
ಬೆಂಗಳೂರಿನ ಕೋರಮಂಗಲದಲ್ಲಿರುವ ಸಬ್ಕೊ ದಿ ಕ್ರಾಫ್ಟರಿ ಕಾಫಿ ಔಟ್‌ಲೆಟ್‌ನಲ್ಲಿ ಗ್ರಾಹಕರೊಬ್ಬರಿಗೆ ಎದುರಾದ ಅನುಭವ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಗ್ರಾಹಕರ ಹೆಸರಿನ ಬದಲು ಅವರ ದೇಹದ ಆಕಾರ ಮತ್ತು ಧರಿಸಿದ್ದ ಬಟ್ಟೆಯನ್ನು ಆಧರಿಸಿ “Little Fat Black Shirt” ಎಂದು ಬಿಲ್‌ನಲ್ಲಿ ನಮೂದಿಸಿರುವ ಆರೋಪ ಕೇಳಿಬಂದಿದೆ. ಈ ಘಟನೆಯ ಬಗ್ಗೆ ಗ್ರಾಹಕರು ರೆಡ್ಡಿಟ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಸಬ್ಕೊ ಕಾಫಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಹಕರ ಪ್ರಕಾರ, ಅವರು ಕೋರಮಂಗಲದ ಸಬ್ಕೊ ದಿ ಕ್ರಾಫ್ಟರಿಗೆ ತೆರಳಿ ಆಹಾರ ಆರ್ಡರ್ ಮಾಡಿ ಬಿಲ್ ಪಾವತಿಸಿದ್ದರು. ನಂತರ ರಶೀದಿಯನ್ನು ಪರಿಶೀಲಿಸಿದಾಗ, ‘Customer Details’ ವಿಭಾಗದಲ್ಲಿ ತಮ್ಮ ಹೆಸರಿನ ಬದಲು Little Fat Black Shirt ಎಂದು ನಮೂದಿಸಿರುವುದನ್ನು ಗಮನಿಸಿದ್ದಾರೆ. ಸಬ್ಕೊ ನನ್ನ ಹೆಸರನ್ನು ಬಳಸಲಿಲ್ಲ. ನನ್ನನ್ನು ವಿವರಿಸಲು ನನ್ನ ದೇಹವನ್ನು ಬಳಸಿದರು ಎಂಬ ಅರ್ಥದಲ್ಲಿ ಅವರು ತಮ್ಮ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಅವರು, ನನ್ನ ಹೆಸರಲ್ಲ. 12ನೇ ಟೇಬಲ್‌ನಲ್ಲಿರುವ ವ್ಯಕ್ತಿ ಎಂದೂ ಅಲ್ಲ. ಸರಳ ಆರ್ಡರ್ ಸಂಖ್ಯೆಯೂ ಅಲ್ಲ. ಬದಲಾಗಿ ನನ್ನ ದೇಹವನ್ನು ಆಧರಿಸಿ ಗುರುತಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ಇದು ಕೇವಲ ಹಾಸ್ಯವಲ್ಲ. ಯಾರೋ ಒಬ್ಬರು ಗ್ರಾಹಕರನ್ನು ನೋಡಿ, ಅವರನ್ನು ‘ದಪ್ಪ’ ಎಂದು ಗುರುತಿಸಿ ಆ ಪದವನ್ನು ವ್ಯವಸ್ಥೆಯಲ್ಲಿ ದಾಖಲಿಸಬೇಕಾಗಿತ್ತು ಎಂಬುದು ಅವರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಗ್ರಾಹಕರು, ಬಾಡಿ ಶೇಮಿಂಗ್ ಅನ್ನು ಪುರುಷ ಅಥವಾ ಮಹಿಳೆ ಎಂಬ ಆಧಾರದ ಮೇಲೆ ವಿಭಿನ್ನವಾಗಿ ನೋಡಬಾರದು ಎಂದು ಹೇಳಿದ್ದಾರೆ. ಮಹಿಳೆಯೊಬ್ಬರ ದೇಹವನ್ನು ಇದೇ ರೀತಿ ರಶೀದಿಯಲ್ಲಿ ವಿವರಿಸಿದ್ದರೆ ಅದನ್ನು ಯಾರೂ ಸುಲಭವಾಗಿ “ತಮಾಷೆ” ಎಂದು ಪರಿಗಣಿಸುತ್ತಿರಲಿಲ್ಲ. ಅದೇ ರೀತಿ ಪುರುಷನಾಗಿದ್ದರೂ ದೇಹದ ಆಧಾರದ ಮೇಲೆ ಅವಮಾನಿಸುವುದು ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದ್ದಾರೆ. ನಂತರ ನೀಡಿದ ಕಾಮೆಂಟ್‌ನಲ್ಲಿ ತಮ್ಮ ನೋಟದ ಬಗ್ಗೆಯೂ ಸ್ಪಷ್ಟನೆ ನೀಡಿದ ಅವರು, ತಾವು 6 ಅಡಿ ಎತ್ತರವಿದ್ದು ದೊಡ್ಡ ದೇಹ ಹೊಂದಿದ್ದರೂ ತಾವು ದಪ್ಪರಾಗಿಲ್ಲ ಎಂದು ಹೇಳಿದ್ದಾರೆ. ಮೊದಲ ಬಾರಿ ಆ ಪದಗಳನ್ನು ಗಮನಿಸಿದಾಗ ಇದೊಂದು ತಮಾಷೆಯೇ ಎಂದು ಪ್ರಶ್ನಿಸಿದ್ದಾಗಿ, ಆದರೆ ಅದೇ ಬಿಲ್‌ನೊಂದಿಗೆ ಮತ್ತೆ ಸಿಬ್ಬಂದಿ ಬಂದಾಗ ತಮಗೆ ಆಘಾತ ಮತ್ತು ಕೋಪ ಉಂಟಾಯಿತು ಎಂದು ತಿಳಿಸಿದ್ದಾರೆ.
ರೆಡ್ಡಿಟ್‌ನಲ್ಲಿ ಪೋಸ್ಟ್ ವೈರಲ್ ಆದ ಬಳಿಕ ವಿಷಯ ಸಬ್ಕೊ ಕಾಫಿಯ ಗಮನಕ್ಕೂ ಬಂದಿದೆ. ಸಂಸ್ಥೆ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಾರ್ವಜನಿಕ ಹೇಳಿಕೆ ಬಿಡುಗಡೆ ಮಾಡಿ ಕ್ಷಮೆಯಾಚಿಸಿದೆ. ಗ್ರಾಹಕರ ಹೆಸರಿನ ಬದಲು ಅವರ ದೇಹದ ಆಕಾರವನ್ನು ಆಧರಿಸಿ ಗುರುತಿಸಿರುವುದು ತಪ್ಪು ಎಂದು ಸಂಸ್ಥೆ ಸ್ಪಷ್ಟವಾಗಿ ಒಪ್ಪಿಕೊಂಡಿದೆ. ಕೊಬ್ಬನ್ನು ಅವಮಾನಿಸುವುದು ತಪ್ಪು. ಪ್ರತಿಯೊಂದು ರೂಪದಲ್ಲೂ, ಪ್ರತಿಯೊಂದು ಸಂದರ್ಭದಲ್ಲೂ ತಪ್ಪು. ಯಾವುದೇ ವಿನಾಯಿತಿ ಇಲ್ಲ. ಇದು ಕ್ರೂರವಾಗಿತ್ತು ಮತ್ತು ನಮ್ಮ ಸಂಸ್ಥೆಯಲ್ಲೇ ಇದು ನಡೆದಿದೆ” ಎಂಬ ಅರ್ಥದಲ್ಲಿ ಸಬ್ಕೊ ಹೇಳಿಕೆ ನೀಡಿದೆ. ವಿಷಯ ವೈರಲ್ ಆದ ಕಾರಣಕ್ಕೆ ಮಾತ್ರ ಕ್ಷಮೆಯಾಚಿಸುತ್ತಿಲ್ಲ. ಘಟನೆ ಸಂಸ್ಥೆಯನ್ನೇ ಕಾಡಿರುವುದರಿಂದ ಮತ್ತು ಇದರಿಂದ ತಮ್ಮ ತಂಡದ ಕಾರ್ಯವೈಖರಿ ಕುರಿತು ಗಂಭೀರವಾಗಿ ಯೋಚಿಸುವಂತಾಗಿದೆ ಎಂದು ಸಂಸ್ಥೆ ಹೇಳಿದೆ.
ಸಬ್ಕೊ ಪ್ರಕಾರ, ಬಿಲ್‌ನಲ್ಲಿ ಆ ವಿವರಣೆಯನ್ನು ಉದ್ಯೋಗಿಯೊಬ್ಬರು ಉದ್ದೇಶಪೂರ್ವಕವಾಗಿ ದಾಖಲಿಸಿದ್ದಾರೆ. ಸಂಸ್ಥೆ ಇದನ್ನು ಯಾವುದೇ ರೀತಿಯಲ್ಲೂ ಸ್ವೀಕಾರಾರ್ಹವೆಂದು ಪರಿಗಣಿಸುವುದಿಲ್ಲ ಎಂದು ತಿಳಿಸಿದೆ. ಗ್ರಾಹಕರನ್ನು ಸಂಪರ್ಕಿಸಿ ವೈಯಕ್ತಿಕವಾಗಿ ಕ್ಷಮೆಯಾಚಿಸಲು ಪ್ರಯತ್ನಿಸಿರುವುದಾಗಿ ಕೆಫೆ ಹೇಳಿದೆ. ಘಟನೆಯಲ್ಲಿ ಭಾಗಿಯಾಗಿರುವ ಉದ್ಯೋಗಿಯ ವಿರುದ್ಧ “ಸಾಧ್ಯವಾದಷ್ಟು ಬಲವಾದ ಶಿಸ್ತು ಕ್ರಮ” ತೆಗೆದುಕೊಂಡಿರುವುದಾಗಿಯೂ ಸಂಸ್ಥೆ ತಿಳಿಸಿದೆ. ಇದರ ಜೊತೆಗೆ, ಕೌಂಟರ್‌ನಲ್ಲಿ ಗ್ರಾಹಕರ ಮಾಹಿತಿಯನ್ನು ದಾಖಲಿಸುವ ವಿಧಾನದಲ್ಲೂ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ಸಬ್ಕೊ ಹೇಳಿದೆ. ಮುಂದಿನ ದಿನಗಳಲ್ಲಿ ಸಿಬ್ಬಂದಿ ಗ್ರಾಹಕರೊಂದಿಗೆ ಗೌರವಯುತವಾಗಿ ಸಂವಹನ ನಡೆಸುವ ಮಹತ್ವವನ್ನು ಇನ್ನಷ್ಟು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವಂತೆ ತರಬೇತಿ ಮತ್ತು ಸಿಬ್ಬಂದಿ ಸೇರ್ಪಡೆ ಪ್ರಕ್ರಿಯೆಯಲ್ಲೂ ಈ ವಿಷಯವನ್ನು ಪರಿಹರಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.