High Court: ಪ್ರಿಂಟ್ ದೋಷಕ್ಕೆ ಅಭ್ಯರ್ಥಿ ಹೊಣೆಯಲ್ಲ; ಉದ್ಯೋಗ ಕಳೆದುಕೊಂಡಿದ್ದ ಹುಡುಗನಿಗೆ ಹೈಕೋರ್ಟ್ ನೆರವು!

Bhimasi M Koleppanavar   | Kannada Prabha
Published : Nov 13, 2026, 07:46 AM IST
Karnataka High court

ಸಾರಾಂಶ

ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ಅಧಿಕಾರಿಗಳಿಂದಾದ ಮುದ್ರಣ ದೋಷದಿಂದ ಅಬಕಾರಿ ರಕ್ಷಕ ಹುದ್ದೆ ಕಳೆದುಕೊಂಡಿದ್ದ ಅಭ್ಯರ್ಥಿಗೆ ಹೈಕೋರ್ಟ್‌ ನೆರವಾಗಿದೆ. ಎಂಟು ವಾರಗಳಲ್ಲಿ ಅಭ್ಯರ್ಥಿಗೆ ಹುದ್ದೆ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ಅಧಿಕಾರಿಗಳಿಂದಾದ ಮುದ್ರಣ ದೋಷದಿಂದ ಅಬಕಾರಿ ರಕ್ಷಕ ಹುದ್ದೆ ಕಳೆದುಕೊಂಡಿದ್ದ ಅಭ್ಯರ್ಥಿಗೆ ನೆರವಾಗಿರುವ ಹೈಕೋರ್ಟ್‌, ಎಂಟು ವಾರಗಳಲ್ಲಿ ಅಭ್ಯರ್ಥಿಗೆ ಹುದ್ದೆ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ತುಮಕೂರಿನ ಮಂಜುನಾಥ್‌ ಎಂಬುವರಿಗೆ ಅಬಕಾರಿ ರಕ್ಷಕ ಹುದ್ದೆ ನೀಡುವಂತೆ ಸೂಚಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) 2018ರಲ್ಲಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಪಾರದರ್ಶಕ ವ್ಯವಸ್ಥೆ ಅಗತ್ಯ!

ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತ ವ್ಯವಸ್ಥೆಯೇ ಇಂದಿನ ಅಗತ್ಯವಾಗಿದೆ. ಶಾಲಾ ದಾಖಲೆಗಳಲ್ಲಿ ಅಧಿಕಾರಿಗಳು ಮಾಡುವ ತಪ್ಪುಗಳಿಗೆ ವಿದ್ಯಾರ್ಥಿಗಳು ಅಥವಾ ಪೋಷಕರು ಹೊಣೆಯಲ್ಲ. ಅಧಿಕಾರಿಗಳಿಂದ ಆಗಿರುವ ದೋಷ ಹಾಗೂ ಆಡಳಿತಾತ್ಮಕ ನಿರ್ಲಕ್ಷ್ಯಕ್ಕೆ ನಿರುದ್ಯೋಗಿ ಅಭ್ಯರ್ಥಿ ಬಲಿಪಶುವಾಗಬಾರದು ಮತ್ತು ಆತ ತನ್ನ ತುತ್ತಿನ ಚೀಲ ಕಳೆದುಕೊಳ್ಳುವಂತಾಗಬಾರದು ಎಂದು ಪೀಠ ಅಭಿಪ್ರಾಯಪಟ್ಟಿದೆ.

ನಮೂದಾಗಿದ್ದೇನು?

ಕೆಪಿಎಸ್​ಸಿಯು 2008ರಲ್ಲಿ ನಡೆಸಿದ ಅಬಕಾರಿ ರಕ್ಷಕ (ಪುರುಷ) ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ತುಮಕೂರು ತಾಲೂಕಿನ ಕಳ್ಳಿಪಾಳ್ಯದ ಕೆ.ಮಂಜುನಾಥ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 231 ಅಂಕ ಗಳಿಸಿ ತೇರ್ಗಡೆಯಾಗಿದ್ದರು. 2010ರಲ್ಲಿ ಮೂಲ ದಾಖಲೆಗಳ ಪರಿಶೀಲನೆ ವೇಳೆ, ಅವರ ಶಾಲಾ ವರ್ಗಾವಣೆ ಪತ್ರ ಮತ್ತು ಇತರ ದಾಖಲೆಗಳಲ್ಲಿ ಜನ್ಮ ದಿನಾಂಕ 1982 ಜೂ.15 ಎಂದಿತ್ತು. ಆದರೆ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ಮುದ್ರಣ ದೋಷದಿಂದ 1980ರ ಜೂ.15 ಎಂದು ನಮೂದಾಗಿತ್ತು.

ಕೆಎಟಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿ!

ಇದರಿಂದ ವಯೋಮಿತಿ ಮೀರಿದೆ ಎಂಬ ಕಾರಣ ನೀಡಿ, ತಿದ್ದುಪಡಿ ಮಾಡಿದ ಅಂಕಪಟ್ಟಿ ಸಲ್ಲಿಸಲು ಕೆಲವೇ ದಿನಗಳ ಕಾಲಾವಕಾಶ ನೀಡಲಾಗಿತ್ತು. ನಿಗದಿತ ಸಮಯದಲ್ಲಿ ತಿದ್ದುಪಡಿ ದಾಖಲೆ ಸಲ್ಲಿಸಲು ಸಾಧ್ಯವಾಗದ ಕಾರಣ ಮಂಜುನಾಥ್ ಅವರಿಗಿಂತ ಕಡಿಮೆ ಅಂಕ ಪಡೆದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕೆಪಿಎಸ್‌ಸಿ ಅಂತಿಮ ಪಟ್ಟಿ ಪ್ರಕಟಿಸಿತ್ತು. ಅದನ್ನು ಪ್ರಶ್ನಿಸಿ ಮಂಜುನಾಥ್‌ ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಮಂಜುನಾಥ್‌ ಅವರಿಗೆ ಹುದ್ದೆ ನೀಡುವಂತೆ ಕೆಎಟಿ ನಿರ್ದೇಶಿಸಿತ್ತು. ಅದನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್‌ ಗೆ ತಕರಾರು ಅರ್ಜಿ ಸಲ್ಲಿಸಿ, ಜನ್ಮ ದಿನಾಂಕ ತಿದ್ದುಪಡಿಗೆ ಸಿವಿಲ್ ನ್ಯಾಯಾಲಯದ ಡಿಕ್ರಿ ಅಗತ್ಯವಿದೆ. ಆದರೆ, ಈ ಪ್ರಕರಣದಲ್ಲಿ ಡಿಕ್ರಿ ಇಲ್ಲದೆಯೇ ಶಿಕ್ಷಣ ಇಲಾಖೆ ಅಧಿಕಾರಿಗಳು 2011ರಲ್ಲಿ ಅಂಕಪಟ್ಟಿ ತಿದ್ದುಪಡಿ ಮಾಡಿದ್ದಾರೆ ಎಂದು ವಾದಿಸಿದ್ದರು.

ಸರ್ಕಾರದ ವಾದಕ್ಕೆ ಕೋರ್ಟ್ ಅಸಮಾಧಾನ!

ಸರ್ಕಾರದ ವಾದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಅಭ್ಯರ್ಥಿ ತಿದ್ದುಪಡಿಗಾಗಿ ಸಿವಿಲ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ವಿಚಾರಣೆ ಬಾಕಿ ಇರುವಾಗಲೇ ಸರ್ಕಾರಿ ಅಧಿಕಾರಿಯೇ ತಪ್ಪನ್ನು ಸರಿಪಡಿಸಿ ಹೊಸ ಅಂಕಪಟ್ಟಿ ನೀಡಿದ್ದಾರೆ. ಇದರಿಂದ ಆ ದಾವೆ ನಿರರ್ಥಕವಾಗಿದೆ. ಇದೀಗ ತನ್ನದೇ ಅಧಿಕಾರಿಯ ತಪ್ಪನ್ನು ಮುಂದಿಟ್ಟುಕೊಂಡು ಸರ್ಕಾರ ಅಭ್ಯರ್ಥಿಯ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಜನ್ಮ ದಿನಾಂಕದ ಪುರಾವೆಯಾಗಿ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ವರ್ಗಾವಣೆ ಪ್ರಮಾಣಪತ್ರ (ಟಿಸಿ) ಅಥವಾ ಇತರ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಲು ಕೆಪಿಎಸ್‌ಸಿ ಆಯ್ಕೆ ನೀಡಿತ್ತು. ಸರಿಯಾದ ದಿನಾಂಕವಿದ್ದ ವರ್ಗಾವಣೆ ಪತ್ರ ಸಲ್ಲಿಸಿದ್ದರೂ, ಅದನ್ನು ಪರಿಗಣಿಸದಿರುವುದು ಕೆಪಿಎಸ್‌ಸಿಯ ತಪ್ಪು. ಇದರಿಂದ ಎಂಟು ವಾರಗಳಲ್ಲಿ ಮಂಜುನಾಥ್‌ಗೆ ಅಬಕಾರಿ ರಕ್ಷಕ ಹುದ್ದೆ ಕಲ್ಪಿಸಬೇಕು ಎಂದು ನಿರ್ದೇಶಿಸಿದೆ.

PREV
Read more Articles on
click me!

Recommended Stories

ಬಳಸಿದ ಅಡುಗೆ ಎಣ್ಣೆ ಮರುಬಳಕೆ ತಡೆಗೆ ಈಗ ಹೊಸ ಆ್ಯಪ್‌! ಈ 4 ನಗರಗಳಲ್ಲಿ ಪ್ರಾಯೋಗಿಕವಾಗಿ ಜಾರಿ
ಕಿಡ್ನಿ ಸಣ್ಣದಿದ್ದರೆ ಸೇನಾ ಉದ್ಯೋಗವಿಲ್ಲ: ಅಭ್ಯರ್ಥಿಗೆ ಮರುಪರೀಕ್ಷೆ ನಿರಾಕರಿಸಿ ಕೋರ್ಟ್ ಮಹತ್ವದ ತೀರ್ಪು! ಏನಿದು ಪ್ರಕರಣ?