
ಬೆಂಗಳೂರು (ಜು.14): ಮೆಟ್ರೋ ಹಳಿಗಳ ಮೇಲೆ ಸಾರ್ವಜನಿಕರ ಅನಧಿಕೃತ ಪ್ರವೇಶ, ಆಕಸ್ಮಿಕ ಸರಣಿ ಅಪಘಾತಗಳು ಹಾಗೂ ಆತ್ಮಹ* ಪ್ರಕರಣಗಳಿಗೆ ಶಾಶ್ವತ ಬ್ರೇಕ್ ಹಾಕಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಬೃಹತ್ ಯೋಜನೆಗೆ ಮುಂದಾಗಿದೆ. ತನ್ನ ಸದ್ಯದ ಕಾರ್ಯಾಚರಣೆಯಲ್ಲಿರುವ ಹಾಗೂ ಮುಂಬರುವ ಜಾಲದ ಒಟ್ಟು 177 ನಿಲ್ದಾಣಗಳಲ್ಲಿ ಸುಮಾರು 1,274 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ಸ್‌ಗಳನ್ನು (PSD - ಸ್ವಯಂಚಾಲಿತ ಗೇಟ್‌ಗಳು) ಅಳವಡಿಸಲು ಪ್ರಸ್ತಾವನೆ ಸಲ್ಲಿಸಿದೆ.
ಮೆಟ್ರೋದ ಹಂತ-3ಎ (ಹೆಬ್ಬಾಳ-ಸರ್ಜಾಪುರ) ಯೋಜನೆಗಾಗಿ ಸಿದ್ಧಪಡಿಸಲಾಗಿರುವ ವಿಸ್ತೃತ ಯೋಜನಾ ವರದಿಯಲ್ಲಿ (DPR) ಈ ಮಹತ್ವದ ಪ್ರಸ್ತಾವನೆಯನ್ನು ಸೇರಿಸಲಾಗಿದೆ. ಇಡೀ ಜಾಲದ ಒಟ್ಟು 191 ನಿಲ್ದಾಣಗಳ ಪೈಕಿ 14 ನಿಲ್ದಾಣಗಳಲ್ಲಿ (ಪಿಂಕ್ ಲೈನ್‌ನ 12 ಭೂಗತ ನಿಲ್ದಾಣಗಳು ಮತ್ತು ಏರ್‌ಪೋರ್ಟ್ ಲೈನ್‌ನ 2 ನಿಲ್ದಾಣಗಳು) ಈಗಾಗಲೇ ಈ ವ್ಯವಸ್ಥೆಯನ್ನು ಅಳವಡಿಸಲು ಇಲಾಖೆ ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಂಡಿದೆ.
ಪ್ರಸ್ತುತ ಬೆಂಗಳೂರು ಮೆಟ್ರೋದಲ್ಲಿ ಪ್ರತಿನಿತ್ಯ ಸುಮಾರು 10 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದು, ದಟ್ಟಣೆ ಹೆಚ್ಚಾದಂತೆ ಹಳಿಗಳ ಬಳಿ ಸಂಭವಿಸುವ ಅವಘಡಗಳ ಸಂಖ್ಯೆಯೂ ಹೆಚ್ಚುತ್ತಿದೆ. ಡಿಪಿಆರ್ ವರದಿಯ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ಹಳಿಗಳ ಮೇಲೆ ಅನಧಿಕೃತವಾಗಿ ಇಳಿಯುವುದು, ಆಕಸ್ಮಿಕವಾಗಿ ಬೀಳುವುದು ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಗಣನೀಯವಾಗಿ ಏರಿಕೆ ಕಂಡಿವೆ.
2024 ರಲ್ಲಿ 8 ಬಾರಿ ಹಳಿಗಳ ಮೇಲೆ ಅನಧಿಕೃತ ಪ್ರವೇಶ, 7 ಆತ್ಮಹ*ತ್ಯೆ ಸಾವುಗಳು, 2 ಆತ್ಮಹ*ತ್ಯೆ ಯತ್ನಗಳು ಹಾಗೂ 2 ಆಕಸ್ಮಿಕವಾಗಿ ಬಿದ್ದ ಪ್ರಕರಣಗಳು ದಾಖಲಾಗಿವೆ. 2025 ರಲ್ಲಿ (ವರದಿ ಸಿದ್ಧವಾಗುವವರೆಗೆ) 5 ಬಾರಿ ಹಳಿಗಳ ಮೇಲೆ ಅನಧಿಕೃತ ಪ್ರವೇಶ, 5 ಆತ್ಮಹ*ತ್ಯೆ ಸಾವುಗಳು, 2 ಆತ್ಮಹ*ತ್ಯೆ ಯತ್ನಗಳು, 2 ಆಕಸ್ಮಿಕವಾಗಿ ಬಿದ್ದ ಪ್ರಕರಣಗಳು ಹಾಗೂ ವಿದ್ಯುತ್ ಸ್ಪರ್ಶದಿಂದ (Electrocution) ಒಬ್ಬರು ಮೃತಪಟ್ಟಿದ್ದಾರೆ.
ಮೆಟ್ರೋ ಕಾರ್ಯಾಚರಣೆಗಳ ಕುರಿತು ನಿರಂತರ ನಿಗಾ ಇಡುವ ‘ಬೆಂಗಳೂರು ಮೆಟ್ರೋ ಟ್ರ್ಯಾಕರ್’ ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ, "ಪ್ರಯಾಣಿಕರ ಸುರಕ್ಷತೆಗೆ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ಸ್‌ಗಳು ಅತ್ಯಗತ್ಯ. ಇತ್ತೀಚಿನ ಘಟನೆಗಳನ್ನು ಗಮನಿಸಿದರೆ ಇದನ್ನು ಆದಷ್ಟು ಬೇಗ ಅಳವಡಿಸಬೇಕು. ಭವಿಷ್ಯದ ಚಾಲಕರಹಿತ ಮೆಟ್ರೋ ಕಾರ್ಯಾಚರಣೆಗೂ ಇದು ಕಡ್ಡಾಯ" ಎಂದು ಅಭಿಪ್ರಾಯಪಟ್ಟಿದೆ.
ಮೆಟ್ರೋ ಹಳಿಗಳ ಪಕ್ಕದಲ್ಲೇ 750V DC ಸಾಮರ್ಥ್ಯದ ಲೈವ್ ಥರ್ಡ್ ರೇಲ್ (ವಿದ್ಯುತ್ ಲೈನ್) ಇರುವುದು, ರೈಲುಗಳ ನಡುವಿನ ಅತ್ಯಲ್ಪ ಕಾಲಾವಕಾಶ (Shorter Headways) ಮತ್ತು ಪ್ರಯಾಣಿಕರ ಅತಿಯಾದ ಜನದಟ್ಟಣೆಯಿಂದಾಗಿ ಹಳಿಗಳ ಬಳಿಯ ಸುರಕ್ಷತೆ ದೊಡ್ಡ ಸವಾಲಾಗಿದೆ. ಯಾರಾದರೂ ಹಳಿಗಳ ಮೇಲೆ ಬಿದ್ದಾಗ ಅಥವಾ ಇಳಿದಾಗ ರಕ್ಷಣಾ ಕಾರ್ಯಕ್ಕಾಗಿ ಎರಡೂ ಬದಿಯ ರೈಲು ಸಂಚಾರವನ್ನು ಸ್ಥಗಿತಗೊಳಿಸಬೇಕಾಗುತ್ತದೆ. ಇದರಿಂದ ಇಡೀ ಮೆಟ್ರೋ ಸೇವೆ ಸಂಪೂರ್ಣ ಅಸ್ತವ್ಯಸ್ತಗೊಳ್ಳುತ್ತದೆ ಎಂದು ಬಿಎಂಆರ್‌ಸಿಎಲ್ ಆತಂಕ ವ್ಯಕ್ತಪಡಿಸಿದೆ.
ಚಾಲಕರಹಿತ ಮೆಟ್ರೋ ಮತ್ತು ಆದಾಯ: ಭವಿಷ್ಯದಲ್ಲಿ ಬರಲಿರುವ 'GoA4' (ಚಾಲಕ ರಹಿತ ರೈಲು ಕಾರ್ಯಾಚರಣೆ) ಸೇವೆಗೆ ಇದು ದಾರಿಯಾಗಲಿದೆ. ಸಿಗ್ನಲಿಂಗ್ ವ್ಯವಸ್ಥೆಯೊಂದಿಗೆ ಇದು ನಿಖರವಾಗಿ ಹೊಂದಿಕೊಳ್ಳುವುದರಿಂದ ಸಮಯ ಪ್ರಜ್ಞೆ (Punctuality) ಸುಧಾರಿಸುತ್ತದೆ. ಇದಲ್ಲದೆ, ಈ ಸ್ಕ್ರೀನ್ ಡೋರ್‌ಗಳ ಮೇಲೆ ಡಿಜಿಟಲ್ ಜಾಹೀರಾತುಗಳನ್ನು ಪ್ರದರ್ಶಿಸುವ ಮೂಲಕ ಮೆಟ್ರೋ ಸಂಸ್ಥೆ ಹೆಚ್ಚುವರಿ ಟಿಕೆಟೇತರ ಆದಾಯವನ್ನೂ ಗಳಿಸಬಹುದಾಗಿದೆ.
ಈ ಯೋಜನೆಯು ಮೆಟ್ರೋದ ಹಂತ-1, ಹಂತ-2, ಹಂತ-2ಎ, ಹಂತ-2ಬಿ, ಹಂತ-3 ಮತ್ತು ಹಂತ-3ಎ ಸೇರಿದಂತೆ ಇಡೀ ಮೆಟ್ರೋ ಜಾಲವನ್ನು ಒಳಗೊಳ್ಳಲಿದೆ. ಎಲಿವೇಟೆಡ್ (ಮೇಲ್ಸೇತುವೆ) ನಿಲ್ದಾಣಗಳಲ್ಲಿ ಅರ್ಧ ಎತ್ತರದ (Half-Height) ಗೇಟ್‌ಗಳನ್ನು ಹಾಗೂ ಭೂಗತ ನಿಲ್ದಾಣಗಳಲ್ಲಿ ಪೂರ್ಣ ಎತ್ತರದ (Full-Height) ಗೇಟ್‌ಗಳನ್ನು ಅಳವಡಿಸಲು ಯೋಜಿಸಲಾಗಿದೆ.
ಒಟ್ಟು ₹1,274 ಕೋಟಿ ವೆಚ್ಚದ ಅಂದಾಜಿನಲ್ಲಿ ₹747 ಕೋಟಿ ಉಪಕರಣಗಳ ಖರೀದಿಗಾಗಿ, ₹317 ಕೋಟಿ ಸಿವಿಲ್ ಕಾಮಗಾರಿಗಳಿಗಾಗಿ ಹಾಗೂ ₹210 ಕೋಟಿ ಸಿಗ್ನಲಿಂಗ್, ಟೆಲಿಕಾಂ ಮತ್ತು ಎಲೆಕ್ಟ್ರಿಕಲ್ ಬದಲಾವಣೆಗಳಿಗಾಗಿ ವ್ಯಯಿಸಲಾಗುವುದು. ಆದರೆ, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ನಿಲ್ದಾಣಗಳಲ್ಲಿ ಇದನ್ನು ಅಳವಡಿಸುವುದು ಅತ್ಯಂತ ಸಂಕೀರ್ಣ ಕೆಲಸವಾಗಿದೆ. ಏಕೆಂದರೆ ರಾತ್ರಿಯ ವೇಳೆಯ ಅತ್ಯಲ್ಪ ಸಮಯದಲ್ಲಿ ಮಾತ್ರ ಕೆಲಸ ಮಾಡಲು ಸಾಧ್ಯವಿದ್ದು, ಪ್ಲಾಟ್‌ಫಾರ್ಮ್ ಮಾರ್ಪಾಡು ಮತ್ತು ತೀವ್ರ ತಾಂತ್ರಿಕ ಪರೀಕ್ಷೆಗಳ ಅಗತ್ಯವಿರುತ್ತದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.
ಈ ಯೋಜನೆಯು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಸ್ವದೇಶಿ ಖರೀದಿ ಮಾರ್ಗಸೂಚಿಗಳಿಗೆ ಅನುಗುಣವಾಗಿದ್ದು, ಬಿಎಂಆರ್‌ಸಿಎಲ್ ಈಗಾಗಲೇ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಸಂಸ್ಥೆಯೊಂದಿಗೆ ತಾಂತ್ರಿಕ ಮತ್ತು ವಾಣಿಜ್ಯ ಸಮಾಲೋಚನೆಗಳನ್ನು ನಡೆಸಿದೆ. ಈ ಯೋಜನೆ ಅನುಷ್ಠಾನಗೊಂಡರೆ ಬೆಂಗಳೂರು ಮೆಟ್ರೋ ಸಂಪೂರ್ಣ ಸುರಕ್ಷಿತ ಹಾಗೂ ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆಯತ್ತ ಹೆಜ್ಜೆ ಇಡಲಿದೆ.