
ಬೆಂಗಳೂರಿನ ಹೊಸಕೋಟೆ ಸಮೀಪದ ಪುಟ್ಟ ಹಳ್ಳಿಯಿಂದ ಯುರೋಪ್‌ನ ಲಿಥುವೇನಿಯಾ ದೇಶಕ್ಕೆ ತೆರಳಿ, ಇಂದು ಅಲ್ಲಿನ ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿರುವ ಕನ್ನಡಿಗ. ಆರಂಭದಲ್ಲಿ ವಿದೇಶದಲ್ಲಿ ಓದುವುದಕ್ಕಾಗಿ ಸಾಲ ಮಾಡಿ, ಸಾಕಷ್ಟು ಸವಾಲುಗಳನ್ನು ಎದುರಿಸಿದ್ದ ಈ ಯುವಕ ಇಂದು ಸುಮಾರು 100 ಭಾರತೀಯ ಚಾಲಕರಿಗೆ ಉದ್ಯೋಗ ದೊರಕಿಸಿಕೊಡುವ ಮಟ್ಟಕ್ಕೆ ಬೆಳೆದಿದ್ದಾರೆ. ಅಷ್ಟೇ ಅಲ್ಲ, ಪ್ರತಿಯೊಬ್ಬ ಚಾಲಕನಿಗೂ ದಿನಕ್ಕೆ ಸುಮಾರು 90 ಯುರೋ (ಭಾರತೀಯ ರೂಪಾಯಿಗಳಲ್ಲಿ ಅಂದಾಜು ₹9,000) ವೇತನ ಸಿಗುವಂತೆ ಮಾಡಿದ್ದಾರೆ. ಇದರ ಬಗ್ಗೆ ಕಲಾಮಾಧ್ಯಮದಲ್ಲಿ ಇವರು ಮಾತಾಡಿದ್ದಾರೆ.
ಈ ಕನ್ನಡಿಗನ ಹೆಸರು ಬ್ರಿಜೇಶ್. ಇವರ ಮೂಲ ಊರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸಮೀಪದ ಬೇಗೂರು ಗ್ರಾಮ. ರೈತ ಕುಟುಂಬದಲ್ಲಿ ಬೆಳೆದ ಬ್ರಿಜೇಶ್, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಊರಿನಲ್ಲೇ ಮುಗಿಸಿ, ಪಿಯುಸಿ ಓದಲು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿಗೆ ಸೇರಿದರು. ಬಳಿಕ ರಾಮಕೃಷ್ಣ ಆಶ್ರಮದಲ್ಲಿದ್ದುಕೊಂಡು ವಿದ್ಯಾಭ್ಯಾಸ ಮುಂದುವರಿಸಿದರು. ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ಪೂರ್ಣಗೊಳಿಸಿದ ಅವರು, ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ಕನಸು ಕಂಡಿದ್ದರು. ಆರಂಭದಲ್ಲಿ ಜರ್ಮನಿಗೆ ಹೋಗಲು ಪ್ರಯತ್ನಿಸಿ, ಜರ್ಮನ್ ಭಾಷೆಯನ್ನೂ ಕಲಿತಿದ್ದರು. ಆದರೆ ಅಲ್ಲಿನ ಪ್ರವೇಶ ಪ್ರಕ್ರಿಯೆ ವಿಳಂಬ ಹಾಗೂ ಸ್ಪರ್ಧೆಯಿಂದಾಗಿ ಆ ಪ್ರಯತ್ನ ಕೈಗೂಡಲಿಲ್ಲ.
ಕೊನೆಗೆ ಲಿಥುವೇನಿಯಾದಲ್ಲಿ ಉನ್ನತ ಶಿಕ್ಷಣ ಪಡೆಯುವ ಅವಕಾಶ ಸಿಕ್ಕಿತು. 2015ರಲ್ಲಿ ಅಲ್ಲಿಗೆ ತೆರಳಿದ ಬ್ರಿಜೇಶ್, ಕೌನಾಸ್‌ನ ಕೆಟಿಯು ವಿಶ್ವವಿದ್ಯಾಲಯದಲ್ಲಿ ಮೆಕಾಟ್ರಾನಿಕ್ಸ್ ಮತ್ತು ರೊಬೊಟಿಕ್ಸ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಆರಂಭಿಸಿದರು. ಎರಾಸ್ಮಸ್ ಕಾರ್ಯಕ್ರಮದಡಿ ಸ್ಪೇನ್‌ನ ಬಾರ್ಸಿಲೋನಾಗೆ ತೆರಳಿ ಒಂದು ಸೆಮಿಸ್ಟರ್ ಅಧ್ಯಯನವನ್ನೂ ಮಾಡಿದರು. 2017ರಲ್ಲಿ ತಮ್ಮ ಶಿಕ್ಷಣ ಪೂರ್ಣಗೊಳಿಸಿದರು.
ವಿದೇಶದಲ್ಲಿ ಓದು ಮುಗಿಸಿದ ತಕ್ಷಣವೇ ಕೆಲಸ ಸಿಗುವುದು ಸುಲಭವಾಗಿರಲಿಲ್ಲ. ಅದರಲ್ಲೂ ಆಗಿನ ದಿನಗಳಲ್ಲಿ ಉದ್ಯೋಗಾವಕಾಶಗಳು ಕಡಿಮೆ ಇದ್ದವು. ಹೀಗಾಗಿ ಬ್ರಿಜೇಶ್ ವಿವಿಧ ಕಂಪನಿಗಳಿಗೆ ನೇರವಾಗಿ ಇಮೇಲ್ ಮಾಡಿ ತಮ್ಮ ರೆಸ್ಯೂಮ್ ಕಳುಹಿಸುತ್ತಿದ್ದರು. ಕೊನೆಗೆ 2017ರ ಅಕ್ಟೋಬರ್‌ನಲ್ಲಿ ಇಫ್ಟೆಕ್ ಇನ್ನೋವೇಟಿವ್ ಟೆಕ್ನಾಲಜೀಸ್ ಎಂಬ ಕಂಪನಿಯಲ್ಲಿ ಪ್ರೊಡಕ್ಷನ್ ಹೆಡ್ ಆಗಿ ಕೆಲಸ ಆರಂಭಿಸಿದರು.
ಜೆಸಿಬಿ, ರೋಡ್ ರೋಲರ್‌ಗಳಂತಹ ಭಾರೀ ವಾಹನಗಳಲ್ಲಿ ಡೀಸೆಲ್ ಬಳಕೆಯನ್ನು ಅಳೆಯುವ ಡಿಜಿಟಲ್ ಫ್ಯೂಯಲ್ ಮೀಟರ್ ತಯಾರಿಸುವ ಕೆಲಸದಲ್ಲಿ ಅವರು ತೊಡಗಿಸಿಕೊಂಡರು. ವಾಹನಗಳಿಗೆ ಈ ಸಾಧನ ಅಳವಡಿಸಿದರೆ ಎಷ್ಟು ಡೀಸೆಲ್ ಬಳಕೆಯಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗುತ್ತಿತ್ತು. ಆರಂಭದಲ್ಲಿ ತಿಂಗಳಿಗೆ ಕೇವಲ 600 ಯುರೋ ಸಂಬಳ ಪಡೆಯುತ್ತಿದ್ದರು. ಅಂದಿನ ಭಾರತೀಯ ರೂಪಾಯಿ ಮೌಲ್ಯದ ಪ್ರಕಾರ ಇದು ಸುಮಾರು ₹42 ಸಾವಿರದಿಂದ ₹50 ಸಾವಿರದಷ್ಟಿತ್ತು. ದುಬಾರಿ ಶಿಕ್ಷಣಕ್ಕಾಗಿ ಮಾಡಿದ ಸಾಲವನ್ನು ತೀರಿಸುವ ಜವಾಬ್ದಾರಿಯೂ ಅವರ ಮೇಲಿತ್ತು.
ಕೋವಿಡ್ ಬಳಿಕ ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ಯುರೋಪ್‌ನ ಸಾರಿಗೆ ಕ್ಷೇತ್ರದಲ್ಲಿ ಚಾಲಕರ ಕೊರತೆ ಎದುರಾಯಿತು. ಬ್ರಿಜೇಶ್ ಕೆಲಸ ಮಾಡುತ್ತಿದ್ದ ಸಂಸ್ಥೆಯ ಮಾಲೀಕರಿಗೆ ಸಾರಿಗೆ ಕಂಪನಿಯೂ ಇತ್ತು. ಸುಮಾರು 80ರಿಂದ 100 ಟ್ರಕ್‌ಗಳನ್ನು ಹೊಂದಿದ್ದ ಸಂಸ್ಥೆಗೆ ಚಾಲಕರ ಅಗತ್ಯ ಹೆಚ್ಚಾಯಿತು. ಈ ಸಂದರ್ಭದಲ್ಲಿ ಭಾರತದಿಂದ ಚಾಲಕರನ್ನು ಕರೆತರುವ ಯೋಜನೆ ರೂಪಿಸಲಾಯಿತು. ಅದರ ಜವಾಬ್ದಾರಿ ಬ್ರಿಜೇಶ್ ಅವರಿಗೆ ಸಿಕ್ಕಿತು. ಹೀಗೆ ಭಾರತೀಯ ಚಾಲಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭವಾಯಿತು.
ಇಂದು ಅವರ ಮೇಲ್ವಿಚಾರಣೆಯಲ್ಲಿ ಸುಮಾರು 100 ಭಾರತೀಯರು ಡ್ರೈವಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಶೇಷವೆಂದರೆ, ಇವರು ಸಾಮಾನ್ಯ ಕಾರುಗಳನ್ನಲ್ಲ, ಬರೋಬ್ಬರಿ 45 ಅಡಿ ಉದ್ದದ ಬೃಹತ್ ಟ್ರೇಲರ್ ಟ್ರಕ್‌ಗಳನ್ನು ಚಲಾಯಿಸುತ್ತಾರೆ.
ಬ್ರಿಜೇಶ್ ಹೇಳುವ ಪ್ರಕಾರ, ಲಿಥುವೇನಿಯಾದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಟ್ರಕ್ ಚಾಲಕರಿಗೆ ದಿನಕ್ಕೆ 90 ಯುರೋ ವೇತನ ನೀಡಲಾಗುತ್ತದೆ. ಅಂದರೆ ಭಾರತೀಯ ರೂಪಾಯಿಗಳಲ್ಲಿ ಅಂದಾಜು ₹9 ಸಾವಿರಕ್ಕೂ ಹೆಚ್ಚು ಹಣ ಸಿಗುತ್ತದೆ. ಆರಂಭದಲ್ಲಿ ಭಾರತದಿಂದ ಚಾಲಕರನ್ನು ಕರೆತಂದಾಗ ದಿನಕ್ಕೆ ಸಿಗುತ್ತಿದ್ದ ವೇತನ ಇದಕ್ಕಿಂತ ಕಡಿಮೆಯಿತ್ತು. ಆದರೆ ಈಗ ಚಾಲಕರ ಬೇಡಿಕೆ ಹೆಚ್ಚಾಗಿದೆ. ಭಾರತೀಯರ ಜೊತೆಗೆ ಫಿಲಿಪೈನ್ಸ್‌ನವರನ್ನೂ ನೇಮಕ ಮಾಡಿಕೊಳ್ಳಲಾಗುತ್ತಿದೆ.
ವಿದೇಶಕ್ಕೆ ಬರುವವರು ಆರಂಭದಲ್ಲೇ ದೊಡ್ಡ ಸಂಬಳದ ನಿರೀಕ್ಷೆ ಇಟ್ಟುಕೊಳ್ಳಬಾರದು ಎಂಬುದು ಬ್ರಿಜೇಶ್ ಅವರ ಸಲಹೆ. ತಾವು ಕೂಡ ತಿಂಗಳಿಗೆ 600 ಯುರೋ ಸಂಬಳದಿಂದ ವೃತ್ತಿ ಆರಂಭಿಸಿದ್ದಾಗಿ ಅವರು ಹೇಳಿದ್ದಾರೆ. "ಮೊದಲು ಕೆಲಸಕ್ಕೆ ಸೇರಿಕೊಳ್ಳಿ. ನಿಮಗೆ ನೀಡಿದ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿ. ನಿಮ್ಮ ಕೆಲಸದ ಮೂಲಕ ಸಾಮರ್ಥ್ಯ ಸಾಬೀತುಪಡಿಸಿ. ಆಗ ಸಂಬಳ ಮತ್ತು ಅವಕಾಶಗಳು ತಾನಾಗಿಯೇ ಹೆಚ್ಚಾಗುತ್ತವೆ" ಎಂಬುದು ಅವರ ಅಭಿಪ್ರಾಯ. ಆರಂಭದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದ ಅವರು, ಈಗ ಹಂತ ಹಂತವಾಗಿ ಉತ್ತಮ ಜೀವನ ರೂಪಿಸಿಕೊಂಡಿದ್ದಾರೆ.
ಬ್ರಿಜೇಶ್ 2020ರಲ್ಲಿ ಕೋಲಾರದ ಯುವತಿಯನ್ನು ವಿವಾಹವಾದರು. ಮದುವೆಯ ಬಳಿಕ ಪತ್ನಿಯನ್ನೂ ಲಿಥುವೇನಿಯಾಗೆ ಕರೆದುಕೊಂಡು ಬಂದರು. ಪತ್ನಿ ಭಾರತದಲ್ಲಿ ಎಂಟೆಕ್ ಪೂರ್ಣಗೊಳಿಸಿ, ಸಹಾಯಕ ಪ್ರಾಧ್ಯಾಪಕಿಯಾಗಿಯೂ ಕೆಲಸ ಮಾಡಿದ್ದರು. ಲಿಥುವೇನಿಯಾಗೆ ಬಂದ ಬಳಿಕ ತಮ್ಮ ಕ್ಷೇತ್ರದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸಿದ ಅವರು, ಮೂರು-ನಾಲ್ಕು ತಿಂಗಳಲ್ಲೇ ಐಟಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡರು. ಈಗ ದಂಪತಿ ಇಬ್ಬರೂ ಅಲ್ಲಿಯೇ ಉದ್ಯೋಗದಲ್ಲಿದ್ದಾರೆ.
ಬ್ರಿಜೇಶ್ ಅವರ ತಂದೆ ಕೃಷಿಕರು. ಕುಟುಂಬದಲ್ಲಿ ಆರ್ಥಿಕವಾಗಿ ಹೆಚ್ಚಿನ ಅನುಕೂಲತೆ ಇರಲಿಲ್ಲ. ವಿದೇಶದಲ್ಲಿ ಶಿಕ್ಷಣ ಪಡೆಯಲು ಸುಮಾರು ₹12ರಿಂದ ₹13 ಲಕ್ಷ ಖರ್ಚಾಗಿತ್ತು. ಇದಕ್ಕಾಗಿ ಕುಟುಂಬ ಸಾಕಷ್ಟು ತ್ಯಾಗ ಮಾಡಿತ್ತು. ಆರಂಭದಲ್ಲಿ ಸಾಲದ ಹೊರೆ, ಕಡಿಮೆ ಸಂಬಳ, ಉದ್ಯೋಗದ ಹುಡುಕಾಟ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಿದ್ದರು.