
ಕೆಪಿಎಸ್‌ಸಿ ಅಂದ್ರೆ ಲಕ್ಷಾಂತರ ಅಭ್ಯರ್ಥಿಗಳು, ಅನ್ನ ನೀರು ಬಿಟ್ಟು ಭವಿಷ್ಯ ಕಟ್ಟಿಕೊಳ್ಳಲು ಯತ್ನಿಸುತ್ತಿರುತ್ತಾರೆ. ಇಂತಹ ಅಕ್ರಮಗಳು ಅವರನ್ನು ಅತಂತ್ರ ಮಾತ್ರ ಮಾಡಿಲ್ಲ, ಅವರ ಬದುಕನ್ನೇ ನುಂಗಿ ಹಾಕಿವೆ. ಕೆಪಿಎಸ್ ಮಹಾ ಅಕ್ರಮದಲ್ಲಿ ಈಗ ಮತ್ತೊಂದು ಮೇಜರ್ ಕ್ಲ್ಯೂ ಸಿಕ್ಕಿದೆ. ಈ ಲೆವೆಲ್‌ಗೆ ಇಳಿದು ಅಕ್ರಮ ಮಾಡಿದ್ದಾರೆ ಎಂದರೆ, ಇಲ್ಲಿ ಎಲ್ಲರ ಪಾಲೂ ಸಮಾನವಾಗಿದೆ ಎನ್ನಲಾಗುತ್ತಿದೆ. ಈ ಕುರಿತು ಸಂಪೂರ್ಣ ವಿವರವನ್ನು ನೋಡೋಣ ಬನ್ನಿ.
ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಈ ಅಕ್ರಮದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶಣಾಲಯ ಮಾರ್ಕ್ಸ್ ಕಾರ್ಡ್ ಪರಿಶೀಲನೆ ವೇಳೆ ಭಾರಿ ಸಾಕ್ಷ್ಯವನ್ನು ಕಲೆಹಾಕಿದೆ. ಆರೋಪಿಗಳಾದ ವಿನುತಾ ಮತ್ತು ನಂದೀಶ್ ಅವರ ಮಾರ್ಕ್ಸ್ ಕಾರ್ಡ್‌ಗಳನ್ನು ಪರಿಶೀಲಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅದರಲ್ಲಿನ ಅಂಶಗಳನ್ನು ನೋಡಿ ತಬ್ಬಿಬ್ಬಾಗಿದ್ದಾರೆ. ಅಷ್ಟಕ್ಕೂ ಅದರಲ್ಲಿ ಸಿಕ್ಕಿದ್ದೇನು ಗೊತ್ತಾ?
ಕೆಪಿಎಸ್‌ಸಿಯಿಂದ ನೀಡಲಾದ ಮಾರ್ಕ್ಸ್ ಕಾರ್ಡ್‌ನಲ್ಲಿ ವಿನುತಾ ಹಾಗೂ ನಂದೀಶ್ ಇಬ್ಬರಿಗೂ ಒಂದೇ ರೀತಿಯ ಗ್ರೇಸ್ ಮಾರ್ಕ್ಸ್ ಉಲ್ಲೇಖವಾಗಿರುವುದು ಪತ್ತೆಯಾಗಿದೆ. ಈ ಇಬ್ಬರ ಅಂಕಪಟ್ಟಿಯಲ್ಲಿನ ಸಾಮ್ಯತೆಯೇ ಮಧ್ಯವರ್ತಿ ಶಿವಶಂಕರಪ್ಪ ನಡೆಸಿದ್ದ ಅಕ್ರಮವನ್ನು ಇ.ಡಿ ಅಧಿಕಾರಿಗಳ ಮುಂದೆ ಬಹಿರಂಗಪಡಿಸಿದೆ.
ಅಲ್ಲದೇ ತನಿಖೆಯ ವೇಳೆ ನಂದೀಶ್ ಮತ್ತು ವಿನುತಾ ಇಬ್ಬರೂ ಪ್ರಮುಖ ಕಿಂಗ್‌ಪಿನ್‌ಗಳಾದ ಶಿವಶಂಕರಪ್ಪ ಹಾಗೂ ಗೀತಾ ಜೊತೆ ಸತತ ಸಂಪರ್ಕದಲ್ಲಿದ್ದರು ಎಂಬುದು ಸಾಬೀತಾಗಿದೆ. ಅಧಿಕಾರಿಗಳು ನಡೆಸಿದ ಸಿಡಿಆರ್, ಸಿಸಿಟಿವಿ ದೃಶ್ಯಾವಳಿ ಹಾಗೂ ವಾಟ್ಸಾಪ್ ಸಂಭಾಷಣೆಗಳ ಪರಿಶೀಲನೆಯಿಂದ ಇವರ ನಡುವಿನ ನಿಕಟ ಸಂಪರ್ಕ ಅಧಿಕೃತವಾಗಿ ಖಾತ್ರಿಯಾಗಿದೆ.
ಈ ಅಕ್ರಮ ಜಾಲವು ಅಭ್ಯರ್ಥಿಗಳಿಂದ ಹಣದ ಭರವಸೆಗಾಗಿ ಅವರ ಹೆಸರನ್ನು ಉಲ್ಲೇಖಿಸಿ ಪ್ರಾಮಿಸರಿ ನೋಟ್ ಮತ್ತು ಕನ್ಸಿಡರೇಷನ್ ನೋಟ್ ಬರೆಸಿಕೊಳ್ಳುತ್ತಿತ್ತು. ಪ್ರಸ್ತುತ ತನಿಖೆ ವೇಳೆ 'ಕಿರಣ್' ಎಂಬ ಮತ್ತೊಬ್ಬ ಅಭ್ಯರ್ಥಿಯ ಬಳಿ ಇದ್ದ ಇಂತಹ ಪ್ರಾಮಿಸರಿ ನೋಟನ್ನು ಇ.ಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಶಿವಶಂಕರಪ್ಪ ಹಾಗೂ ಗೀತಾ ಮೂಲಕವೇ ಈ ಇಬ್ಬರು ಅಭ್ಯರ್ಥಿಗಳು ಕಾನೂನುಬಾಹಿರವಾಗಿ ಅಂಕ ಗಿಟ್ಟಿಸಿಕೊಂಡಿರುವುದು ಡಿಜಿಟಲ್ ಹಾಗೂ ದಾಖಲಾತಿ ಸಾಕ್ಷ್ಯಗಳ ಸಮೇತ ಸಾಬೀತಾಗಿದೆ. ಈ ಭದ್ರವಾದ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲೇ ಇ.ಡಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಮುಂದಿನ ಹಂತವನ್ನು ಕಾದು ನೋಡಬೇಕಿದೆ.