ಅಕ್ರಮ ಮದರಸಾಗೆ ಸರ್ಕಾರ ಕೊಟ್ಟಿರುವ ₹5 ಲಕ್ಷ ಅನುದಾನ ವಾಪಸ್ ಪಡೆಯಿರಿ: ಹೈಕೋರ್ಟ್‌ನಿಂದ ಆದೇಶ

Published : Sep 05, 2026, 12:22 PM IST
Bengaluru ellegal Madarasa

ಸಾರಾಂಶ

ಬೆಂಗಳೂರಿನ ನೋಂದಣಿಯಾಗದ ಮದರಸಾಗೆ ನೀಡಿದ್ದ 5 ಲಕ್ಷ ರೂ. ಅನುದಾನವನ್ನು ತಕ್ಷಣವೇ ಹಿಂಪಡೆಯುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಸುವರ್ಣ ನ್ಯೂಸ್ ವರದಿಯ ಆಧಾರದ ಮೇಲೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ರಾಜ್ಯದಲ್ಲಿನ ಇತರೆ ಬೋಗಸ್ ಸಂಸ್ಥೆಗಳ ಬಗ್ಗೆಯೂ ತನಿಖೆ ನಡೆಸಲು ಸೂಚಿಸಿದೆ.

ಬೆಂಗಳೂರು (ಸೆ.05): ರಾಜ್ಯದಲ್ಲಿ ನೋಂದಣಿಯಾಗದ ಮದರಸಾಗಳಿಗೆ ನಿಯಮಬಾಹಿರವಾಗಿ ಸರ್ಕಾರದ ಅನುದಾನ ಹಂಚಿಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಬಿಸಿ ಮುಟ್ಟಿಸಿದೆ. ಬೆಂಗಳೂರಿನ ಥಣಿಸಂದ್ರದಲ್ಲಿರುವ ನೋಂದಣಿಯಾಗದ ಮದರಸಾಗೆ ನೀಡಲಾಗಿದ್ದ 5 ಲಕ್ಷ ರೂಪಾಯಿ ಅನುದಾನವನ್ನು ತಕ್ಷಣವೇ ಹಿಂಪಡೆಯುವಂತೆ ಹೈಕೋರ್ಟ್ ವಿಭಾಗೀಯ ಪೀಠ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಈ ಮೂಲಕ ನೋಂದಣಿಯಾಗದ ಮದರಸಾಗಳ ಅಕ್ರಮ ಅನುದಾನ ದಂಧೆಯ ಬಗ್ಗೆ ಸಾರ್ವಜನಿಕರ ಹಿತದೃಷ್ಟಿಯಿಂದ ನಿರಂತರ ವಿಸ್ತೃತ ತನಿಖಾ ವರದಿ ಪ್ರಸಾರ ಮಾಡಿದ್ದ ‘ಸುವರ್ಣ ನ್ಯೂಸ್’ (Asianet Suvarna News) ವರದಿಗೆ ಮತ್ತೊಂದು ಬಹುದೊಡ್ಡ ಗೆಲುವು (Big Impact) ಸಿಕ್ಕಿದೆ.

ಸುಳ್ಳು ದಾಖಲೆ ನೀಡಿ ₹5 ಲಕ್ಷ ಲೂಟಿ!

ಬೆಂಗಳೂರಿನ ಥಣಿಸಂದ್ರದಲ್ಲಿ ಕಾರ್ಯಾಚರಿಸುತ್ತಿರುವ ‘ಜಾಮಿಯಾ ಮೊಹಮ್ಮದ್ದಿಯಾ ಮನ್ಸೂರಾ’ ಮದರಸಾ ಯಾವುದೇ ಅಧಿಕೃತ ನೋಂದಣಿ ಇಲ್ಲದಿದ್ದರೂ ನಿಯಮಗಳನ್ನು ಗಾಳಿಗೆ ತೂರಿ ನಡೆಸಲಾಗುತ್ತಿತ್ತು. ಅಷ್ಟೇ ಅಲ್ಲದೆ, ಸರ್ಕಾರಕ್ಕೆ ಸುಳ್ಳು ಮತ್ತು ದಾರಿ ತಪ್ಪಿಸುವ ಮಾಹಿತಿಗಳನ್ನು ನೀಡಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಬರೋಬ್ಬರಿ 5 ಲಕ್ಷ ರೂಪಾಯಿ ಸರ್ಕಾರಿ ಅನುದಾನವನ್ನು ಅಕ್ರಮವಾಗಿ ಪಡೆದುಕೊಂಡಿತ್ತು. ಈ ಗಂಭೀರ ಅಕ್ರಮವನ್ನು ಸುವರ್ಣ ನ್ಯೂಸ್ ದಾಖಲೆ ಸಮೇತ ಬಯಲಿಗೆಳೆದು, ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ಸಾರ್ವಜನಿಕರೆದುರು ತೆರೆದಿಟ್ಟಿತ್ತು.

ಹೈಕೋರ್ಟ್‌ನಿಂದ ಖಡಕ್ ಸೂಚನೆಗಳು:

ಈ ಅಕ್ರಮದ ವಿರುದ್ಧ ಅಬ್ದುಲ್ ಹಮೀದ್ ಪಾಷಾ ಹಾಗೂ ಪ್ರದೀಪ್ ಸಿಂಹ ಎಂಬುವವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಅನುದಾನ ವಾಪಸ್ ಪಡೆಯಲು ಆದೇಶ: ಕಾನೂನುಬಾಹಿರವಾಗಿ ಜಾಮಿಯಾ ಮೊಹಮ್ಮದ್ದಿಯಾ ಮನ್ಸೂರಾ ಮದರಸಾಗೆ ನೀಡಿರುವ 5 ಲಕ್ಷ ರೂ. ಅನುದಾನವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಪೀಠ ಆದೇಶಿಸಿದೆ.

ಕ್ರಮದ ವರದಿ ಸಲ್ಲಿಕೆಗೆ ಸೂಚನೆ: ಹಣವನ್ನು ವಾಪಸ್ ಪಡೆಯಲು ಯಾವ ಕ್ರಮ ಕೈಗೊಳ್ಳಲಾಗಿದೆ ಹಾಗೂ ವಾಸ್ತವ ಸ್ಥಿತಿ ಏನಿದೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ಸಮಗ್ರ ತನಿಖಾ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.

ಬೋಗಸ್ ಸಂಸ್ಥೆಗಳ ತನಿಖೆಗೆ ಆದೇಶ: ಇದೇ ರೀತಿ ರಾಜ್ಯದಲ್ಲಿ ಸುಳ್ಳು ಮಾಹಿತಿ ನೀಡಿ ಸರ್ಕಾರದ ಅನುದಾನ ಲಪಟಾಯಿಸುತ್ತಿರುವ ವಂಚಕ ಸಂಸ್ಥೆಗಳ ವಿರುದ್ಧ ತನಿಖೆ ನಡೆಸಿ, ಆ ಮಾಹಿತಿಯನ್ನೂ ಕೋರ್ಟ್‌ಗೆ ಸಲ್ಲಿಸುವಂತೆ ಸೂಚಿಸಲಾಗಿದೆ.

ನ್ಯಾಯಾಂಗ ನಿಂದನೆ ಎಚ್ಚರಿಕೆ:

ಒಂದು ವೇಳೆ ಮುಂದಿನ ವಿಚಾರಣೆ ವೇಳೆಗೆ ಸಮರ್ಪಕ ತನಿಖಾ ವರದಿ ಮತ್ತು ಕ್ರಮ ಕೈಗೊಂಡ ವಿವರಗಳನ್ನು ಸಲ್ಲಿಸದಿದ್ದರೆ, ಅದನ್ನು ಗಂಭೀರ ‘ನ್ಯಾಯಾಂಗ ನಿಂದನೆ’ ಎಂದು ಪರಿಗಣಿಸಲಾಗುವುದು. ಅಷ್ಟೇ ಅಲ್ಲದೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ನಿರ್ದೇಶಕರು ಸ್ವತಃ ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಸೆಪ್ಟೆಂಬರ್ 24ಕ್ಕೆ ಮುಂದೂಡಿದೆ. ಸುವರ್ಣ ನ್ಯೂಸ್ ಆರಂಭಿಸಿದ ಸಾರ್ವಜನಿಕ ಹಿತದ ಈ ತನಿಖಾ ವರದಿ ಇದೀಗ ರಾಜ್ಯಾದ್ಯಂತ ನೋಂದಣಿಯಾಗದೆ ಅಕ್ರಮವಾಗಿ ಅನುದಾನ ಪಡೆಯುತ್ತಿರುವ ಸಂಸ್ಥೆಗಳ ಬೆವರಿಳಿಸಿದೆ.

PREV
Read more Articles on
click me!

Recommended Stories

ಹಜ್ ಯಾತ್ರಿಕರು ಸೆ. 15ರೊಳಗೆ ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರ ಸಲ್ಲಿಕೆ ಕಡ್ಡಾಯ; ಇಲ್ಲಿದೆ ಸಂಪೂರ್ಣ ವಿವರ
ಬಡ ಬೈಕರ್‌ನ ಬಿಟ್ಟು ಸರ್ಕಾರಿ ಕಾರ್‌ಗಳನ್ನ ಟ್ರಾಫಿಕ್‌ ಪೊಲೀಸರು ಹಿಡಿಯೋದು ಯಾವಾಗ? 3 ವರ್ಷದಲ್ಲಿ 82 ಸಾವಿರ ಕೇಸ್‌, 19 ಕೋಟಿ ಪೆಂಡಿಂಗ್‌!