
ಬೆಂಗಳೂರು (ನ.11) ಮದುವೆ ಕಾರ್ಯಕ್ರಮದಲ್ಲಿ ಕುಟುಂಬಸ್ಥರ ಸಂಭ್ರಮಕ್ಕೆ ಮಿತಿ ಇರುವುದಿಲ್ಲ. ಪ್ರತಿ ಘಳಿಗೆಯನ್ನು ಸ್ಮರಣೀಯ ಮಾಡಲು ಎಲ್ಲಾ ಕಸರತ್ತು ಮಾಡುತ್ತಾರೆ. ಇತ್ತೀಚೆಗೆ ಶ್ರೀಮಂತ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರ ಸೋದರಳಿಯನ ಮದುವೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಆಯೋಜನೆಗೊಂಡಿತ್ತು. ಶ್ರೀಮಂತ ಉದ್ಯಮಿಗಳು, ಆಪ್ತರು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ವಿಶೇಷ ಅಂದರೆ ಈ ಮದುವೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಒಡತಿಯರಾದ ಇನ್ಫೋಸಿಸ್ ಸುಧಾಮೂರ್ತಿ, ಸ್ವತಃ ಕಿರಣ್ ಮುಜುಂದಾರ್ ಶಾ ಸೇರಿದಂತೆ ಆಪ್ತರ ಬಳಿಕ ಡೋಲು ಹೊಡೆತಕ್ಕೆ ಭರ್ಜರಿ ಸ್ಪೆಪ್ಸ್ ಹಾಕಿ ಗಮನಸೆಳೆದಿದ್ದಾರೆ.
ಉದ್ಯಮಿ ಕಿರಣ್ ಮಜುಂದಾರ್ ಶಾ ಅವರ ಸೋದರಳಿಯ ಎರಿಕ್ ಮಜುಂದಾರ್ ಶಾ ಮದುವೆ ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೊಟೆಲ್‌ನಲ್ಲಿ ನಡೆದಿತ್ತು. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಮದುವೆಯಲ್ಲಿ ಪಾಲ್ಗೊಂಡಿದ್ದರು. ಈ ಮದುವೆ ಕಾರ್ಯಕ್ರಮದಲ್ಲಿ ಇನ್ಪೋಸಿಸ್ ಫೌಂಡೇಷನ್ ಅಧ್ಯಕ್ಷೆ, ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಕೂಡ ಪಾಲ್ಗೊಂಡಿದ್ದಾರೆ. ಮದುೆ ಕಾರ್ಯಕ್ರಮದಲ್ಲಿ ಪಂಜಾಬಿ ಡೋಲ್ ನಾದಕ್ಕೆ ಸುಧಾ ಮೂರ್ತಿ ಹಾಗೂ ಕಿರಣ್ ಮಜುಂದಾರ್ ಶಾ ಡ್ಯಾನ್ಸ್ ಮಾಡಿದ್ದಾರೆ. ಆಪ್ತರ ಜೊತೆ ಹೆಜ್ಜೆ ಹಾಕಿ ಗಮನಸೆಳೆದಿದ್ದಾರೆ.
ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೊಟೆಲ್‌ನಲ್ಲಿ ನಡೆದ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಸುಧಾಮೂರ್ತಿ, ಕಿರಣ್ ಮಜುಂದಾರ್ ಶಾ ಸೇರಿದಂತೆ ಹಲವು ಆಪ್ತರು ಡ್ಯಾನ್ಸ್ ಮಾಡಿದ್ದಾರೆ. ಇದೀಗ ಸುಧಾಮೂರ್ತಿ, ಕಿರಣ್ ಮಜುಂದಾರ್ ಶಾ ಡ್ಯಾನ್ಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಸುಧಾ ಮೂರ್ತಿ, ನಾರಾಯಣ ಮೂರ್ತಿ ಒಟ್ಟು ಆಸ್ತಿ ಬರೋಬ್ಬರಿ 36,000 ಕೋಟಿ ರೂಪಾಯಿ. ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸುಧಾ ಮೂರ್ತಿ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅತ್ಯಂತ ಸರಳ ವ್ಯಕ್ತಿತ್ವದ ಸುಧಾ ಮೂರ್ತಿ ಜನಪ್ರಿಯ ಲೇಖಕಿ. ಅತೀ ಶ್ರೀಮಂತ ವ್ಯಕ್ತಿಯಾಗಿರುವ ಸುಧಾ ಮೂರ್ತಿ ಸರಳ ಜೀವನ ನಡೆಸುತ್ತಾರೆ. ಸಂತೆಯಲ್ಲಿ ತರಕಾರಿ ಖರೀದಿಸುವುದು ಸೇರಿದಂತೆ ಜನಸಾಮಾನ್ಯರ ಬದುಕಿಗೂ ಸುಧಾ ಮೂರ್ತಿ ಜೀವನಕ್ಕೆ ಭಾರಿ ವ್ಯತ್ಯಸಗಳಿಲ್ಲ. ರಾಜ್ಯಸಭಾ ಸಂಸದೆಯಾಗಿರುವ ಸುಧಾ ಮೂರ್ತಿ ಮಹಿಳೆಯರ ಆರೋಗ್ಯ, ಸುರಕ್ಷತೆಗಳ ಕುರಿತು ಸದನದಲ್ಲಿ ಧನಿ ಎತ್ತಿದ್ದಾರೆ.