
ಬೆಂಗಳೂರು (ಸೆ.25): ನಗರದ ಪ್ರಮುಖ ಹಸಿರು ವಲಯ ಹಾಗೂ ಆಕರ್ಷಕ ಉದ್ಯಾನವನವಾಗಿರುವ ಕಬ್ಬನ್ ಪಾರ್ಕ್‌ನಲ್ಲಿ ಐಷಾರಾಮಿ ಕಾಫಿ ಶಾಪ್ ನಿರ್ಮಿಸಲು ಹೊರಟಿರುವ ಸರ್ಕಾರದ ನಿರ್ಧಾರಕ್ಕೆ ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್ ನಡಿಗೆದಾರರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ. ನಿರ್ಮಾಣ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಿ, ಆ ಜಾಗವನ್ನು ಮತ್ತೆ ಹಸಿರು ವಲಯವನ್ನಾಗಿ ಮರುಸ್ಥಾಪಿಸಬೇಕೆಂದು ಸಂಘವು ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಘದ ಅಧ್ಯಕ್ಷ ಎಸ್. ಉಮೇಶ್ ಕುಮಾರ್ ಅವರು, 'ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ತಿದ್ದುಪಡಿ ವಿಧೇಯಕ'ವನ್ನು ಹಿಂಪಡೆಯಲು ಸಂಪುಟ ಸಭೆ ನಿರ್ಧರಿಸಿದ್ದರೂ ಸಹ, ನಿಯಮಗಳನ್ನು ಗಾಳಿಗೆ ತೂರಿ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿಯ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ/ಸಂಸ್ಥೆಗೆ ಹಂಚಿಕೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಾರ್ವಜನಿಕ ಸೌಲಭ್ಯ ಒದಗಿಸುವ ನೆಪದಲ್ಲಿ ಈ ಅಕ್ರಮ ಎಸಗಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ ಎಸ್. ಉಮೇಶ್ ಕುಮಾರ್, "ಐಷಾರಾಮಿ ಕಾಫಿ ಶಾಪ್ ಒಂದನ್ನು 'ಸಾರ್ವಜನಿಕ ಸೌಲಭ್ಯ' ಎಂದು ಕರೆಯುವುದು ಕಾನೂನನ್ನು ತಿರುಚುವ ತಂತ್ರವಾಗಿದೆ. ಉದ್ಯಾನವನಗಳು ನಗರದ ಜೀವನಾಡಿ ಹಾಗೂ ಶ್ವಾಸಕೋಶಗಳಿದ್ದಂತೆ. ಅವು ಸಾರ್ವಜನಿಕರ ಆರೋಗ್ಯ ಮತ್ತು ಪರಿಸರ ಸಮತೋಲನವನ್ನು ಕಾಯ್ದುಕೊಳ್ಳಲು ಇವೆಯೇ ಹೊರತು, ವಾಣಿಜ್ಯ ಉದ್ಯಮಗಳನ್ನು ಸ್ಥಾಪಿಸುವುದಕ್ಕಲ್ಲ. ಸರ್ಕಾರವೇ ತನ್ನ ಮಾತನ್ನು ತಪ್ಪಿ ನಡೆದುಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ," ಎಂದು ಬೇಸರ ವ್ಯಕ್ತಪಡಿಸಿದರು.
ಉದ್ಯಾನವನದ ಜಾಗದಲ್ಲಿ 'ಸಾರ್ವಜನಿಕ ಸೌಲಭ್ಯ' ಒದಗಿಸುವ ಹೆಸರಿನಲ್ಲಿ ವಾಣಿಜ್ಯ ಸಂಸ್ಥೆಗಳಿಗೆ ಅವಕಾಶ ನೀಡುತ್ತಾ ಹೋದರೆ, ಮುಂದಿನ ದಿನಗಳಲ್ಲಿ ಇಡೀ ಸಾರ್ವಜನಿಕ ಉದ್ಯಾನವನವೇ ಒತ್ತುವರಿಯಾಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು. "ಉದ್ಯಾನವನದ ಅತ್ಯಂತ ಸಣ್ಣ ಭಾಗವನ್ನು ಖಾಸಗಿಯವರಿಗೆ ಹಸ್ತಾಂತರಿಸಿದರೂ ಸಹ, ಅದು ಅಲ್ಲಿನ ಜೈವಿಕ ವೈವಿಧ್ಯತೆಗೆ ಶಾಶ್ವತ ಹಾಗೂ ಭರಿಸಲಾಗದ ಹಾನಿಯನ್ನುಂಟು ಮಾಡುತ್ತದೆ," ಎಂದು ಅವರು ಸ್ಪಷ್ಟಪಡಿಸಿದರು.
ಕಬ್ಬನ್ ಪಾರ್ಕ್ ಹಾಗೂ ನಗರದ ಪರಿಸರ ಹಿತದೃಷ್ಟಿಯಿಂದ ನಡಿಗೆದಾರರ ಸಂಘವು ಸರ್ಕಾರಕ್ಕೆ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಆರಂಭಿಸಲಾಗಿರುವ ಕಾಫಿ ಶಾಪ್ ನಿರ್ಮಾಣ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಮತ್ತು ಆ ಸ್ಥಳವನ್ನು ಮೊದಲಿನಂತೆ ಹಸಿರು ವಲಯವಾಗಿ ಮರುಸ್ಥಾಪಿಸಬೇಕು. ಮುಂಬರುವ ಶಾಸನಸಭೆಯ ಅಧಿವೇಶನದಲ್ಲಿ 'ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ತಿದ್ದುಪಡಿ ವಿಧೇಯಕ'ವನ್ನು ಸಂಪೂರ್ಣವಾಗಿ ಹಿಂಪಡೆಯಬೇಕು.
ಐತಿಹಾಸಿಕ ಕಬ್ಬನ್ ಪಾರ್ಕ್ ಹಾಗೂ ಲಾಲ್‌ಬಾಗ್ ಉದ್ಯಾನವನಗಳನ್ನು ಯಾವುದೇ ಕಾರಣಕ್ಕೂ ನಾನ್-ಟ್ರಾನ್ಸ್‌ಫರಬಲ್ ಮತ್ತು ಶೂನ್ಯ ವಾಣಿಜ್ಯ ವಲಯಗಳನ್ನಾಗಿ (ಝೀರೋ-ಕಮರ್ಷಿಯಲ್ ಜೋನ್) ಅಧಿಕೃತವಾಗಿ ಘೋಷಿಸಬೇಕು. ನಗರದ ಪರಿಸರ ಸೌಂದರ್ಯ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಈ ಕಾಮಗಾರಿಯನ್ನು ಕೈಬಿಡಬೇಕು ಎಂದು ನಡಿಗೆದಾರರ ಸಂಘ ಪಟ್ಟು ಹಿಡಿದಿದೆ.