
ಬೆಂಗಳೂರು: ಕೆಪಿಎಸ್ಸಿ ನೇಮಕಾತಿ ಹಗರಣ ಸಂಬಂಧ ರಚಿಸಲಾಗಿದ್ದ ಎಸ್ಐಟಿ ಮುಖ್ಯಸ್ಥ ಹುದ್ದೆಯಿಂದ ಕೈ ಬಿಡುವ ವಿಚಾರದಲ್ಲಿ ಸುಪ್ರೀಂಕೋರ್ಟ್ಗೆ ತಮ್ಮ ಬಗ್ಗೆ ಸುಳ್ಳು ಮಾಹಿತಿ ನೀಡಲಾಗಿದೆ ಎಂದು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2019ರಲ್ಲಿ ತಮ್ಮ ವಿರುದ್ಧ ಆರೋಪಿಸಲಾಗಿದ್ದ ಫೋನ್ ಕದ್ದಾಲಿಕೆ ಪ್ರಕರಣದ ತನಿಖೆ ನಡೆಸಿ ಸಿಬಿಐ ದೋಷಮುಕ್ತಗೊಳಿಸಿದೆ. ಅಲ್ಲದೆ 2022ರಲ್ಲೇ ತಮ್ಮ ವಿರುದ್ಧ ಆಪಾದನೆಗೆ ಪುರಾವೆ ಇಲ್ಲವೆಂದು ಹೇಳಿ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿದೆ. ಹೀಗಿದ್ದರೂ ಕೆಪಿಎಸ್ಸಿ ಹಗರಣ ಸಂಬಂಧ ಎಸ್ಐಟಿ ರಚನೆ ಕುರಿತ ಹೈಕೋರ್ಟ್ ಆದೇಶದ ಮೇಲ್ಮನವಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ಗೆ ತಮ್ಮ ಮೇಲೆ ಸಿಐಡಿ ಫೋನ್ ಕದ್ದಾಲಿಕೆ ತನಿಖೆ ನಡೆದಿದೆ ಎಂದು ಸುಳ್ಳು ಮಾಹಿತಿ ಕೊಡಲಾಗಿದೆ. ಇದರಿಂದ ತಮ್ಮ ಗೌರವ ಹಾಗೂ ವೃತ್ತಿ ಜೀವನಕ್ಕೆ ಧಕ್ಕೆ ಉಂಟಾಗಿದೆ ಎಂದು ಅಲೋಕ್ ಕುಮಾರ್ ಆಕ್ಷೇಪಿಸಿದ್ದಾರೆ ಎನ್ನಲಾಗಿದೆ.
ಕೆಪಿಎಸ್ಸಿ ನೇಮಕಾತಿ ಹಗರಣದ ತನಿಖೆಗೆ ಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಎಸ್ಐಟಿ ರಚಿಸಿ ಹೈಕೋರ್ಟ್ ಆದೇಶಿಸಿತ್ತು. ಈ ಆದೇಶದ ವಿರುದ್ಧ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ ಸರ್ಕಾರವು, ಎಸ್ಐಟಿ ಮುಖ್ಯಸ್ಥರಾಗಿದ್ದ ಅಲೋಕ್ ಕುಮಾರ್ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿತು. ಅಲ್ಲದೆ ಅಲೋಕ್ ಕುಮಾರ್ ವಿರುದ್ಧ ಪೋನ್ ಕದ್ದಾಲಿಕೆ ಪ್ರಕರಣದ ಸಂಬಂಧ ಸಿಬಿಐ ತನಿಖೆ ನಡೆಸಿದೆ ಎಂದು ಸರ್ಕಾರ ಪರ ವಕೀಲ ಕಬಿಲ್ ಸಿಬಲ್ ವಾದಿಸಿದ್ದರು.
ಸರ್ಕಾರದ ಮನವಿ ಪುರಸ್ಕರಿಸಿದ ನ್ಯಾಯಾಲಯವು, ಎಸ್ಐಟಿ ಮುಖ್ಯಸ್ಥ ಹುದ್ದೆಯಿಂದ ಅಲೋಕ್ ಕುಮಾರ್ ಅವರನ್ನು ಕೈ ಬಿಟ್ಟಿತು. ಈ ಬೆಳವಣಿಗೆ ಬಳಿಕ ತೀವ್ರ ಬೇಸರಗೊಂಡ ಡಿಜಿಪಿ ಅವರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ಕೊಡಲಾಗಿದೆ ಎಂದು ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.