ಕಾಡುಗೊಲ್ಲ ಸಮುದಾಯಕ್ಕೆ ಎಸ್‌ಟಿ ಮಾನ್ಯತೆ: ಕೇಂದ್ರಕ್ಕೆ ಮತ್ತೊಮ್ಮೆ ಶಿಫಾರಸು ಮಾಡಲು ರಾಜ್ಯ ಸಂಪುಟ ಮಹತ್ವದ ನಿರ್ಧಾರ!

Published : Nov 22, 2026, 03:55 PM IST
Kadugolla ST Reservation DK Shivakumar

ಸಾರಾಂಶ

ಕಾಡುಗೊಲ್ಲ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರ್ಪಡೆ ಮಾಡಲು ಕೇಂದ್ರಕ್ಕೆ ಮತ್ತೊಮ್ಮೆ ಪ್ರಬಲ ಶಿಫಾರಸು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಜನಾಂಗೀಯ ಅಧ್ಯಯನ ನಡೆಸಿ ಮೂರು ತಿಂಗಳೊಳಗೆ ಪುನಃ ಪ್ರಸ್ತಾವನೆ ಸಲ್ಲಿಸಲಾಗುವುದು.

ಬೆಂಗಳೂರು (ನ.22): ರಾಜ್ಯದ ಕಾಡುಗೊಲ್ಲ ಸಮುದಾಯದ ದಶಕಗಳ ಕನಸು ಹಾಗೂ ನ್ಯಾಯಯುತ ಬೇಡಿಕೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಪಂದಿಸಿದೆ. ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡ (ST) ಪಟ್ಟಿಗೆ ಸೇರ್ಪಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಪ್ರಬಲ ಶಿಫಾರಸು ಪತ್ರ ಕಳುಹಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ಕಾಡುಗೊಲ್ಲ ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸಿ, ಅವರಿಗೆ ನ್ಯಾಯಯುತ ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ. ಈ ಸಮುದಾಯದ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ ಹಾಗೂ ಜೀವನಶೈಲಿಯನ್ನು ಸಮಗ್ರವಾಗಿ ದಾಖಲಿಸಲು ಜನಾಂಗೀಯ ಅಧ್ಯಯನ ಕೈಗೊಳ್ಳಲಾಗುತ್ತಿದೆ. ಮೂರು ತಿಂಗಳೊಳಗೆ ಅಧ್ಯಯನ ಪೂರ್ಣಗೊಳಿಸಿ ಕೇಂದ್ರಕ್ಕೆ ಪುನಃ ಪ್ರಸ್ತಾವನೆ ಸಲ್ಲಿಸಲಾಗುವುದು," ಎಂದು ತಿಳಿಸಿದ್ದಾರೆ.

ಜನಾಂಗೀಯ ಅಧ್ಯಯನದೊಂದಿಗೆ ಬಲವಾದ ಪ್ರಸ್ತಾವನೆ:

ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಸೇರಿಸಬೇಕೆಂಬ ಪ್ರಸ್ತಾವನೆ ಈ ಹಿಂದೆ ಕೇಂದ್ರ ಸರ್ಕಾರದಿಂದ ಬರೋಬ್ಬರಿ ಐದು ಬಾರಿ ತಿರಸ್ಕೃತಗೊಂಡಿದೆ. ಸಮರ್ಪಕ ಮಾನದಂಡ ಹಾಗೂ ಪೂರಕ ದಾಖಲೆಗಳ ಕೊರತೆಯ ನೆಪವೊಡ್ಡಿ ಈ ಹಿಂದೆ ತಿರಸ್ಕರಿಸಲಾಗಿದ್ದ ಹಿನ್ನೆಲೆಯಲ್ಲಿ, ಈ ಬಾರಿ ಯಾವುದೇ ಲೋಪವಾಗದಂತೆ ರಾಜ್ಯ ಸರ್ಕಾರ ಎಚ್ಚರಿಕೆ ವಹಿಸಿದೆ. ಸಮುದಾಯದ ವಿಶಿಷ್ಟ ಗುರುತು, ಸಂಸ್ಕೃತಿ, ಭಾಷಿಕ ಹಾಗೂ ಆಚರಣಾ ವಿಶೇಷತೆಗಳನ್ನು ವೈಜ್ಞಾನಿಕವಾಗಿ ನಿರೂಪಿಸಲು ಜನಾಂಗೀಯ ಅಧ್ಯಯನ (Ethnographic Study) ನಡೆಸಲು ಆದೇಶಿಸಲಾಗಿದೆ.

ಎಸ್‌ಟಿ ಸೇರ್ಪಡೆಗೆ ಎಲ್ಲ ಅರ್ಹತೆಗಳು ಸಮುದಾಯಕ್ಕಿವೆ:

ಕಾಡುಗೊಲ್ಲ ಸಮುದಾಯವು ಕಾಡಂಚಿನಲ್ಲಿ ಹಾಗೂ ‘ಹಟ್ಟಿ’ಗಳಲ್ಲಿ ವಾಸಿಸುತ್ತಾ ತನ್ನದೇ ಆದ ಆದಿಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿಕೊಂಡು ಬಂದಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಇಂದಿಗೂ ತೀವ್ರ ಹಿಂದುಳಿದಿರುವ ಈ ಜನರಿಗೆ ಪರಿಶಿಷ್ಟ ಪಂಗಡದ (ST) ಸ್ಥಾನಮಾನ ಸಿಗಲು ಬೇಕಾದ ಎಲ್ಲಾ ಅರ್ಹತೆಗಳೂ ಇವೆ. ಆದ್ದರಿಂದ ವೈಜ್ಞಾನಿಕ ವರದಿ ಸಿದ್ಧಪಡಿಸಿ ಮುಂದಿನ ಮೂರು ತಿಂಗಳಲ್ಲಿ ಕೇಂದ್ರ ಗೃಹ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಬಲವಾದ ಶಿಫಾರಸು ಕಳುಹಿಸಲು ಸಚಿವ ಸಂಪುಟ ನಿರ್ಧರಿಸಿದೆ.

ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ ವರ್ಷಗಳಿಂದ ಹೋರಾಟ ನಡೆಸುತ್ತಿರುವ ಕಾಡುಗೊಲ್ಲ ಸಮುದಾಯದಲ್ಲಿ ಹೊಸ ಭರವಸೆ ಮತ್ತು ಹರ್ಷ ಮೂಡಿದೆ.

PREV
Read more Articles on
click me!

Recommended Stories

ಅಣ್ಣಾವ್ರ ಸದಾಶಿವನಗರದ 'ದೊಡ್ಮನೆ' ಹಿಂದಿದೆ ಇಂಟ್ರೆಸ್ಟಿಂಗ್ ಕಥೆ; ಆದ್ರೆ ರಾಜ್‌ಕುಮಾರ್ ನೆಲೆಸಿದ್ದ ಮನೆ ಕೆಡವಿ 2 ಹೊಸ ಮನೆ ಕಟ್ಟಿದ್ದೇಕೆ?
ಕಬ್ಬನ್ ಪಾರ್ಕ್‌ ಫ್ಲವರ್ ಶೋಗೆ ಭೇಟಿ ನೀಡಲು ರೆಡಿಯಾಗಿ: ವಿಶೇಷತೆ, ದಿನಾಂಕ ಮತ್ತು ಟಿಕೆಟ್ ಮಾಹಿತಿ ಇಲ್ಲಿದೆ!