ಹಣದ ಆಸೆ ಬೇಡ, ಉಗ್ರನ ಮಾಹಿತಿ ಇದ್ದಲ್ಲಿ NIAಗೆ ನೀಡಿ: ಮುಸ್ಲಿಮರಿಗೆ ಸಂದೇಶ ನೀಡಿದ ಇಮಾಮ್‌

Published : Feb 21, 2026, 11:19 AM IST
NIA

ಸಾರಾಂಶ

ಎನ್‌ಐಎಯಿಂದ 5 ಲಕ್ಷ ಬಹುಮಾನ ಘೋಷಿತ ಲಷ್ಕರ್-ಎ-ತೊಯ್ಬಾ ಉಗ್ರ ಜುನೈದ್ ಅಹ್ಮದ್ ಪತ್ತೆಗೆ, ಬೆಂಗಳೂರಿನ ಇಮಾಮ್ ಮಕ್ಸೂದ್ ಇಮ್ರಾನ್ ರಶಾದಿ ಸಮುದಾಯಕ್ಕೆ ಕರೆ ನೀಡಿದ್ದಾರೆ. ಹಣದಾಸೆಗಾಗಿ ಅಲ್ಲ, ದೇಶಸೇವೆಯಾಗಿ ಉಗ್ರನ ಮಾಹಿತಿ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಬೆಂಗಳೂರು (ಫೆ.21): ಲಷ್ಕರ್-ಎ-ತೊಯ್ಬಾ (LeT) ಉಗ್ರ ಜುನೈದ್ ಅಹ್ಮದ್ ಪತ್ತೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿರುವ ಬೆನ್ನಲ್ಲೇ, ಬೆಂಗಳೂರಿನ ಸಿಟಿ ಮಾರ್ಕೆಟ್ ಜಾಮಿಯಾ ಮಸೀದಿಯ ಮುಖ್ಯ ಇಮಾಮ್ ಮಕ್ಸೂದ್ ಇಮ್ರಾನ್ ರಶಾದಿ ಅವರು ಸಮುದಾಯಕ್ಕೆ ಮಹತ್ವದ ಸಂದೇಶ ನೀಡಿದ್ದಾರೆ. "ಸಮುದಾಯದ ಸದಸ್ಯರು ಬಹುಮಾನದ ಆಸೆಗಾಗಿ ಕಾಯಬಾರದು, ಬದಲಿಗೆ ದೇಶಸೇವೆಯ ಅಂಗವಾಗಿ ತಲೆಮರೆಸಿಕೊಂಡಿರುವ ಉಗ್ರನ ಬಗ್ಗೆ ಮಾಹಿತಿ ನೀಡಬೇಕು" ಎಂದು ಅವರು ಹೇಳಿದ್ದಾರೆ.

ಇಸ್ಲಾಂ ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ

ಮಾತನಾಡಿದ ಇಮಾಮ್ ರಶಾದಿ, "ಇಸ್ಲಾಂ ಧರ್ಮವು ಎಂದಿಗೂ ಭಯೋತ್ಪಾದಕ ಕೃತ್ಯಗಳನ್ನು ಅಥವಾ ಅಮಾಯಕರ ಕೊಲೆಯನ್ನು ಬೆಂಬಲಿಸುವುದಿಲ್ಲ. ಎನ್‌ಐಎ ಜುನೈದ್ ಅಹ್ಮದ್‌ಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ ನಿಜ. ಆದರೆ, ನಮ್ಮ ಸಮುದಾಯದವರು ಹಣದ ಹಿಂದೆ ಹೋಗಬಾರದು. ಸಮಾಜಕ್ಕೆ ಹಾನಿಕಾರಕವಾದ ಇಂತಹ ವ್ಯಕ್ತಿಗಳನ್ನು ಕಾನೂನಿನ ಕೈಗೆ ಒಪ್ಪಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇದನ್ನು ದೇಶಸೇವೆ ಎಂದು ಪರಿಗಣಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು" ಎಂದು ತಿಳಿಸಿದ್ದಾರೆ.

ರಾಜ್ಯಾದ್ಯಂತ ಮಸೀದಿಗಳಲ್ಲಿ ಜಾಗೃತಿ

ಈ ಅಭಿಯಾನವನ್ನು ಕೇವಲ ಮಾತಿಗೆ ಸೀಮಿತಗೊಳಿಸದ ಇಮಾಮ್, ರಾಜ್ಯದಾದ್ಯಂತ ಇರುವ ಮಸೀದಿಗಳ ಮೂಲಕ ಈ ಸಂದೇಶವನ್ನು ತಲುಪಿಸುವುದಾಗಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 800 ಮತ್ತು ಕರ್ನಾಟಕದಾದ್ಯಂತ 2,000ಕ್ಕೂ ಹೆಚ್ಚು ಮಸೀದಿಗಳಿವೆ. ಎನ್‌ಐಎ ಬಿಡುಗಡೆ ಮಾಡಿರುವ ಪೋಸ್ಟರ್‌ಗಳ ಆಧಾರದ ಮೇಲೆ ಜುನೈದ್ ಅಹ್ಮದ್ ಪತ್ತೆಗೆ ಸಹಕರಿಸುವಂತೆ ಮಸೀದಿಗಳಲ್ಲಿ ಅಧಿಕೃತವಾಗಿ ಅನೌನ್ಸ್ ಮಾಡಲಾಗುವುದು ಎಂದಿದ್ದಾರೆ. ಸಮಾಜಕ್ಕೆ ಕಂಟಕಪ್ರಾಯರಾದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣವೇ ಅಧಿಕಾರಿಗಳಿಗೆ ತಿಳಿಸುವಂತೆ ಮನವಿ ಮಾಡಿದ್ದಾರೆ.

ನಾಗರಿಕರ ಪ್ರಾಥಮಿಕ ಕರ್ತವ್ಯ

"ದೇಶದ ಕಾನೂನಿಗೆ ನಿಷ್ಠರಾಗಿರುವುದು ಮತ್ತು ಅದರ ಉಲ್ಲಂಘನೆ ಮಾಡುವವರ ಬಗ್ಗೆ ಧ್ವನಿ ಎತ್ತುವುದು ಪ್ರತಿಯೊಬ್ಬರ ಪ್ರಾಥಮಿಕ ಜವಾಬ್ದಾರಿ. ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿರುವವರ ಬಗ್ಗೆ ಮಾಹಿತಿ ನೀಡಿ ರಾಷ್ಟ್ರದ ಭದ್ರತೆಗೆ ಕೈಜೋಡಿಸುವಂತೆ ನಾವು ಸಮುದಾಯಕ್ಕೆ ಕರೆ ನೀಡುತ್ತೇವೆ" ಎಂದು ರಶಾದಿ ಹೇಳಿದ್ದಾರೆ.

 

PREV
Read more Articles on
click me!

Recommended Stories

ತಂಗಿಗೆ ಕೇಳಿದೆಲ್ಲಾ ಕೊಡ್ತೀರಿ, ನನಗೆ ಏನೂ ಇಲ್ಲ: ಬೊಮ್ಮಾಯಿ ಆಪ್ತ ಕಾರ್ಯದರ್ಶಿ ಮಗನ ಸಾವಿಗೆ ಕಾರಣ ಏನು?
Bengaluru: ಇಸ್ರೋ ಮಾಜಿ ನೌಕರನಿಂದ ಪತ್ನಿಯ ಹ*ತ್ಯೆ, ತಾಯಿ ಚಿತೆಗೆ ಬೆಂಕಿಯಿಡಲೂ ಅಮೆರಿಕದಿಂದ ಬರದ ಒಬ್ಬಳೇ ಮಗಳು!