GBA ಚುನಾವಣೆ ಮತ್ತೆ ಮುಂದೂಡಿಕೆ? ಸುಪ್ರೀಂ ಮೆಟ್ಟಿಲೇರಿದ ರಾಜ್ಯ ಚುನಾವಣಾ ಆಯೋಗ!

Bhimasi M Koleppanavar   | Kannada Prabha
Published : Nov 13, 2026, 08:03 AM IST
GBA

ಸಾರಾಂಶ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಯನ್ನು ಮತ್ತೊಂದು ತಿಂಗಳು ಮುಂದೂಡುವಂತೆ ರಾಜ್ಯ ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಹಳೆ ಮತದಾರರ ಪಟ್ಟಿಯ ಆಧಾರದ ಮೇಲೆ ಚುನಾವಣೆ ನಡೆಸಲು ಅನುಮತಿ ಕೋರಿದ್ದು, ಆಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗಿದೆ.

ಬೆಂಗಳೂರಿನಲ್ಲಿ ಸ್ಥಳೀಯ ಆಡಳಿತದ ಚುಕ್ಕಾಣಿ ಹಿಡಿಯಲು ಕಾಯುತ್ತಿರುವ ಆಕಾಂಕ್ಷಿಗಳಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ದ ಚುನಾವಣೆ ನಡೆಸುವುದಕ್ಕೆ ಒಂದು ತಿಂಗಳು ಹೆಚ್ಚುವರಿ ಕಾಲಾವಕಾಶ ಕೋರಿ ರಾಜ್ಯ ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ಗೆ ಅಧಿಕೃತವಾಗಿ ಅರ್ಜಿ ಸಲ್ಲಿಸಿದೆ. ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌, 2026ರ ಡಿಸೆಂಬರ್ 31ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಗಡುವು ನೀಡಿತ್ತು. ಆದರೆ, ಎಸ್‌ಐಆರ್ (ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ) ಪ್ರಕ್ರಿಯೆ ಹಾಗೂ ಇನ್ನಿತರ ಆಡಳಿತಾತ್ಮಕ ಕಾರಣಗಳನ್ನು ಮುಂದಿಟ್ಟುಕೊಂಡು, ಚುನಾವಣಾ ದಿನಾಂಕವನ್ನು 2027ರ ಜನವರಿ 31ರವರೆಗೆ ವಿಸ್ತರಿಸುವಂತೆ ಆಯೋಗ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ.

ಹಳೆ ಮತದಾರರ ಪಟ್ಟಿಯಲ್ಲಿ ಚುನಾವಣೆಗೆ ಅನುಮತಿ ನೀಡಿ!

ರಾಜ್ಯದ ಎಲ್ಲಾ ಪಂಚಾಯತ್‌ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ 2025ರ ಅಕ್ಟೋಬರ್‌ 1ರಂದು ಅಸ್ತಿತ್ವದಲ್ಲಿದ್ದ ಮತದಾರರ ಪಟ್ಟಿಯ ಆಧಾರದ ಮೇಲೆ ಚುನಾವಣೆ ನಡೆಸಲು ಅನುಮತಿ ನೀಡಬೇಕು. ಜಿಬಿಎ ಚುನಾವಣೆಗೆ ಕೂಡ 2026ರ ಏಪ್ರಿಲ್‌ 18ರಂದು ಸಿದ್ಧಪಡಿಸಿ ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿ ಬಳಸಿಕೊಂಡು ಚುನಾವಣೆ ನಡೆಸಲು ಅನುಮತಿ ನೀಡಬೇಕು. ಈ ಹಿನ್ನೆಲೆಯಲ್ಲಿ 2025ರ ಜನವರಿ 1ರ ಸ್ಥಿತಿಗತಿಗನುಗುಣವಾಗಿರುವ ಮತದಾರರ ಪಟ್ಟಿಯ ದತ್ತಾಂಶವನ್ನು ಕರ್ನಾಟಕ ರಾಜ್ಯ ಚುನಾವಣಾ ಆಯೋಗಕ್ಕೆ ಒದಗಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು. ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು 2027ರ ಜನವರಿ 31ರವರೆಗೆ ಕಾಲಾವಕಾಶ ವಿಸ್ತರಿಸಬೇಕು ಎಂದು ನ್ಯಾಯಾಯಕ್ಕೆ ಮನವಿ ಮಾಡಿದೆ.

6 ವರ್ಷಗಳಿಂದ ಇಲ್ಲ ಕಾರ್ಪೋರೇಟರಗಳು!

ಕಳೆದ 6 ವರ್ಷಗಳಿಂದ ಬೆಂಗಳೂರಿನ ಯಾವುದೇ ವಾರ್ಡ್‌ಗಳಿಗೂ ಕಾರ್ಪೋರೇಟರ್‌ಗಳು (ಪಾಲಿಕೆ ಸದಸ್ಯರು) ಇಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅಧಿಕಾರದ ಅವಧಿ 2020ರಲ್ಲೇ ಮುಕ್ತಾಯಗೊಂಡಿತ್ತು. ಆಗ ಕೋವಿಡ್ ಹಾಗೂ ವಾರ್ಡ್ ವಿಂಗಡಣೆ ನೆಪದಲ್ಲಿ ಚುನಾವಣೆಯನ್ನು ಬಿಜೆಪಿ ಸರ್ಕಾರ ಮುಂದೂಡಿಕೆ ಮಾಡಿತ್ತು. ಇದನ್ನು ಪ್ರಶ್ನಿಸಿ, ಕಾಂಗ್ರೆಸ್ ಕೋರ್ಟ್ ಮೆಟ್ಟಿಲೇರಿತ್ತು. ಬಳಿಕ, ಕಾಂಗ್ರೆಸ್ ಅಧಿಕಾರಕ್ಕೆ ಬಂದು 4 ವರ್ಷಗಳು ಸಮೀಪಿಸುತ್ತಿದ್ದರೂ, ಚುನಾವಣೆ ನಡೆದಿಲ್ಲ. ಇದರ ನಡುವೆ, ಬಿಬಿಎಂಪಿಯನ್ನು ವಿಸರ್ಜಿಸಿ ''''ಗ್ರೇಟರ್ ಬೆಂಗಳೂರು ಪ್ರಾಧಿಕಾರ'''' (ಜಿಬಿಎ) ಹಾಗೂ 5 ಹೊಸ ನಗರಪಾಲಿಕೆಗಳನ್ನು ರಚಿಸಲಾಗಿದೆ.

PREV
Read more Articles on
click me!

Recommended Stories

ಬೆಂಗಳೂರು, ಮೈಸೂರಲ್ಲಿ ಇಂದು ಮೋದಿ ಹವಾ! ಎಲ್ಲೆಲ್ಲಿ ಏನೇನು ಕಾರ್ಯಕ್ರಮ? ಸಮಯ, ಸ್ಥಳದ ಸಂಪೂರ್ಣ ವಿವರ ಇಲ್ಲಿದೆ
Karnataka News Today Live Updates: ಬೆಂಗಳೂರು, ಮೈಸೂರಲ್ಲಿ ಇಂದು ಮೋದಿ ಹವಾ, ಪೊಲೀಸರ ಹದ್ದಿನ ಕಣ್ಣು