ಎಪಿಎಂಸಿಗೆ ಭೇಟಿ ಮಾಡಿ ತಳ್ಳೋ ಗಾಡಿಯಲ್ಲಿ ಇಡ್ಲಿ ತಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

Published : Sep 08, 2026, 01:09 PM IST
Karnataka CM DK Shivakumar Visits APMC Yeshwantpur and Had A conversation of Working Class People Ate Idli with Them

ಸಾರಾಂಶ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ರೈತರು, ವರ್ತಕರು, ಹಮಾಲಿಗಳ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿದ್ದಾರೆ. ಮಂಗಳವಾರ ಬೆಳಗ್ಗೆ ಸುಮಾರು 7 ಗಂಟೆಗೆ ಎಪಿಎಂಸಿಗೆ ಆಗಮಿಸಿದ ಸಿಎಂ, ಮಾರುಕಟ್ಟೆಯ ವಿವಿಧ ಭಾಗಗಳಿಗೆ ತೆರಳಿ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ರೈತರು, ವರ್ತಕರು ಹಾಗೂ ಹಮಾಲಿಗಳ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿದ್ದಾರೆ. ಮಂಗಳವಾರ ಬೆಳಗ್ಗೆ ಸುಮಾರು 7 ಗಂಟೆಗೆ ಎಪಿಎಂಸಿಗೆ ಆಗಮಿಸಿದ ಸಿಎಂ, ಮಾರುಕಟ್ಟೆಯ ವಿವಿಧ ಭಾಗಗಳಿಗೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಹಮಾಲಿಗಳ ಜೊತೆ ರಸ್ತೆಬದಿ ಹೋಟೆಲ್‌ನಲ್ಲಿ ಇಡ್ಲಿ

ಎಪಿಎಂಸಿ ಪರಿಶೀಲನೆ ವೇಳೆ ರಸ್ತೆಬದಿಯ ಸಣ್ಣ ಪೆಟ್ಟಿಗೆ ಅಂಗಡಿಗೆ ತೆರಳಿದ ಡಿಕೆಶಿ, ಅಲ್ಲಿದ್ದ ಹಮಾಲಿಗಳ ಜೊತೆ ಕುಳಿತು ಇಡ್ಲಿ ತಿಂದು ಉಪಾಹಾರ ಸೇವಿಸಿದರು. ಈ ವೇಳೆ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ವಿಚಾರಿಸಿದರು. ಸಾಮಾನ್ಯರಂತೆ ರಸ್ತೆಬದಿ ಹೋಟೆಲ್‌ನಲ್ಲಿ ಹಮಾಲಿಗಳ ಜೊತೆ ಕುಳಿತು ಉಪಾಹಾರ ಸೇವಿಸಿದ ಸಿಎಂ ಅವರ ದೃಶ್ಯ ಇದೀಗ ಗಮನ ಸೆಳೆದಿದೆ.

ಈರುಳ್ಳಿ ಬೆಲೆ ಕುಸಿತದ ಬಗ್ಗೆ ವರ್ತಕರ ಅಳಲು

ಎಪಿಎಂಸಿ ವರ್ತಕರು ಈರುಳ್ಳಿ ಬೆಲೆ ಸತತವಾಗಿ ಕುಸಿಯುತ್ತಿದೆ ಎಂದು ಡಿಕೆಶಿ ಅವರ ಗಮನಕ್ಕೆ ತಂದಿದ್ದಾರೆ. ಹಿಂದಿನ ದಿನ ಕೆಜಿಗೆ ₹65 ಇದ್ದ ಈರುಳ್ಳಿ ಬೆಲೆ, ಮರುದಿನ ₹55ಕ್ಕೆ ಇಳಿದಿದೆ ಎಂದು ತಿಳಿಸಿದ್ದಾರೆ. ರೈತರೊಂದಿಗೆ ಚರ್ಚಿಸಿದ ವೇಳೆ ಮಾರುಕಟ್ಟೆಗೆ ಈರುಳ್ಳಿ ಸೇರಿದಂತೆ ಕೃಷಿ ಉತ್ಪನ್ನಗಳನ್ನು ತರಲು ಲಾರಿ ಬಾಡಿಗೆ ಹಾಗೂ ಸಾಗಣೆ ವೆಚ್ಚ ಹೆಚ್ಚಾಗಿರುವುದು ರೈತರಿಗೆ ಹೊರೆಯಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಈರುಳ್ಳಿ, ಆಲೂಗಡ್ಡೆ, ಶುಂಠಿ ಮಂಡಿ ಪರಿಶೀಲನೆ

ಕೃಷಿ ಉತ್ಪನ್ನಗಳ ಬೆಲೆ ನಿಗದಿ ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆ ಡಿಕೆಶಿ ಮಾಹಿತಿ ಪಡೆದಿದ್ದಾರೆ. ಗುಣಮಟ್ಟದ ಆಧಾರದ ಮೇಲೆ ದರ ನಿಗದಿ, ಆಲೂಗಡ್ಡೆ ಹರಾಜು ಪ್ರಕ್ರಿಯೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಇದರ ಜೊತೆಗೆ ಶುಂಠಿ ಮಂಡಿಯ ವ್ಯವಹಾರಗಳನ್ನೂ ಪರಿಶೀಲಿಸಿ, ರೈತರು ಮತ್ತು ವ್ಯಾಪಾರಿಗಳೊಂದಿಗೆ ಚರ್ಚೆ ನಡೆಸಿದರು.

‘25-30 ವರ್ಷ ದುಡಿದರೂ ಸ್ವಂತ ಮನೆ ಇಲ್ಲ’

ಎಪಿಎಂಸಿಯ ಸ್ಥಳೀಯ ವ್ಯಾಪಾರಿ ಮಹಿಳೆಯರೊಂದಿಗೂ ಸಿಎಂ ಮಾತುಕತೆ ನಡೆಸಿದರು. ಈ ವೇಳೆ ಸ್ವಂತ ಮನೆ ಅಥವಾ ನಿವೇಶನ ಇದೆಯೇ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕೆಲವು ಮಹಿಳೆಯರು, 25ರಿಂದ 30 ವರ್ಷಗಳಿಂದ ಬೆಂಗಳೂರಿನಲ್ಲಿ ದುಡಿಯುತ್ತಿದ್ದರೂ ಸ್ವಂತ ಮನೆ ಹೊಂದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಮನೆ ಅಥವಾ ನಿವೇಶನಕ್ಕಾಗಿ ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಸೌಲಭ್ಯ ಸಿಕ್ಕಿಲ್ಲ. ಪ್ರತಿ ತಿಂಗಳು ₹5ರಿಂದ ₹6 ಸಾವಿರದವರೆಗೆ ಬಾಡಿಗೆ ಪಾವತಿಸುತ್ತಿರುವುದಾಗಿ ತಿಳಿಸಿದ್ದಾರೆ.

‘ಫ್ರೀ ಕರೆಂಟ್ ಕೊಡುತ್ತಿರುವವರು ಯಾರು?’

ಮಹಿಳೆಯರೊಂದಿಗೆ ಮಾತನಾಡುವ ವೇಳೆ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದೆ ಎಂಬ ಮಾತು ಕೇಳಿಬಂದಿದೆ. ಆಗ ಡಿಕೆಶಿ ‘ಫ್ರೀ ಕರೆಂಟ್ ಕೊಡುತ್ತಿರುವವರು ಯಾರು?’ ಎಂದು ಪ್ರಶ್ನಿಸಿದ್ದಾರೆ. ಕೆಲವರು ‘ನೀವೇ’, ಮತ್ತಷ್ಟು ಮಂದಿ ‘ಸಿದ್ದರಾಮಯ್ಯ’ ಹಾಗೂ ಇನ್ನು ಕೆಲವರು ‘ಕಾಂಗ್ರೆಸ್ ಸರ್ಕಾರ’ ಎಂದು ಉತ್ತರಿಸಿದ್ದು, ಇದರಿಂದ ಸಿಎಂ ನಗೆ ಬೀರಿದ್ದಾರೆ ಎಂದು ವರದಿ ತಿಳಿಸಿದೆ.

ಗೃಹಲಕ್ಷ್ಮಿ ಹಣ ಬರುತ್ತಿದೆಯಾ?

ಇದೇ ವೇಳೆ ಗೃಹಲಕ್ಷ್ಮಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನ ಸಿಗುತ್ತಿದೆಯೇ ಎಂದು ಡಿಕೆಶಿ ವಿಚಾರಿಸಿದ್ದಾರೆ. ಕೆಲವರು ಹಣ ಬರುತ್ತಿದೆ ಎಂದು ಹೇಳಿದರೆ, ಇನ್ನು ಕೆಲವರು ಕಳೆದ ಮೂರು ತಿಂಗಳಿಂದ ಹಣ ಬಂದಿಲ್ಲ ಎಂದು ತಿಳಿಸಿದ್ದಾರೆ.

ಎಪಿಎಂಸಿಯಲ್ಲಿ ಬಾಲಕಾರ್ಮಿಕರು; ಸಿಎಂ ಗರಂ

ಯಶವಂತಪುರ ಎಪಿಎಂಸಿಯಲ್ಲಿ ಬಾಲಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂಬ ದೂರು ಕೂಡ ಸಿಎಂಗೆ ಬಂದಿದೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಡಿಕೆಶಿ, ಮಕ್ಕಳಿಂದ ಕೂಲಿ ಕೆಲಸ ಮಾಡಿಸುವುದು ಕಾನೂನುಬಾಹಿರ ಎಂದು ಹೇಳಿ, ಬಾಲಕಾರ್ಮಿಕರನ್ನು ಕೆಲಸಕ್ಕೆ ಬಳಸುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಸಂಜೆಯೊಳಗೆ ಬಾಲಕಾರ್ಮಿಕ ಪದ್ಧತಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆಯೂ ಸೂಚನೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

‘ಎಲ್ಲಾ ಸಚಿವರು ಎಪಿಎಂಸಿಗಳಿಗೆ ಭೇಟಿ ನೀಡಲಿ’

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ರೈತರು, ವರ್ತಕರು ಹಾಗೂ ಹಮಾಲಿಗಳ ಸಮಸ್ಯೆಗಳನ್ನು ನೇರವಾಗಿ ತಿಳಿದುಕೊಳ್ಳಲು ಭೇಟಿ ನೀಡಿರುವುದಾಗಿ ಹೇಳಿದರು. ಮಾರುಕಟ್ಟೆಯಲ್ಲಿ ಹಲವು ಮೂಲಸೌಕರ್ಯಗಳ ಕೊರತೆ ಕಂಡುಬಂದಿದೆ ಎಂದು ಅವರು ತಿಳಿಸಿದ್ದು, ಇಂತಹ ಸಮಸ್ಯೆಗಳನ್ನು ಸ್ಥಳದಲ್ಲೇ ಅರಿಯಲು ಎಲ್ಲಾ ಸಚಿವರು ಎಪಿಎಂಸಿಗಳಿಗೆ ಭೇಟಿ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ರೈತರ ಸಮಸ್ಯೆ ಆಲಿಕೆ, ಈರುಳ್ಳಿ ಬೆಲೆ ಕುಸಿತದ ಪರಿಶೀಲನೆ, ಹಮಾಲಿಗಳ ಮನೆ ಸಮಸ್ಯೆ ಹಾಗೂ ಬಾಲಕಾರ್ಮಿಕರ ವಿರುದ್ಧ ಕ್ರಮದ ಸೂಚನೆ ಜೊತೆಗೆ ಹಮಾಲಿಗಳ ಜೊತೆ ರಸ್ತೆಬದಿ ಹೋಟೆಲ್‌ನಲ್ಲಿ ಇಡ್ಲಿ ಸವಿದ ಡಿಕೆಶಿ ಅವರ ಸರಳ ನಡೆ ಇದೀಗ ಸುದ್ದಿಯಾಗಿದೆ.

PREV
Read more Articles on
click me!

Recommended Stories

ಅಪರಾಧಿ ಪ್ರಜ್ವಲ್ ರೇವಣ್ಣಗೆ ಹೆಚ್ಚಿದ ಸಂಕಷ್ಟ, ಜೈಲಿನಿಂದಲೇ ವಶಕ್ಕೆ ಪಡೆಯಲು ಪೊಲೀಸರ ಸಿದ್ಧತೆ!
Bengaluru: 10 ನಿಮಿಷದ ಜರ್ನಿಗೆ ಈಗ 30 ನಿಮಿಷ; ಫ್ಲೈಓವರ್ ನಿರ್ಬಂಧದಿಂದ ಸಂಚಾರ ಅಸ್ತವ್ಯಸ್ತ, ಸವಾರರು ಹೈರಾಣ!