
ಬೆಂಗಳೂರಿನ ಗದ್ದಲದ ಜೀವನದಿಂದ ಸ್ವಲ್ಪ ದೂರ ಸರಿದು, ಕನಕಪುರ ಮುಖ್ಯರಸ್ತೆಯ ಹಾರೋಹಳ್ಳಿ ಸಮೀಪದ ಕೆಬ್ಬೆದೊಡ್ಡಿಗೆ ಹೋದರೆ ಹಸಿರು ಕಣಿವೆ ಮತ್ತು ಕಲ್ಲುಬಂಡೆಗಳ ನಡುವೆ ಒಂದು ಅದ್ಭುತ ಲೋಕವೇ ತೆರೆದುಕೊಳ್ಳುತ್ತದೆ. ಅದುವೇ 'ಪಿರಮಿಡ್ ವ್ಯಾಲಿ ಇಂಟರ್‌ನ್ಯಾಷನಲ್'. ಇಲ್ಲಿನ ಪ್ರಮುಖ ಆಕರ್ಷಣೆಯಾದ ಮೈತ್ರೇಯ-ಬುದ್ಧ ಪಿರಮಿಡ್, ಇಡೀ ವಿಶ್ವದಲ್ಲೇ ಅತಿದೊಡ್ಡ ಧ್ಯಾನ ಪಿರಮಿಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
2005ರಲ್ಲಿ ನಿರ್ಮಾಣವಾದ ಈ ಬೃಹತ್ ಪಿರಮಿಡ್, ಕಾಂಕ್ರೀಟ್ ಮತ್ತು ಉಕ್ಕಿನ ಚೌಕಟ್ಟಿನಿಂದ ರೂಪುಗೊಂಡಿದೆ. ಈಜಿಪ್ಟ್‌ನ ಗಿಜಾದಲ್ಲಿರುವ ವಿಶ್ವವಿಖ್ಯಾತ ಪಿರಮಿಡ್‌ನ ವಿನ್ಯಾಸದಿಂದ ಪ್ರೇರಿತವಾಗಿ ಇದನ್ನು ನಿರ್ಮಿಸಲಾಗಿದೆ. ಸುಮಾರು 102 ಅಡಿ ಎತ್ತರ ಮತ್ತು 160x160 ಅಡಿ ವಿಸ್ತಾರವಾದ ತಳಹದಿಯನ್ನು ಹೊಂದಿರುವ ಈ ಪಿರಮಿಡ್‌ನ ಒಳಗೆ ಏಕಕಾಲದಲ್ಲಿ 5,000 ಜನರು ಕುಳಿತು ಧ್ಯಾನ ಮಾಡಬಹುದು.
ಪಂಚಭೂತಗಳ ಸಂಕೇತ: ಉಕ್ಕಿನ ಚೌಕಟ್ಟಿನ ಹೊರಭಾಗವನ್ನು 40,000 ಸಿಮೆಂಟ್ ಟೈಲ್ಸ್‌ಗಳಿಂದ ಅಲಂಕರಿಸಲಾಗಿದೆ. ಇದರ ನಾಲ್ಕು ದಿಕ್ಕುಗಳಲ್ಲಿ ಪ್ರಕೃತಿಯ ಅಂಶಗಳನ್ನು ಬಿಂಬಿಸುವ ಸುಂದರ ಭಿತ್ತಿಚಿತ್ರಗಳಿವೆ. ಉತ್ತರಕ್ಕೆ ಗಾಳಿ, ದಕ್ಷಿಣಕ್ಕೆ ಬೆಂಕಿ, ಪಶ್ಚಿಮಕ್ಕೆ ಭೂಮಿ ಮತ್ತು ಪೂರ್ವಕ್ಕೆ ನೀರನ್ನು ಚಿತ್ರಿಸಲಾಗಿದೆ. ಪಿರಮಿಡ್‌ನ ಒಳಗಿರುವ ವಿಶಾಲವಾದ ಆವರಣವು ಐದನೇ ಅಂಶವಾದ ಆಕಾಶವನ್ನು ಪ್ರತಿನಿಧಿಸುತ್ತದೆ. ಈ ಪಿರಮಿಡ್ ಅನ್ನು ನಿಖರವಾದ ಉತ್ತರ-ದಕ್ಷಿಣ ದಿಕ್ಕಿಗೆ ಅನುಗುಣವಾಗಿ, ಎಲ್ಲಾ ಬದಿಗಳಲ್ಲೂ 51° 51' (ಗೋಲ್ಡನ್ ಆಂಗಲ್) ರೇಖಾಗಣಿತ ಕೋನದಲ್ಲಿ ನಿರ್ಮಿಸಲಾಗಿದೆ.
ಪಿರಮಿಡ್‌ನ ಒಳಭಾಗದಲ್ಲಿ 27 ಮೆಟ್ಟಿಲುಗಳನ್ನು ಹತ್ತಿ ಹೋದರೆ ಮಧ್ಯಭಾಗ ಸಿಗುತ್ತದೆ. ನೆಲಮಟ್ಟದ ಕಿಟಕಿಗಳಿಂದ ತೂರಿಬರುವ ಮಂದ ಬೆಳಕು ಇಲ್ಲಿನ ಪ್ರಶಾಂತತೆಗೆ ಮೆರುಗು ನೀಡುತ್ತದೆ.
ಪಿರಮಿಡ್‌ನ ನೆಲದಿಂದ ಸುಮಾರು 34 ಅಡಿ ಎತ್ತರದಲ್ಲಿ 'ಕಿಂಗ್ಸ್ ಚೇಂಬರ್' (ಶಕ್ತಿಯ ಕೇಂದ್ರ) ಎಂಬ ಸುರುಳಿಯಾಕಾರದ ವಿಶೇಷ ಸ್ಥಳವಿದೆ. ಇದು ಪಿರಮಿಡ್‌ನ ಅತ್ಯಂತ ಶಕ್ತಿಯುತ ಭಾಗವಾಗಿದ್ದು, ಇಲ್ಲಿ ಏಕಕಾಲದಲ್ಲಿ 40 ಜನರು ಕುಳಿತು ಆಳವಾದ ಧ್ಯಾನದಲ್ಲಿ ತೊಡಗಬಹುದು. ಇಲ್ಲಿನ ಕಾಸ್ಮಿಕ್ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲು ಧ್ಯಾನ ಮಂಟಪದ ಒಳಗೆ 640ಕ್ಕೂ ಹೆಚ್ಚು ನೈಸರ್ಗಿಕ ಹಿಮಾಲಯನ್ ಸ್ಫಟಿಕಗಳನ್ನು ಅಳವಡಿಸಲಾಗಿದೆ. ಪಿರಮಿಡ್‌ನ ತಳಭಾಗದಲ್ಲಿರುವ ಸಭಾಂಗಣದಲ್ಲಿ ಗೌತಮ ಬುದ್ಧನ ಜೀವನ ಮತ್ತು ಬೌದ್ಧಧರ್ಮಕ್ಕೆ ಸಂಬಂಧಿಸಿದ ಸುಂದರ ಕಲಾಕೃತಿಗಳನ್ನು ಕಾಣಬಹುದು.
ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್ (PSSM) ಅಡಿಯಲ್ಲಿ ಕಾರ್ಯನಿರ್ವಹಿಸುವ 'ಪಿರಮಿಡ್ ಸ್ಪಿರಿಚ್ಯುವಲ್ ಟ್ರಸ್ಟ್' ಈ ಕೇಂದ್ರವನ್ನು ಮುನ್ನಡೆಸುತ್ತಿದೆ. ಯಾವುದೇ ಧರ್ಮ ಅಥವಾ ಪಂಥಕ್ಕೆ ಸೀಮಿತವಾಗದ ಈ ಸಂಸ್ಥೆಯು ಆನಾಪನಸತಿ ಧ್ಯಾನ (ಉಸಿರಾಟದ ಮೇಲಿನ ಗಮನ) ಮತ್ತು ಸಸ್ಯಾಹಾರದ ಮಹತ್ವವನ್ನು ಜಗತ್ತಿಗೆ ಸಾರುತ್ತಿದೆ.
ಸಾಮಾನ್ಯ ಸ್ಥಳಗಳಲ್ಲಿ ಮಾಡುವ ಧ್ಯಾನಕ್ಕಿಂತ ಪಿರಮಿಡ್ ಒಳಗೆ ಮಾಡುವ ಧ್ಯಾನವು ಮೂರು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿರುತ್ತದೆ ಎಂದು ಇಲ್ಲಿನ ನಿರ್ದೇಶಕರಾದ ಪಿ.ಎಸ್.ಆರ್.ಕೆ. ಪ್ರಸಾದ್ ಅವರು ವಿವರಿಸುತ್ತಾರೆ. ಪಿರಮಿಡ್‌ನ ವಿಶಿಷ್ಟ ಜ್ಯಾಮಿತೀಯ ರಚನೆಯು ವಿಶ್ವದ ಕಾಸ್ಮಿಕ್ ಶಕ್ತಿಯನ್ನು ತನ್ನಲ್ಲಿ ಸಂಗ್ರಹಿಸಿಕೊಂಡು ಧ್ಯಾನಸ್ಥರಿಗೆ ನೀಡುತ್ತದೆ. ಇದರಿಂದ ದೈಹಿಕ ಒತ್ತಡ, ಮಾನಸಿಕ ಆತಂಕಗಳು ದೂರವಾಗಿ ಮನಸ್ಸು ನಿರಾಳವಾಗುತ್ತದೆ.
ಸದ್ಯಕ್ಕೆ ಮೈತ್ರೇಯ-ಬುದ್ಧ ಪಿರಮಿಡ್ ದಿನದ 18 ಗಂಟೆಗಳ ಕಾಲ (ರಾತ್ರಿ 6 ಗಂಟೆಗಳ ವಿರಾಮ ಹೊರತುಪಡಿಸಿ) ಸಾರ್ವಜನಿಕರಿಗೆ ತೆರೆದಿರುತ್ತದೆ. ಜಾತಿ, ಮತ, ಭೇದವಿಲ್ಲದೆ ಪ್ರತಿಯೊಬ್ಬರೂ ಇಲ್ಲಿಗೆ ಬಂದು ಉಚಿತವಾಗಿ ಧ್ಯಾನ ಮಾಡಬಹುದು. ಅಷ್ಟೇ ಅಲ್ಲದೆ, ಟ್ರಸ್ಟ್ ವತಿಯಿಂದ ಕಾಲಕಾಲಕ್ಕೆ ಉಚಿತ ಧ್ಯಾನ ಶಿಬಿರಗಳು ಹಾಗೂ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ. ಪ್ರತಿ ವರ್ಷ ಇಲ್ಲಿ ನಡೆಯುವ 'ಜಾಗತಿಕ ಆಧ್ಯಾತ್ಮಿಕ ವಿಜ್ಞಾನಿಗಳ ಸಮ್ಮೇಳನ'ದಲ್ಲಿ ದೇಶ-ವಿದೇಶಗಳ ಅನೇಕ ಆಧ್ಯಾತ್ಮಿಕ ಗುರುಗಳು ಮತ್ತು ಸಾಧಕರು ಭಾಗವಹಿಸುತ್ತಾರೆ. ಮಾನಸಿಕ ನೆಮ್ಮದಿ, ಆತ್ಮಸಾಕ್ಷಾತ್ಕಾರ ಮತ್ತು ಪ್ರಕೃತಿಯ ಮಡಿಲಲ್ಲಿ ಶಾಂತಿಯನ್ನು ಹುಡುಕುವವರಿಗೆ ಬೆಂಗಳೂರಿನ ಈ ಮೈತ್ರೇಯ-ಬುದ್ಧ ಪಿರಮಿಡ್ ಒಂದು ಅತ್ಯುತ್ತಮ ತಾಣವಾಗಿದೆ.