ನಟಿ ಅನುಷ್ಕಾ ಶೆಟ್ಟಿ ಸಹೋದರ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಾಗಿ ಮರು ನೇಮಕ

Published : Oct 12, 2026, 06:26 PM IST
B Gunaranjan Shetty Wrestling Fedration Anushka Shetty Brother

ಸಾರಾಂಶ

ನಟಿ ಅನುಷ್ಕಾ ಶೆಟ್ಟಿ ಅವರ ಸಹೋದರ ಗುಣರಂಜನ್ ಶೆಟ್ಟಿ ಅವರು ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾಗಿ ಸತತ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 2026–2030ರ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಬೆಂಗಳೂರು (ಅ.12): ಬಾಹುಬಲಿಯ ದೇವಸೇನಾ, ಅರುಂಧತಿ ಪಾತ್ರಗಳಿಂದ ಜನಮನ್ನಣೆ ಪಡೆದ ನಟಿ ಅನುಷ್ಕಾ ಶೆಟ್ಟಿ ಅವರ ಸಹೋದರ ಬೆಳ್ಳಿಪಾಡಿ ಗುಣರಂಜನ್ ಶೆಟ್ಟಿ ಅವರು ಕರ್ನಾಟಕ ರಾಜ್ಯ ಕುಸ್ತಿ ಸಂಘದ (KSWA) ಅಧ್ಯಕ್ಷರಾಗಿ ಸತತ ಎರಡನೇ ಅವಧಿಗೆ ಅವಿರೋಧವಾಗಿ ಮರುಆಯ್ಕೆಯಾಗಿದ್ದಾರೆ. ಪ್ರಸಿದ್ಧ ರಿಯಲ್ ಎಸ್ಟೇಟ್ ಉದ್ಯಮಿಯೂ ಹಾಗೂ ಭಾರತೀಯ ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರ ಹಿರಿಯಸಹೋದರರೂ ಆಗಿರುವ ಗುಣರಂಜನ್ ಶೆಟ್ಟಿ ಅವರಿಗೆ ರಾಜ್ಯದಲ್ಲಿ ಕ್ರೀಡೆಯನ್ನು ಮುನ್ನಡೆಸಲು ಮತ್ತೊಮ್ಮೆ ಪೂರ್ಣ ಬೆಂಬಲ ವ್ಯಕ್ತವಾಗಿದೆ. ಸೋಮವಾರ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಕುಸ್ತಿ ಸಂಘದ 2026–2030 ರ ನಾಲ್ಕು ವರ್ಷಗಳ ಸುದೀರ್ಘ ಅವಧಿಯ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಚುನಾವಣೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಚುನಾವಣಾ ಫಲಿತಾಂಶ ಪ್ರಕಟಿಸಿದ WFI ಅಧ್ಯಕ್ಷ ಸಂಜಯ್ ಸಿಂಗ್

ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ, ಭಾರತೀಯ ಕುಸ್ತಿ ಫೆಡರೇಶನ್ (WFI) ಅಧ್ಯಕ್ಷರಾದ ಸಂಜಯ್ ಸಿಂಗ್ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ನೂತನ ಆಡಳಿತ ಮಂಡಳಿಯ ಅಧಿಕೃತ ಫಲಿತಾಂಶವನ್ನು ಪ್ರಕಟಿಸಿದರು. ಗುಣರಂಜನ್ ಶೆಟ್ಟಿ ಅವರ ಜೊತೆಗೆ ಹಿರಿಯ ಉಪಾಧ್ಯಕ್ಷರಾಗಿ ನಿತ್ಯಾನಂದ ಶೆಟ್ಟಿ, ಉಪಾಧ್ಯಕ್ಷರಾಗಿ ಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಜೆ. ಶ್ರೀನಿವಾಸ ಹಾಗೂ ಖಜಾಂಚಿಯಾಗಿ ಶ್ರೀನಿವಾಸ ಅಂಗರಕೋಡಿ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ ಜಂಟಿ ಕಾರ್ಯದರ್ಶಿಗಳು ಹಾಗೂ ಕಾರ್ಯಕಾರಿ ಸಮಿತಿಯ ಇತರ ಸದಸ್ಯರನ್ನು ಸಹ 2026–2030ರ ಅವಧಿಗೆ ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.

ಈ ಮಹತ್ವದ ಚುನಾವಣಾ ಪ್ರಕ್ರಿಯೆಯನ್ನು ನಿವೃತ್ತ ನ್ಯಾಯಮೂರ್ತಿ ಎಂ. ರಾಮಚಂದ್ರ ಅವರು ಚುನಾವಣಾಧಿಕಾರಿಯಾಗಿ (Returning Officer) ಪಾರದರ್ಶಕವಾಗಿ ನಡೆಸಿಕೊಟ್ಟರು. ಭಾರತೀಯ ಕುಸ್ತಿ ಫೆಡರೇಶನ್‌ನ (WFI) ಉಪಾಧ್ಯಕ್ಷರಾದ ವಿ.ಎನ್. ಪ್ರಸೂದ್ ಅವರು ಅಖಿಲ ಭಾರತ ಸಮಿತಿಯ ವೀಕ್ಷಕರಾಗಿ (WFI Observer) ಭಾಗವಹಿಸಿದ್ದರು. ಹಾಗೆಯೇ, ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು ಪ್ರತಿನಿಧಿಸಿ ವಿದ್ಯಾ ವೈ. ಅವರು ಸರ್ಕಾರಿ ವೀಕ್ಷಕರಾಗಿ (Government Observer) ಭಾಗವಹಿಸಿ ಪ್ರಕ್ರಿಯೆಯನ್ನು ಪರಿಶೀಲಿಸಿದರು.

ರಾಜ್ಯದಲ್ಲಿ ಕುಸ್ತಿ ಕ್ರೀಡೆಯ ಪುನಶ್ಚೇತನಕ್ಕೆ ಮಾಸ್ಟರ್ ಪ್ಲಾನ್

ಸತತ ಎರಡನೇ ಬಾರಿಗೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರಿಯಲ್ ಎಸ್ಟೇಟ್ ಉದ್ಯಮಿ ಗುಣರಂಜನ್ ಶೆಟ್ಟಿ ಅವರ ನೇತೃತ್ವದಲ್ಲಿ, ಸಂಘವು ಮುಂಬರುವ ದಿನಗಳಲ್ಲಿ ಕರ್ನಾಟಕದಾದ್ಯಂತ ಕುಸ್ತಿ ಕ್ರೀಡೆಯನ್ನು ಮೂಲಭೂತ ಹಂತದಿಂದ ಬಲಪಡಿಸಲು ಬದ್ಧವಾಗಿದೆ. ವಿಶೇಷವಾಗಿ ಗ್ರಾಮೀಣ ಹಾಗೂ ಜಿಲ್ಲಾ ಮಟ್ಟದಲ್ಲಿ ಅಡಗಿರುವ ಪ್ರತಿಭಾವಂತ ಯುವ ಪೈಲ್ವಾನರು ಮತ್ತು ಕುಸ್ತಿಪಟುಗಳನ್ನು ಗುರುತಿಸಿ, ಅವರಿಗೆ ವೃತ್ತಿಪರ ತರಬೇತಿ, ಸುಸಜ್ಜಿತ ಅಖಾಡ/ಮ್ಯಾಟ್‌ಗಳ ಸೌಲಭ್ಯ ಹಾಗೂ ಹೆಚ್ಚಿನ ಸ್ಪರ್ಧಾತ್ಮಕ ಅವಕಾಶಗಳನ್ನು ಒದಗಿಸುವುದು ನೂತನ ಸಮಿತಿಯ ಮುಖ್ಯ ಆದ್ಯತೆಯಾಗಿದೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಗಳಲ್ಲಿ ಕರ್ನಾಟಕದ ಪ್ರತಿನಿಧಿಗಳ ಸಂಖ್ಯೆ ಹಾಗೂ ಪದಕಗಳ ಗಳಿಕೆಯನ್ನು ಹೆಚ್ಚಿಸುವ ಗುರಿಯನ್ನು ಸಂಘ ಹೊಂದಿದೆ.

ಕರ್ನಾಟಕವುಭವ್ಯವಾದ ಕುಸ್ತಿ ಪರಂಪರೆಯನ್ನು ಹೊಂದಿದ್ದು, ಹಳೆಯ ಜಾನಪದ ಕ್ರೀಡಾ ಸಂಸ್ಕೃತಿಯನ್ನು ಆಧುನಿಕ ಸ್ಪರ್ಧಾತ್ಮಕ ಕುಸ್ತಿಯೊಂದಿಗೆ ಸಮ್ಮಿಳನಗೊಳಿಸಿ ಹೊಸ ಪೀಳಿಗೆಯ ಆಟಗಾರರನ್ನು ಬೆಳೆಸಲು ಈ ಕಾರ್ಯಕಾರಿ ಸಮಿತಿ ಶ್ರಮಿಸಲಿದೆ. ಸುದ್ದಿಗೋಷ್ಠಿಯಲ್ಲಿ ಭಾರತೀಯ ಕುಸ್ತಿ ಫೆಡರೇಶನ್ ಹಾಗೂ ಕರ್ನಾಟಕ ರಾಜ್ಯ ಕುಸ್ತಿ ಸಂಘದ ಹಿರಿಯ ಪದಾಧಿಕಾರಿಗಳು, ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಹಾಗೂ ಕ್ರೀಡಾ ಕ್ಷೇತ್ರದ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ಬೆಂಗಳೂರಿನ ಈ ಸೆಮಿಕಂಡಕ್ಟರ್ ಕಂಪನಿಗೆ ಅಮೆರಿಕದ ವೆಕ್ಟರ್ ಲೈನ್ ಕ್ಯಾಪಿಟಲ್‌ನಿಂದ ₹630 ಕೋಟಿ ಬೃಹತ್ ಹೂಡಿಕೆ!
ಉತ್ತರ ಬೆಂಗಳೂರಿನಲ್ಲಿ ಪುರವಂಕರದ ₹2,500 ಕೋಟಿ ವಸತಿ ಯೋಜನೆ; ಸಾತನೂರಿನಲ್ಲಿ 12.76 ಎಕರೆ ಭೂಮಿಗೆ ಒಪ್ಪಂದ!