
ಬೆಂಗಳೂರು: ಟ್ರ್ಯಾಕ್ಸನ್ ಸಂಸ್ಥೆಯ 'ಇಂಡಿಯಾ ಟೆಕ್ 9M 2026' ಇತ್ತೀಚಿನ ವರದಿಯ ಪ್ರಕಾರ, 2026 ರ ಮೊದಲ ಒಂಬತ್ತು ತಿಂಗಳಲ್ಲಿ (ಜನವರಿ 1 ರಿಂದ ಸೆಪ್ಟೆಂಬರ್ 21) ಭಾರತದ ಟೆಕ್ ಸ್ಟಾರ್ಟ್‌ಅಪ್‌ಗಳು ಒಟ್ಟು ₹86,000 ಕೋಟಿಗೂ ಹೆಚ್ಚು ಬಂಡವಾಳ ಸಂಗ್ರಹಿಸಿವೆ. ಇದು 2025 ರ ಇದೇ ಅವಧಿಯಲ್ಲಿ ಸಂಗ್ರಹಿಸಲಾದ ಮೊತ್ತಕ್ಕೆ ಹೋಲಿಸಿದರೆ 7% ಹೆಚ್ಚಳ ಕಂಡಿದೆ. ಜೊತೆಗೆ 2024 ರ ಮೊದಲ ಒಂಬತ್ತು ತಿಂಗಳಲ್ಲಿ ದಾಖಲಾಗಿದ್ದ $10 ಬಿಲಿಯನ್‌ಗೆ ಹೋಲಿಸಿದರೆ 3% ರಷ್ಟು ಏರಿಕೆಯಾಗಿದೆ.
ವಿಶೇಷವೆಂದರೆ, ಹೂಡಿಕೆ ಸುತ್ತುಗಳ ಸಂಖ್ಯೆಯು ಕಳೆದ ವರ್ಷದ 1,838 ರಿಂದ ಈ ವರ್ಷ 1,134 ಕ್ಕೆ ತೀವ್ರವಾಗಿ ಕುಸಿದಿದೆ. ಆರಂಭಿಕ ಹಂತದ ಫಂಡಿಂಗ್ ಮತ್ತು ಹೊಸ 'ಸೂನಿಕಾರ್ನ್' ಸೇರ್ಪಡೆಗಳು ಕಡಿಮೆಯಾಗಿದ್ದರೂ ಸಹ, ಬೃಹತ್ ಮೊತ್ತದ ಹೂಡಿಕೆಗಳ ಕಾರಣದಿಂದಾಗಿ ಒಟ್ಟಾರೆ ಬಂಡವಾಳ ಸಂಗ್ರಹಣೆಯಲ್ಲಿ ಪ್ರಗತಿ ಕಂಡುಬಂದಿದೆ.
ಭಾರತದ ಸ್ಟಾರ್ಟ್‌ಅಪ್ ರಾಜಧಾನಿ ಎನಿಸಿಕೊಂಡಿರುವ ಬೆಂಗಳೂರು, ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಬೆಂಗಳೂರು ಮೂಲದ ಟೆಕ್ ಸ್ಟಾರ್ಟ್‌ಅಪ್‌ಗಳು ಈ ಅವಧಿಯಲ್ಲಿ $4.4 ಬಿಲಿಯನ್ ಒಟ್ಟು ಫಂಡಿಂಗ್ ಸಂಗ್ರಹಿಸಿವೆ. ದೇಶದ ಒಟ್ಟು ಟೆಕ್ ಫಂಡಿಂಗ್‌ನಲ್ಲಿ ಬೆಂಗಳೂರಿನ ಪಾಲು 43% ರಷ್ಟಿದೆ (2025 ರಲ್ಲಿ ಇದು 38% ರಷ್ಟಿತ್ತು). 2025 ರ ಮೊದಲ ಒಂಬತ್ತು ತಿಂಗಳಲ್ಲಿ ಸಂಗ್ರಹವಾದ $3.6 ಬಿಲಿಯನ್‌ಗೆ ಹೋಲಿಸಿದರೆ ಬೆಂಗಳೂರಿನ ಫಂಡಿಂಗ್ 22% ರಷ್ಟು ಹೆಚ್ಚಾಗಿದೆ. ದೇಶದ ಮುಂದಿನ ಪ್ರಮುಖ 5 ನಗರಗಳಾದ ಮುಂಬೈ, ಗುರುಗ್ರಾಮ್, ನೋಯ್ಡಾ, ದೆಹಲಿ ಮತ್ತು ಹೈದರಾಬಾದ್ ಒಟ್ಟಾಗಿ ಸಂಗ್ರಹಿಸಿದ $4.8 ಬಿಲಿಯನ್ ನಿಧಿಗೆ ಹೋಲಿಸಿದರೆ ಬೆಂಗಳೂರು ಒಂದೇ ನಗರ ಸರಿಸಮಾನವಾಗಿದೆ.
ಬೆಂಗಳೂರಿನಲ್ಲಿ ಎಂಟರ್‌ಪ್ರೈಸ್ ಅಪ್ಲಿಕೇಶನ್, ಫಿನ್‌ಟೆಕ್ ಮತ್ತು ಕೃತಕ ಬುದ್ಧಿಮತ್ತೆ ವಲಯಗಳು ಉತ್ತಮ ಪ್ರದರ್ಶನ ನೀಡಿವೆ. ಕ್ರೆಡ್: $540 ಮಿಲಿಯನ್, ರ‍್ಯಾಪಿಡೋ : $240 ಮಿಲಿಯನ್, ಸರ್ವಂ: $234 ಮಿಲಿಯನ್, ಕ್ರೆಡಿಟ್ ಬಿ: $220 ಮಿಲಿಯನ್, ಉದಾನ್: $160 ಮಿಲಿಯನ್, ಎಮರ್ಜೆಂಟ್: $130 ಮಿಲಿಯನ್, ಇತರ ಕಂಪನಿಗಳಾದ ರೈಡ್ ರಿವರ್, ಸ್ಲೈಸ್, ನವಿ, ಮತ್ತು ಫಿಕ್ಸೆಲ್ ಸಂಸ್ಥೆಗಳು ತಲಾ $100 ಮಿಲಿಯನ್‌ಗಿಂತಲೂ ಹೆಚ್ಚಿನ ಹಣ ಸಂಗ್ರಹಿಸಿವೆ.
ಮುಂಬೈ ಎರಡನೇ ಸ್ಥಾನ : ಮುಂಬೈ $1.8 ಬಿಲಿಯನ್ ಹೂಡಿಕೆ ಪಡೆಯುವ ಮೂಲಕ ದ್ವಿತೀಯ ಸ್ಥಾನದಲ್ಲಿದೆ (ಕಳೆದ ವರ್ಷ $1.6 ಬಿಲಿಯನ್). ರಾಷ್ಟ್ರೀಯ ಹೂಡಿಕೆಯಲ್ಲಿ ಮುಂಬೈನ ಪಾಲು 16% ರಿಂದ 18% ಕ್ಕೆ ಏರಿದೆ. ನೇಸಾ (Nesa) ಸಂಸ್ಥೆಯ $600 ಮಿಲಿಯನ್ ಸರಣಿ-ಬಿ ಫಂಡಿಂಗ್ ಅತ್ಯಂತ ದೊಡ್ಡದಾಗಿದ್ದರೆ, ಯೊಟ್ಟಾ ($150M) ಮತ್ತು ವೀವರ್ ($103M) ನಂತರದ ಸ್ಥಾನಗಳಲ್ಲಿವೆ.
ಗುರುಗ್ರಾಮ್ ಜಿಗಿತ : ಪ್ರಮುಖ ನಗರಗಳ ಪೈಕಿ ಗುರುಗ್ರಾಮ್ ಅತ್ಯಂತ ವೇಗದ ಪ್ರಗತಿ ಸಾಧಿಸಿದೆ. ಇಲ್ಲಿ ಫಂಡಿಂಗ್ $741 ಮಿಲಿಯನ್‌ನಿಂದ ದ್ವಿಗುಣಗೊಂಡು $1.6 ಬಿಲಿಯನ್ ಗೆ ತಲುಪಿದೆ. ದೇಶದ ಒಟ್ಟು ಪಾಲಿನಲ್ಲಿ ಇದರ ಹೂಡಿಕೆ 8% ರಿಂದ 16% ಕ್ಕೆ ಹೆಚ್ಚಾಗಿದೆ. ನೆಕ್ಟ್ರಾ (Nxtra) ಕಂಪನಿಯ $1 ಬಿಲಿಯನ್ ಸುತ್ತಿನ ಬೃಹತ್ ಹೂಡಿಕೆ ಮತ್ತು ಹೈಜೆಂಕೊ ($105M) ಈ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ.
ನೋಯ್ಡಾ: $660 ಮಿಲಿಯನ್ ಸಂಗ್ರಹಿಸಿದ್ದು, ಕಳೆದ ವರ್ಷದ $693 ಮಿಲಿಯನ್‌ಗೆ ಹೋಲಿಸಿದರೆ 6% ಅಲ್ಪ ಇಳಿಕೆ ಕಂಡಿದೆ.
ದೆಹಲಿ : ದೆಹಲಿಯ ಹೂಡಿಕೆ $1.4 ಬಿಲಿಯನ್‌ನಿಂದ $446 ಮಿಲಿಯನ್‌ಗೆ ತೀವ್ರ ಕುಸಿತ ಕಂಡಿದೆ. ಇದರಿಂದಾಗಿ ರಾಷ್ಟ್ರೀಯ ಪಾಲಿನಲ್ಲಿ ದೆಹಲಿಯ ಕೊಡುಗೆ 15% ರಿಂದ ಕೇವಲ 4% ಕ್ಕೆ ಇಳಿದಿದೆ.
ಹೈದರಾಬಾದ್: ಸಣ್ಣ ಕೇಂದ್ರಗಳಲ್ಲಿ ಹೈದರಾಬಾದ್ ಧನಾತ್ಮಕ ಬೆಳವಣಿಗೆ ಕಂಡು, ಫಂಡಿಂಗ್ $202 ಮಿಲಿಯನ್‌ನಿಂದ $298 ಮಿಲಿಯನ್‌ಗೆ ಏರಿಕೆಯಾಗಿದೆ.
ಪುಣೆ ಹಾಗೂ ಇತರ ನಗರಗಳು: ಪುಣೆಯ ಫಂಡಿಂಗ್ $448 ಮಿಲಿಯನ್‌ನಿಂದ $184 ಮಿಲಿಯನ್‌ಗೆ ಮತ್ತು ಅಹಮದಾಬಾದ್ $135 ಮಿಲಿಯನ್‌ನಿಂದ $64.9 ಮಿಲಿಯನ್‌ಗೆ ಇಳಿದಿವೆ. ಚೆನ್ನೈ $181 ಮಿಲಿಯನ್‌ನೊಂದಿಗೆ ಬದಲಾವಣೆಯಿಲ್ಲದೆ ಸ್ಥಿರವಾಗಿದೆ.
ವರದಿಯ ಪ್ರಕಾರ, ಭಾರತದ ನವೋದ್ಯಮ ಹೂಡಿಕೆ ಮಾರುಕಟ್ಟೆಯು ಕೆಲವೇ ಸ್ಥಾಪಿತ ಪ್ರಮುಖ ನಗರಗಳಲ್ಲಿ ಹೆಚ್ಚು ಕೇಂದ್ರೀಕೃತವಾಗಿದೆ. ದೇಶದ ಅಗ್ರ 10 ನಗರಗಳು ಸಂಗ್ರಹಿಸಿದ ಒಟ್ಟು ನಿಧಿಯಲ್ಲಿ ಬೆಂಗಳೂರು ಒಂದೇ ಐದನೇ ಎರಡರಷ್ಟು (2/5th) ಪಾಲನ್ನು ಹೊಂದಿದ್ದು, ದೇಶದ ಪ್ರಮುಖ ಟೆಕ್ ಬಂಡವಾಳ ಕೇಂದ್ರವಾಗಿ ತನ್ನ ಹಿಡಿತ್ವವನ್ನು ಕಾಯ್ದುಕೊಂಡಿದೆ.