ಹೆಚ್ಚು ನಿಖರವಾದ ಮಾಹಿತಿ ಪಡೆಯಲು ಸಾಧ್ಯವಾಗಲಿದೆ.

ವಿಸ್ತರಣೆ ಆಗ್ತಿದೆ ಮೆಟ್ರೋ

ರಾಜಧಾನಿ ಬೆಂಗಳೂರಿನ ತೀವ್ರ ಟ್ರಾಫಿಕ್ ದಟ್ಟಣೆಗೆ ಶಮನ ನೀಡಲು ಹಾಗೂ ನಗರದ ಸುತ್ತಮುತ್ತಲಿನ ಪ್ರದೇಶಗಳನ್ನು ಶರವೇಗದಲ್ಲಿ ಅಭಿವೃದ್ಧಿಪಡಿಸಲು ಕರ್ನಾಟಕ ಸರ್ಕಾರ ಬೃಹತ್ ಯೋಜನೆಯೊಂದನ್ನು ರೂಪಿಸಿದೆ. ಬೆಂಗಳೂರಿನಿಂದ ತುಮಕೂರು, ಮೈಸೂರು ಹಾಗೂ ಕೋಲಾರ ಚಿನ್ನದ ಗಣಿ (KGF) ನಗರಗಳನ್ನು ಸಂಪರ್ಕಿಸುವ 3 ಪ್ರಮುಖ ಕಾರಿಡಾರ್‌ಗಳಲ್ಲಿ ಒಟ್ಟು 270 ಕಿಲೋಮೀಟರ್ ಉದ್ದದ 'ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ' (RRTS - Regional Rapid Transit System) ಜಾಲವನ್ನು ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಜೊತೆಗೆ ಮುಂಬೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಕಾರಿಡಾರ್ ನಿರ್ಮಾಣದ ಕುರಿತೂ ಗಂಭೀರ ಚರ್ಚೆ ನಡೆದಿದೆ.

ಅಕ್ಟೋಬರ್ 5 ರಂದು ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (BMRDA) ವ್ಯಾಪ್ತಿಯ ಪ್ರದೇಶಗಳ ಮುಂದಿನ 10 ರಿಂದ 15 ವರ್ಷಗಳ ಸಮಗ್ರ ಅಭಿವೃದ್ಧಿ ಯೋಜನೆ (Comprehensive Master Plan) ತಯಾರಿಸುವ ಸಂಬಂಧ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ (DK Shivakumar) ಅವರ ಅಧ್ಯಕ್ಷತೆಯಲ್ಲಿ ನಡೆದ 'ಬೆಂಗಳೂರು ಮಹಾನಗರ ಪ್ರದೇಶದ ಆರ್ಥಿಕ ಅಭಿವೃದ್ಧಿ ಸಲಹಾ ಸಮಿತಿ'ಯ ಸಭೆಯಲ್ಲಿ ಈ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.

PREV
Read more Articles on
click me!

Recommended Stories

'₹12 ಲಕ್ಷ ಸ್ಯಾಲರಿ 4 ಲಕ್ಷ ಫೀಲ್ ಆಗ್ತಿದೆ' ಬೆಂಗಳೂರಿಗೆ ಬರಬೇಡಿ ಎಂದ ಟೆಕ್ಕಿ, ಕೊಟ್ಟ ಕಾರಣ ಏನು ಗೊತ್ತಾ?
'ನನ್ನ ಹಾಸನ ತಂಗಿ ಎನ್ನುತ್ತಾರೆ' 10 ವರ್ಷಗಳ ಹಿಂದಿನ ಸ್ಪೆಷಲ್ ಫೋಟೋ ಹಂಚಿಕೊಂಡು ಜಾಹ್ನವಿ ಭಾವುಕ