
ಬೆಂಗಳೂರು (ಆ.18): ನಗರದ ಕೆಎಸ್‌ಆರ್ (ಮೆಜೆಸ್ಟಿಕ್), ಯಶವಂತಪುರ ಸೇರಿದಂತೆ ರಾಜ್ಯದ ಹಲವು ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕನಿಷ್ಠ ಕುಡಿಯುವ ನೀರಿನ ಸೌಲಭ್ಯವೂ ಇಲ್ಲದಿರುವುದು ಭಾರತೀಯ ನಿಯಂತ್ರಕ ಮತ್ತು ಮಹಾಲೇಖಾಪಾಲರ (CAG) ತನಿಖಾ ವರದಿಯಿಂದ ಬಯಲಾಗಿದೆ. ದೇಶಾದ್ಯಂತ ರೈಲ್ವೆ ಜಾಲದಲ್ಲಿ ಪ್ರಯಾಣಿಕರ ಮೂಲಸೌಕರ್ಯಗಳ ಕೊರತೆಯಿರುವುದನ್ನು ಉಲ್ಲೇಖಿಸಿರುವ ಸಿಎಜಿ, ಕುಡಿಯುವ ನೀರಿನ ಪೂರೈಕೆಯ ಸುಸ್ಥಿತಿಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ.
2019-20 ರಿಂದ 2023-24 ರವರೆಗಿನ 5 ವರ್ಷಗಳ ಅವಧಿಯಲ್ಲಿ ದೇಶಾದ್ಯಂತ ಒಟ್ಟು 512 ರೈಲ್ವೆ ನಿಲ್ದಾಣಗಳನ್ನು ಪರಿಶೋಧನೆಗೆ ಒಳಪಡಿಸಲಾಗಿತ್ತು. ಕರ್ನಾಟಕದ ಬಹುಪಾಲು ಭಾಗಗಳನ್ನು ಒಳಗೊಂಡಿರುವ ದಕ್ಷಿಣ ಪಶ್ಚಿಮ ರೈಲ್ವೆ (SWR) ವಲಯದ 31 ನಿಲ್ದಾಣಗಳನ್ನು ಈ ತನಿಖೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು.
ದೇಶದ ಅತ್ಯಂತ ಬ್ಯುಸಿ ರೈಲ್ವೆ ಟರ್ಮಿನಲ್‌ಗಳಲ್ಲಿ ಒಂದಾದ 'ಕೆಎಸ್‌ಆರ್ ಬೆಂಗಳೂರು' (ಮೆಜೆಸ್ಟಿಕ್) ನಿಲ್ದಾಣದಲ್ಲೇ ಮೂಲಭೂತ ಸೌಕರ್ಯಗಳ ತೀವ್ರ ಕೊರತೆ ಎದ್ದು ಕಂಡಿದೆ.
ಮೆಜೆಸ್ಟಿಕ್ ನಿಲ್ದಾಣ: ದೇಶದ ಟಾಪ್ 'NSG-1' ವರ್ಗಕ್ಕೆ ಸೇರ್ಪಡೆಯಾಗಿರುವ ಕೇವಲ 10 ನಿಲ್ದಾಣಗಳಲ್ಲಿ ಕೆಎಸ್‌ಆರ್ ಬೆಂಗಳೂರು ಒಂದಾಗಿದೆ. ಆಡಿಟ್ ಅವಧಿಯಲ್ಲಿ ಈ ನಿಲ್ದಾಣವು ಬರೋಬ್ಬರಿ ₹757 ಕೋಟಿ ವಾರ್ಷಿಕ ಆದಾಯ ಗಳಿಸಿದ್ದು, 2.4 ಕೋಟಿ ಪ್ರಯಾಣಿಕರ ಸಂಚಾರವನ್ನು ದಾಖಲಿಸಿದೆ. NSG-1 ವರ್ಗದ ನಿಲ್ದಾಣಕ್ಕೆ ಕಡ್ಡಾಯವಾಗಿ ಇರಬೇಕಾದ 'ವಾಟರ್ ಕೂಲರ್' (Water Coolers) ಸೌಲಭ್ಯವೇ ಇಲ್ಲಿ ಲಭ್ಯವಿಲ್ಲದಿರುವುದನ್ನು CAG ಪತ್ತೆ ಮಾಡಿದೆ.
ಯಶವಂತಪುರ ಜಂಕ್ಷನ್: ಉತ್ತರ ಬೆಂಗಳೂರಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಯಶವಂತಪುರ ನಿಲ್ದಾಣದಲ್ಲಿ ಕುಡಿಯುವ ನೀರಿನ ನಲ್ಲಿಗಳೇ (Taps) ಇಲ್ಲದಿರುವುದು ಕಂಡುಬಂದಿದೆ. ದೇಶಾದ್ಯಂತ ನೀರಿನ ನಲ್ಲಿಗಳಿಲ್ಲದ 19 ನಿಲ್ದಾಣಗಳಲ್ಲಿ ಯಶವಂತಪುರವೂ ಒಂದಾಗಿದೆ. 'NSG-II' ವರ್ಗದ ನಿಲ್ದಾಣವಾಗಿದ್ದರೂ ಇಲ್ಲೂ ವಾಟರ್ ಕೂಲರ್‌ಗಳಿಲ್ಲ.
ಕೆಂಗೇರಿ ನಿಲ್ದಾಣ: ಬೆಂಗಳೂರು-ಮೈಸೂರು ಮಾರ್ಗದ ಕೆಂಗೇರಿ ರೈಲ್ವೆ ನಿಲ್ದಾಣದಲ್ಲೂ ಕುಡಿಯುವ ನೀರಿನ ವ್ಯವಸ್ಥೆ ತೀರಾ ಕಳಪೆಯಾಗಿದೆ.
ಬಂಗಾರಪೇಟೆ ಜಂಕ್ಷನ್: ಈ ನಿಲ್ದಾಣದಲ್ಲಿ ಕುಡಿಯುವ ನೀರಿನ ನಲ್ಲಿಗಳ ಕೊರತೆಯ ಜೊತೆಗೆ, ಕಾಯುವ ಪ್ರಯಾಣಿಕರಿಗೆ ಅಗತ್ಯ ಸಂಖ್ಯೆಯ ಫ್ಯಾನ್‌ಗಳು ಮತ್ತು ಆಸನಗಳ ವ್ಯವಸ್ಥೆಯಿಲ್ಲ. ಜತೆಗೆ ಇಲ್ಲಿನ ಕೆಲವು ಎಲೆಕ್ಟ್ರಾನಿಕ್ ರೈಲು ಸೂಚನಾ ಫಲಕಗಳು (Train Indicator Boards) ಕಾರ್ಯನಿರ್ವಹಿಸುತ್ತಿಲ್ಲ.
ದಾವಣಗೆರೆ ಮತ್ತು ಮಂಡ್ಯ: ಈ ಎರಡೂ ನಿಲ್ದಾಣಗಳಲ್ಲಿ ಶೌಚಾಲಯ ಮತ್ತು ವಾಶ್‌ರೂಮ್ ಸೌಲಭ್ಯಗಳು ಕಳಪೆಯಾಗಿವೆ ಎಂದು ವರದಿ ಹೇಳಿದೆ.
ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT): ಆಡಿಟ್ ಅವಧಿಯಲ್ಲಿ ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮಾತ್ರ ಯಾವುದೇ ಕನಿಷ್ಠ ಅಗತ್ಯ ಸೌಕರ್ಯಗಳ ಕೊರತೆಯಿಲ್ಲದೆ ಸುಸ್ಥಿತಿಯಲ್ಲಿದೆ ಎಂದು ವರದಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.
ದಕ್ಷಿಣ ಪಶ್ಚಿಮ ರೈಲ್ವೆ (SWR) ವ್ಯಾಪ್ತಿಯ ಒಟ್ಟು 10 ನಿಲ್ದಾಣಗಳಲ್ಲಿ ಕನಿಷ್ಠ ಅಗತ್ಯ ಸೌಕರ್ಯಗಳ ಕೊರತೆ ಕಂಡುಬಂದಿದೆ.
ಜನರಲ್ ಬೋಗಿ ಪ್ರಯಾಣಿಕರಿಗೆ ನೀರಿಲ್ಲ: 12 ನಿಲ್ದಾಣಗಳಲ್ಲಿ ಸಾಮಾನ್ಯ ದ್ವಿತೀಯ ದರ್ಜೆ (General Second-Class) ಪ್ರಯಾಣಿಕರಿಗೆ ಅಗತ್ಯ ಪ್ರಮಾಣದ ಕುಡಿಯುವ ನೀರಿನ ನಲ್ಲಿಗಳಿಲ್ಲ.
ಶೌಚಾಲಯ ಹಾಗೂ ವೇಟಿಂಗ್ ಹಾಲ್ ಅಭಾವ: ವಲಯದ 4 ನಿಲ್ದಾಣಗಳಲ್ಲಿ ಕಾಯುವ ಕೊಠಡಿಗಳೇ (Waiting Halls) ಇಲ್ಲ. 5 ನಿಲ್ದಾಣಗಳಲ್ಲಿ ಮೂತ್ರಾಲಯಗಳೇ ಇಲ್ಲದಿದ್ದರೆ, 11 ನಿಲ್ದಾಣಗಳಲ್ಲಿ ಅವುಗಳ ತೀವ್ರ ಅಭಾವವಿದೆ.
ದಿವ್ಯಾಂಗರ ಸೌಲಭ್ಯ: ಇತರ ರೈಲ್ವೆ ವಲಯಗಳಿಗೆ ಹೋಲಿಸಿದರೆ ದಿವ್ಯಾಂಗ ಪ್ರಯಾಣಿಕರಿಗೆ ಸೌಲಭ್ಯ ನೀಡುವಲ್ಲಿ ಈ ವಲಯ ಉತ್ತಮ ಸಾಧನೆ ಮಾಡಿದೆ. ಆದರೂ, 8 ನಿಲ್ದಾಣಗಳಲ್ಲಿ Ramps ಕೊರತೆ ಹಾಗೂ 5 ನಿಲ್ದಾಣಗಳಲ್ಲಿ ಜಾರದಿರುವ ಕಾಲುದಾರಿಗಳ (Non-slippery Walkways) ಅಭಾವವಿದೆ.
CAG ವರದಿಯ ಬೆನ್ನಲ್ಲೇ ಸ್ಪಂದಿಸಿರುವ ರೈಲ್ವೆ ಸಚಿವಾಲಯವು, ಭಾನುವಾರ ದೇಶಾದ್ಯಂತ ರೈಲ್ವೆ ಜಾಲದ 20,000 ಸ್ಥಳಗಳಲ್ಲಿ ವಾಟರ್ ಕೂಲರ್‌ಗಳು ಹಾಗೂ ನೂತನ "ಟ್ಯಾಂಕ್-ಟು-ಟ್ಯಾಪ್" (Tank-to-Tap) ನೀರು ಶೋಧನೆ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಘೋಷಿಸಿದೆ. ಕುಡಿಯುವ ನೀರು ಮತ್ತು ನೀರಿನ ಗುಣಮಟ್ಟವನ್ನು ನೇರವಾಗಿ ರೈಲ್ವೆ ಮಂಡಳಿ ಮಟ್ಟದಲ್ಲೇ ಉಸ್ತುವಾರಿ ವಹಿಸಲಾಗುವುದು ಹಾಗೂ ಕಾಲಕಾಲಕ್ಕೆ ನೀರಿನ ಶುದ್ಧತೆಯ ವರದಿಯನ್ನು ಪ್ರಕಟಿಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.