
ಬೆಂಗಳೂರು: ಆಕಸ್ಮಿಕವಾಗಿ ಕತ್ತು ಹಿಸುಕಿಕೊಳ್ಳುವುದು, ಕುತ್ತಿಗೆಗೆ ತೀವ್ರ ಗಾಯವಾಗುವುದು ಅಥವಾ ಉಸಿರುಗಟ್ಟುವಿಕೆ. ಇಂತಹ ಘಟನೆಗಳು ಮಕ್ಕಳ ಜೀವಕ್ಕೆ ಅಪಾಯ ತಂದೊಡ್ಡಬಹುದು. ಇನ್ನು ಕೆಲವು ನವಜಾತ ಶಿಶುಗಳು ತೀವ್ರ ಸೋಂಕು, ಅಕಾಲಿಕ ಜನನ ಅಥವಾ ಜನ್ಮಜಾತ ಸಮಸ್ಯೆಗಳಿಂದಾಗಿ ಉಸಿರಾಡಲು ಮತ್ತು ಆಹಾರ ನುಂಗಲು ತೊಂದರೆ ಅನುಭವಿಸುತ್ತವೆ. ಇಂತಹ ಸಂದರ್ಭಗಳಲ್ಲಿ ಸಕಾಲಿಕ ಹಾಗೂ ವಿಶೇಷ ವೈದ್ಯಕೀಯ ಚಿಕಿತ್ಸೆ ಅತ್ಯಂತ ಮಹತ್ವದ್ದಾಗಿದೆ.
ಕಳೆದ 26 ವರ್ಷಗಳಿಂದ ಮಣಿಪಾಲ್ ಆಸ್ಪತ್ರೆಯ ಓಲ್ಡ್ ಏರ್ಪೋರ್ಟ್ ರಸ್ತೆಯ ಮಕ್ಕಳ ವಾಯುಮಾರ್ಗ ಮತ್ತು ನುಂಗುವಿಕೆ ಕೇಂದ್ರ (CASC), ಸಂಕೀರ್ಣ ಆರೋಗ್ಯ ಸಮಸ್ಯೆ ಹೊಂದಿರುವ ನವಜಾತ ಶಿಶುಗಳು ಮತ್ತು ಮಕ್ಕಳಿಗೆ ವಿಶೇಷ ವೈದ್ಯಕೀಯ ಆರೈಕೆ ಒದಗಿಸುತ್ತಿದೆ. ಕಿವಿ, ಮೂಗು ಮತ್ತು ಗಂಟಲು ತಜ್ಞ ಹಾಗೂ ಕೇಂದ್ರದ ಪ್ರಮುಖ ಸಲಹೆಗಾರರಾದ ಡಾ. ಇ.ವಿ. ರಾಮನ್ ಅವರ ನೇತೃತ್ವದಲ್ಲಿ ಈ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಭಾರತದಲ್ಲೇ ಈ ರೀತಿಯ ಸಮಗ್ರ ಬಹುವಿಭಾಗೀಯ ಆರೈಕೆ ಒದಗಿಸುವ ವಿಶಿಷ್ಟ ಕೇಂದ್ರ ಇದಾಗಿದೆ.
ಅಕಾಲಿಕವಾಗಿ ಜನಿಸಿದ ಮತ್ತು ಕಡಿಮೆ ತೂಕ ಹೊಂದಿರುವ ಶಿಶುಗಳಲ್ಲಿ ಉಸಿರಾಟದ ಮಾರ್ಗದ ಜನ್ಮಜಾತ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ತೀವ್ರ ನಿಗಾ ಘಟಕದಲ್ಲಿ ದೀರ್ಘಕಾಲ ವೆಂಟಿಲೇಟರ್ ನೆರವು ಪಡೆದ ಕೆಲವು ಮಕ್ಕಳಲ್ಲಿಯೂ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
ಇಂತಹ ಸಂಕೀರ್ಣ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ವಿವಿಧ ವೈದ್ಯಕೀಯ ವಿಭಾಗಗಳ ತಜ್ಞರು ಒಟ್ಟಾಗಿ ಕಾರ್ಯನಿರ್ವಹಿಸುತ್ತಾರೆ. ಮಕ್ಕಳ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಔಷಧೋಪಚಾರ, ವಿಶೇಷ ಚಿಕಿತ್ಸೆ ಹಾಗೂ ಅಗತ್ಯವಿದ್ದಲ್ಲಿ ಹಂತ ಹಂತವಾಗಿ ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತದೆ.
ಕಳೆದ ಎರಡು ದಶಕಗಳಲ್ಲಿ ಭಾರತ ಮತ್ತು ನೆರೆಯ ದೇಶಗಳ 3,000ಕ್ಕೂ ಹೆಚ್ಚು ಮಕ್ಕಳು ಈ ಕೇಂದ್ರದ ಮೂಲಕ ಚಿಕಿತ್ಸೆ ಪಡೆದಿದ್ದಾರೆ. ಇವರಲ್ಲಿ ಹಲವರಿಗೆ ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗಿದೆ. ವಿಶೇಷ ವೈದ್ಯಕೀಯ ಪರಿಣತಿ ಮತ್ತು ವಿವಿಧ ವಿಭಾಗಗಳ ಸಮನ್ವಯದ ಮೂಲಕ ಮಕ್ಕಳು ಸಹಜವಾಗಿ ಉಸಿರಾಡಲು, ಆಹಾರ ನುಂಗಲು ಮತ್ತು ಉತ್ತಮ ಜೀವನ ನಡೆಸಲು ಕೇಂದ್ರ ನೆರವಾಗಿದೆ.
ಆಸ್ಪತ್ರೆಯಲ್ಲಿನ ಚಿಕಿತ್ಸೆಯಷ್ಟೇ ಅಲ್ಲದೆ, ಮಕ್ಕಳು ಮನೆಗೆ ಮರಳಿದ ನಂತರವೂ ಅವರಿಗೆ ಅಗತ್ಯ ನೆರವು ದೊರೆಯಬೇಕು ಎಂಬ ಉದ್ದೇಶದಿಂದ CASC ವತಿಯಿಂದ ನವೆಂಬರ್ 14ರ ಮಕ್ಕಳ ದಿನಾಚರಣೆಯಂದು ‘ಲಾಸ್ಟ್ ಮೈಲ್ ಕೇರ್’ ಸೇವೆಯನ್ನು ಆರಂಭಿಸಲಾಗಿದೆ.
ಈ ಸೇವೆಯಡಿ ತುರ್ತು ಸಂದರ್ಭಗಳಲ್ಲಿ ನೆರವು ಪಡೆಯಲು ವಿಶೇಷ ಸಹಾಯವಾಣಿ, ವಿಡಿಯೋ ಸಮಾಲೋಚನೆ, ಅಗತ್ಯ ವೈದ್ಯಕೀಯ ಉಪಕರಣಗಳು ಮತ್ತು ತರಬೇತಿ ಪಡೆದ ಸಿಬ್ಬಂದಿ ಹೊಂದಿರುವ ಆಂಬ್ಯುಲೆನ್ಸ್ ಸೇವೆ ಒದಗಿಸಲಾಗುತ್ತದೆ.
ಜತೆಗೆ, ಟ್ಯೂಬ್ಗಳ ಆರೈಕೆ ಮತ್ತು ಉಸಿರಾಟದ ಮಾರ್ಗದಲ್ಲಿ ಅಡಚಣೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುವ ಕುರಿತು ಪೋಷಕರಿಗೆ ಮಾರ್ಗದರ್ಶನ ನೀಡಲು QR ಕೋಡ್ ಮೂಲಕ ವೀಕ್ಷಿಸಬಹುದಾದ ಮಾಹಿತಿ ವೀಡಿಯೊಗಳನ್ನು ಒದಗಿಸಲಾಗುತ್ತದೆ.
ವಿಶೇಷ ವೈದ್ಯಕೀಯ ಚಿಕಿತ್ಸೆ ಮತ್ತು ಆಸ್ಪತ್ರೆಯಿಂದ ಮನೆಗೆ ಮರಳಿದ ನಂತರವೂ ನಿರಂತರ ಬೆಂಬಲ ನೀಡುವ ಮೂಲಕ, ಸಂಕೀರ್ಣ ಉಸಿರಾಟ ಮತ್ತು ನುಂಗುವಿಕೆಯ ಸಮಸ್ಯೆ ಹೊಂದಿರುವ ಮಕ್ಕಳ ಆರೋಗ್ಯ ಹಾಗೂ ಜೀವನದ ಗುಣಮಟ್ಟ ಸುಧಾರಿಸುವುದು CASCಯ ಉದ್ದೇಶವಾಗಿದೆ.