
ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತರಾಗಿದ್ದ ಏಷ್ಯಾನೆಟ್ ಸುವರ್ಣ ನ್ಯೂಸ್ ಸಿಬ್ಬಂದಿ ಲಲಿತಮ್ಮ (60) ಅವರ ಕಣ್ಣುಗಳನ್ನು ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಪಾರ್ಥಿವ ಶರೀರವನ್ನು ಬೆಳಗ್ಗೆ 11.30 ರಿಂದ ಸಂಜೆ 4 ಗಂಟೆವರೆಗೂ ಮನೆಯ ಬಳಿ ಇರಿಸಲಾಗುವುದು. ನಂತರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು ಎಂದು ಲಲಿತಮ್ಮಾ ಅವರ ಪುತ್ರ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಶುಕ್ರವಾರ ಸಂಜೆ ಕೆಲಸದಿಂದ ಹಿಂದಿರುಗುವ ಸಮಯದಲ್ಲಿ ರಸ್ತೆ ದಾಟುವಾಗ ವಾಹನ ಡಿಕ್ಕಿಯಾಗಿದ್ರಿಂದ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ನಿಧನರಾಗಿದ್ದಾರೆ. ಈ ಸಂಬಂಧ ಚಾಲಕ ದೀಪಕ್(50) ಎಂಬಾತನನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುವರ್ಣನ್ಯೂಸ್ ಮತ್ತು ಕನ್ನಡಪ್ರಭದಲ್ಲಿ ಹೌಸ್‌ಕೀಪಿಂಗ್ ಕೆಲಸ ಮಾಡುತ್ತಿದ್ದ ಲಲಿತಾ ಅವರು, ಕೆಲಸ ಮುಗಿಸಿ ಶುಕ್ರವಾರ ಸಂಜೆ 5 ಗಂಟೆಯ ಸುಮಾರಿಗೆ ಸ್ನೇಹಿತೆ ಜೊತೆ ಆಟೋದಲ್ಲಿ ಹೋಗಿದ್ದರು. ಮನೆಗೆ ಹೋಗಲು ಆಟೋದಿಂದ ಇಳಿದು ನಡೆದು ಕೊಂಡು ಹೋಗುವಾಗ ಓಕಳಿಪುರ ಬಸ್ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದರು. ಆಗ ವೇಗವಾಗಿ ಬಂದ ಟೆಂಪೋ ಡಿಕ್ಕಿ ಹೊಡೆದಿದ್ದು, ಹಿಂಬದಿಯ ಚಕ್ರ ತಲೆ ಮೇಲೆ ಹರಿದಿದೆ. ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಶೇಷಾದ್ರಿಪುರ ಸಂಚಾರ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿ ಚಾಲಕನನ್ನು ಬಂಧಿಸಿದ್ದಾರೆ. ಲಲಿತಾ ಅವರ ಮಗ ಭರತ್ ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಚಾಲಕನನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಶೇಷಾದ್ರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ತಮಿಳುನಾಡಿನವರಾದ ಲಲಿತಾ ಅವರಿಗೆ ಮೂವರು ಗಂಡು ಮಕ್ಕಳು ಹಾಗೂ ಅನಾರೋಗ್ಯ ಪೀಡಿತ ತಾಯಿಯೂ ಇದ್ದಾರೆ.
ಸುವರ್ಣನ್ಯೂಸ್ ಮತ್ತು ಕನ್ನಡಪ್ರಭದಲ್ಲಿ ಕಳೆದ 15 ವರ್ಷಗಳಿಂದ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಲಲಿತಾ ಅವರು ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಈ ದುರಂತ ನಡೆದಿದೆ. ಲಲಿತಾ ಅವರ ಸಾವಿಗೆ ಸುವರ್ಣನ್ಯೂಸ್ ಮತ್ತು ಕನ್ನಡಪ್ರಭದ ಸಿಬ್ಬಂದಿ ಸಂತಾಪ ವ್ಯಕ್ತಪಡಿಸಿದ್ದಾರೆ.