ಕರ್ನಾಟಕದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಹಗರಣ, ಅನರ್ಹ ವಿದ್ಯಾರ್ಥಿಗಳಿಗೆ 1.3 ಕೋಟಿ ಹಣ!

Published : Jul 15, 2025, 05:05 PM IST
 Karnataka Minority Scholarship Scam

ಸಾರಾಂಶ

ಅಲ್ಪಸಂಖ್ಯಾತ ವಿದ್ಯಾರ್ಥಿವೇತನ ಹಗರಣದಲ್ಲಿ ಕರ್ನಾಟಕದ ಲಿಂಕ್ ಪತ್ತೆಯಾಗಿದೆ. 2021 ಮತ್ತು 2023 ರ ನಡುವೆ 1.3 ಕೋಟಿ ರೂ.ಗೂ ಹೆಚ್ಚು ವಂಚನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರ್ಹತೆ ಇಲ್ಲದ 643 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗಿದೆ.

ಬೆಂಗಳೂರು (ಜು.15): ಸಿಬಿಐ ತನಿಖೆ ನಡೆಸುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಹಗರಣ ಕೊನೆಗೂ ಕರ್ನಾಟಕದ ಲಿಂಕ್‌ ಪಡೆದುಕೊಂಡಿದೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯ ಪ್ರಕಾರ, 2021 ಮತ್ತು 2023 ರ ನಡುವೆ ರಾಜ್ಯದಲ್ಲಿ 1.3 ಕೋಟಿ ರೂ.ಗೂ ಹೆಚ್ಚು ವಿದ್ಯಾರ್ಥಿವೇತನವನ್ನು ವಂಚನೆಯಿಂದ ಪಡೆಯಲಾಗಿದೆ.

ಕೇಂದ್ರ ಸಿಇಎನ್ ಅಪರಾಧ ಪೊಲೀಸರು ಹಗರಣದ ತನಿಖೆ ಆರಂಭಿಸಿದ್ದಾರೆ. ಬೆಂಗಳೂರು ನಗರ ಜಿಲ್ಲಾ ಅಧಿಕಾರಿ ಪ್ರದೀಪ್ ಸಿಂಹ ಎಂ ಶನಿವಾರ ಪೊಲೀಸರಿಗೆ ನೀಡಿದ ದೂರಿನಲ್ಲಿ, ಅರ್ಹತೆ ಇಲ್ಲದಿದ್ದರೂ 643 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗಿದೆ ಮತ್ತು ನೋಡಲ್ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಹಣವನ್ನು ವಂಚನೆಯಿಂದ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ನೂರಾರು ಖಾಸಗಿ ಕಾಲೇಜುಗಳು, ಅವುಗಳ ನೋಡಲ್ ಅಧಿಕಾರಿಗಳು ಮತ್ತು ವಿದ್ಯಾರ್ಥಿವೇತನವನ್ನು ಪಡೆದ ವಿದ್ಯಾರ್ಥಿಗಳು ಪರಿಶೀಲನೆಗೆ ಒಳಗಾಗಿದ್ದಾರೆ. ವಿದ್ಯಾರ್ಥಿಗಳು ಕನಿಷ್ಠ 50% ಅಂಕಗಳಂತಹ ಮಾನದಂಡಗಳನ್ನು ಪೂರೈಸದಿದ್ದರೂ ಸಹ, ನೋಡಲ್ ಅಧಿಕಾರಿಗಳು 10-12 ನೇ ತರಗತಿಯ ವಿದ್ಯಾರ್ಥಿಗಳನ್ನು ವಿದ್ಯಾರ್ಥಿವೇತನ ಯೋಜನೆಗೆ ದಾಖಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿಗಳ ತಪ್ಪು ಡೇಟಾವನ್ನು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ scholarships.gov.in ಗೆ ಅಪ್‌ಲೋಡ್ ಮಾಡಲಾಗಿದೆ.

ವಂಚನೆಯಿಂದ ವಿದ್ಯಾರ್ಥಿವೇತನ ಪಡೆದ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳ ಡೇಟಾವನ್ನು ಕೇಂದ್ರ ಸರ್ಕಾರ ಸ್ವೀಕರಿಸಿದೆ ಎಂದು ಸಿಂಹ ಮಾಹಿತಿ ನೀಡಿದ್ದಾರೆ. ತನಿಖೆ ಪ್ರಾಥಮಿಕ ಹಂತದಲ್ಲಿದೆ ಎಂದು ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ದೂರುದಾರರಿಂದ ಹೆಚ್ಚಿನ ವಿವರಗಳನ್ನು ನಮಗೆ ಒದಗಿಸುವಂತೆ ನಾವು ಕೇಳಿದ್ದೇವೆ. ಸಂಸ್ಥೆಗಳ ಪಟ್ಟಿಯನ್ನು ನಮಗೆ ನೀಡಲಾಗಿದೆ ಮತ್ತು ನಾವು ಸಂಸ್ಥೆಗಳ ಪ್ರಾಂಶುಪಾಲರು, ನೋಡಲ್ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳಿಗೆ ಆದಷ್ಟು ಬೇಗ ನೋಟಿಸ್ ನೀಡಲಿದ್ದೇವೆ." ಎಂದು ತಿಳಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66C (ಗುರುತಿನ ಕಳ್ಳತನಕ್ಕೆ ಶಿಕ್ಷೆ) ಮತ್ತು 66D (ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ವಂಚಿಸಿದ ಆರೋಪ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕರ್ನಾಟಕದಲ್ಲಿ ಶೇ. 64 ರಷ್ಟು ಸಂಸ್ಥೆಗಳು ನಕಲಿ ಎನ್ನುವುದು ಗೊತ್ತಾಗಿದೆ.

ಏನಿದು ಪ್ರಕರಣ

ಭಾರತದಲ್ಲಿ ನಡೆದ ಅತಿದೊಡ್ಡ ಅಲ್ಪಸಂಖ್ಯಾತ ವಿದ್ಯಾರ್ಥಿವೇತನ ಹಗರಣದಲ್ಲಿ, ಅಲ್ಪಸಂಖ್ಯಾತ ವಿದ್ಯಾರ್ಥಿವೇತನ ಕಾರ್ಯಕ್ರಮದಡಿಯಲ್ಲಿ ಸಕ್ರಿಯವಾಗಿರುವ ಸುಮಾರು ಶೇಕಡಾ 53 ರಷ್ಟು ಸಂಸ್ಥೆಗಳು 'ನಕಲಿ' ಎಂದು ಕಂಡುಬಂದಿದೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ನಡೆಸಿದ ಆಂತರಿಕ ತನಿಖೆಯಲ್ಲಿ ಇಂತಹ 830 ಸಂಸ್ಥೆಗಳಲ್ಲಿ ಆಳವಾದ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದ್ದು, ಕಳೆದ 5 ವರ್ಷಗಳಲ್ಲಿ 144.83 ಕೋಟಿ ರೂ.ಗಳ ಹಗರಣ ನಡೆದಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ 2023ರಲ್ಲಿ ಈ ವಿಷಯವನ್ನು ಹೆಚ್ಚಿನ ತನಿಖೆಗಾಗಿ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಿದ್ದಾರೆ.

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು 2023 ಜುಲೈ 10 ರಂದು ಅಧಿಕೃತವಾಗಿ ಈ ವಿಷಯದಲ್ಲಿ ದೂರು ದಾಖಲಿಸಿದೆ. ತನಿಖೆಯು 34 ರಾಜ್ಯಗಳ 100 ಜಿಲ್ಲೆಗಳಲ್ಲಿ ವಿಚಾರಣೆಗಳನ್ನು ಒಳಗೊಂಡಿತ್ತು. ಪರಿಶೀಲನೆ ನಡೆಸಿದ 1572 ಸಂಸ್ಥೆಗಳಲ್ಲಿ 830 ಸಂಸ್ಥೆಗಳು ವಂಚನೆ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಅಂಕಿಅಂಶಗಳು 34 ರಾಜ್ಯಗಳಲ್ಲಿ 21 ರಾಜ್ಯಗಳಿಂದ ಬಂದಿದ್ದು, ಉಳಿದ ರಾಜ್ಯಗಳಲ್ಲಿನ ಸಂಸ್ಥೆಗಳ ಬಗ್ಗೆ ತನಿಖೆ ಇನ್ನೂ ನಡೆಯುತ್ತಿದೆ.

 

PREV
Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ