Bengaluru first train: ಬೆಂಗಳೂರು ಮೊದಲ ರೈಲು ಕಂಡಿದ್ದು ಯಾವಾಗ ಗೊತ್ತಾ? ಈ ರೈಲು ಎಲ್ಲಿಂದ ಎಲ್ಲಿಗೆ ಓಡಿತ್ತು?

Published : Sep 13, 2026, 02:47 PM IST
in 1864 Bengaluru heard its first train whistle

ಸಾರಾಂಶ

ಇಂದು ಮೆಟ್ರೋ, ವಂದೇ ಭಾರತ್, ವೇಗದ ರೈಲು ಸೇರಿದಂತೆ ಆಧುನಿಕ ಸಾರಿಗೆ ವ್ಯವಸ್ಥೆಗಳಿಂದ ಗುರುತಿಸಿಕೊಂಡಿರುವ ಬೆಂಗಳೂರು, ಬೆಂಗಳೂರಿನ ಕ್ಯಾಂಟೋನ್ಮೆಂಟ್‌ನಿಂದ ತಮಿಳುನಾಡಿನ ಜೋಲಾರ್‌ಪೇಟೆವರೆಗೆ ಮೊದಲ ಪ್ರಯಾಣಿಕ ರೈಲು ಸಂಚಾರ ಆರಂಭವಾಗಿತ್ತು.

ಇಂದು ಮೆಟ್ರೋ, ವಂದೇ ಭಾರತ್, ವೇಗದ ರೈಲು ಸೇರಿದಂತೆ ಆಧುನಿಕ ಸಾರಿಗೆ ವ್ಯವಸ್ಥೆಗಳಿಂದ ಗುರುತಿಸಿಕೊಂಡಿರುವ ಬೆಂಗಳೂರು, ರೈಲು ಸಂಪರ್ಕ ಹೊಂದಿದ್ದು ಬರೋಬ್ಬರಿ 162 ವರ್ಷಗಳ ಹಿಂದೆಯೇ.

ಆಗಸ್ಟ್ 1, 1864ರಂದು ಮೊದಲ ರೈಲು ಸಂಚಾರ

1864ರ ಆಗಸ್ಟ್ 1ರಂದು ಬೆಂಗಳೂರಿನ ಕ್ಯಾಂಟೋನ್ಮೆಂಟ್ ರೈಲು ನಿಲ್ದಾಣದಿಂದ ಜೋಲಾರ್‌ಪೇಟೆ ಕಡೆಗೆ ಮೊದಲ ಪ್ರಯಾಣಿಕ ರೈಲು ಹೊರಟಿತ್ತು. ಈ ರೈಲನ್ನು ಜನಪ್ರಿಯವಾಗಿ ‘Bangalore Mail’ ಎಂದು ಕರೆಯಲಾಗುತ್ತಿತ್ತು. ಬ್ರಿಟಿಷ್ ಭಾರತದ ಅವಧಿಯಲ್ಲಿ ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸುತ್ತಿದ್ದ Madras Railway Company ಈ ಸೇವೆಯನ್ನು ನಿರ್ವಹಿಸುತ್ತಿತ್ತು. ಆ ಸಮಯದಲ್ಲಿ ಬೆಂಗಳೂರಿನ ಕ್ಯಾಂಟೋನ್ಮೆಂಟ್ ಪ್ರದೇಶವನ್ನು Civil and Military Station ಎಂದು ಕರೆಯಲಾಗುತ್ತಿತ್ತು. 1862ರ ವೇಳೆಗೆ ಕ್ಯಾಂಟೋನ್ಮೆಂಟ್ ರೈಲು ನಿಲ್ದಾಣ ನಿರ್ಮಾಣಗೊಂಡಿತ್ತು. ಆರಂಭದಲ್ಲಿ ಈ ರೈಲು ಸಂಪರ್ಕಕ್ಕೆ ಸೇನಾ ಅಗತ್ಯಗಳೂ ಪ್ರಮುಖ ಕಾರಣವಾಗಿದ್ದವು.

149 ಕಿ.ಮೀ ಮಾರ್ಗ ಏಕೆ ಪ್ರಮುಖವಾಗಿತ್ತು?

ಕ್ಯಾಂಟೋನ್ಮೆಂಟ್‌ನಿಂದ ಜೋಲಾರ್‌ಪೇಟೆವರೆಗೆ ನಿರ್ಮಿಸಲಾದ ಈ ರೈಲು ಮಾರ್ಗ ಬೆಂಗಳೂರಿಗೆ ಹೊರಜಗತ್ತಿನೊಂದಿಗೆ ನೇರ ರೈಲು ಸಂಪರ್ಕ ಕಲ್ಪಿಸಿತು. ಜೋಲಾರ್‌ಪೇಟೆಯಿಂದ ಮುಂದೆ ಮದ್ರಾಸ್ ಸೇರಿದಂತೆ ಬ್ರಿಟಿಷ್ ಭಾರತದ ಇತರ ರೈಲು ಮಾರ್ಗಗಳಿಗೆ ಸಂಪರ್ಕ ಪಡೆಯಲು ಸಾಧ್ಯವಾಗುತ್ತಿತ್ತು. ಇದರಿಂದ ಪ್ರಯಾಣಿಕರು ಮಾತ್ರವಲ್ಲದೆ ಸೇನಾ ಸಿಬ್ಬಂದಿ ಮತ್ತು ಸರಕುಗಳ ಸಂಚಾರವೂ ಸುಲಭವಾಯಿತು. ರೈಲು ಮಾರ್ಗವು ಬೆಂಗಳೂರಿನ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯ ಮೇಲೂ ಕ್ರಮೇಣ ಪರಿಣಾಮ ಬೀರಿತು.

ರೈಲು ಸಂಚಾರದ ಹಿಂದೆ ಸೇನಾ ಉದ್ದೇಶವೂ ಇತ್ತು

ಆ ಕಾಲದಲ್ಲಿ ಬೆಂಗಳೂರಿನ ಕ್ಯಾಂಟೋನ್ಮೆಂಟ್ ಪ್ರಮುಖ ಬ್ರಿಟಿಷ್ ಸೇನಾ ಕೇಂದ್ರವಾಗಿತ್ತು. ಹೀಗಾಗಿ ರೈಲು ಮಾರ್ಗವು ಬೆಂಗಳೂರನ್ನು ಮದ್ರಾಸ್‌ನೊಂದಿಗೆ ಸಂಪರ್ಕಿಸುವುದರ ಜೊತೆಗೆ ಸೇನಾ ಸಿಬ್ಬಂದಿಯ ಸಂಚಾರಕ್ಕೂ ಅನುಕೂಲವಾಗಿತ್ತು. ಈ ರೈಲು ಸೇವೆಯಲ್ಲಿ ಕ್ಯಾಂಟೋನ್ಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಅನೇಕ ತಮಿಳು ಭಾಷಿಕ ಸೈನಿಕರು ಪ್ರಯಾಣಿಸುತ್ತಿದ್ದರು ಎಂಬ ಉಲ್ಲೇಖವೂ ವರದಿಯಲ್ಲಿದೆ. ರೈಲು ಸಂಪರ್ಕ ಹೆಚ್ಚಾದಂತೆ ಬೆಂಗಳೂರಿಗೆ ಜನರ ಆಗಮನವೂ ಹೆಚ್ಚಾಯಿತು.

ಇಂದಿನಂತೆ ವೇಗದ ರೈಲಲ್ಲ

ಇಂದು ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಗಂಟೆಗಳಲ್ಲಿ ಪ್ರಯಾಣಿಸುವುದು ಸಾಮಾನ್ಯ. ಆದರೆ 1864ರ ಕಾಲದ ರೈಲು ಪ್ರಯಾಣ ಹಾಗಿರಲಿಲ್ಲ. ಉಗಿ ಇಂಜಿನ್‌ಗಳಿಂದ ಚಲಿಸುತ್ತಿದ್ದ ರೈಲು ಕೆಲವು ಭಾಗಗಳಲ್ಲಿ ಗಂಟೆಗೆ ಸುಮಾರು 12 ಮೈಲುಗಳಷ್ಟು ವೇಗದಲ್ಲಿ ಸಾಗುತ್ತಿತ್ತು. ಜೋಲಾರ್‌ಪೇಟೆಯಿಂದ ಬೆಂಗಳೂರಿಗೆ ತಲುಪಲು ಹಲವು ಗಂಟೆಗಳು ಬೇಕಾಗುತ್ತಿತ್ತು. ಕೆಲವು ಐತಿಹಾಸಿಕ ದಾಖಲೆಗಳ ಪ್ರಕಾರ, ನಿಲ್ದಾಣಗಳಲ್ಲಿ ನಿಲುಗಡೆ ಸೇರಿದಂತೆ ಪ್ರಯಾಣವು ಸುಮಾರು 10 ಗಂಟೆಗಳವರೆಗೆ ಸಾಗುತ್ತಿತ್ತು. ಉಗಿ ಇಂಜಿನ್‌ನಿಂದ ಹೊರಬರುತ್ತಿದ್ದ ಹೊಗೆಯ ಪರಿಣಾಮ ಪ್ರಯಾಣಿಕರು ರೈಲು ಇಳಿಯುವಷ್ಟರಲ್ಲಿ ಬೂದಿಯಿಂದ ಆವೃತರಾಗುತ್ತಿದ್ದ ಸಂದರ್ಭಗಳೂ ಇದ್ದವು.

ಆಗ ಮೊಬೈಲ್, ಫೋನ್ ಯಾವುದೂ ಇರಲಿಲ್ಲ

ಇಂದಿನ ಮೊಬೈಲ್ ಫೋನ್, ಇಂಟರ್‌ನೆಟ್, ವೈರ್‌ಲೆಸ್ ಸಂವಹನ ಯಾವುದೂ ಇಲ್ಲದ ಕಾಲ ಅದು. ರೈಲು ನಿಲ್ದಾಣಗಳ ನಡುವೆ ಸಂಪರ್ಕ ಸಾಧಿಸಲು Magneto Phone ಬಳಸಲಾಗುತ್ತಿತ್ತು. ಈ ಫೋನ್‌ಗಳಲ್ಲಿ ಇಂದಿನಂತೆ ಡಯಲ್ ಅಥವಾ ನಂಬರ್ ಪ್ಯಾಡ್ ಇರಲಿಲ್ಲ. ಒಂದು ತುದಿಯಲ್ಲಿದ್ದ ವ್ಯಕ್ತಿ ಫೋನ್‌ನ ಹ್ಯಾಂಡಲ್ ತಿರುಗಿಸಿದರೆ, ಮತ್ತೊಂದು ತುದಿಯಲ್ಲಿದ್ದ ಉಪಕರಣ ರಿಂಗ್ ಆಗುತ್ತಿತ್ತು. ರೈಲು ಸಂಚಾರವನ್ನು ಸಮನ್ವಯಗೊಳಿಸುವಲ್ಲಿ ಈ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತಿತ್ತು.

ಕೆಂಪು, ಹಳದಿ, ನೀಲಿ ದೀಪಗಳೇ ಸಿಗ್ನಲ್

ಇಂದಿನ ಆಧುನಿಕ ಸಿಗ್ನಲಿಂಗ್ ವ್ಯವಸ್ಥೆಗೆ ಹೋಲಿಸಿದರೆ ಆಗಿನ ರೈಲ್ವೆ ವ್ಯವಸ್ಥೆ ಸಂಪೂರ್ಣ ಭಿನ್ನವಾಗಿತ್ತು. ಬಣ್ಣದ ದೀಪಗಳ ಮೂಲಕ ರೈಲು ಸಿಬ್ಬಂದಿಗೆ ಸೂಚನೆ ನೀಡಲಾಗುತ್ತಿತ್ತು. ಕೆಂಪು ಬಣ್ಣವು ನಿಲ್ಲಿಸುವುದು ಅಥವಾ ತುರ್ತು ಪರಿಸ್ಥಿತಿಯನ್ನು ಸೂಚಿಸಿದರೆ, ಹಳದಿ ಬಣ್ಣವು ಮುಂದುವರಿಯಲು ಸೂಚಿಸುತ್ತಿತ್ತು. ನೀಲಿ ಬಣ್ಣವು ಮಾರ್ಗ ಅಥವಾ ಕಾರ್ಯಾಚರಣೆ ಇನ್ನೂ ಸಿದ್ಧವಾಗಿಲ್ಲ ಎಂಬುದನ್ನು ಸೂಚಿಸುತ್ತಿತ್ತು ಎಂದು ಐತಿಹಾಸಿಕ ದಾಖಲೆಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.

18 ವರ್ಷಗಳ ಬಳಿಕ ಬೆಂಗಳೂರಿನ ಮತ್ತೊಂದು ಭಾಗಕ್ಕೂ ರೈಲು

1864ರಿಂದ ಸುಮಾರು 18 ವರ್ಷಗಳ ಕಾಲ ಕ್ಯಾಂಟೋನ್ಮೆಂಟ್ ಬೆಂಗಳೂರಿನ ಪ್ರಮುಖ ರೈಲು ಪ್ರವೇಶದ್ವಾರವಾಗಿತ್ತು. ನಂತರ 1882ರಲ್ಲಿ ರೈಲು ಸಂಪರ್ಕ ಬೆಂಗಳೂರು ಸಿಟಿ ನಿಲ್ದಾಣದವರೆಗೆ ವಿಸ್ತರಿಸಲಾಯಿತು. ಮುಂದೆ ಬೆಂಗಳೂರು-ಮೈಸೂರು, ಬೆಂಗಳೂರು-ತುಮಕೂರು ಸೇರಿದಂತೆ ಹಲವು ಮಾರ್ಗಗಳು ಅಭಿವೃದ್ಧಿಯಾದವು. 1881ರಲ್ಲಿ ಬೆಂಗಳೂರು-ಚನ್ನಪಟ್ಟಣ ಸೇವೆ ಆರಂಭವಾಗಿದ್ದು, 1882ರಲ್ಲಿ ಬೆಂಗಳೂರು-ಮೈಸೂರು ರೈಲು ಮಾರ್ಗವೂ ಪೂರ್ಣಗೊಂಡಿತು. ಹೀಗೆ 1864ರಲ್ಲಿ ಕೇವಲ 149 ಕಿ.ಮೀ ಉದ್ದದ ರೈಲು ಸಂಪರ್ಕದಿಂದ ಆರಂಭವಾದ ಬೆಂಗಳೂರಿನ ರೈಲು ಪಯಣ, ಮುಂದೆ ದಕ್ಷಿಣ ಭಾರತದ ಹಲವು ನಗರಗಳನ್ನು ಸಂಪರ್ಕಿಸುವ ದೊಡ್ಡ ರೈಲು ಜಾಲವಾಗಿ ಬೆಳೆದಿದೆ. ಇಂದು ಕೋಟ್ಯಂತರ ಜನರ ಸಂಚಾರಕ್ಕೆ ಆಧಾರವಾಗಿರುವ ಬೆಂಗಳೂರಿನ ರೈಲು ಇತಿಹಾಸದ ಮೊದಲ ಪುಟ ಇದೇ 1864ರಲ್ಲಿ ಬರೆಯಲ್ಪಟ್ಟಿತ್ತು.

PREV
Read more Articles on
click me!

Recommended Stories

ಬೆಂಗಳೂರಿನ ಸರ್ಕಾರಿ ಶಾಲೆ ಸಮಯ ಬದಲಾವಣೆ ಸಾಧ್ಯತೆ: ಸಚಿವರಿಗೆ ಶಿಕ್ಷಕರ ಮನವಿ ಸಲ್ಲಿಕೆ
ಬೆಂಗಳೂರಿನ ಈ ರಸ್ತೆಯಲ್ಲಿ ಓಡಾಡೋಕೆ ಆಗ್ತಾನೇ ಇಲ್ಲ ಸ್ವಾಮಿ...! ದುರಸ್ತಿ ಮಾಡುವಂತೆ ಪಿಎಂ ಮೋದಿಗೆ ಪತ್ರ